ಬೀದರ: ಬೀದರನಲ್ಲಿಂದು ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಪ್ರದೀಪ ಗುಂಟೆ ಅವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಪ್ರೆಸ್ ಪದ ವಾಹನಗಳ ಮೇಲೆ ಅತಿ ಹೆಚ್ಚಾಗಿ ದುರ್ಬಳಕೆ ಆಗುತ್ತಿರುವುದು ಇದರಿಂದ ಪತ್ರಕರ್ತರಿಗೆ ಅನೇಕ ಸಲ ಮುಜುಗರ ಉಂಟಾಗುತ್ತಿದೆ. ಹೀಗಾಗಿ ಇದನ್ನು ತಡೆಗಟ್ಟಬೇಕೆಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕ ಸಂಘದ ನಿಯೋಗ ಪೋಲಿಸ್ ವರಿಷ್ಟಾಧಿಕಾರಿಗಳನ್ನು ಇಂದು ಮನವಿ ಸಲ್ಲಿಸಿತು.
ಪತ್ರಕರ್ತರಲ್ಲದವರು ಸಹ ದ್ವೀಚಕ್ರ ಹಾಗೂ ಕಾರು ಸೇರಿದಂತೆ ಇತರ ವಾಹನಗಳ ಮೇಲೆ ಪ್ರೆಸ್ ಪದ ಎಲ್ಲರೂ ಬಳಸುತ್ತಿರುವುದು ಕಂಡು ಬಂದಿದ್ದು ಅನೇಕ ಸಲ ಪತ್ರಕರ್ತರಿಗೆ ಹಾಗೂ ಪೋಲಿಸರಿಗೂ ಸಹ ನಿಜವಾದ ಪತ್ರಕರ್ತರ ಬಗ್ಗೆ ತಿಳಿಯದೇ ಕ್ರಮ ಜರುಗಿಸುವುದರ ಬಗ್ಗೆ ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಇಂದು ನಾವು ಮನವಿ ಪತ್ರ ನೀಡಿ ಪತ್ರಕರ್ತರಿದ್ದವರನ್ನು ಮಾತ್ರ ಗುರುತು ಮಾಡಿ ಉಳಿದಂತಹ ವಾಹನಗಳನ್ನು ಪತ್ತೆ ಹಚ್ಚಿ ದಂಡ ಹಚ್ಚಬಹುದೆಂದು ಮನವಿ ಪತ್ರದಲ್ಲಿ ತಿಳಿಸಿದ್ದೇವು. ಇದಕ್ಕೆ ಸ್ಪಂದಿಸಿದ ಪೋಲಿಸ್ ವರಿಷ್ಠಾಧಿಕಾರಿಗಳು ೨-೩ ದಿನದಲ್ಲಿ ಪತ್ರಕರ್ತರ ವಾಹನಗಳಿಗೆ ಕಾರ್ಡ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಮತ್ತು ಪತ್ರಕರ್ತರಲ್ಲದವರ ವಾಹನಗಳನ್ನು ತಪಾಷಣೆ ಮಾಡಿ ದಂಡ ವಿಧಿಸಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸುಮಾರು ೩೦ ನಿಮಿಷಗಳ ಕಾಲ ಪೋಲಿಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು ಪತ್ರಕರ್ತರು ಮತ್ತು ಪೋಲಿಸ್ ಅಧಿಕಾರಿಗಳ ಮಧ್ಯ ಸಮನ್ವಯ ಮತ್ತು ಪರಸ್ಪರ ಸಹಕಾರದ ಭಾವನೆ ಇರಬೇಕೆಂದು ನಾವು ಮತ್ತು ಪೋಲಿಸ್ ಅಧಿಕಾರಿಗಳು ಚರ್ಚೆ ಮಾಡಲಾಯಿತು. ಈ ಸಂದರ್ಭದಲ್ಲಿ ನಮ್ಮ ಸಂಘ ಕಾನೂನಾತ್ಮಕ ಹಾಗೂ ಪೋಲಿಸರಿಗೆ ಯಾವಾಗಲೂ ಬೆಂಬಲವಾಗಿ ನಿಲ್ಲುವದಾಗಿ ಹೇಳಲಾಗಿದೆ.
ಪತ್ರಕರ್ತರು ಸಹ ಸರಿಯಾದ ಮಾಹಿತಿ ಪಡೆದು ಸಮಯಕ್ಕೆ ಸರಿಯಾಗಿ ಜನರಿಗೆ ಸುದ್ದಿ ಮುಟ್ಟಿಸಿದರೆ ಸೂಕ್ತವಾಗುವುದು. ಯಾಕೆಂದರೆ ಮಾಧ್ಯಮ ಸುದ್ದಿ ಜನರು ನಂಬಿರುತ್ತಾರೆ. ಹೀಗಾಗಿ ಜನರಿಗೆ ನಂಬಿಕೆ ಬರುವ ರೀತಿಯಲ್ಲಿ ಸುದ್ದಿ ಬಿತ್ತರಿಸುವ ಬಗ್ಗೆ ಔಪಚಾರಿಕ ಚರ್ಚೆ ನಡೆಯಿತು. ಪೋಲಿಸರು ಯಾವಾಗಲೂ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅವರಿಗೆ ನಾವು ಸದಾ ಬೆಂಬಲದಲ್ಲಿರುತ್ತೇವೆ ಎಂಬ ಭರವಸೆ ಈ ಸಂದರ್ಭದಲ್ಲಿ ನಮ್ಮ ಸಂಘ ನೀಡಿತು.
ನಿಯೋಗದಲ್ಲಿ ಸಂಪಾದಕರ ಸಂಘದ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ಮತ್ತು ಹಿರಿಯ ಪತ್ರಕರ್ತರಾದ ಸೈಯದ್ ಹಸನ್ ಖಾದ್ರಿ, ಅಬ್ದುಲ್ ಅಲಿ, ಪ್ರದೀಪ ಬಿರಾದಾರ,ನಂದಕುಮಾರ, ಸುನೀಲ ಕುಲಕರ್ಣಿ, ಸ್ವಾಮಿದಾಸ ಯೇಸುದಾಸ ನಾಗೂರೆ, ಜೈಕುಮಾರ ಹಾಗೂ ಸುಧಾರಾಣಿ ಸೇರಿ ಹಲವರು ಹಾಜರಿದ್ದರು.
ಬೀದರ ಜಿಲ್ಲೆಯಲ್ಲಿ ಪ್ರೆಸ್ ಪದ ವಾಹನಗಳ ಮೇಲೆ ದುರ್ಬಳಕೆ ಬಗ್ಗೆ ಎಸ್‌ಪಿ ಗೆ ಮನವಿ, ಶೀಘ್ರವೇ ಪತ್ರಕರ್ತರಿಗೆ ಪೋಲಿಸ್ ಕಾರ್ಡ ವಿತರಣೆ ಭರವಸೆ
