ಹಾಜಿ ಸೈಯದ್ ಸಲ್ಮಾನ್ ಚಿಸ್ತಿ
ಗಡ್ಡಿ ನಶೀನ್ – ದರ್ಗಾ ಅಜ್ಮೀರ್ ಶರೀಫ್
ಅಧ್ಯಕ್ಷರು – ಚಿಸ್ತಿ ಫೌಂಡೇಶನ್
ಭಾರತದ ಸಾಮಾಜಿಕ ಹಾಗೂ ಅತ್ಯಂತ ವೈವಿಧ್ಯಮಯವಾದ ಧಾರ್ಮಿಕ ಮತ್ತು ಸಾಮಾಜಿಕ-ಆರ್ಥಿಕ ವಲಯದಲ್ಲಿ, ʻವಕ್ಫ್ʼ ಅತ್ಯಂತ ಮಹತ್ವದ, ಆದರೆ ಸದ್ಬಳಕೆಯಾಗದ ಸಂಸ್ಥೆಗಳಲ್ಲಿ ಒಂದೆನಿಸಿದೆ. ಇಸ್ಲಾಮಿಕ್ ಆಧ್ಯಾತ್ಮಿಕ ಸಂಪ್ರದಾಯದಲ್ಲಿ ಬೇರೂರಿರುವ ಈ ಶಾಸನಬದ್ಧ ಸಂಸ್ಥೆಯು ಭಾರತದ ಮುಸ್ಲಿಂ ಸಮುದಾಯದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ. ಆದಾಗ್ಯೂ, ತನ್ನ ಆಳವಾದ ಪರಂಪರೆ ಮತ್ತು ಗಣನೀಯ ಭೂ ಹಿಡುವಳಿಗಳ ಹೊರತಾಗಿಯೂ, ʻವಕ್ಫ್ʼ ಅಸಮರ್ಥತೆ, ದುರಾಡಳಿತ ಮತ್ತು ಪಾರದರ್ಶಕತೆ ಕೊರತೆಯಿಂದ ಕುಂಠಿತಗೊಂಡಿದೆ.
ಭಾರತದ ಮೂರನೇ ಅತಿದೊಡ್ಡ ಭೂಹಿಡುವಳಿ ಸಂಸ್ಥೆಯಾಗಿರುವ ʻವಕ್ಫ್ʼ ಸಾರಥ್ಯದಲ್ಲಿರುವ ಸಮುದಾಯವೊಂದು ಇನ್ನೂ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ-ಆರ್ಥಿಕ ಉನ್ನತಿಯ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವುದು ನಿಜಕ್ಕೂ ವಿಪರ್ಯಾಸ. ಶತಮಾನಗಳ ಹಿಂದೆ ಸ್ಥಾಪನೆಯಾದ ʻವಕ್ಫ್ʼನ ಉದ್ದೇಶವೇ ಶಾಲೆಗಳು, ಆಸ್ಪತ್ರೆಗಳು, ಗ್ರಂಥಾಲಯಗಳು ಮತ್ತು ಇತರ ದತ್ತಿ ಸಂಸ್ಥೆಗಳಂತಹ ಸಾರ್ವಜನಿಕ ಸಂಪನ್ಮೂಲಗಳ ಸೃಷ್ಟಿ ಮತ್ತು ನಿರ್ವಹಣೆ ಹಾಗೂ ಮುಸ್ಲಿಂ ಸಮುದಾಯದ ಕಲ್ಯಾಣಕ್ಕೆ ಸೇವೆ ಸಲ್ಲಿಸುವುದಾಗಿತ್ತು. ಇಷ್ಟು ವಿಶಾಲವಾದ ಸಂಪನ್ಮೂಲದ ನೆಲೆಯನ್ನು, ಸಮುದಾಯದ ಸುಧಾರಣೆಗಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿಲ್ಲ ಎಂಬ ಅಂಶವು ಕಳೆದ ಹಲವು ದಶಕಗಳಿಂದ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಪ್ರಸ್ತಾವಿತ ʻಉಮೀದ್ ವಕ್ಫ್ ವಿಧೇಯಕʼದ ತಿದ್ದುಪಡಿಗಳು ʻವಕ್ಫ್ʼ ಅನ್ನು ಕಾಡುತ್ತಿರುವ ಕೆಲವು ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿವೆ. ಈ ಸುಧಾರಣೆಗಳು ನಿರ್ಣಾಯಕವಾಗಿವೆ. ಏಕೆಂದರೆ ʻವಕ್ಫ್ʼ ಆಸ್ತಿಗಳನ್ನು ಅವುಗಳ ಮುತಾವಲ್ಲಿಗಳು(ರಕ್ಷಕರು) ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ಸಮುದಾಯವು ವ್ಯಾಪಕವಾಗಿ ಗುರುತಿಸಿದೆ ಮತ್ತು ಒಪ್ಪಿಕೊಂಡಿದೆ. ಕೆಲವೊಬ್ಬ ಶೂನ್ಯ ವಿಶ್ವಾಸಾರ್ಹತೆ ಹೊಂದಿರುವ ಹಾಗೂ ಅಸಮರ್ಥ ಸದಸ್ಯರು ಈ ಸ್ವತ್ತುಗಳ ಮೌಲ್ಯವನ್ನು ಗರಿಷ್ಠಗೊಳಿಸದಂತೆ ʻವಕ್ಫ್ʼ ಮಂಡಳಿಗಳನ್ನು ತಡೆಯುತ್ತಿರುವುದೂ ಸಮುದಾಯಕ್ಕೆ ಮನದಟ್ಟಾಗಿದೆ.
ʻವಕ್ಫ್ʼನ ಪ್ರಸ್ತುತ ಸ್ಥಿತಿಯು ಭಾರತದಲ್ಲಿ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ವಿಶಾಲ ಸವಾಲುಗಳ ಪ್ರತಿಬಿಂಬವಾಗಿದೆ. ʻವಕ್ಫ್ʼ ಆಸ್ತಿಗಳ ನಿರ್ವಹಣೆಯಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆಯ ಕೊರತೆಯು ಅಸಮರ್ಥತೆ ಮತ್ತು ಭ್ರಷ್ಟಾಚಾರವನ್ನು ಶಾಶ್ವತವಾಗಿಸಲು ಅವಕಾಶ ಮಾಡಿಕೊಟ್ಟಿದೆ.
ಪ್ರಸ್ತುತ ʻವಕ್ಫ್ʼ ವ್ಯವಸ್ಥೆಯ ಅತ್ಯಂತ ಸ್ಪಷ್ಟವಾದ ಸಮಸ್ಯೆಯೆಂದರೆ ʻವಕ್ಫ್ʼ ಒಡೆತನದ ಆಸ್ತಿಗಳಿಗೆ ಹಳೆಯ ಬಾಡಿಗೆ ರಚನೆ. ಇವುಗಳ ಪೈಕಿ ಅನೇಕ ಆಸ್ತಿಗಳನ್ನು ದಶಕಗಳ ಹಿಂದೆ – ಬಹುತೇಕ 1950ರ ದಶಕದಷ್ಟು ಹಿಂದೆ ನಿಗದಿಪಡಿಸಿದ ದರದಲ್ಲಿ ಬಾಡಿಗೆಗೆ ನೀಡಲಾಗುತ್ತದೆ. ಇಂದಿನ ಮಾರುಕಟ್ಟೆಯಲ್ಲಿ ಈ ಬಾಡಿಗೆಗಳು ಅಪ್ರಸ್ತುತ ಹಾಗೂ ಅತ್ಯಂತ ಕಡಿಮೆ ಮಾತ್ರವಲ್ಲ, ಬಾಕಿ ಇರುವ ಅಲ್ಪ ಮೊತ್ತವನ್ನು ಸಹ ನಿಯಮಿತವಾಗಿ ಸಂಗ್ರಹಿಸಲಾಗುತ್ತಿಲ್ಲ. ʻವಕ್ಫ್ʼ ಆಸ್ತಿಗಳ ಅಕ್ರಮ ಮಾರಾಟ ಮತ್ತು ಪೋಲುಗಳ ಆರೋಪಗಳಿಂದ ಈ ಪರಿಸ್ಥಿತಿಯು ಇನ್ನಷ್ಟು ಜಟಿಲಗೊಂಡಿದೆ. ಇದು ಸಮುದಾಯ ಕಲ್ಯಾಣಕ್ಕಾಗಿ ಬಳಸಬಹುದಾದ ಸಂಭಾವ್ಯ ಆದಾಯವನ್ನು ಗಮನಾರ್ಹವಾಗಿ ನಾಶಪಡಿಸಿದೆ. ಇದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ ಜೈಪುರ ನಗರದ ಅತ್ಯಂತ ಕೇಂದ್ರ ಮತ್ತು ಪ್ರಸಿದ್ಧ ಶಾಪಿಂಗ್ ಸ್ಟ್ರೀಟ್. ಇದನ್ನು ʻಎಂಐ ರಸ್ತೆʼ ಎಂದು ಕರೆಯಲಾಗುತ್ತದೆ, ಇದು ʻಸಂಗನೇರಿ ಗೇಟ್ʼನಿಂದ ಸರ್ಕಾರಿ ಹಾಸ್ಟೆಲ್ವರೆಗೆ ಸಾಗುತ್ತದೆ. ʻಎಂಐʼ ಎಂದರೆ ʻಮಿರ್ಜಾ ಇಸ್ಮಾಯಿಲ್ʼ ರಸ್ತೆ ಎಂದು ಅನೇಕರಿಗೆ ಗೊತ್ತಿಲ್ಲ. ಜೈಪುರದ ʻಎಂಐʼ ರಸ್ತೆಯಲ್ಲಿರುವ ಕೆಲವು ಆಸ್ತಿಗಳನ್ನು ಸಮುದಾಯ ಮತ್ತು ಧಾರ್ಮಿಕ ಕಾರ್ಯಗಳಿಗಾಗಿ ʻವಕ್ಫ್ʼ ಮಂಡಳಿಗೆ ದಾನ ಮಾಡಲಾಗಿದೆ. ಮಂಡಳಿಯು ಈ ಆಸ್ತಿಗಳನ್ನು ಬಾಡಿಗೆಗೆ ನೀಡಬಹುದು, ಆದರೆ ಅವುಗಳನ್ನು ಯಾರಿಗೂ ಮಾರಾಟ ಮಾಡಲು ಸಾಧ್ಯವಿಲ್ಲ. ʻಎಂಐʼ ರಸ್ತೆಯಲ್ಲಿ 100 ಚದರ ಅಡಿಯಿಂದ 400 ಚದರ ಅಡಿವರೆಗಿನ ಹಲವಾರು ವಾಣಿಜ್ಯ ಕಟ್ಟಡಗಳಿಗೆ ತಿಂಗಳಿಗೆ 300 ರೂ.ಗಳನ್ನು ಬಾಡಿಗೆಯಾಗಿ ಪಡೆಯಲಾಗುತ್ತಿದೆ. ಆದರೆ, ಬಾಡಿಗೆ ನೀತಿಗಳನ್ನು ನವೀಕರಿಸಿದಾಗ ತಿಂಗಳಿಗೆ 25,000 ರೂ. ಪಡೆಯಲು ಅವಕಾಶವಿದೆ. ಭಾರತದಾದ್ಯಂತ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರತಿಯೊಂದು ರಾಜ್ಯದಲ್ಲೂ ಇಂತಹ ಸಾವಿರಾರು ನಿರ್ಲಕ್ಷ್ಯಗಳಿವೆ.
2006ರ ʻಸಾಚಾರ್ ಸಮಿತಿʼಯ ವರದಿಯ ಪ್ರಕಾರ ʻವಕ್ಫ್ʼ ತನ್ನ ಆಸ್ತಿಗಳಿಂದ ವಾರ್ಷಿಕ 12,000 ಕೋಟಿ ರೂ.ಗಳ ಆದಾಯವನ್ನು ಗಳಿಸಬಹುದು. ಆದಾಗ್ಯೂ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಸಮೀಕ್ಷೆಗಳು ಈಗ ʻವಕ್ಫ್ʼ ಆಸ್ತಿಗಳ ನೈಜ ಸಂಖ್ಯೆ 8.72 ಲಕ್ಷ ಮೀರಿದೆ ಎಂದು ಬಹಿರಂಗಪಡಿಸಿದೆ. ಇಂದು, ಹಣದುಬ್ಬರ ಮತ್ತು ಪರಿಷ್ಕೃತ ಅಂದಾಜುಗಳನ್ನು ಪರಿಗಣಿಸಿ, ಸಂಭಾವ್ಯ ಆದಾಯವು ವಾರ್ಷಿಕವಾಗಿ 20,000 ಕೋಟಿ ರೂ. ಆಗಿರಬಹುದು. ಆದರೂ, ಸೃಷ್ಟಿಯಾದ ನೈಜ ಆದಾಯವು ಕೇವಲ 200 ಕೋಟಿ ರೂ. ಮಟ್ಟದಲ್ಲೇ ಉಳಿದಿದೆ- ಇದು ವೃತ್ತಿಪರ ಮತ್ತು ಪಾರದರ್ಶಕ ನಿರ್ವಹಣೆಯಿಂದ ಸಾಧಿಸಬಹುದಾದ ಆದಾಯದಲ್ಲಿ ಒಂದು ತುಣುಕು ಮಾತ್ರ.
ಸಮುದಾಯ ಕಲ್ಯಾಣ ಉಪಕ್ರಮಗಳಲ್ಲಿ ಆದಾಯ ಸೃಷ್ಟಿ ಮತ್ತು ಹೂಡಿಕೆಯ ಸಾಮರ್ಥ್ಯವು ಅಗಾಧವಾಗಿದೆ. ʻವಕ್ಫ್ʼ ಆಸ್ತಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾದರೆ, ಭಾರತೀಯ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಸಾಮಾಜಕ್ಕೆ ಸೇವೆ ಸಲ್ಲಿಸುವಂತಹ ವಿಶ್ವದರ್ಜೆಯ ಶಾಲೆಗಳು, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು ಮುಂತಾದವುಗಳನ್ನು ಸ್ಥಾಪಿಸಲು ಧನಸಹಾಯ ನೀಡಬಹುದು. ಇಲ್ಲಿ ನಾವು, ಭಾರತೀಯ ಮುಸ್ಲಿಮರಾಗಿ, “ಕಲ್ಯಾಣ”ದ ಬಗ್ಗೆ ನಮ್ಮ ತಿಳಿವಳಿಕೆಯನ್ನು ವಿಸ್ತರಿಸಿಕೊಳ್ಳಬೇಕು. ʻಕಲ್ಯಾಣʼ ಎಂದರೆ ತಮ್ಮನ್ನು ತಾವು ಉಳಿಸಿಕೊಳ್ಳಲು ಹೆಣಗಾಡುವ ಮುಕ್ತ, ಬಳಲಿದ ಸಂಸ್ಥೆಗಳು ಎಂದರ್ಥವಲ್ಲ. ಬದಲಾಗಿ, ನಾವು ಸ್ವಾವಲಂಬಿ, ಅಂತರ್ಗತ ಮತ್ತು ಎಲ್ಲರಿಗೂ ಮಹತ್ವಾಕಾಂಕ್ಷೆಯಾಗುವಂತಹ ಉನ್ನತ ಗುಣಮಟ್ಟದ ಸಂಸ್ಥೆಗಳನ್ನು ನಿರ್ಮಿಸಲು ಆಶಿಸಬೇಕು.
ಜಂಟಿ ಸಂಸತ್ ಸಮಿತಿಯ ರಚನಾತ್ಮಕ ಸಲಹೆಗಳ ನಂತರ ರೂಪುಗೊಂಡ ಅಂತಿಮ ʻಉಮೀದ್ ವಕ್ಫ್ ವಿಧೇಯಕʼದ ತಿದ್ದುಪಡಿಗಳು, ಮುಸ್ಲಿಂ ಸಮುದಾಯದ ಒಟ್ಟಾರೆ ಉನ್ನತೀಕರಣಕ್ಕೆ ದಾರಿ ಮಾಡುವ ರೀತಿಯಲ್ಲಿ ʻವಕ್ಫ್ʼ ಅಭಿವೃದ್ಧಿಗೆ ನ್ಯಾಯಸಮ್ಮತ ಅವಕಾಶ ಕಲ್ಪಿಸುವ ಬದ್ಧತೆಯನ್ನು ಒದಗಿಸಬೇಕು. ʻವಕ್ಫ್ʼ ಮಂಡಳಿಗಳು ಮತ್ತು ʻಕೇಂದ್ರ ವಕ್ಫ್ ಕೌನ್ಸಿಲ್ʼನ(ಸಿಡಬ್ಲ್ಯೂಸಿ) ಆಡಳಿತವನ್ನು ಕೂಲಂಕಷವಾಗಿ ಸುಧಾರಿಸುವ ಮೂಲಕ, ಸಮುದಾಯಕ್ಕೆ ಉತ್ತಮ ಸೇವೆ ಸಲ್ಲಿಸುವ ಮತ್ತಷ್ಟು ಜವಾಬ್ದಾರಿಯುತ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಲು ಈ ವಿಧೆಯಕವು ಪ್ರಯತ್ನಿಸುತ್ತದೆ.
ಆದರೆ, ಈ ಸುಧಾರಣೆಗಳು ಆಡಳಿತಕ್ಕೆ ಮಾತ್ರ ಸೀಮಿತಗೊಳ್ಳಬಾರದು. ʻವಕ್ಫ್ ಮಂಡಳಿʼಯ ವಿಶ್ವಾಸಾರ್ಹ ಆಡಳಿತವು ಆದಾಯ ಸೃಷ್ಟಿಯ ನಿರ್ಣಾಯಕ ಸಮಸ್ಯೆಯನ್ನು ಸಹ ಪರಿಹರಿಸಬೇಕು. ʻವಕ್ಫ್ʼನ ಆರ್ಥಿಕ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಪ್ರಸ್ತುತ ಮಾರುಕಟ್ಟೆ ದರಗಳನ್ನು ಪ್ರತಿಬಿಂಬಿಸಲು ʻವಕ್ಫ್ʼ ಆಸ್ತಿಗಳ ಬಾಡಿಗೆ ರಚನೆಯನ್ನು ಪರಿಷ್ಕರಿಸುವುದು ಅತ್ಯಗತ್ಯ. ಇದಲ್ಲದೆ, ಈ ಆಸ್ತಿಗಳಿಂದ ಬರುವ ಲಾಭವನ್ನು ʻವಕ್ಫ್ʼ ಸ್ಥಾಪನೆಯ ಮೂಲ ಉದ್ದೇಶಕ್ಕೆ ಅನುಗುಣವಾಗಿ ಮುಸ್ಲಿಂ ಸಮುದಾಯದ ಕಲ್ಯಾಣ ಯೋಜನೆಗಳಲ್ಲಿ ಮರುಹೂಡಿಕೆ ಮಾಡಬೇಕು.
ಅಂತಿಮವಾಗಿ, ಭಾರತೀಯ ಮುಸ್ಲಿಮರಾಗಿ, ಅತ್ಯಂತ ಮುಖ್ಯವಾದ ಸಂಸ್ಥೆಯಾಗಿ ʻವಕ್ಫ್ʼ ಅನ್ನು ನಾವು ಗುರುತಿಸಬೇಕು. ಇದು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಮಾತ್ರವಲ್ಲದೆ, ಒಳಗೊಳ್ಳುವಿಕೆ ಮತ್ತು ಶ್ರೇಷ್ಠತೆಯ ಮನೋಭಾವವನ್ನು ಬೆಳೆಸುವಲ್ಲಿ ನಮ್ಮ ಸಮುದಾಯದ ಸಾಮರ್ಥ್ಯವನ್ನು ತೆರೆದಿಡುವ ಕೀಲಿಯನ್ನು ಹೊಂದಿದೆ. ಸುಧಾರಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಉತ್ತರದಾಯಿತ್ವವನ್ನು ಬಯಸುವ ಮೂಲಕ, ಮುಸ್ಲಿಂ ಸಮುದಾಯಕ್ಕೆ ಪ್ರಯೋಜನವಾಗುವ ಹಾಗೂ ವಿಶಾಲ ಸಮಾಜಕ್ಕೆ ಕೊಡುಗೆ ನೀಡುವ ತನ್ನ ಉದ್ದೇಶಿತ ಗುರಿಯನ್ನು ʻವಕ್ಫ್ʼ ಪೂರೈಸುವುದನ್ನು ನಾವು ಖಚಿತಪಡಿಸಿಕೊಳ್ಳಬಹುದು.
ಸುಧಾರಣೆಯ ಸಮಯ ಈಗ ಬಂದಿದೆ. ಮುಸ್ಲಿಂ ಸಮುದಾಯ ಮತ್ತು ನಮ್ಮ ದೇಶದ ಒಳಿತಿಗಾಗಿ ʻವಕ್ಫ್ʼ ತನ್ನ ಸಾಮರ್ಥ್ಯವನ್ನು ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ನಾವು ಸಮುದಾಯ ಅಭಿವೃದ್ಧಿಯತ್ತ ಗಮನ ಹರಿಸೋಣ ಮತ್ತು ತೊಡಗಿಸಿಕೊಳ್ಳೋಣ. ʻವಕ್ಫ್ʼ ಸಂಸ್ಥೆಗಳು ಎಲ್ಲರಿಗೂ ಭರವಸೆ, ಅವಕಾಶ ಮತ್ತು ಸಮೃದ್ಧಿಯನ್ನು ಒದಗಿಸುವ ಆಶಾಕಿರಣಗಳಾಗುವ ಭವಿಷ್ಯದತ್ತ ನಾವು ಕೆಲಸ ಮಾಡೋಣ.