2025ನೇ ಸಾಲಿನ ಬಜೆಟ್ ನಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಸುಮಾರು 1.52 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಹಲವು ವರ್ಷಗಳಿಂದ ರೈತರ ಆದಾಯವನ್ನು ಹೆಚ್ಚಿಸುವ ವಿವಿಧ ಕ್ರಮಗಳ ಮೂಲಕ ಭಾರತೀಯ ರೈತರ ಭವಿಷ್ಯವನ್ನು ಪುನಶ್ಚೇತನಗೊಳಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜೊತೆಗೆ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಬಜೆಟ್ ನಲ್ಲಿ ನೀಡುವ ಅನುದಾನಗಳು ವರ್ಷಗಳಿಂದ ನಿರಂತರವಾಗಿ ಹೆಚ್ಚುತ್ತಲೇ ಇವೆ. ಈ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಬಳಕೆಯನ್ನು ಪ್ರೋತ್ಸಾಹಿಸುವ ಕ್ರಮಗಳು ಪ್ರಗತಿಯಲ್ಲಿವೆ.
ಪ್ರಮುಖ ಪ್ರೇರಕ ಬದಲಾವಣೆ
ಮೊದಲನೆಯದಾಗಿ, ಕಳೆದ ಕೆಲವು ವರ್ಷಗಳಿಂದ, ಆಹಾರ ಧಾನ್ಯಗಳ ಖರೀದಿಯ ಮೂಲಕ ಬೆಂಬಲ ಬೆಲೆ ನೀಡುವುದು ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಖಾತರಿಪಡಿಸುವಲ್ಲಿ ಪ್ರಮುಖವಾಗಿದೆ. 2025ನೇ ಸಾಲಿನ ಬಜೆಟ್ ನಲ್ಲಿ, ಪಿಎಂ ಆಶಾ (ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣ ಅಭಿಯಾನ) ಯೋಜನೆಯಡಿ ಹಂಚಿಕೆ 2.2 ಸಾವಿರ ಕೋಟಿಯಿಂದ 6.4 ಸಾವಿರ ಕೋಟಿಗೆ ಹೆಚ್ಚಾಗಿದೆ. ಇದು ಸೂಕ್ತ ಬೆಂಬಲ ಬೆಲೆ ಒದಗಿಸುವುದು, ಆಹಾರ ಧಾನ್ಯಗಳ ವ್ಯರ್ಥವನ್ನು ಕಡಿಮೆ ಮಾಡುವುದು ಮತ್ತು ವ್ಯಾಪಾರಿಗಳ ಅತಿಯಾದ ಮಾರುಕಟ್ಟೆ ಪ್ರಭಾವವನ್ನು ನಿಗ್ರಹಿಸುವ ಬದ್ಧತೆಯನ್ನು ಒತ್ತಿಹೇಳುತ್ತದೆ. ಹೆಚ್ಚುವರಿಯಾಗಿ, AIDF (ಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿ) ಅಡಿಯಲ್ಲಿ ಪ್ರಮುಖ ಕೇಂದ್ರ ವಲಯದ ಯೋಜನೆಗಳಾದ ಬೆಳೆ ವಿಮೆ, ಬಡ್ಡಿ ಸಬ್ವೆನ್ಷನ್ ಮತ್ತು RKVY ಗಳಲ್ಲಿ 10-15 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿದೆ.
ಎರಡನೆಯದಾಗಿ, ಕೃಷಿ ಕಾರ್ಮಿಕ ಬಲದಲ್ಲಿ ಶೇಕಡಾ 30ರಷ್ಟು ಮಹಿಳೆಯರು ಮತ್ತು ಆರ್ಥಿಕವಾಗಿ ಸಕ್ರಿಯ ಮಹಿಳೆಯರಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದಾಗ್ಯೂ, ಅವರು ಪುರುಷರಿಗಿಂತ ಶೇಕಡಾ 20-30 ರಷ್ಟು ಕಡಿಮೆ ಸಂಬಳವನ್ನು ಪಡೆಯುತ್ತಾರೆ ಮತ್ತು ಕೇವಲ ಶೇಕಡಾ 6 ರಷ್ಟು ಮಹಿಳೆಯರಿಗೆ ಮಾತ್ರ ಸಾಂಸ್ಥಿಕ ಸಾಲ ಸಿಗುತ್ತದೆ. ಅವರ ಆದಾಯವನ್ನು ವೈವಿಧ್ಯಗೊಳಿಸಲು ಮತ್ತು ಸಮರ್ಪಕ ಭಾಗವಹಿಸುವಿಕೆಗಾಗಿ, 2025 ರ ಹಣಕಾಸು ವರ್ಷದ ಬಜೆಟ್ ನಲ್ಲಿ 500 ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ. ಇದರಿಂದ ನಮೋ ಡ್ರೋನ್ ದೀದಿ (NAMO DRONE DIDI) ಯೋಜನೆಯಡಿ 15,000 ಡ್ರೋನ್ ಗಳನ್ನು ಒದಗಿಸಲಾಗುವುದು. ಇದು ಗ್ರಾಮೀಣ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಿ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ.
ಮೂರನೆಯದಾಗಿ, 2025ರ ಸಾಲಿನ ಬಜೆಟ್ ನಲ್ಲಿ ಪರಿಚಯಿಸಲಾದ ಕೃಷಿ ಸಂಶೋಧನೆಯ ಸಮಗ್ರ ಪರಿಶೀಲನೆ ಅತ್ಯಗತ್ಯವಾದ ಅಂಶವಾಗಿದೆ. ಪ್ರಸ್ತುತ, ಅಗ್ರ ಸಂಸ್ಥೆಯಾದ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ಅದರ ಸಂಸ್ಥೆಗಳು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳೊಂದಿಗೆ (ಎಸ್ ಎ ಯುಗಳು) ಕೃಷಿ ಸಂಶೋಧನೆಯಲ್ಲಿ ಪ್ರಾಬಲ್ಯ ಹೊಂದಿವೆ. ನಿಜವಾದ ಕೃಷಿ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಪ್ರಾಯೋಗಿಕ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಸಾಮೂಹಿಕ ವ್ಯಾಪ್ತಿಯು ಸೀಮಿತವಾಗಿದೆ ಎಂದು ಈ ಪ್ರಾಬಲ್ಯವನ್ನು ಹೆಚ್ಚಾಗಿ ಪ್ರಶ್ನಿಸಲಾಗುತ್ತಿದೆ. ಒಂದು ದಶಕದ ಹಿಂದೆ, ವಿಶ್ವ ಬ್ಯಾಂಕ್ “ಸಂಶೋಧನೆ ಮತ್ತು ವಿಸ್ತರಣೆಯ ನಡುವೆ ಅಥವಾ ಈ ಸೇವೆಗಳು ಮತ್ತು ಖಾಸಗಿ ವಲಯದ ನಡುವೆ ತುಂಬಾ ಕಡಿಮೆ ಸಂಪರ್ಕವಿದೆ” ಎಂದು ಗಮನಿಸಿದೆ. ಆದ್ದರಿಂದ, ಸರ್ಕಾರಿ ಸಂಸ್ಥೆಗಳ ಜೊತೆಯಲ್ಲಿ ಸವಾಲು-ಆಧಾರಿತ ಪ್ರತಿಫಲ ವ್ಯವಸ್ಥೆ (CBRS) ಮೂಲಕ ಖಾಸಗಿ ವಲಯವನ್ನು ಒಳಗೊಳ್ಳುವುದರಿಂದ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸಬಹುದು. ಪ್ರಮುಖ ಆಹಾರ ಉತ್ಪಾದಕರಾಗಿದ್ದರೂ ಸಹ, ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಹೂಡಿಕೆಯಲ್ಲಿ ಭಾರತವು 4 ನೇ ಸ್ಥಾನದಲ್ಲಿದೆ. ಜಿ ಡಿ ಪಿ ಮತ್ತು FY 25 ರ ಬಜೆಟ್ ನಿಬಂಧನೆಗಳು DARE (ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ) ಗೆ ಹೆಚ್ಚಿನದಾಗಿರಬೇಕು. ಜಿ ಎಸ್ ಟಿ ಮಂಡಳಿಯ ಮಾದರಿಯಲ್ಲಿ ಒಂದು ಸ್ವತಂತ್ರ ಕೇಂದ್ರ ಸಂಸ್ಥೆ ಅಥವಾ ಮಂಡಳಿ (ಕೃಷಿ ಅಭಿವೃದ್ಧಿ ಮಂಡಳಿ) ರೈತರು ಎದುರಿಸುತ್ತಿರುವ ದೈನಂದಿನ ಸವಾಲುಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಪರಿಣಾಮಕಾರಿಯಾಗಿ ಹೊಂದಿಸುವ, ಮೇಲ್ವಿಚಾರಣೆ ಮಾಡುವ ದೃಷ್ಟಿಯಿಂದ ಅತ್ಯಗತ್ಯವಾಗಿದೆ.
ನಾಲ್ಕನೆಯದಾಗಿ, ಕೃಷಿಯ ಉತ್ಪಾದಕತೆಯನ್ನು ಹೆಚ್ಚಿಸಲು ಸಂಪನ್ಮೂಲಗಳ ಬಳಕೆಯ ದಕ್ಷತೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಬೇಕು. ಏಕೆಂದರೆ 45% ಕೃಷಿಯೋಗ್ಯ ಭೂಮಿಯು ಸುಮಾರು 84% ನೀರನ್ನು ಬಳಸುತ್ತದೆ. ಅದರಲ್ಲಿಯೂ ಈ ನೀರಿನಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಭಾಗವನ್ನು ಕಬ್ಬು, ಅಕ್ಕಿ ಮತ್ತು ಗೋಧಿ ಬಳಸಿಕೊಳ್ಳುತ್ತವೆ. ಕಳೆದ ದಶಕದಲ್ಲಿ ಭಾರತದ ಉತ್ಪಾದಕತೆ ಚೀನಾ, ಅಮೆರಿಕ ಮತ್ತು ಬ್ರೆಜಿಲ್ ಗಿಂತ ವೇಗವಾಗಿ ಹೆಚ್ಚಾಗಿದೆ. ಈ ಉತ್ಪಾದಕತೆಯ ಲಾಭಗಳಿಂದ ಉಂಟಾಗುವ ಹೆಚ್ಚುವರಿಯನ್ನು ನಿಭಾಯಿಸಲು ಮೂಲಸೌಕರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಸಹ ಅತ್ಯಗತ್ಯ. ಹವಾಮಾನದ ದುರ್ಬಲತೆ ಮತ್ತು ಹವಾಮಾನ ವೈಪರೀತ್ಯಗಳ ಸಂದರ್ಭದಲ್ಲಿ, ಬೆಳೆ ಇಳುವರಿ ಹೆಚ್ಚಳವನ್ನು ಕಾಯ್ದುಕೊಂಡು ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಒದಗಿಸಲು ಹವಾಮಾನ ಸಹಿಷ್ಣು ಬೆಳೆ ತಳಿಗಳನ್ನು (CRCV) ಅಭಿವೃದ್ಧಿಪಡಿಸುವುದು ಮತ್ತು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಕೃಷಿ ವಿಜ್ಞಾನ ಕೇಂದ್ರಗಳ ಚೌಕಟ್ಟಿನೊಳಗೆ ಹವಾಮಾನ ಸ್ಥಿರ ಕ್ಲಸ್ಟರ್ (CRC) ವಿಧಾನವು CRCV ಗಳನ್ನು ಅಳವಡಿಸಿಕೊಳ್ಳಲು ಪ್ರಮುಖವಾಗಿದೆ. ಇದಲ್ಲದೆ, ಕೃಷಿ ಮತ್ತು ಸಂಬಂಧಿತ ವಲಯಗಳ ಕಾರ್ಯಕ್ಷಮತೆಯೊಂದಿಗೆ ನೇರವಾಗಿ ಸಂಬಂಧ ಹೊಂದಿರುವ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ 11 ಅನ್ನು ಸಾಧಿಸಲು ಬೆಳೆ ಉತ್ಪಾದಕತೆಯಲ್ಲಿ ಸುಸ್ಥಿರ ಹೆಚ್ಚಳ ಅಗತ್ಯವಾಗಿದೆ.
ಐದನೆಯದಾಗಿ, ಬಜೆಟ್ ನಲ್ಲಿ ಪ್ರಸ್ತಾಪಿಸಲಾದ ಜೈವಿಕ ಇನ್ ಪುಟ್ ಸಂಪನ್ಮೂಲ ಕೇಂದ್ರಗಳ (ಬಿ ಐ ಆರ್ ಸಿಗಳು) ಸ್ಥಾಪನೆಯು ಕೃಷಿ ಕ್ಷೇತ್ರದಲ್ಲಿ ಸಾವಯವ ಉತ್ಪಾದನಾ ಅಂಶಗಳ ಬಳಕೆಯನ್ನು ಗಣನೀಯವಾಗಿ ಪ್ರೋತ್ಸಾಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ರಸಾಯನಿಕ ಆಧಾರಿತ ಉತ್ಪಾದನಾ ಅಂಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು. ಮಾತೃಭೂಮಿಯ ಪುನಶ್ಚೇತನ, ಜಾಗೃತಿ, ಪೋಷಣೆ ಮತ್ತು ಸುಧಾರಣೆಗಾಗಿ ಪ್ರಧಾನಮಂತ್ರಿ ಕಾರ್ಯಕ್ರಮ (ಪಿಎಂ-ಪ್ರಣಾಮ್) ರಾಸಾಯನಿಕ ಬಳಕೆಯನ್ನು ಕಡಿತಗೊಳಿಸಲು ರಾಜ್ಯಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಜೈವಿಕ ಇನ್ ಪುಟ್ ಸಂಪನ್ಮೂಲ ಕೇಂದ್ರಗಳಿಂದ ಪೂರೈಕೆಯಾಗುವ ಉತ್ಪಾದನಾ ಅಂಶಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲು, ಪ್ರಧಾನಮಂತ್ರಿ ಮಾತೃಭೂಮಿ ಪುನಶ್ಚೇತನ ಕಾರ್ಯಕ್ರಮದ ಚೌಕಟ್ಟಿನೊಳಗೆ ರೈತರ ಸಂಘಗಳು ಮತ್ತು ಸಹಕಾರ ಸಂಘಗಳ ಬೆಂಬಲದೊಂದಿಗೆ ನಿರ್ದಿಷ್ಟ ಪ್ರೋತ್ಸಾಹಕ ಕಾರ್ಯವಿಧಾನದ ಅಗತ್ಯವಿದೆ. ಹೆಚ್ಚುವರಿಯಾಗಿ, ಜೈವಿಕ ಇನ್ ಪುಟ್ ಸಂಪನ್ಮೂಲ ಕೇಂದ್ರಗಳ ವ್ಯಾಪ್ತಿಯಲ್ಲಿ ಪಶು ಆಹಾರವನ್ನು ಸೇರ್ಪಡೆಗೊಳಿಸಲು ಹೆಚ್ಚಿನ ಅವಕಾಶಗಳಿವೆ.
ಆರನೆಯದಾಗಿ, 2023-24ರಲ್ಲಿ ಆಹಾರ ಹಣದುಬ್ಬರದ ಮೂರನೇ ಒಂದು ಭಾಗವು ತರಕಾರಿಗಳಿಗೆ ಸಂಬಂಧಿಸಿದೆ ಎಂಬುದನ್ನು ಗಮನಿಸುವುದು ಮುಖ್ಯ, ಇದರ ಬೆಲೆಗಳು ಶೇಕಡಾ 29.3 ರಷ್ಟು ಏರಿಕೆಯಾಗಿವೆ. ಇತ್ತೀಚೆಗೆ ತರಕಾರಿ ಬೆಲೆಗಳಲ್ಲಿ ಉಂಟಾದ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ತರಕಾರಿ ಪೂರೈಕೆ ಸರಪಳಿಯನ್ನು ಉತ್ತೇಜಿಸುವುದು ಮತ್ತು ಪ್ರಮುಖ ಉತ್ಪಾದನೆ ಮತ್ತು ಬಳಕೆ ಕೇಂದ್ರಗಳನ್ನು ಗುರುತಿಸುವುದು ಅತ್ಯಗತ್ಯವಾಗಿದೆ. 2025ನೇ ಸಾಲಿನ ಬಜೆಟ್ ನಲ್ಲಿ ತಿಳಿಸಲಾದ ಈ ವಿಧಾನವು, ಗ್ರಾಹಕರ ವಿಲೇವಾರಿ ಆದಾಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಮತ್ತು ರೈತರ ಆದಾಯದಲ್ಲಿನ ಪಾಲನ್ನು ಹೆಚ್ಚಿಸುತ್ತದೆ. ಇದಲ್ಲದೆ, ಕೃಷಿ ಉತ್ಪನ್ನಗಳ ಮೌಲ್ಯ ಸರಪಳಿಯಲ್ಲಿ ತೊಡಗಿರುವ ಸ್ಟಾರ್ಟ್ಅಪ್ ಗಳು ಮತ್ತು ಗ್ರಾಮೀಣ ಉದ್ಯಮಗಳಿಗೆ 2025ನೇ ಸಾಲಿನ ಬಜೆಟ್ ನಲ್ಲಿ ಪ್ರಸ್ತಾಪಿಸಿರುವ 62.5 ಕೋಟಿ ರೂಪಾಯಿಗಳ ಮಿಶ್ರ ಬಂಡವಾಳ ಬೆಂಬಲವು ಈ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಮಿಸ್ಸಿಂಗ್ ಲಿಂಕ್ಸ್
ಮೊದಲನೆಯದ್ದಾಗಿ, ಭಾರತದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಗಮನಾರ್ಹ ಬದಲಾವಣೆಗಳನ್ನು ಪರಿಗಣಿಸಿದಾಗ, ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯವನ್ನು ಹೆಚ್ಚಿಸುವ ಕ್ರಮಗಳನ್ನು ಜಾರಿಗೊಳಿಸುವುದು ಅತ್ಯಗತ್ಯವಾಗಿದೆ. ಸಾಂಪ್ರದಾಯಿಕ ಬೆಳೆಗಳಿಂದ ಹೆಚ್ಚಿನ ಮೌಲ್ಯದ ಹಣ್ಣುಗಳು, ತರಕಾರಿಗಳು ಮತ್ತು ಸಂಬಂಧಿತ ಉದ್ಯಮಗಳಿಗೆ ವೈವಿಧ್ಯೀಕರಣ ಮಾಡುವುದು ಅವರ ಆದಾಯವನ್ನು ಹೆಚ್ಚಿಸಲು ಪರಿಣಾಮಕಾರಿಯಾದ ಮಾರ್ಗ ಎಂದು ಸಾಬೀತಾಗಿದೆ. 2024-25ನೇ ಸಾಲಿನ ಬಜೆಟ್ ನಲ್ಲಿ ಅಂತಹ ಕ್ರಮಗಳನ್ನು ಸೇರ್ಪಡೆ ಮಾಡಬೇಕಿತ್ತು, ಏಕೆಂದರೆ ಅವು ಬೇಡಿಕೆಯನ್ನು ಪುನರುಜ್ಜೀವನಗೊಳಿಸಬಹುದು ಮತ್ತು ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಬಹುದು.
ಎರಡನೆಯದಾಗಿ, ಬೆಳೆ ಉತ್ಪಾದನೆಯನ್ನು ಪ್ರೋತ್ಸಾಹಿಸುವ ಪ್ರಸ್ತುತ ಬೆಂಬಲ ಕ್ರಮಗಳು ಸಂಪನ್ಮೂಲಗಳ ಮೇಲೆ ಅತಿಯಾದ ಒತ್ತಡ ಹೇರುತ್ತಿವೆ ಮತ್ತು ರೈತರನ್ನು ಹವಾಮಾನ ಬದಲಾವಣೆಯ ಅಪಾಯಗಳಿಗೆ ಹೆಚ್ಚು ಒಡ್ಡಿಕೊಳ್ಳುವಂತೆ ಮಾಡುತ್ತಿವೆ. ಆದ್ದರಿಂದ, ಕೃಷಿ ಹವಾಮಾನ ವಲಯಗಳು ಮತ್ತು ಪ್ರಾದೇಶಿಕ ಬೆಳೆ ಯೋಜನೆಯ ಪರಿಕಲ್ಪನೆಯನ್ನು ಪುನರ್ವಿಮರ್ಶಿಸುವುದು ಅಗತ್ಯವಾಗಿದೆ. ಈ ವಿಧಾನವು ವಿವಿಧ ಪ್ರದೇಶಗಳಲ್ಲಿನ ಉತ್ಪಾದನಾ ಮಾದರಿಗಳು ಮತ್ತು ಅಭ್ಯಾಸಗಳನ್ನು ಸುಸಂಘಟಿತಗೊಳಿಸಲು ಮತ್ತು ಪರಸ್ಪರ ಪೂರಕವಾಗುವಂತೆ ಮಾಡಲು ಸಹಕಾರಿಯಾಗಲಿದೆ.
ಮೂರನೆಯದಾಗಿ, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯಲು ಮಾರುಕಟ್ಟೆ ಸುಧಾರಣೆಗಳು ಅತ್ಯಗತ್ಯ. ರಾಜ್ಯಗಳಲ್ಲಿ ಕೃಷಿ ಮಾರುಕಟ್ಟೆ ವ್ಯವಸ್ಥೆಯ ಆಧುನೀಕರಣಕ್ಕೆ ಪ್ರೋತ್ಸಾಹ ನೀಡಲು 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿದೆ. ಆದ್ದರಿಂದ, ರಾಜ್ಯಗಳ ಮಾರುಕಟ್ಟೆ ವ್ಯವಸ್ಥೆಯ ಆಧುನೀಕರಣ ಪ್ರಯತ್ನಗಳನ್ನು ನಿರ್ಣಯಿಸಲು ಸೂಚಕಗಳು ಮತ್ತು ಒಂದು ಮೇಲ್ವಿಚಾರಣಾ ಚೌಕಟ್ಟನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ. ಈ ಚೌಕಟ್ಟನ್ನು ಕೃಷಿ ಮಾರುಕಟ್ಟೆ ಏಕೀಕೃತ ಯೋಜನೆಯ (ISAM) ಕೃಷಿ ಮೂಲಸೌಕರ್ಯ ನಿಧಿಯ (AIF) ಭಾಗವಾಗಿ ಅಳವಡಿಸಬೇಕು.
2025ನೇ ಸಾಲಿನ ಬಜೆಟ್ ನಿಬಂಧನೆಗಳು ಮತ್ತು ಪ್ರಸ್ತಾವಿತ ಉಪಕ್ರಮಗಳು ಕೃಷಿಯ ದಕ್ಷತೆ ಮತ್ತು ಸ್ಥಿರತೆ ಹೆಚ್ಚಿಸುವ ನಿಟ್ಟಿನಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿವೆ. ಆದರೆ, ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚದಲ್ಲಿ ಪ್ರತಿಫಲಿಸುವಂತೆ ನವೀನತೆಗಳಿಗೆ ಅಗತ್ಯವಾದ ಪ್ರಾಧಾನ್ಯತೆ ನೀಡಲಾಗಿಲ್ಲ. ಹವಾಮಾನ ಬದಲಾವಣೆಗಳಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ತೀವ್ರ ಪರಿಣಾಮಗಳನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಬಜೆಟ್ ನಲ್ಲಿ ಈ ಸಮಸ್ಯೆಗಳಿಗೆ ತುರ್ತು ಪರಿಹಾರಗಳನ್ನು ಘೋಷಿಸಬೇಕಿತ್ತು. ಈ ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಭಾರತವು ಕೃಷಿ ಕ್ಷೇತ್ರದಲ್ಲಿ ಪರಿವರ್ತನೆಗೆ ಪರಿಣಾಮಕಾರಿಯಾಗಿ ನಾಂದಿ ಹಾಡಬಹುದು ಮತ್ತು ದೀರ್ಘಕಾಲೀನ ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು.
(ಡಾ. ನವೀನ್ ಪಿ ಸಿಂಗ್, ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ (CACP)ದ ಅಧಿಕೃತ ಸದಸ್ಯರು, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ(MoAFW), ನವದೆಹಲಿ. ಇಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ವೈಯಕ್ತಿಕವಾಗಿದೆ)