ಭಾರತೀಯ ಚಿತ್ರರಂಗದ ಇತಿಹಾಸವನ್ನು ಪ್ರತಿಬಿಂಬಿಸುವ ಮತ್ತು ನಾಲ್ಕು ಶ್ರೇಷ್ಠ ಐಕಾನ್ ಗಳಾದ ಅಕ್ಕಿನೇನಿ ನಾಗೇಶ್ವರ ರಾವ್, ರಾಜ್ ಕಪೂರ್, ಮೊಹಮ್ಮದ್ ರಫಿ ಮತ್ತು ತಪನ್ ಸಿನ್ಹಾ ಅವರಿಗೆ ಗೌರವ ಸಲ್ಲಿಸುವ ಮೂಲಕ IFFI ಅರ್ಥಪೂರ್ಣ ಚಲನಚಿತ್ರೋತ್ಸವವಾಯಿತು.
ಚಲನಚಿತ್ರಗಳ ಮಹಾಮೇಳವೆಂದೇ ಪರಿಗಣಿಸಲ್ಪಡುವ ಈ ವರ್ಷದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ನವೆಂಬರ್ 28, 2024 ರಂದು ಅದ್ದೂರಿಯಾಗಿ ಮುಕ್ತಾಯಗೊಂಡಿತು. ಈ ಚಿತ್ರೋತ್ಸವದಲ್ಲಿ, ಭಾರತೀಯ ಚಿತ್ರರಂಗದ ನಾಲ್ವರು ದಿಗ್ಗಜರಾದ ದಿ ವರ್ಸಟೈಲ್ ನಟ ಅಕ್ಕಿನೇನಿ ನಾಗೇಶ್ವರ ರಾವ್, ದಿ ಮಾಸ್ಟರ್ ಶೋಮ್ಯಾನ್ ರಾಜ್ ಕಪೂರ್, ದಿ ಎಟರ್ನಲ್ ವಾಯ್ಸ್ ಮೊಹಮ್ಮದ್ ರಫಿ ಮತ್ತು ದಿ ಜೀನಿಯಸ್ ಸ್ಟೋರಿಟೆಲ್ಲರ್ ತಪನ್ ಸಿನ್ಹಾ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು. ಈ ಮೇರು ಪ್ರತಿಭಾವಂತರು ತಮ್ಮ ಅನನ್ಯ ಪ್ರತಿಭೆ ಮತ್ತು ದೃಷ್ಟಿಕೋನಗಳಿಂದ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು. ಅವರ ಪ್ರಭಾವ ಚಿತ್ರ ನಿರ್ಮಾಪಕರು, ಸಂಗೀತಗಾರರು ಮತ್ತು ಪ್ರೇಕ್ಷಕರ ಮೇಲೆ ಅಳಿಸಲಾಗದಂತೆ ಉಳಿದಿದೆ. ಅವರ ಪರಂಪರೆ ಯುಗಯುಗಗಳಿಂದ ಚಿರಸ್ಥಾಯಿಯಾಗಿ ನಿಲ್ಲುತ್ತದೆ.
ರಾಜ್ ಕಪೂರ್, ಭಾರತೀಯ ಚಲನಚಿತ್ರ ಜಗತ್ತಿನ ಅಪ್ರತಿಮ ಶಿಲ್ಪಿ. ನಟನೆ, ನಿರ್ದೇಶನ, ಸ್ಟುಡಿಯೋ ಮಾಲೀಕತ್ವ ಮತ್ತು ನಿರ್ಮಾಣ – ಹೀಗೆ ಬಹುಮುಖ ಪ್ರತಿಭೆಯ ಗಣಿಯಾಗಿದ್ದರು. ಸಾಮಾಜಿಕ ಸಮಸ್ಯೆಗಳನ್ನು ಮಧುರ ಹಾಸ್ಯ ಮತ್ತು ಸಹಾನುಭೂತಿಯ ಮೂಲಕ ಚಿತ್ರಿಸುವ ಅವರ ಚಲನಚಿತ್ರಗಳು ಸಾಮಾನ್ಯ ಜನರ ಮನದ ಧ್ವನಿಯಾಗಿ ಮೂಡಿಬಂದವು. ಬಂಗಾಳದ ಖ್ಯಾತ ಚಲನಚಿತ್ರ ನಿರ್ಮಾಪಕ ತಪನ್ ಸಿನ್ಹಾ, ಮನಮುಟ್ಟುವ ಕಥಾ ಹಂದರ ಮತ್ತು ಸೂಕ್ಷ್ಮ ಸಾಮಾಜಿಕ ಚಿಂತನೆಗಳಿಗೆ ಹೆಸರುವಾಸಿಯಾಗಿದ್ದರುಸಾಮಾನ್ಯ ಜನರ ಅಂತರಂಗ ಸಂಘರ್ಷಗಳನ್ನು ಅವರ ಚಿತ್ರಗಳು ಬಿಂಬಿಸುತ್ತಿದ್ದವು. ಕಲಾತ್ಮಕತೆ ಮತ್ತು ಸಾಮಾಜಿಕ ವ್ಯಾಖ್ಯಾನಗಳ ಸಮ್ಮಿಲನದಿಂದಾಗಿ ಅವರ ಚಿತ್ರಗಳು ಕಾಲಾತೀತ ಮೌಲ್ಯವನ್ನು ಪಡೆದಿವೆ. ಎ. ಎನ್. ಆರ್. ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅಕ್ಕಿನೇನಿ ನಾಗೇಶ್ವರ ರಾವ್, ಅನನ್ಯ ಸಾಮರ್ಥ್ಯ ಮತ್ತು ಪ್ರಭಾವಶಾಲಿ ಅಭಿನಯಕ್ಕೆ ಪ್ರಸಿದ್ಧರಾಗಿದ್ದರು. ಆರು ದಶಕಗಳ ಸುದೀರ್ಘ ವೃತ್ತಿ ಜೀವನದಲ್ಲಿ ಅವರು ಅನೇಕ ಪ್ರತಿಷ್ಠಿತ ಪಾತ್ರಗಳಿಗೆ ಜೀವ ತುಂಬಿ ಚಿತ್ರರಂಗದ ಐಕಾನ್ ಆಗಿ ನಿಂತರು. ಭಾರತದ ಅತ್ಯಂತ ಪ್ರೀತಿಪಾತ್ರ ಪ್ಲೇಬ್ಯಾಕ್ ಗಾಯಕರಲ್ಲಿ ಒಬ್ಬರಾದ ಮೊಹಮ್ಮದ್ ರಫಿ, ವಿಶಿಷ್ಟ ಗಾಯನ ಶೈಲಿ ಮತ್ತು ಭಾವಪೂರ್ಣ ಧ್ವನಿಗೆ ಹೆಸರುವಾಸಿಯಾಗಿದ್ದರು. ಅವರ ಸುಮಧುರ ಗೀತೆಗಳು ಪೀಳಿಗೆಯಿಂದ ಪೀಳಿಗೆಗೆ, ಭಾಷೆಯಿಂದ ಭಾಷೆಗೆ ಪ್ರೇಕ್ಷಕರ ಮನ ಗೆದ್ದಿವೆ.
ಚಲನಚಿತ್ರೋತ್ಸವವೊಂದು ತನ್ನ ಬೇರುಗಳನ್ನು ನೆನೆದು, ಆರಂಭದ ದಿನಗಳನ್ನು ಸ್ಮರಿಸಿದಾಗಲೇ ಅದು ನಿಜವಾದ ಅರ್ಥವನ್ನು ಪಡೆದುಕೊಳ್ಳುತ್ತದೆ. IFFIನನ 55ನೇ ಆವೃತ್ತಿಯು ಈ ದಿಗ್ಗಜರ ಸಿನಿಮಾ ಸಾಧನೆಗಳನ್ನು ಗೌರವಿಸುವುದರ ಜೊತೆಗೆ, ಹೊಸ ಪೀಳಿಗೆಯ ಚಲನಚಿತ್ರ ಪ್ರೇಮಿಗಳಿಗೆ ಅವರ ಪರಂಪರೆಯನ್ನು ಪರಿಚಯಿಸುವ ಮಹತ್ವದ ವೇದಿಕೆಯನ್ನೂ ಒದಗಿಸಿತು. ಈ ಮಹಾನ್ ಶಿಲ್ಪಿಗಳ ಶತಮಾನೋತ್ಸವವನ್ನು ಗುರುತಿಸುತ್ತಾ, ಚಿತ್ರೋತ್ಸವವು ಅವರ ಅನನ್ಯ ಕೊಡುಗೆಗಳನ್ನು ವಿಶೇಷವಾಗಿ ಸಂಯೋಜಿಸಲಾದ ಕಾರ್ಯಕ್ರಮಗಳು, ಚಲನಚಿತ್ರ ಪ್ರದರ್ಶನಗಳು ಮತ್ತು ಪ್ರಸ್ತುತಿಗಳ ಮೂಲಕ ಪ್ರೇಕ್ಷಕರ ಮುಂದಿಟ್ಟಿತು.
ಶತಮಾನೋತ್ಸವದ ಆಚರಣೆಗಳು ಮೊದಲ ದಿನದಿಂದಲೇ ವರ್ಣರಂಜಿತ ಉದ್ಘಾಟನಾ ಸಮಾರಂಭದ ವೇದಿಕೆಯಿಂದ ಆರಂಭವಾದವು. ಎಎನ್ಆರ್, ರಾಜ್ ಕಪೂರ್, ಮೊಹಮ್ಮದ್ ರಫಿ ಮತ್ತು ತಪನ್ ಸಿನ್ಹಾ ಅವರ ಚಲನಚಿತ್ರ ಪಯಣದ audio-visual ಪ್ರಸ್ತುತಿ ಪ್ರೇಕ್ಷಕರನ್ನು ಬೆರಗುಗೊಳಿಸಿತು. ಸಂಜೆಯ ಸೊಬಗನ್ನು ಹೆಚ್ಚಿಸಲು, ನಟ ಬೋಮನ್ ಇರಾನಿ ಪ್ರತಿಯೊಬ್ಬ ಗಣ್ಯರಿಗೂ ಅರ್ಪಿಸಿ ರಚಿಸಲಾದ ಮನೋಜ್ಞ ಕವಿತೆಗಳನ್ನು ಹಾಡಿದರು. ಭಾರತೀಯ ಚಿತ್ರರಂಗದ ಮೇಲೆ ಅವರು ಬೀರಿದ ಗಾಢ ಪ್ರಭಾವವನ್ನು ಬಿಂಬಿಸಿದರು. ಸಮಾರಂಭದ ಒಂದು ವಿಶೇಷ ಆಕರ್ಷಣೆಯೆಂದರೆ ಅವರಿಗೆ ಅರ್ಪಿತವಾದ ವಿಶೇಷ ಸ್ಟಾಂಪ್ ಸಂಗ್ರಹದ ಬಿಡುಗಡೆ. ಈ ನಾಲ್ಕು ದಂತಕಥೆಗಳ ಅಪರೂಪದ ಚಿತ್ರಗಳನ್ನು ಒಳಗೊಂಡಿರುವ ಈ ಸ್ಮರಣಾರ್ಥ ಅಂಚೆ ಚೀಟಿ ಗೌರವವು ಚಿತ್ರರಂಗ ಮತ್ತು ಸಂಸ್ಕೃತಿಗೆ ಅವರ ಕೊಡುಗೆಗಳನ್ನು ಅಮರಗೊಳಿಸಿತು.
ಚಿತ್ರೋತ್ಸವವು ಕುಟುಂಬದ ಸದಸ್ಯರು, ಚಿತ್ರರಂಗದ ಸಹಚರರು ಮತ್ತು ಪ್ರಮುಖ ವ್ಯಕ್ತಿಗಳೊಂದಿಗೆ ನಡೆಸಿದ ಹಲವಾರು ಗೋಷ್ಠಿಗಳು ಮತ್ತು ಸಂವಾದಗಳ ಮೂಲಕ ಈ ದಂತಕಥೆಗಳ ವೈಯಕ್ತಿಕ ಹಾಗೂ ವೃತ್ತಿಪರ ಜೀವನದ ಅಪರೂಪದ ಘಟ್ಟಗಳನ್ನು ಬೆಳಕಿಗೆ ತಂದಿತು. ಖ್ಯಾತ ನಟಿ ಖುಷ್ಬೂ ಸುಂದರ್ ಮತ್ತು ದಿಗ್ಗಜ ನಟ ಎ ಎನ್ ಆರ್ ಅವರ ಪುತ್ರ ಮತ್ತು ನಟ ನಾಗಾರ್ಜುನ ಅಕ್ಕಿನೇನಿ ಅವರು ತೆಲುಗು ಚಿತ್ರರಂಗದ ಬೆಳವಣಿಗೆಯಲ್ಲಿ ಎಎನ್ಆರ್ ಅವರ ಪ್ರವರ್ತಕ ಪಾತ್ರವನ್ನು ವಿವರಿಸಿದರು. ಶೋಮ್ಯಾನ್ ರಾಜ್ ಕಪೂರ್ ಅವರ ಮೊಮ್ಮಗ ಮತ್ತು ನಟ ರಣಬೀರ್ ಕಪೂರ್ ಮತ್ತು ಚಲನಚಿತ್ರ ನಿರ್ದೇಶಕ ರಾಹುಲ್ ರವೈಲ್ ಅವರು ರಾಜ್ ಕಪೂರ್ ಅವರ ಪರಂಪರೆಯನ್ನು ಚರ್ಚಿಸುತ್ತಾ, ಭಾರತೀಯ ಚಿತ್ರರಂಗದಲ್ಲಿ ಅವರ ಪಥವನ್ನು ಮತ್ತು ಕಲೆಯನ್ನು ಸಾಮಾಜಿಕ ಪ್ರಭಾವದೊಂದಿಗೆ ಬೆಸೆಯುವ ಅವರ ಸಾಮರ್ಥ್ಯವನ್ನು ಅನ್ವೇಷಿಸಿದರು. ಪ್ರಖ್ಯಾತ ಗಾಯಕರಾದ ಅನುರಾಧ ಪೌಡ್ವಾಲ್ ಮತ್ತು ಸೋನು ನಿಗಮ್ ಮತ್ತು ದಂತಕಥೆ ಗಾಯಕ ಶಾಹಿದ್ ರಫಿ ಅವರೊಂದಿಗೆ ರಫಿ ಅವರು ಭಾರತೀಯ ಸಂಗೀತಕ್ಕೆ ನೀಡಿದ ಅಮರ ಕೊಡುಗೆಯ ಬಗ್ಗೆ ಆಳವಾದ ಚರ್ಚೆಯಲ್ಲಿ ಭಾಗವಹಿಸುವ ಸದವಕಾಶ ನನಗೆ ಲಭಿಸಿತು. ಶರ್ಮಿಳಾ ಟ್ಯಾಗೋರ್, ನಟ ಅರ್ಜುನ್ ಚಕ್ರವರ್ತಿ ಮತ್ತು ಚಲನಚಿತ್ರ ಪಂಡಿತ ಎನ್ ಮನು ಚಕ್ರವರ್ತಿ ಅವರು ತಪನ್ ಸಿನ್ಹಾ ಅವರ ನಿರೂಪಣಾ ಕೌಶಲ್ಯ ಮತ್ತು ಬಂಗಾಳಿ ಹಾಗೂ ಭಾರತೀಯ ಚಿತ್ರರಂಗದ ಮೇಲಿನ ಅವರ ಪ್ರಭಾವವನ್ನು ಚರ್ಚಿಸಿದರು.
IFFI ತಂಡವು ಈ ಮಹಾನ್ ಕಲಾವಿಧರ ಕಲಾಶ್ರೇಷ್ಠತೆಯನ್ನು ಗೌರವಿಸಲು ಡಿಜಿಟಲ್ ತಂತ್ರಜ್ಞಾನ ಟಚ್ ಕೊಟ್ಟ ಚಲನಚಿತ್ರಗಳ ವಿಶೇಷ ಸಂಗ್ರಹವನ್ನು ಅತ್ಯಂತ ಶ್ರದ್ಧೆಯಿಂದ ಆಯ್ಕೆ ಮಾಡಿ ಪ್ರಸ್ತುತಪಡಿಸಿತು. ಈ ಆಯ್ದ ಚಿತ್ರಗಳಲ್ಲಿ “ದೇವದಾಸು” (ಅಕ್ಕಿನೇನಿ ನಾಗೇಶ್ವರ ರಾವ್ ಅಭಿನಯದ) “ಆವಾರಾ” (ರಾಜ್ ಕಪೂರ್ ಅಭಿನಯದ) “ಹಮ್ ದೋನೋ” (ಮೊಹಮ್ಮದ್ ರಫಿ ಅವರ ಸಂಗೀತ ನಿರ್ದೇಶನದ) ಮತ್ತು “ಹಾರ್ಮೋನಿಯಂ” (ತಪನ್ ಸಿನ್ಹಾ ಅವರ ನಿರ್ದೇಶನದ) ಚಿತ್ರಗಳು ಪ್ರಮುಖವಾಗಿವೆ. ಈ ಚಿತ್ರಗಳ ಪ್ರದರ್ಶನವು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತು ಮತ್ತು ಹೊಸ ಅನುಭವಗಳನ್ನು ನೀಡಿತು. ಪೀಳಿಗೆಯಿಂದ ಪೀಳಿಗೆಗೆ ಈ ಚಿತ್ರಗಳು ಹೊಂದಿರುವ ಕಾಲಾತೀತ ಮೋಡಿಯನ್ನು ಆಚರಿಸಿತು. “ಕ್ಯಾರವಾನ್ ಆಫ್ ಸಾಂಗ್ಸ್” ಎಂಬ ಸಂಗೀತ ಕಾರ್ಯಕ್ರಮದಲ್ಲಿ ರಾಜ್ ಕಪೂರ್ ಮತ್ತು ಮೊಹಮ್ಮದ್ ರಫಿ ಅವರ 150 ಹಾಡುಗಳು ಮತ್ತು ಎ ಎನ್ ಆರ್ ಮತ್ತು ತಪನ್ ಸಿನ್ಹಾ ಅವರ ಕೃತಿಗಳಿಂದ 75 ಸಂಗೀತ ತುಣುಕುಗಳನ್ನು ಪ್ರಸ್ತುತಪಡಿಸಲಾಯಿತು. ಈ ಸಂಗೀತ ಗೌರವವು ಭಾರತೀಯ ಚಿತ್ರರಂಗದ ಸಂಗೀತ ಪರಂಪರೆಗೆ ಅವರ ಅನುಪಮ ಕೊಡುಗೆಗಳನ್ನು ಎತ್ತಿ ತೋರಿಸಿತು.
ಉತ್ಸವದಲ್ಲಿ ‘ಸಫರ್ನಾಮಾ’ ಎಂಬ ಶೀರ್ಷಿಕೆಯ ಪ್ರಭಾವಶಾಲಿ ಪ್ರದರ್ಶನವು ನಾಲ್ಕು ದಂತಕಥೆಗಳ ಜೀವನ ಮತ್ತು ವೃತ್ತಿಜೀವನವನ್ನು ನಿರೂಪಿಸುವ ಅಪರೂಪದ ಛಾಯಾಚಿತ್ರಗಳು, ಸ್ಮರಣಿಕೆಗಳು ಮತ್ತು ಕಲಾಕೃತಿಗಳನ್ನು ಪ್ರದರ್ಶಿಸಿತು. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC) ಮತ್ತು ಕೇಂದ್ರ ಸಂವಹನ ಬ್ಯೂರೋ ಅವರ ವೈಯಕ್ತಿಕ ಮತ್ತು ವೃತ್ತಿಪರ ಸಾಧನೆಗಳ ಸೂಕ್ಷ್ಮ ಚಿತ್ರಣವನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಪ್ರಶಂಸನೀಯ ಕಾರ್ಯ ನಿರ್ವಹಿಸಿವೆ, ಭೂತ ಮತ್ತು ವರ್ತಮಾನದ ಮಧ್ಯೆ ಸಂಪರ್ಕ ಸೇತುವೆಯನ್ನು ಸೃಷ್ಟಿಸಿವೆ. ಮನರಂಜನಾ ಕ್ಷೇತ್ರದಲ್ಲಿ ಕ್ವಿಜ್ಗಳು, ಡಿಜಿಟಲ್ ಪ್ರದರ್ಶನಗಳು ಮತ್ತು ಇಂಟರಾಕ್ಟಿವ್ ಡಿಸ್ಪ್ಲೇಗಳಂತಹ ವಿಷಯಾಧಾರಿತ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
IFFI ಈ ದಿಗ್ಗಜರ ಸಾಧನೆಗಳನ್ನು ಎತ್ತಿ ತೋರಿಸುವ ದ್ವಿಭಾಷಾ ಕಿರುಹೊತ್ತಗೆಗಳನ್ನು ಪ್ರಕಟಿಸಿ, ವಿಶ್ವದ ವಿವಿಧ ಭಾಗಗಳಿಂದ ಬಂದ ಪ್ರತಿನಿಧಿಗಳ ಮೂಲಕ ಅವರ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸುವ ಮಹತ್ವದ ಪ್ರಯತ್ನವನ್ನು ಮಾಡಿದೆ.
ಮಿರಾಮಾರ್ ಬೀಚ್ನಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಸುದರ್ಶನ್ ಪಟ್ನಾಯಕ್ ಅವರು ರಚಿಸಿದ ಗಮನಾರ್ಹವಾದ ಮರಳು ಕಲಾ ಚಿತ್ರಣವು ಈ ಚಲನಚಿತ್ರ ಮಹಾನ್ ವ್ಯಕ್ತಿಗಳ ಸಾಂಸ್ಕೃತಿಕ ಪ್ರಭಾವವನ್ನು ಸಂಕೇತಿಸುತ್ತದೆ. ಪದ್ಮಶ್ರೀ ಪ್ರಶಸ್ತಿ ವಿಜೇತರ ಮೋಡಿಮಾಡುವ ಮರಳು ಕಲೆಯು ಬೀಚ್ನಲ್ಲಿ ಸಾರ್ವಜನಿಕರನ್ನು ಮಂತ್ರಮುಗ್ಧಗೊಳಿಸಿತು ಮತ್ತು ಈ ನಾಲ್ಕು ಐಕಾನ್ ಗಳ ಕಾಲಾತೀತ ಪ್ರಭಾವಕ್ಕೆ ಗೌರವವಾಗಿ ನಿಂತಿತು.
ಈ ದಿಗ್ಗಜರ ಅದ್ಭುತ ಕೊಡುಗೆಗಳನ್ನು ಗೌರವಿಸಲು ಐಎಫ್ಎಫ್ಐ ನಡೆಸಿದ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ. ಭವ್ಯವಾಗಿ ಮತ್ತು ಅರ್ಥಪೂರ್ಣವಾಗಿ ಅವರ ಶಾಶ್ವತ ಪ್ರಭಾವವನ್ನು ಗೌರವ ಮತ್ತು ಅಭಿಮಾನದಿಂದ ಸ್ಮರಿಸಲಾಗಿದೆ. ಈ ಆಚರಣೆಯು ಅವರ ಸಾಧನೆಗಳನ್ನು ಕೊಂಡಾಡುವುದಷ್ಟೇ ಅಲ್ಲದೆ, ಅವರು ರೂಪಿಸಿದ ಭಾರತೀಯ ಚಿತ್ರರಂಗದ ಅಚಲ ಮನೋಭಾವವನ್ನು ಪುನರುಚ್ಚರಿಸುತ್ತದೆ. ಭವಿಷ್ಯದ ಕಥೆಗಾರರು ಮತ್ತು ದಾರ್ಶನಿಕರಿಗೆ ಈ ಚಿತ್ರ ಐಕಾನ್ಗಳ ಪರಂಪರೆ ದಾರಿದೀಪವಾಗಲಿ ಎಂದು IFFI ಇದನ್ನು ಮಾಡಿದೆ.
(ಸುಭಾಷ್ ಘಾಯ್, ಇಂಡಿಯನ್ ಫಿಲ್ಮ್ ಮೇಕರ್ ಮತ್ತು ಪ್ರೊಡ್ಯೂಸರ್)