ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಂಧನ ಸಂಶೋಧನಾ ಕೇಂದ್ರಕ್ಕೆ ಕೇಂದ್ರ ಇಂಧನ ಖಾತೆ ಸಚಿವ ಆರ್. ಕೆ ಸಿಂಗ್ ಶಂಕುಸ್ಥಾಪನೆ

Kalabandhu Editor
2 Min Read

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಂಧನ ಸಂಶೋಧನಾ ಕೇಂದ್ರಕ್ಕೆ ಕೇಂದ್ರ ಇಂಧನ ಖಾತೆ ಸಚಿವ ಆರ್. ಕೆ ಸಿಂಗ್ ಶಂಕುಸ್ಥಾಪನೆ ನೆರವೇರಿಸಿದರು
Posted On: 28 DEC 2023 7:36PM by PIB Bengaluru
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಂಧನ ಸಂಶೋಧನಾ ಕೇಂದ್ರಕ್ಕೆ ಕೇಂದ್ರ ಇಂಧನ ಖಾತೆ ಸಚಿವ ಆರ್. ಕೆ ಸಿಂಗ್ ಶಂಕುಸ್ಥಾಪನೆ ನೆರವೇರಿಸಿದರು.

 

ಈ ವೇಳೆ ಸಚಿವ ಕೆ.ಜೆ. ಜಾರ್ಜ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಆರ್.ಕೆ. ಸಿಂಗ್, 2030ರ ವೇಳೆಗೆ ಪಳೆಯುಳಿಕೆ ಇಂಧನ ಬಳಕೆಯ ಪ್ರಮಾಣವನ್ನು ಶೇ 50ರಷ್ಟು ತಗ್ಗಿಸಲು ಹಾಗೂ ದೇಶದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ನಿರ್ಧರಿಸಲಾಗಿದೆ. ದೇಶದಲ್ಲಿ 500 ಗಿಗಾವಾಟ್‌ನಷ್ಟು ನವೀಕರಿಸಬಹುದಾದ ಇಂಧನ ಉತ್ಪಾದನೆಯ ಜೊತೆಗೆ, ಮುಂದಿನ ವರ್ಷ ಹೆಚ್ಚುವರಿಯಾಗಿ 25 ಗಿಗಾವಾಟ್‌ ಉತ್ಪಾದನೆಯ ಗುರಿ ಹೊಂದಲಾಗಿದೆ. ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ 1.37 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ನಿರೀಕ್ಷಿಸಲಾಗಿದೆ. ಕಳೆದ ವರ್ಷ 13.5 ಗಿಗಾವಾಟ್‌ ಉತ್ಪಾದನೆಗೆ 74 ಸಾವಿರದ 250 ಕೋಟಿ ರೂಪಾಯಿ ಹೂಡಿಕೆಯಾಗಿತ್ತು ಎಂದು ಸಚಿವರು ಹೇಳಿದರು.

ಇಂಗಾಲದ ಹೊರಸೂಸುವಿಕೆ ಪ್ರಮಾಣವನ್ನು ತಗ್ಗಿಸುವುದೇ ಇದರ ಮೂಲ ಉದ್ದೇಶವಾಗಿದೆ. ವಿದ್ಯುತ್‌ ವಲಯದಲ್ಲಿ ಬೇಡಿಕೆಯು ಹೆಚ್ಚಾಗಿದ್ದು, ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮುಂದಿನ 20-25 ವರ್ಷಗಳಲ್ಲಿ ಬೇಡಿಕೆ ಮತ್ತು ಪೂರೈಕೆಯ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಈಗೀನಿಂದಲೇ ಸನ್ನದ್ಧರಾಗುವ ಅಗತ್ಯವಿದೆ ಎಂದರು.

 

ಕೆ.ಜೆ. ಜಾರ್ಜ್ ರಾಜ್ಯದಲ್ಲಿ ಬರಗಾಲ ಇರುವುದರಿಂದ ರೈತರ ಬೆಳೆಗಳಿಗೆ ನೀರು ಹರಿಸಲು ಹೆಚ್ಚಿನ ವಿದ್ಯುತ್ ಅಗತ್ಯವಿದೆ. ಕೇಂದ್ರ ಸಚಿವರಿಗೆ ಈ ಕುರಿತು ಮನವರಿಕೆ ಮಾಡಲಾಗಿದ್ದು, ಸಚಿವರು ತಕ್ಷಣವೇ ರಾಜ್ಯಕ್ಕೆ 350 ಮೆಗಾವ್ಯಾಟ್ ವಿದ್ಯುತ್ ಮಂಜೂರು ಮಾಡಿದ್ದಾರೆ . ಅಧಿಕಾರಿಗಳು ವಿದ್ಯುತ್ ಅಭಾವವಾಗದಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ ಎಂದರು.

ಸಂಸದ ತೇಜಸ್ವಿ ಸೂರ್ಯ , ನವೀಕರಿಸಬಹುದಾದ ಇಂಧನ ಉತ್ಪಾದನೆ ಹಾಗೂ ಬಳಕೆಗೆ ಬಹಳಷ್ಟು ಅವಕಾಶಗಳಿದ್ದು, ಬರುವ 25 ವರ್ಷ ಸವಾಲಿನ ದಿನಗಳಾಗಿವೆ. ಈ ದಿನಗಳಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಲಿದ್ದು, ಇದಕ್ಕೆ ಅನುಗುಣವಾಗಿ ಉತ್ಪಾದನೆ ಕೈಗೊಳ್ಳಬೇಕಿದೆ. ಪ್ರಧಾನಿ ನರೇಂದ್ರ ಮೋದಿ , ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಹೇಳಿದರು.

***

Share this Article