ಹಾವೇರಿ: ಸರ್ಕಾರದ ದಿನಾಂಕ: 19-01-2017ರ ತಿದ್ದುಪಡಿ ಆದೇಶದ ಮೇರೆಗೆ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಟೆಂಡರ್ ಜಾಹೀರಾತುಗಳನ್ನು ಬಿಡುಗಡೆ ಮಾಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎಸಿ.ತಿಪ್ಪೇಸ್ವಾಮಿ ಮತ್ತು ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಡಾ: ವಿಜಯಮಹಾಂತೇಶ ದಾನಮ್ಮನವರ ಇವರಿಗೆ ಮನವಿ ಸಲ್ಲಿಸಿದರು.
ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ : ಕಸಂವಾ/04/ವಾಪ್ರಜಾ/2017 ದಿನಾಂಕ: 19-01-2017. ವಿಷಯಕ್ಕೆ ಸಂಬಂಧಿಸಿದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ/ಪ್ರಾದೇಶಿಕ/ರಾಜ್ಯ ಮಟ್ಟದ ಪತ್ರಿಕೆಗಳಿಗೆ ಸರ್ಕಾರದ ಟೆಂಡರ್ ಮತ್ತು ವರ್ಗೀಕೃತ ಜಾಹೀರಾತು ಬಿಡುಗಡೆಗೆ ಮಾರ್ಗಸೂಚಿವುಳ್ಳ ದಿನಾಂಕ:19/01/2017ರ ಉಲ್ಲೇಖದ ತಿದ್ದುಪಡಿ ಆದೇಶವನ್ನು ಸರ್ಕಾರವು ಹೊರಡಿಸಿದೆ.
ಸರ್ಕಾರದ ವಿವಿಧ ಇಲಾಖೆಗಳ ಟೆಂಡರ್ ಮತ್ತು ವರ್ಗೀಕೃತ ಜಾಹೀರಾತು ಬಿಡುಗಡೆ ಮಾಡುವಾಗ ತಿದ್ದುಪಡಿ ಆದೇಶದಲ್ಲಿ ಸೂಚಿಸಿದ ಪ್ರಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಾವೇರಿ ಜಿಲ್ಲಾ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಹಾಗೂ ಅನ್ವಯವಾಗುವ ರಾಜ್ಯ ಮಟ್ಟದ ಪತಿಕೆಗಳಿಗೆ ಬಿಡುಗಡೆ ಮಾಡಬೇಕು. ಆದರೆ, ಹಲವು ಕಾಮಗಾರಿಗಳನ್ನು ಒಂದೇ ಟೆಂಡರ್ ಪ್ರಕಟಣೆಯಲ್ಲಿ ಕರೆದಾಗ ಜಾಹೀರಾತು ನೀತಿ 2013, ಅನುಷ್ಠಾನ ನಿಯಮಗಳು 2014ರ ನಿಯಮ 19ರ ಟಿಪ್ಪಣಿಯಲ್ಲಿ ನೀಡಿರುವ ಸೂಚನೆಯಂತೆ ಕಾಮಗಾರಿಗಳ ಮೌಲ್ಯಕ್ಕೆ ಅನುಗುಣವಾಗಿ ಅನ್ವಯವಾಗುವ ಜಿಲ್ಲಾ/ ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಬಿಡುಗಡೆ ಮಾಡದೆ ಕೇವಲ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಬಿಡುಗಡೆ ಮಾಡುತ್ತಿರುವ ನಿದರ್ಶನಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಅಲ್ಲದೆ, ಜಿಲ್ಲೆಯ ಅನೇಕ ಕಚೇರಿಗಳು, ಜಿಲ್ಲಾ ಪಂಚಾಯಿತಿ, ತಾಲೂಕಾ ಪಂಚಾಯಿತಿ, ಗ್ರಾಮ ಪಂಚಾಯತಿಗಳು ನೇರವಾಗಿ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಟೆಂಡರ್ ಹಾಗೂ ವರ್ಗೀಕೃತ ಜಾಹೀರಾತುಗಳನ್ನು ಬಿಡುಗಡೆ ಮಾಡಿ ಜಾಹೀರಾತು ನೀತಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿವೆ.
ಆದ್ದರಿಂದ ಸರ್ಕಾರದ ಈ ತಿದ್ದುಪಡಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಹಾವೇರಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಕಚೇರಿಗಳು, ನಿಗಮ ಮಂಡಳಿಗಳು, ಪ್ರಾಧಿಕಾರಗಳು, ವಿಶ್ವವಿದ್ಯಾನಿಲಯಗಳು ತಮ್ಮ ಕಚೇರಿಗೆ ಸಂಬಂಧಿಸಿದ ಎಲ್ಲಾ ಬಗೆಯ ಟೆಂಡರ್ ಹಾಗೂ ವರ್ಗೀಕೃತ ಜಾಹೀರಾತುಗಳನ್ನು ಕಡ್ಡಾಯವಾಗಿ ಸಹಾಯಕ ನಿರ್ದೇಶಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಾವೇರಿ ಇವರ ಮೂಲಕವೇ ಬಿಡುಗಡೆ ಮಾಡುವಂತೆ ತಮ್ಮ ಕಚೇರಿಯಿಂದ ಸುತ್ತೋಲೆ ಹೊರಡಿಸುವಂತೆ ನೀಡಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಮನವಿ ಪತ್ರ ಸಲ್ಲಿಕೆಯ ಮುಂಚೂಣಿಯಲ್ಲಿ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ದಿನೇಶ್ ಬಿ, ರಾಜ್ಯ ಖಜಾಂಜಿ ವೇದಮೂರ್ತಿ ಎಸ್.ಟಿ, ಸಂಘಟನಾ ಕಾರ್ಯದರ್ಶಿ ರಾಜು ತಳವಾರ ಮೊದಲಾದವರು ಉಪಸ್ಥಿತರಿದ್ದರು