ಆರೋಗ್ಯ ವಲಯದಲ್ಲಿ ಕೃತಕ ಬುದ್ದಿಮತ್ತೆ, ದತ್ತಾಂಶ ವಿಜ್ಞಾನ ಕೋರ್ಸ್ ಗಳ ಆರಂಭಕ್ಕೆ ಐಐಎಚ್ಎಂಆರ್ ಗೆ ಎಐಸಿಟಿಇ ಅನುಮೋದನೆ

Kalabandhu Editor
1 Min Read

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದೆ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್ಮೆಂಟ್ ರಿಸರ್ಚ್ – ಐಐಎಚ್ಎಂಆರ್ ನಲ್ಲಿ ಪಿಜಿಡಿಎಂ – ಕೃತಕ ಬುದ್ಧಿಮತ್ತೆ [ಎಐ] ಮತ್ತು ಆರೋಗ್ಯ ರಕ್ಷಣೆಯಲ್ಲಿ ದತ್ತಾಂಶ ವಿಜ್ಞಾನ [ಡೇಟಾ ಸೈನ್ಸ್] ಕೋರ್ಸ್ ಗಳನ್ನು ಆರಂಭಿಸಲು ಎಐಸಿಟಿಇ ಅನುಮೋದನೆ ನೀಡಿದೆ ಎಂದು ಐಐಎಚ್ಎಂಆರ್ ನಿರ್ದೇಶಕರಾದ ಡಾ. ಉಷಾ ಮಂಜುನಾಥ್ ಹೇಳಿದ್ದಾರೆ.

ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್ಮೆಂಟ್ ರಿಸರ್ಚ್ – ಐಐಎಚ್ಎಂಆರ್ ನಲ್ಲಿ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಪದವಿ ಮತ್ತು ಚಿನ್ನದ ಪದಕಗಳನ್ನು ವಿತರಿಸಿ ಮಾತನಾಡಿದ ಅವರು, ನಾವು ವರ್ಷದಿಂದ ವರ್ಷಕ್ಕೆಶೇ ನೂರರಷ್ಟು ಉದ್ಯೋಗ ದೊರಕಿಸುವ ಮೂಲಕ ಉನ್ನತ ದಾಖಲೆ ಹೊಂದಿದ್ದೇವೆ. ವೈದ್ಯಕೀಯ ಕ್ಷೇತ್ರದಲ್ಲಿ ನುರಿತ ಮತ್ತು ನಿಪುಣ ಆಡಳಿತಗಾರರಾಗಿ ಹೊರ ಹೊಮ್ಮಲು ಆಡಳಿತ ನಿರ್ವಹಣೆಯ ಕೋರ್ಸ್ ಗಳು ಮಹತ್ವ ಪಡೆದುಕೊಂಡಿವೆ ಎಂದರು.

ವಿದ್ಯಾರ್ಥಿ ಜೀವನದಿಂದ ವೃತ್ತಿಪರ ಜೀವನಕ್ಕೆ ಪರಿವರ್ತನೆಗೊಳ್ಳುವುದು ಮಹತ್ವದ ಪರಿವರ್ತೆನೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಸಂಸ್ಥೆಗಳಿಗೆ ರಾಯಭಾರಿಗಳಾಗಿ ಹೊರ ಹೊಮ್ಮಬೇಕು. ಕಾರ್ಯಕ್ಷಮತೆಯಲ್ಲಿ ಅನುಕರಣೆಯಾಗಬೇಕು. ಆರೋಗ್ಯ ಉಧ್ಯಮದ ಭಾಗವಾಗಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು ಯಶಸ್ಸಿನ ಹಾದಿಯಲ್ಲಿ ಸಾಗುವಂತೆ ಡಾ. ಉಷಾ ಮಂಜುನಾಥ್ ಮನವಿ ಮಾಡಿದರು.

ಐಐಎಚ್ಎಂಆರ್ ಪ್ರಾಧ್ಯಾಪಕ ಪ್ರೊ. ಸಡಗೋಪನ್, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದ ಯುನಿಸೆಫ್ ಕ್ಷೇತ್ರ ಕಚೇರಿ ಮುಖ್ಯಸ್ಥರಾದ ಡಾ. ಝೆಲಾಲೆಮ್ ಬಿ. ಟಾಫೆಸ್ಸೆ, ಕ್ಯಾಚಾರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನೆ ವಿಭಾಗದ ನಿರ್ದೇಶಕ ಡಾ. ರವಿ ಕಣ್ಣನ್, ಮತ್ತಿತರರು ಉಪಸ್ಥಿತರಿದ್ದರು.

Share this Article