ಜಿಲ್ಲಾ ಮತ್ತು ಪ್ರಾದೇಶಿಕ ದಿನ ಪತ್ರಿಕೆಗಳ ಉಳಿವಿಗಾಗಿ ರಾಜ್ಯದ ಎಲ್ಲಾ ಪತ್ರಿಕೆಗಳ ಸಂಪಾದಕರು ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗೂಡುವಂತೆ ಕರೆ ನೀಡಿದ ನೂತನ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ

Kalabandhu Editor
3 Min Read

ಬೆಂಗಳೂರು : ಜಿಲ್ಲಾ ಮತ್ತು ಪ್ರಾದೇಶಿಕ ದಿನ ಪತ್ರಿಕೆಗಳ ಉಳಿವಿಗಾಗಿ ರಾಜ್ಯದ ಎಲ್ಲಾ ಪತ್ರಿಕೆಗಳ ಸಂಪಾದಕರು ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗೂಡುವಂತೆ ನೂತನ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಕರೆ ನೀಡಿದರು.

ದಿನ ಪತ್ರಿಕೆಗಳ ಸಂಪಾದಕರು ಸಂಘಟಿತರಾಗುವ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಒತ್ತಾಯಿಸಬೇಕಿದೆ ಎಂದು ” ದಾವಣಗೆರೆ ಪಬ್ಲಿಕ್ ವಾಯ್ಸ್ ಪತ್ರಿಕೆಯ ಪ್ರಧಾನ ಸಂಪಾದಕ ಹಾಗೂ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ನೂತನ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೆಸ್ವಾಮಿ
ಪತ್ರಿಕಾ ಸಂಪಾದಕರಿಗೆ ಮನವಿ‌ ಮಾಡಿಕೊಂಡರು.

ಅವರು ಬುಧವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ” ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ” ದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ದಿನ ಪತ್ರಿಕೆಯನ್ನು ನಡೆಸುವುದು ಇಂದಿನ ದಿನಗಳಲ್ಲಿ ತುಂಬಾ ಕಷ್ಟಕರವಾಗಿದೆ. ಇಂತಹ ಸಂದಿಗ್ದ ಸ್ಥಿತಿಯಲ್ಲಿ ದಿನ ಪತ್ರಿಕೆಗಳ ಸಂಪಾದಕರು ಒಬ್ಬರ ಮೇಲೊಬ್ಬರು ನಮ್ಮನ್ನು ನಾವೇ ದೂಷಿಸಿಕೊಂಡು ದಿನ ದೂಡುವ ಬದಲು ಸರ್ಕಾರದಿಂದ ನಮ್ಮ ಹಕ್ಕನ್ನು ಪಡೆಯುವ ನಿಟ್ಟಿನಲ್ಲಿ ಒಗ್ಗೂಡಬೇಕಾಗಿದೆ. ಪರಸ್ಪರ ಆರೋಪ ಮಾಡುವುದನ್ನು ನಿಲ್ಲಿಸಿ, ಪ್ರತಿಯೊಬ್ಬರ ಏಳ್ಗೆಯನ್ನು ಬಯಸುತ್ತಾ ಮುನ್ನಡೆಯಬೇಕಾಗಿದೆ. ನಮ್ಮ ವೃತ್ತಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸುವ ಮೂಲಕ ಹಕ್ಕನ್ನು ಪಡೆಯಲು ಮುಂದಾಗೋಣವೆಂದು ತಮ್ಮ ಮನದಾಳದ ಆಶಯ ವ್ಯಕ್ತಪಡಿಸಿದರು.

ಜಾಹೀರಾತು ಬಿಡುಗಡೆಯಲ್ಲಿ ಆಗುತ್ತಿರುವ ತಾರತಮ್ಯ, ನಿಗಧಿತ ಅವಧಿಯೊಳಗೆ ಜಾಹೀರಾತಿನ ಹಣ ಸರ್ಕಾರದಿಂದ ಬಿಡುಗಡೆಯಾಗದೇ ಇರುವುದು ಸೇರಿದಂತೆ ಅನೇಕ ಕ್ಲಿಷ್ಟ ಸಮಸ್ಯೆಗಳನ್ನು ಪತ್ರಿಕೆಗಳ ಸಂಪಾದಕರು ಇತ್ತೀಚಿನ ವರ್ಷಗಳಲ್ಲಿ ಅನುಭವಿಸುತ್ತಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಇಲಾಖೆಯ ಆಯುಕ್ತರ ಹಾಗೂ ಸರ್ಕಾರದ ಗಮನಕ್ಕೆ ತರುವ ಮೂಲಕ ಅವುಗಳ ಪರಿಹಾರಕ್ಕೆ ಮನವಿ ಮಾಡೋಣ. ಸಂಪಾದಕರ ಹಿತ ಕಾಪಾಡುವುದೇ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಈ ಸಂಘಟನೆಯಲ್ಲಿ ಸಾಮೂಹಿಕ ನಾಯಕತ್ವ ಇರುತ್ತದೆ. ಪ್ರತಿಯೊಬ್ಬ ಸದಸ್ಯರೂ ಕೂಡ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಿಂದ ಸಂಘಟನೆ ನಡೆಸಲಾಗುವುದು. ಇಲ್ಲಿ ಎಲ್ಲಾ ಪತ್ರಿಕೆಗಳ ಸಂಪಾದಕರ ಸಲಹೆ, ಸೂಚನೆ, ಅಭಿಪ್ರಾಯಗಳಿಗೆ ಮನ್ನಣೆ ನೀಡಲಾಗುತ್ತದೆ. ಸಂಘದ ಯಾವುದೇ ಹುದ್ದೆಗಳು ಮುಖ್ಯವಲ್ಲ. ಸಂಪಾದಕರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲರೂ ಒಗ್ಗೂಡುವುದು ಮುಖ್ಯವೆಂದು ಎ.ಸಿ.ತಿಪ್ಪೆಸ್ವಾಮಿ ಮನವರಿಕೆ ಮಾಡಿಕೊಟ್ಟರು.

ನೂತನ ಸಂಘ ಬಲಿಷ್ಠವಾಗಿ ಬೆಳೆಯಬೇಕಾಗಿದೆ.ಈ ನಿಟ್ಟಿನಲ್ಲಿ ಸಂಘ ನೊಂದಣಿಯಾದ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜಿಲ್ಲಾ ಘಟಕಗಳ ರಚನೆಗೆ ಮುಂದಾಗಬೇಕು. ನೂತನ ಸಂಘಕ್ಕೆ ಆಯ್ಕೆಯಾಗಿರುವ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿನ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಸಂಬಂಧಿಸಿದಂತೆ ನೆನೆಗುದಿಗೆ ಬಿದ್ದಿರುವ ಶೇ.12 ರ ಜಾಹೀರಾತು ದರ ಹೆಚ್ಚಳ , ಬಾಕಿ ಉಳಿದಿರುವ ಎರಡು ತಿಂಗಳ ಜಾಹೀರಾತು ಬಿಡುಗಡೆ, ಜಾಹೀರಾತು ಸಂಸ್ಥೆಗಳು ಪತ್ರಿಕೆಗಳಿಗೆ ಪಾವತಿ ಮಾಡದೇ ಉಳಿಸಿಕೊಂಡ ಜಾಹೀರಾತು ಪ್ರಕಟಣೆಗಳ ಬಾಕಿ ಮೊತ್ತ ಪಾವತಿ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು, ಆ‌ ಕೆಲಸಗಳನ್ನ ಸಂಘಟಿತಾತ್ಮಕವಾಗಿ ಮಾಡಿಸಿಕೊಳ್ಳಲು ಮುಂದಾಗಬೇಕಿದೆ ಎಂದು ಎ.ಸಿ.ತಿಪ್ಪೇಸ್ವಾಮಿ ಸಂಪಾದಕರಿಗೆ ಮನವಿ ಮಾಡಿಕೊಂಡರು.

ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಸಂಪಾದಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ” ಒಗ್ಗಟ್ಟಿನಲ್ಲಿ ಬಲವಿದೆ ” . ರಾಜ್ಯದ ಎಲ್ಲಾ ಪತ್ರಿಕೆಗಳ ಸಂಪಾದಕರು ಒಟ್ಟಾಗಿದ್ದುಕೊಂಡು ಪತ್ರಿಕೆಗಳ ಉಳಿವಿಗೆ, ಅಭಿವೃದ್ಧಿಗೆ, ಜಾಹೀರಾತು ಬಿಡುಗಡೆಗೆ ಟೊಂಕಕಟ್ಟಿ ನಿಲ್ಲಬೇಕು. ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯಿಂದ, ಸರ್ಕಾರದಿಂದ ಆಗುವ ತಾರತಮ್ಯ, ಅನ್ಯಾಯ ಖಂಡಿಸುವ ನಿಟ್ಟಿನಲ್ಲಿ ಸಂಪಾದಕರೆಲ್ಲಾ ಧ್ವನಿ ಎತ್ತಬೇಕು.
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘವು ಎ.ಸಿ.ತಿಪ್ಪೆಸ್ವಾಮಿ ಅವರ ನೇತೃತ್ವದಲ್ಲಿ ಸಂಪಾದಕರ ಹಿತಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುತ್ತದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುವುದರೊಂದಿಗೆ ನೂತನ ಸಂಘಕ್ಕೆ ಸಂಪೂರ್ಣ ಬೆಂಬಲವನ್ನು ಸೂಚಿಸಿದರು.

ಸಭೆಯಲ್ಲಿ ಸಂಪಾದಕರಾದ ಭೀಮರಾಯ ಹದ್ದಿನಾಳ, ರಾಮಕೃಷ್ಣ, ಮಹ್ಮದ್ ಯೂನುಸ್, ಮಂಜುನಾಥ ಬಿ.ಅಬ್ಬಿಗೆರಿ, ಜಿ.ವೈ.ಪದ್ಮ, ಚನ್ನಬಸವ ಬಾಗಲವಾಡ, ಖಾನ್ ಸಾಬ್ ಮೋಮಿನ್, ಹೆಚ್.ನರಸಿಂಹರಾಜು, ರಶ್ಮಿ ಬಸವರಾಜ ಪಾಟೀಲ್, ಶರಣಬಸವ, ಓ.ಮಲ್ಲೇಶ, ಗೋಪಾಲ್ ಕೆ, ಅನೂಪ್ ಕುಮಾರ್, ಟಿ.ಎಸ್.ಕೃಷ್ಣಮೂರ್ತಿ, ಶಿವಶಂಕರ ಎಂ.ಸಿ, ಕೆ.ಎಸ್.ಸ್ವಾಮಿ, ಮಿಯಾ ಸಾಹೆಬ್ ಕೊಡಗಲಿ, ರವಿ.ಆರ್, ಗುರು ಬಸವಯ್ಯ.ಯು, ವೇದಮೂರ್ತಿ ಎಸ್.ಟಿ, ಹೆಚ್.ಸುಧಾಕರ, ಅರುಣಾ ಜ್ಯೋತಿ ಬಿ.ಕೆ, ಲಕ್ಕಪ್ಪ ವೈ.ರಾಣಗೋಳ, ಮಲ್ಲಿಕಾರ್ಜುನ ಎಫ್.ಹೆಗನಾಯಕ, ಬಬಿತಾ ರಾಜೇಂದ್ರ ಪೊವಾರ, ಮಂಜುನಾಥ ಪಿ.ಎನ್, ಹೀರೋಜಿ ಎಂ.ಮಾವರಕರ್, ಕವಿತಾ.ಎಸ್ , ದಿನೇಶ್.ಬಿ, ಜಿ.ಮಂಜುನಾಥ್, ಭಾಗ್ಯಲಕ್ಷ್ಮಿ ಆರ್ ಸೇರಿದಂತೆ ಆನೇಕ ಸಂಪಾದಕರು ಭಾಗವಹಿಸಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಚನ್ನಬಸವ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

Share this Article