ಖೇಲೋ ಇಂಡಿಯಾ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಡ ಹೊಸ ಮತ್ತು ಶಕ್ತಿಯುತ ಭಾರತ

Kalabandhu Editor
5 Min Read

– ಡಾ. ಮನ್ಸುಖ್ ಮಾಂಡವೀಯ
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ
ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರು

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಟೀಮ್ ಇಂಡಿಯಾದ ಸಾಧನೆಗಳು ಭಾರತೀಯ ತಂಡದ ಒಟ್ಟಾರೆ ಉತ್ತಮ ಪ್ರದರ್ಶನವನ್ನು ಪ್ರತಿಬಿಂಬಿಸುತ್ತವೆ. 6 ಪದಕಗಳನ್ನು ಹೊರತುಪಡಿಸಿ, ನಮ್ಮ 8 ಕ್ರೀಡಾಪಟುಗಳು 4 ನೇ ಸ್ಥಾನವನ್ನು ಪಡೆದರು ಮತ್ತು ಅತ್ಯಲ್ಪ ಅಂತರದಿಂದ ಪದಕಗಳಿಂದ ವಂಚಿತರಾದರು. ಅವರಲ್ಲಿ ಐದು ಮಂದಿ ತಮ್ಮ ಚೊಚ್ಚಲ ಒಲಿಂಪಿಕ್ಸ್‌ ನಲ್ಲಿ ಸ್ಪರ್ಧಿಸಿದವರು. 15 ಅಥ್ಲೀಟ್‌ ಗಳು ತಮ್ಮ ಸ್ಪರ್ಧೆಗಳ ಕ್ವಾರ್ಟರ್‌ ಫೈನಲ್‌ ಗೆ ತಲುಪಿದರು, ಇದು ಭಾರತಕ್ಕೆ ಮೊದಲನೆಯದು.
ಇದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಡ ಹೊಸ ಮತ್ತು ಶಕ್ತಿಯುತ ಭಾರತವಾಗಿದೆ. 117 ಸದಸ್ಯರ ತಂಡದಲ್ಲಿ 28 ಖೇಲೋ ಇಂಡಿಯಾ ಅಥ್ಲೀಟ್‌ ಗಳು (ಕೆಐಎ) ಸೇರಿದ್ದರು. ಭಾರತದ ಅತ್ಯಂತ ಕಿರಿಯ ಒಲಿಂಪಿಕ್ ಪದಕ ವಿಜೇತ ಅಮನ್ ಸೆಹ್ರಾವತ್ ಮತ್ತು ಪಿಸ್ತೂಲ್ ಶೂಟರ್ ಪದಕ ವಿಜೇತ ಸರಬ್ಜೋತ್ ಸಿಂಗ್ ಸೇರಿದಂತೆ 2700 ಕ್ಕೂ ಹೆಚ್ಚು ಕ್ರೀಡಾಪಟುಗಳು ಖೇಲೋ ಇಂಡಿಯಾ ಕಾರ್ಯಕ್ರಮದ ಫಲಾನುಭವಿಗಳಾಗಿದ್ದಾರೆ. ಒಲಿಂಪಿಕ್ ಡಬಲ್ ಪದಕ ವಿಜೇತೆ ಮನು ಭಾಕರ್ ಅವರು ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ 2022 ರಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ, ಅಲ್ಲದೇ ಅವರು 2018 ರಲ್ಲಿ ಖೇಲೋ ಇಂಡಿಯಾ ಶಾಲಾ ಕ್ರೀಡಾಕೂಟದ ಮೊದಲ ಆವೃತ್ತಿಯ ಭಾಗವಾಗಿದ್ದರು.
ಇತ್ತೀಚಿನ ವರ್ಷಗಳಲ್ಲಿ, ಭಾರತವು ತನ್ನ ಕ್ರೀಡಾ ಪ್ರತಿಭೆಯನ್ನು ಪೋಷಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ, ಇದರ ಶ್ರೇಯ ಮಹತ್ವಾಕಾಂಕ್ಷೆಯ ಖೇಲೋ ಇಂಡಿಯಾ ಕಾರ್ಯಕ್ರಮಕ್ಕೆ ಸಲ್ಲಬೇಕು. 2018 ರಲ್ಲಿ ಪ್ರಾರಂಭವಾದ ಈ ಉಪಕ್ರಮವು ಭಾರತೀಯ ಕ್ರೀಡಾಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಯನ್ನು ತಂದಿದೆ. ಬಹುಶಃ ಖೇಲೋ ಇಂಡಿಯಾದ ಅತ್ಯಂತ ಮಹತ್ವದ ಪ್ರಭಾವವೆಂದರೆ ಭಾರತದ ಒಲಿಂಪಿಕ್ ಆಕಾಂಕ್ಷೆಗಳಿಗೆ ಫೀಡರ್ ವ್ಯವಸ್ಥೆಯಾಗಿ ಅದು ಪಾತ್ರ ವಹಿಸುತ್ತಿರುವುದು. ಈ ಕಾರ್ಯಕ್ರಮವು ಪ್ರತಿಭಾವಂತರನ್ನು ಮೊದಲೇ ಗುರುತಿಸುವ ಮೂಲಕ ಮತ್ತು ನಿರಂತರ ಬೆಂಬಲವನ್ನು ಒದಗಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಉತ್ತಮವಾಗಿ ಸಿದ್ಧರಾಗಿರುವ ಕ್ರೀಡಾಪಟುಗಳನ್ನು ಸೃಷ್ಟಿಸುತ್ತಿದೆ. ಅನೇಕ ಖೇಲೋ ಇಂಡಿಯಾ ಕ್ರೀಡಾಪಟುಗಳು ಒಲಿಂಪಿಕ್ಸ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸುವುದರೊಂದಿಗೆ ಫಲಿತಾಂಶಗಳು ಈಗಾಗಲೇ ಗೋಚರಿಸುತ್ತಿವೆ. ಈ ಕಾರ್ಯಕ್ರಮದ ಸಮಗ್ರ ವಿಧಾನವು ತರಬೇತಿ ಮಾತ್ರವಲ್ಲದೆ ಆಹಾರ, ಪೋಷಣೆ, ಉಪಕರಣಗಳು ಮತ್ತು ಶಿಕ್ಷಣಕ್ಕಾಗಿ ಪ್ರತಿ ಕ್ರೀಡಾಪಟುವಿಗೆ ವಾರ್ಷಿಕ 6.28 ಲಕ್ಷ ರೂ. ಧನಸಹಾಯವನ್ನು ಒಳಗೊಂಡಿರುತ್ತದೆ. ಇದು ಅತ್ಯುನ್ನತ ಕ್ರೀಡೆಗಳ ಒತ್ತಡವನ್ನು ನಿಭಾಯಿಸಲು ಸಮರ್ಥವಾಗಿರುವ ಕ್ರೀಡಾಪಟುಗಳನ್ನು ಸೃಷ್ಟಿಸುತ್ತದೆ. ವಾಸ್ತವವಾಗಿ, ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ನಲ್ಲಿನ ಒಟ್ಟು 84 ಪ್ಯಾರಾ-ಅಥ್ಲೀಟ್‌ ಗಳ ಪೈಕಿ ಒಟ್ಟು 25 ಖೇಲೋ ಇಂಡಿಯಾ ಅಥ್ಲೀಟ್‌ ಗಳನ್ನು ನಾವು ಹೊಂದಿದ್ದೇವೆ.
ಈ ಯೋಜನೆಯಲ್ಲಿ ಖೇಲೋ ಇಂಡಿಯಾ ಕ್ರೀಡಾಕೂಟ ಪ್ರಮುಖ ಪಾತ್ರವನ್ನು ವಹಿಸಿದೆ, 2018 ರಿಂದ ಒಟ್ಟು 15 ಖೇಲೋ ಇಂಡಿಯಾ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಇವುಗಳಲ್ಲಿ 6 ಖೇಲೋ ಇಂಡಿಯಾ ಯುವ ಕ್ರೀಡಾಕೂಟ, 4 ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ, 4 ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟ ಮತ್ತು 1 ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಸೇರಿವೆ. ಈ ಕ್ರೀಡಾಕೂಟಗಳಿಂದ ನಾವು 1000 ಕ್ಕೂ ಹೆಚ್ಚು ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿದ್ದೇವೆ. ಅಲ್ಲದೆ, ಒಟ್ಟು 302 ಮಾನ್ಯತೆ ಪಡೆದ ಅಕಾಡೆಮಿಗಳು, 1000 ಕ್ಕೂ ಹೆಚ್ಚು ಖೇಲೋ ಇಂಡಿಯಾ ಕೇಂದ್ರಗಳು, 32 ಖೇಲೋ ಇಂಡಿಯಾ ಸ್ಟೇಟ್ ಸೆಂಟರ್ ಆಫ್ ಎಕ್ಸಲೆನ್ಸ್, ನಮ್ಮ ತಳಮಟ್ಟದ ಕ್ರೀಡಾಪಟುಗಳನ್ನು ಭವಿಷ್ಯದ ಚಾಂಪಿಯನ್‌ ಗಳಾಗಿ ಪರಿವರ್ತಿಸಲು ಸಾಧ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುತ್ತಿರುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ.
ಆರಂಭದಿಂದಲೂ ಈ ಕಾರ್ಯಕ್ರಮಕ್ಕೆ ಸರ್ಕಾರ ಅಂದಾಜು 3,616 ಕೋಟಿ ರೂ. ಹೂಡಿಕೆ ಮಾಡಿದ್ದು, ಇದು ತಳಮಟ್ಟದಲ್ಲಿ ಕ್ರೀಡೆಯ ಅಭಿವೃದ್ಧಿಗೆ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ. ಒಟ್ಟು 747 ಜಿಲ್ಲೆಗಳನ್ನು ಒಳಗೊಂಡ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1059 ಖೇಲೋ ಇಂಡಿಯಾ ಕೇಂದ್ರಗಳನ್ನು (ಕೆಐಸಿ) ಅಧಿಸೂಚಿಸಲಾಗಿದೆ. ಈ ಕೇಂದ್ರಗಳು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಮತ್ತು ಅಭಿವೃದ್ಧಿಪಡಿಸಲು ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ, ಅವರ ಭೌಗೋಳಿಕ ಸ್ಥಳ ಅಥವಾ ಆರ್ಥಿಕ ಹಿನ್ನೆಲೆಯಿಂದಾಗಿ ಯಾವುದೇ ಸಂಭಾವ್ಯ ಚಾಂಪಿಯನ್ ತಪ್ಪಿಸಿಕೊಳ್ಳದಂತೆ ಖಚಿತಪಡಿಸಿಕೊಳ್ಳುತ್ತವೆ. ಈ ಕೇಂದ್ರಗಳು ಹಿಂದಿನ ಚಾಂಪಿಯನ್ ಅಥ್ಲೀಟ್‌ ಗಳಿಗೆ ಜೀವನೋಪಾಯದ ಸುಸ್ಥಿರ ಆದಾಯವನ್ನು ಸಹ ಒದಗಿಸುತ್ತವೆ.
ಹೆಚ್ಚುವರಿಯಾಗಿ, ಕಾರ್ಯಕ್ರಮದ ಅಡಿಯಲ್ಲಿ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 32 ಖೇಲೋ ಇಂಡಿಯಾ ಸ್ಟೇಟ್ ಸೆಂಟರ್ ಆಫ್ ಎಕ್ಸಲೆನ್ಸ್ (ಕೆ ಐ ಎಸ್‌ ಸಿ ಇ) ಅನ್ನು ಸ್ಥಾಪಿಸಲಾಗಿದೆ. ಈ ಅತ್ಯಾಧುನಿಕ ಸೌಲಭ್ಯಗಳು ನಿರ್ದಿಷ್ಟ ಕ್ರೀಡೆಗಳಲ್ಲಿ ವಿಶೇಷ ತರಬೇತಿಯನ್ನು ನೀಡುತ್ತವೆ, ಕ್ರೀಡಾಪಟುಗಳು ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ತರಬೇತಿಗೆ ಪ್ರವೇಶ ಹೊಂದಿರುವುದನ್ನು ಚಿತಪಡಿಸುತ್ತವೆ. ಈ ಉತ್ಕೃಷ್ಟತಾ ಕೇಂದ್ರಗಳು ಕೇಂದ್ರದಲ್ಲಿ ಅಭ್ಯಾಸ ಮಾಡುವ ಕ್ರೀಡಾ ವಿಭಾಗಗಳಿಗೆ ಕ್ರೀಡಾ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಬೆಂಬಲವನ್ನು ನೀಡುತ್ತವೆ. ಇದು ಕ್ರೀಡಾ ಉಪಕರಣಗಳು, ಹೆಚ್ಚಿನ ಕಾರ್ಯಕ್ಷಮತೆಯ ವ್ಯವಸ್ಥಾಪಕರು, ತರಬೇತುದಾರರು ಇತ್ಯಾದಿಗಳಲ್ಲಿನ ಅಂತರವನ್ನು ಸಹ ಕಡಿಮೆ ಮಾಡುತ್ತದೆ.
ಖೇಲೋ ಇಂಡಿಯಾ ರೈಸಿಂಗ್ ಟ್ಯಾಲೆಂಟ್ ಐಡೆಂಟಿಫಿಕೇಶನ್ (KIRTI) ಕಾರ್ಯಕ್ರಮವು ತಳಮಟ್ಟದಲ್ಲಿ ಪ್ರತಿಭೆಯನ್ನು ಹೊರತರುವಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸುತ್ತಿದೆ. ಈ ಕಾರ್ಯಕ್ರಮವು ಭಾರತದಾದ್ಯಂತ ಗುರುತಿಸದೇ ಉಳಿದ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಮತ್ತು ಕ್ರೀಡಾ ಜಾಗೃತಿಯ ಸಂಸ್ಕೃತಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಕಾರ್ಯಕ್ರಮವು 9 ಮತ್ತು 18 ರ ನಡುವಿನ ಶಾಲಾ ಮಕ್ಕಳ ಪ್ರತಿಭೆಯನ್ನು ಗುರುತಿಸುತ್ತದೆ. ಇದು ತಡೆರಹಿತ ಪ್ರತಿಭೆ ಗುರುತಿಸುವ ವ್ಯವಸ್ಥೆಯನ್ನು ರಚಿಸಲು ಆಧುನಿಕ ತಂತ್ರಜ್ಞಾನ ಮತ್ತು ಉತ್ತಮ ಅಭ್ಯಾಸಗಳನ್ನು ಬಳಸಿಕೊಳ್ಳುತ್ತದೆ. ತಳಮಟ್ಟದಲ್ಲಿ ಪ್ರತಿಭೆಯನ್ನು ಗುರುತಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಒಂದೇ ವೇದಿಕೆಯಲ್ಲಿ ತರುವುದು ಇದರ ಉದ್ದೇಶವಾಗಿದೆ. ಇಲ್ಲಿಯವರೆಗೆ, ದೇಶದಾದ್ಯಂತ 93 ಸ್ಥಳಗಳಲ್ಲಿ 10 ಕ್ರೀಡಾ ವಿಭಾಗಗಳಲ್ಲಿ ಸುಮಾರು 1 ಲಕ್ಷ ಮೌಲ್ಯಮಾಪನಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಕ್ರೀಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ವಿಶೇಷ ಉತ್ತೇಜನ ನೀಡುವ ಪ್ರಯತ್ನದಲ್ಲಿ, ದೇಶಾದ್ಯಂತ ಅಸ್ಮಿತಾ (ASMITA) ಮಹಿಳಾ ಲೀಗ್ ಅನ್ನು ಆಯೋಜಿಸಲಾಗುತ್ತಿದೆ. ಇಲ್ಲಿಯವರೆಗೆ, 2021 ರಿಂದ ಅಸ್ಮಿತಾದ ನಾಲ್ಕು ಋತುಗಳನ್ನು ನಡೆಸಲಾಗಿದೆ, 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 20 ಕ್ರೀಡೆಗಳಲ್ಲಿ ಒಟ್ಟು 83615 ಮಹಿಳೆಯರು ಭಾಗವಹಿಸಿದ್ದಾರೆ. ಇವುಗಳು ಲೀಗ್ ಚಾಂಪಿಯನ್‌ ಗಳನ್ನು ಸೃಷ್ಟಿಸುವುದಕ್ಕಿಂತ ಹೆಚ್ಚಿನದನ್ನು ಸಾಧಿಸುತ್ತದೆ. ಅವುಗಳು ಮಹಿಳಾ ಕ್ರೀಡಾಪಟುಗಳಿಗೆ ಬೆಂಬಲ ವಾತಾವರಣವನ್ನು ಸೃಷ್ಟಿಸುತ್ತವೆ, ಕ್ರೀಡೆಗಳ ಬಗ್ಗೆ ಪ್ರೀತಿಯನ್ನು ಬೆಳೆಸುತ್ತವೆ ಮತ್ತು ಸಂಭಾವ್ಯ ವೃತ್ತಿಜೀವನಕ್ಕೆ ದಾರಿ ಮಾಡಿಕೊಡುತ್ತವೆ.
ಖೇಲೋ ಇಂಡಿಯಾ ಹಾಕಿಕೊಟ್ಟಿರುವ ಅಡಿಪಾಯ ಆಶಾದಾಯಕವಾಗಿದೆ. ಈ ಯುವ ಅಥ್ಲೀಟ್‌ ಗಳು ಪ್ರಬುದ್ಧರಾಗಿ ಮತ್ತು ಶ್ರೇಯಾಂಕಗಳ ಮೂಲಕ ಪ್ರಗತಿ ಹೊಂದುತ್ತಿರುವಂತೆ, ಇನ್ನೂ ಅನೇಕ ಖೇಲೋ ಇಂಡಿಯಾ ಕ್ರೀಡಾಪಟುಗಳು ಒಲಿಂಪಿಕ್ ಚಾಂಪಿಯನ್‌ ಗಳಾಗುವುದನ್ನು ನಾವು ನಿರೀಕ್ಷಿಸಬಹುದು. ನಾಳಿನ ಒಲಿಂಪಿಕ್ ಚಾಂಪಿಯನ್‌ ಗಳನ್ನು ಪೋಷಿಸುವ ಮೂಲಕ ತಳಮಟ್ಟದ ಭಾಗವಹಿಸುವಿಕೆಯಿಂದ ಉನ್ನತ ಪ್ರದರ್ಶನದವರೆಗೆ ಯುವ ಕ್ರೀಡಾಪಟುಗಳಿಗೆ ರಚನಾತ್ಮಕ ಮಾರ್ಗವನ್ನು ಒದಗಿಸುವ ಮೂಲಕ ಈ ಕಾರ್ಯಕ್ರಮವು ಭಾರತದ ಕ್ರೀಡಾ ಭವಿಷ್ಯದ ಅಡಿಪಾಯವಾಗಿ ಹೊರಹೊಮ್ಮಿದೆ.

Share this Article