ಪ್ರಪಂಚದಾದ್ಯಂತದ ದೇಶಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿದೆ. ನಮ್ಮ ಭಾರತೀಯ ವಲಸಿಗ ಸಮುದಾಯವು ಕುವೈತ್ ನಲ್ಲಿ ಗಮನಾರ್ಹ ಅಸ್ತಿತ್ವವನ್ನು ಹೊಂದಿದೆ. ಕುವೈತ್ ನಲ್ಲಿರುವ ಅತಿ ದೊಡ್ಡ ವಲಸಿಗ ಸಮುದಾಯವು ಭಾರತೀಯರಾಗಿದ್ದು, ಅವರು ಸುಮಾರು 1 ಮಿಲಿಯನ್ ಸಂಖ್ಯೆಯಷ್ಟಿದ್ದಾರೆ ಮತ್ತು ಕುವೈತ್ ನ ವಿವಿಧ ಪ್ರದೇಶಗಳಲ್ಲಿ ಇದ್ದಾರೆ. ಇಂದು, ಕುವೈತ್ ನಲ್ಲಿ ಪ್ರಧಾನ ಮಂತ್ರಿಯವರು ಗಲ್ಫ್ ಸ್ಪಿಕ್ ಲೇಬರ್ ಕ್ಯಾಂಪ್ ಗೆ ಭೇಟಿ ನೀಡಿದರು, ಅಲ್ಲಿರುವ ಶೇ.90 ಕ್ಕಿಂತ ಹೆಚ್ಚು ನಿವಾಸಿಗಳು ಭಾರತೀಯರಾಗಿದ್ದಾರೆ, ಅವರೊಂದಿಗೆ ಪ್ರಧಾನಿಯವರು ಸಂವಾದ ನಡೆಸಿದರು.
ಈ ಹಿಂದೆಯೂ ಪ್ರಧಾನಮಂತ್ರಿಯವರು ವಿದೇಶದಲ್ಲಿರುವ ಭಾರತೀಯ ಕಾರ್ಮಿಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಹಲವು ಉದಾಹರಣೆಗಳಿವೆ.
2016ರಲ್ಲಿ ಸೌದಿ ಅರೇಬಿಯಾದ ರಿಯಾದ್ ನಲ್ಲಿರುವ ಎಲ್ ಆ್ಯಂಡ್ ಟಿ ಕಾರ್ಮಿಕರ ವಸತಿ ಸಂಕೀರ್ಣಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು.
ಅವರು ರಿಯಾದ್ ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನ ಆಲ್ ವುಮೆನ್ ಐಟಿ ಮತ್ತು ಐಟಿಇಎಸ್ ಸೆಂಟರ್ ಗೂ ಸಹ ಭೇಟಿ ನೀಡಿದ್ದರು.
ಅದೇ ವರ್ಷ ಕತಾರ್ ನ ದೋಹಾದಲ್ಲಿ ಕಾರ್ಮಿಕರ ಶಿಬಿರಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭೇಟಿ ನೀಡಿದ್ದರು.
ಈ ಹಿಂದೆ 2015ರಲ್ಲಿ ಅಬುಧಾಬಿಯ ಕಾರ್ಮಿಕ ಶಿಬಿರಕ್ಕೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ಮೋದಿಯವರು, ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಭಾರತದ ಕಾಳಜಿಯನ್ನು ಎತ್ತಿ ತೋರಿಸಿದ್ದರು. ಅವರು ಶಿಬಿರಗಳಲ್ಲಿ ಭಾರತೀಯ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಸಮಸ್ಯೆಗಳನ್ನು ತಿಳಿದುಕೊಂಡರು ಮತ್ತು ಭಾರತ ಸರ್ಕಾರವು ಅವರಿಗೆ ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು ಚರ್ಚಿಸಿದರು.
ಸುರಕ್ಷಿತ ಮತ್ತು ಕಾನೂನುಬದ್ಧ ವಲಸೆಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ಮೋದಿ ಅವರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಒಂದು ಪ್ರಮುಖ ಪ್ರಯತ್ನವೆಂದರೆ 2014ರಲ್ಲಿ ಇ-ಮೈಗ್ರೇಟ್ ಯೋಜನೆಯನ್ನು ಉದ್ಯೋಗದ ಉದ್ದೇಶಗಳಿಗಾಗಿ ಭಾರತೀಯರ ವಲಸೆಯನ್ನು ಸುಲಭಗೊಳಿಸಲು ಮತ್ತು ದುಷ್ಕೃತ್ಯಗಳ ವ್ಯಾಪ್ತಿಯನ್ನು ಕಡಿಮೆ ಮಾಡಲು ಪ್ರಾರಂಭಿಸಲಾಯಿತು. ಇದು ನೇಮಕಾತಿ ಪ್ರಕ್ರಿಯೆಯನ್ನು ಅಡೆತಡೆರಹಿತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲು ಸಹಾಯ ಮಾಡುತ್ತದೆ. ಇದು ಎಲ್ಲಾ ಭಾಗೀದಾರರಿಗೆ ಭಾರತೀಯ ವಲಸಿಗರ ಸಮಗ್ರ ಆನ್ಲೈನ್ ಡೇಟಾಬೇಸ್ ಅನ್ನು ಒದಗಿಸುತ್ತದೆ ಮತ್ತು ಸಂಪೂರ್ಣ ವಲಸೆ ಚಕ್ರವನ್ನು ವೇಗವಾಗಿ, ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ಮಾಡುತ್ತದೆ.
ಪಾಸ್ಪೋರ್ಟ್ ವಿವರಗಳ ಆನ್ಲೈನ್ ಪರಿಶೀಲನೆಗಾಗಿ ಮತ್ತು ಪ್ರವಾಸಿ ಭಾರತೀಯ ಬಿಮಾ ಯೋಜನೆ ಒದಗಿಸುವ ವಿಮಾ ಏಜೆನ್ಸಿಗಳಿಗೆ ಪಾಸ್ಪೋರ್ಟ್ ಸೇವಾ ಯೋಜನೆಯಂತಹ ಇತರ ಸೇವೆಗಳೊಂದಿಗೆ ಇ-ಮೈಗ್ರೇಟ್ ವ್ಯವಸ್ಥೆಯನ್ನು ಸಂಯೋಜಿಸಲಾಗಿದೆ. ಡಿಜಿ ಶಿಪ್ಪಿಂಗ್ ವ್ಯವಸ್ಥೆಯನ್ನು ಇ-ಮೈಗ್ರೇಟ್ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ, ಇದರ ಮೂಲಕ ಡಿಜಿ ಶಿಪ್ಪಿಂಗ್ ಗೆ ಸಲ್ಲಿಸಿದ ದತ್ತಾಂಶವನ್ನು ಇ-ಮೈಗ್ರೇಟ್ ಮೂಲಕ ಇಮಿಗ್ರೇಷನ್ ಚೆಕ್ ಪೋಸ್ಟ್ ಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ವಲಸೆ ಪ್ರಕ್ರಿಯೆಗಾಗಿ ಕಳುಹಿಸಲಾಗುತ್ತದೆ, ಹೀಗಾಗಿ ಪ್ರಕ್ರಿಯೆಯು ಸುವ್ಯವಸ್ಥಿತವಾಗುತ್ತದೆ.
ಮೋದಿ ಸರ್ಕಾರವು ಸಾಗರೋತ್ತರ ಉದ್ಯೋಗ ಮತ್ತು ವಲಸಿಗರ ಪ್ರೊಟೆಕ್ಟರ್ ಜನರಲ್ ವಿಭಾಗವನ್ನು ಬಲಪಡಿಸಿದೆ, ಇದು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಇಸಿಆರ್ (ಎಮಿಗ್ರೇಷನ್ ಕ್ಲಿಯರೆನ್ಸ್ ಅಗತ್ಯವಿರುವ ವರ್ಗ) ಪಾಸ್ಪೋರ್ಟ್ ಗಳನ್ನು ಹೊಂದಿರುವ ವ್ಯಕ್ತಿಗಳಿಗೆ ವಲಸೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಭಾರತದಾದ್ಯಂತ ವಲಸಿಗರ ಪ್ರೊಟೆಕ್ಟರ್ ಜನರಲ್ ನ 16 ಕಚೇರಿಗಳನ್ನು ತೆರೆಯಲಾಗಿದೆ.
ವಲಸೆಯ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಲು ಮತ್ತು ವಲಸೆ ಕಾರ್ಮಿಕರ ದೂರುಗಳು ಮತ್ತು ಕುಂದುಕೊರತೆಗಳನ್ನು ಸ್ವೀಕರಿಸಲು ಮತ್ತು ಪರಿಹರಿಸಲು ಸಹಾಯ ಮಾಡುವ ಪ್ರವಾಸಿ ಭಾರತೀಯ ಸಹಾಯಕ ಕೇಂದ್ರವನ್ನು ಮೋದಿ ಸರ್ಕಾರವು ಬಲಪಡಿಸಿದೆ. ಪ್ರವಾಸಿ ಭಾರತೀಯ ಸಹಾಯಕ ಕೇಂದ್ರದ ಜೊತೆಗೆ, 5 ಕ್ಷೇತ್ರೀಯ ಪ್ರವಾಸಿ ಸಹಾಯಕ ಕೇಂದ್ರಗಳನ್ನು ಲಕ್ನೋ, ಹೈದರಾಬಾದ್, ಚೆನ್ನೈ, ಪಾಟ್ನಾ ಮತ್ತು ಕೊಚ್ಚಿಯಲ್ಲಿ ಸ್ಥಾಪಿಸಲಾಗಿದೆ, ಇವು ಕುಂದುಕೊರತೆಗಳು ಮತ್ತು ಪ್ರಶ್ನೆಗಳ ಪರಿಹಾರಕ್ಕಾಗಿ ಮುಖಾಮುಖಿ ಸಂವಾದದ ಅಗತ್ಯವಿರುವ ವಲಸಿಗರಿಗೆ ಸಹಾಯ ಮಾಡುತ್ತವೆ.
ಇದರೊಂದಿಗೆ ವಿದೇಶದಲ್ಲಿರುವ ಭಾರತೀಯ ಕಾರ್ಮಿಕರ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ.
ಈ ವರ್ಷದ ಆರಂಭದಲ್ಲಿ ಯುಎಇಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಭಾರತೀಯ ಕಾರ್ಮಿಕರಿಗಾಗಿ ಆಸ್ಪತ್ರೆ ನಿರ್ಮಾಣಕ್ಕಾಗಿ ದುಬೈನಲ್ಲಿ ಯುಎಇ ಭೂಮಿಯನ್ನು ನೀಡಿದೆ ಎಂದು ಘೋಷಿಸಿದ್ದರು.
ಈ ವರ್ಷ ಕುವೈತ್ ಅಗ್ನಿ ದುರಂತದಲ್ಲಿ 40 ಕ್ಕೂ ಹೆಚ್ಚು ಭಾರತೀಯರು ಸಾವನ್ನಪ್ಪಿದರು ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡರು. ಪ್ರಧಾನ ಮಂತ್ರಿ ಅವರು ಈ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಮೃತ ಭಾರತೀಯ ಪ್ರಜೆಗಳ ಕುಟುಂಬಗಳಿಗೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಗಳ ಪರಿಹಾರದ ಮೊತ್ತವನ್ನು ಘೋಷಿಸಿದರು.
ಭಾರತ ಮತ್ತು ಕುವೈತ್ 2021 ರಲ್ಲಿ ಎಂಒಯುಗೆ ಸಹಿ ಹಾಕಿದವು, ಇದು ಕುವೈತ್ ನಲ್ಲಿರುವ ಭಾರತೀಯ ಮನೆಗೆಲಸದ ಕಾರ್ಮಿಕರ ಕಲ್ಯಾಣ ಮತ್ತು ಹಕ್ಕುಗಳನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಒಪ್ಪಂದವು ಕಾರ್ಮಿಕರು ಮತ್ತು ಮಾಲೀಕರ ನಡುವೆ ನ್ಯಾಯಯುತ ಮತ್ತು ಸಮತೋಲಿತ ಸಂಬಂಧವನ್ನು ಸ್ಥಾಪಿಸಿತು, ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಸ್ಥಳೀಯ ಕಾನೂನುಗಳ ಅನುಸರಣೆಯ ಮೇಲೆ ಕೇಂದ್ರೀಕರಿಸಿದೆ. ಇದು ಸಹಕಾರಿ ಮತ್ತು ಗೌರವಾನ್ವಿತ ಕಾರ್ಮಿಕ ಪರಿಸರವನ್ನು ಪೋಷಿಸುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಅಂತಿಮವಾಗಿ ಕುವೈತ್ ನಲ್ಲಿರುವ ಭಾರತೀಯ ಕಾರ್ಮಿಕರ ಕಲ್ಯಾಣವನ್ನು ಸುಧಾರಿಸುತ್ತದೆ.
2016 ರಲ್ಲಿ, ಪ್ರಧಾನಿ ಮೋದಿ ಅವರು ಕತಾರ್ ನ ಅಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರನ್ನು ಭೇಟಿಯಾಗಿ ಭಾರತೀಯ ವಲಸಿಗರ ಪರಿಸ್ಥಿತಿಯನ್ನು ಚರ್ಚಿಸಿದ್ದರು. ಕಾರ್ಮಿಕ ಸುಧಾರಣೆಗಳು ಐದು ಲಕ್ಷಕ್ಕೂ ಹೆಚ್ಚು ಭಾರತೀಯ ವಲಸಿಗರ ಪರಿಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಕತಾರ್ ಭರವಸೆ ನೀಡಿತ್ತು.
ನಮ್ಮ ವಲಸಿಗ ಸಮುದಾಯದ ಬಗ್ಗೆ ಕಾಳಜಿ ವಹಿಸುವ ಪ್ರಧಾನ ಮಂತ್ರಿಯವರ ದೂರದೃಷ್ಟಿಯಿಂದ ಪ್ರೇರಿತರಾದ ಭಾರತವು ಗಲ್ಫ್ ರಾಷ್ಟ್ರಗಳಲ್ಲಿನ ತನ್ನ ಕಾರ್ಮಿಕರಿಗೆ ಹೆಚ್ಚಿನ ವೇತನಕ್ಕಾಗಿ ಅಭಿಯಾನವನ್ನು ಪ್ರಾರಂಭಿಸಿತು. ಭಾರತೀಯ ರಾಜತಾಂತ್ರಿಕರು ಹೆಚ್ಚಿನ ಜೀವನ ವೆಚ್ಚದ ಕಾರಣ ಶಿಫಾರಸು ಮಾಡಿದ ಕನಿಷ್ಠ ವೇತನವನ್ನು ಹೆಚ್ಚಿಸಿದ್ದಾರೆ.