ಜೈಲಿನಲ್ಲಿದ್ದ ಮಂಡೇಲಾ, ಹೊರಗಿನ ಮಂಡೇಲಾಗಿಂತ ಶಕ್ತಿವಂತನಾದ.

Kalabandhu Editor
4 Min Read

(ಜುಲೈ 18:- ಅಂತರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನದ ಪ್ರಯುಕ್ತ ಪ್ರಸ್ತುತ ಲೇಖನ)

● ಜುಲೈ 18 ನೆಲ್ಸನ್ ಮಂಡೇಲಾ ಅವರ ಜನ್ಮದಿನ. ಮಂಡೇಲಾ ಅವರು ತಮ್ಮ 90 ನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಅಂತರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನದ ಕಲ್ಪನೆಯನ್ನು ಘೋಷಿಸಲಾಸಯಿತು, ಅವರ ಜನಪ್ರಿಯ ವಾಕ್ಯವಾದ “ಹೊಸ ಕೈಗಳು ಭಾರವನ್ನು ಎತ್ತುವ ಸಮಯ. ಅದು ಈಗ ನಿಮ್ಮ ಕೈಯಲ್ಲಿದೆ” ಎಂಬುದನ್ನು ಇಲ್ಲಿ ನೆನೆಯಬಹುದು.

● ಅಂತರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನದ ಇತಿಹಾಸ:- ನೆಲ್ಸನ್ ಮಂಡೇಲಾ ಅಂತರಾಷ್ಟ್ರೀಯ ದಿನವನ್ನು ಪ್ರತಿ ವರ್ಷ ಜುಲೈ 18 ರಂದು ಆಚರಿಸಲಾಗುತ್ತದೆ. ಈ ದಿನವನ್ನು ವಿಶ್ವಸಂಸ್ಥೆಯು 2009 ರಲ್ಲಿ ಜನರಲ್ ಅಸೆಂಬ್ಲಿಯಲ್ಲಿ ನಿರ್ಣಯದ ಮೂಲಕ ಅಧಿಕೃತವಾಗಿ ಘೋಷಿಸಿತು ಮತ್ತು ಮೊದಲ UN ಮಂಡೇಲಾ ದಿನವನ್ನು ಜುಲೈ 18, 2010 ರಂದು ನಡೆಸಲಾಯಿತು. ಈ ದಿನವು ಸಾರ್ವಜನಿಕ ರಜಾದಿನವಲ್ಲ ಆದರೆ ಸ್ವಯಂಸೇವಕ ಮತ್ತು ಸಮುದಾಯ ಸೇವೆಯ ಮೂಲಕ ನೆಲ್ಸನ್ ಮಂಡೇಲಾ ಅವರ ಜೀವನ ಮತ್ತು ಕಾರ್ಯಗಳನ್ನು ಆಚರಿಸುತ್ತಾರೆ.

● ನೆಲ್ಸನ್ ಮಂಡೇಲಾ ಯಾರು?:-

  1. ಇವರಪೂರ್ಣ ಹೆಸರು ನೆಲ್ಸನ್ ರೋಲಿಹ್ಲಾ ಮಂಡೇಲಾ, ಒಬ್ಬ ಕಪ್ಪು ರಾಷ್ಟ್ರೀಯತಾವಾದಿ ಮತ್ತು ದಕ್ಷಿಣ ಆಫ್ರಿಕಾದ ಮೊದಲ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಕಪ್ಪು ಅಧ್ಯಕ್ಷ.
  2. 1990 ರ ದಶಕದ ಆರಂಭದಲ್ಲಿ ಅವರು ಜನಾಂಗೀಯ ಪ್ರತ್ಯೇಕತೆ ಮತ್ತು ವರ್ಣಭೇದ ನೀತಿಯನ್ನು ಕೊನೆಗೊಳಿಸಲು ಮತ್ತು ಪ್ರಜಾಪ್ರಭುತ್ವದ ಆಡಳಿತವನ್ನು ತರಲು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಎಫ್‌ಡಬ್ಲ್ಯೂ ಡಿ ಕ್ಲರ್ಕ್ ಅವರೊಂದಿಗೆ ಮಾತುಕತೆ ನಡೆಸಿದರು.
  3. ಇಬ್ಬರೂ ಅಧ್ಯಕ್ಷರುಗಳು ಜಂಟಿಯಾಗಿ 1993 ರಲ್ಲಿ ಶಾಂತಿಗಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಅವರು 1994 ರಿಂದ 1999 ರವರೆಗೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
  4. 1964 ರಿಂದ 1982 ರವರೆಗೆ ದೇಶದ್ರೋಹದ ಆಧಾರದ ಮೇಲೆ ದಕ್ಷಿಣ ಆಫ್ರಿಕಾದ ರಾಜ್ಯವು ಮಂಡೇಲಾ ಅವರನ್ನು ಬಂಧಿಸಿತು.
  5. ಜೈಲಿನಲ್ಲಿದ್ದಾಗಲೂ ಅವರು ಕಪ್ಪು ಸಮುದಾಯದಿಂದ ವ್ಯಾಪಕ ಬೆಂಬಲವನ್ನು ಹೊಂದಿದ್ದರು. ಈ ಸಮಯದಲ್ಲಿ ಅವರು ತಮ್ಮ ಬಿಡುಗಡೆಗೆ ಮೂರು ಷರತ್ತುಬದ್ಧ ಕೊಡುಗೆಗಳನ್ನು ತಿರಸ್ಕರಿಸಿದರು ಎಂದು ವರದಿಯಾಗಿದೆ.
  6. ಮಂಡೇಲಾ ಅವರು ಅಧ್ಯಕ್ಷರಾಗಿ ಎರಡನೇ ಅವಧಿಯನ್ನು ಬಯಸಲಿಲ್ಲ ಆದರೆ ಅತ್ಯಂತ ಬಲವಾದ ಅಂತರರಾಷ್ಟ್ರೀಯ ಉಪಸ್ಥಿತಿಯನ್ನು ಉಳಿಸಿಕೊಂಡರು.
  7. ಇವರು ಶಾಂತಿ ಮತ್ತು ಸಾಮಾಜಿಕ ನ್ಯಾಯದ ಪ್ರಚಾರವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದರು.
  8. ದೀರ್ಘಕಾಲದ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಮಂಡೇಲಾ 2013 ರಲ್ಲಿ 95 ನೇ ವಯಸ್ಸಿನಲ್ಲಿ ನಿಧನರಾದರು.

● ಮಂಡೇಲಾರಿಗೊಂದು ಸಲಾಂ:- ಸುಮಾರು 1960ರ ಸಮಯದಲ್ಲಿ ಅಹಿಂಸೆ ನಡೆಯುವುದಿಲ್ಲ ಎಂದು ಕಂಡುಕೊಂಡ ಮಂಡೇಲಾ ಕ್ರಾಂತಿಕಾರಿ ಹೋರಾಟ, ಗೆರಿಲ್ಲಾ ಹೋರಾಟಕ್ಕೆ ಇಳಿದ; ತಲೆ ಮರೆಸಿಕೊಂಡು ಬಿಳಿಯರ ವ್ಯವಸ್ಥೆಗೆ ಸಿಂಹಸ್ವಪ್ನನಾದ. ಆಗ ಮಂಡೇಲಾ ಎದುರಿಗಿದ್ದದ್ದು ಎರಡೇ ಸಾಧ್ಯತೆಗಳು; ಅಹಿಂಸಾತ್ಮಕ ಹೋರಾಟ ಪರಿಣಾಮಕಾರಿಯಲ್ಲ, ಹಿಂಸೆಯ ದಾರಿಯೇ ಸರಿ. ಆಗ “ದೇಶದ್ರೋಹ”ದ ಚಟುವಟಿಕೆಗಳಿಗಾಗಿ ದಕ್ಷಿಣ ಆಫ್ರಿಕಾದ ಸರ್ಕಾರ ಮಂಡೇಲಾನನ್ನು ದಸ್ತರಿಗಿ ಮಾಡಿ ಜೀವಾವಧಿ ಶಿಕ್ಷೆ ವಿಧಿಸಿತು. ಜೈಲಿನಲ್ಲಿದ್ದ ಮಂಡೇಲಾ ಜೈಲಿನ ಹೊರಗಿನ ಮಂಡೇಲಾಗಿಂತ ಶಕ್ತಿವಂತನಾದ.

ಜೀವಾವಧಿ ಸೆರೆವಾಸವೆಂದರೆ ಸೆರೆಮನೆಯ ಹೊರಗಿರುವವರಿಗೆ ತಿಳಿಯುವುದಿಲ್ಲ. ವರ್ಣಭೇದದ ನೀತಿ ರೂಪಿಸಿ ಆಫ್ರಿಕಾದ ನಾಯಕರನ್ನು ಹತ್ತಿಕ್ಕಿ ನಿರಂತರವಾಗಿ ಅಧಿಕಾರ ನಡೆಸುವ ಹುನ್ನಾರ ಬಿಳಿಯರದು. ಇದೊಂದು ವಿಚಿತ್ರ ಸ್ಥಿತಿ. ಸೆರೆಯಲ್ಲಿಟ್ಟವನೂ ಸೆರೆಯಲ್ಲಿದ್ದವನೂ ಬಂಧಿಯಾಗಿರುವ ಸ್ಥಿತಿ. ಮಂಡೇಲಾ ಜಾಗದಲ್ಲಿ ನಿಂತು ನೋಡಿದರೆ ಈ ಸ್ಥಿತಿಯ ಜಟಿಲತೆ ಗೊತ್ತಾಗುತ್ತದೆ. ಜೀವನವೆಂದರೆ ನಲವತ್ತೋ ಐವತ್ತೋ ವರ್ಷ ನಿಜಕ್ಕೂ ಜೀವಂತವಾಗಿರುವ, ಕೈಕಾಲು ಗಟ್ಟಿಮುಟ್ಟಾಗಿದ್ದು ತ್ರಾಣ ಇರುವ ವಿಚಾರ. ಇಪ್ಪತ್ತು ವರ್ಷ ಕಠಿಣ ಸಜಾ; ಕಲ್ಲು ಒಡೆಯುವ, ಹೊರುವ ಕೆಲಸ. ಸ್ವಾಭಿಮಾನಕ್ಕಾಗಿ ನಿಶ್ಚಯ ಕರಗಿಸದೆ, ಉಳಿದಿರುವ ವರ್ಷಗಳಲ್ಲಿ ದೈಹಿಕ ನೆಮ್ಮದಿಗಾಗಿ ಆಸೆಪಡದೆ ಮುಂದುವರಿಯುವ ನಿರ್ಧಾರ; ದೈಹಿಕ ನೆಮ್ಮದಿಯ ಆಶೆ ಆತ್ಮದ ಶ್ರೇಯಸ್ಸನ್ನು ಹಾಳು ಮಾಡದಂತೆ ಕಾಪಾಡಿಕೊಳ್ಳುವ ಶ್ರದ್ಧೆ. ಬಿಡುಗಡೆಯ ಸಾಧ್ಯತೆ ಕೂಡ ಇಲ್ಲದೆ, ತನ್ನ ಛಲವೇ ತನ್ನ ಜನರ ಆದರ್ಶವಾಗುವುದೆಂಬ ಆಶೆಯಿಂದ, ತನ್ನೆಲ್ಲ ತ್ಯಾಗವೂ ವ್ಯರ್ಥ ಕೂಡ ಆಗಬಹುದೆಂಬ ಅನುಮಾನ ಹತ್ತಿಕ್ಕಲಾರದೆ, ತಾನೇ ತನ್ನ ಜನರ ತಿರುಳೆಂಬ ಅಹಂಕಾರವನ್ನು ವಿನಯವನ್ನಾಗಿಸಿಕೊಂಡು ಬದುಕಿದ ಮಂಡೇಲಾರು ವರ್ಣಬೇಧ ನೀತಿಯ ವಿರುದ್ಧ ಹೋರಾಡಿದ ದಂತಕಥೆಯಾಗಿದ್ದಾರೆ, ಅವರಿಗೊಂದು ಸಲಾಂ ಹೇಳೋಣವೇ.

● 18 ನೇ ನೆಲ್ಸನ್ ಮಂಡೇಲಾ ವಾರ್ಷಿಕ ಉಪನ್ಯಾಸ:- 18 ನೇ ನೆಲ್ಸನ್ ಮಂಡೇಲಾ ವಾರ್ಷಿಕ ಉಪನ್ಯಾಸವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು 2020 ರಲ್ಲಿ ನೆಲ್ಸನ್ ಮಂಡೇಲಾ ಅಂತರಾಷ್ಟ್ರೀಯ ದಿನದಂದು ನೀಡಿದರು. ಮೊದಲ ಬಾರಿಗೆ ಕರೋನವೈರಸ್ ಸಾಂಕ್ರಾಮಿಕದ ದೃಷ್ಟಿಯಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉಪನ್ಯಾಸವನ್ನು ನಡೆಸಲಾಯಿತು. ಇಂದಿನ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಅಸಮಾನತೆಗಳು ಮತ್ತು ಜಗತ್ತು ಹೋರಾಟವನ್ನು ಮುಂದುವರೆಸಬೇಕಾದ ಅನ್ಯಾಯಗಳ ಬಗ್ಗೆ ಪ್ರಧಾನ ಕಾರ್ಯದರ್ಶಿ ಗಮನಸೆಳೆದರು.

● 67 ನಿಮಿಷಗಳ ಮಂಡೇಲಾ ದಿನ:– ಮಂಡೇಲಾ ದಿನವನ್ನು 67 ನಿಮಿಷಗಳ ಮಂಡೇಲಾ ದಿನ ಎಂದೂ ಕರೆಯಲಾಗುತ್ತದೆ. “67 ನಿಮಿಷಗಳು” ಎಂಬ ಪದಗುಚ್ಛವನ್ನು ಜನರು ಈ ದಿನದಂದು 67 ನಿಮಿಷಗಳ ಕಾಲ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂಬ ಸಂದೇಶವನ್ನು ರವಾನಿಸಲು ಬಳಸಲಾಗುತ್ತದೆ, ಮಂಡೇಲಾ ಅವರು ತಮ್ಮ ದೇಶಕ್ಕೆ ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ ಒಂದು ನಿಮಿಷ.

● ಕೊನೆಯ ಮಾತು:- 2014 ರಲ್ಲಿ ಯು.ಎನ್ ಜನರಲ್ ಅಸೆಂಬ್ಲಿ ನೆಲ್ಸನ್ ಮಂಡೇಲಾ ಪ್ರಶಸ್ತಿಯನ್ನು ಸ್ಥಾಪಿಸಿತು, ಇದು ಮಾನವೀಯತೆಯ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಸಾಧನೆಗಳನ್ನು ಗುರುತಿಸುವ ಪಂಚವಾರ್ಷಿಕ ಪ್ರಶಸ್ತಿಯಾಗಿದೆ. ಮಂಡೇಲಾ ದಿನವು ಕಾರ್ಯಕ್ಕೆ ಜಾಗತಿಕ ಕರೆಯಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯು ಜಗತ್ತನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿದ್ದಾನೆ, ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಕಲ್ಪನೆಯನ್ನು ಆಚರಿಸುತ್ತದೆ.

ಎನ್.ಎನ್.ಕಬ್ಬೂರ
ಶಿಕ್ಷಕರು, ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452
mutturaj.kabbur@gmail.com
○○○○○○○○○○○○○

Share this Article