ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ವಾರ್ತಾಲಾಪ ಕಾರ್ಯಕ್ರಮದ ಮಹತ್ವ ಮತ್ತು ಮುಖ್ಯ ಉದ್ದೇಶ

Kalabandhu Editor
3 Min Read

ಹೊಸ ಮೂರು ಕ್ರಿಮಿನಲ್ ಕಾನೂನುಗಳು ಸಂತ್ರಸ್ತರನ್ನು ಕೇಂದ್ರೀಕರಿಸಿವೆ ಮತ್ತು ತ್ವರಿತ ನ್ಯಾಯವನ್ನು ಖಚಿತಪಡಿಸುತ್ತದೆ

ಬೆಂಗಳೂರಿನ ಕೇಂದ್ರ ವಾರ್ತಾ ಶಾಖೆ (ಪಿ.ಐ.ಬಿ) ವತಿಯಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲು ಇಂದು ವಾರ್ತಾಲಾಪ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮೂರು ಹೊಸ ಕ್ರಿಮಿನಲ್ ಕಾನೂನುಗಳು 1 ಜುಲೈ 2024 ರಿಂದ ಜಾರಿಗೆ ಬರಲಿದ್ದು, ಇಲ್ಲಿ ವಸಾಹತುಶಾಹಿ ಕಾಲದ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC), ಇಂಡಿಯನ್ ಪೀನಲ್ ಕೋಡ್ (IPC) ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ ಅನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), ಭಾರತೀಯ ನ್ಯಾಯ ಸಂಹಿತಾ (BNS) ಮತ್ತು ಭಾರತೀಯ ಸಾಕ್ಷಿ ಅಧಿನಿಯಮ (BSA) ಎಂದು ಕ್ರಮವಾಗಿ ಬದಲಾಯಿಸಲಾಗುತ್ತದೆ..

ಈ ಸಂದರ್ಭದಲ್ಲಿ ಬೆಂಗಳೂರಿನ ಪಿಐಬಿ ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀ ಎಸ್.ಜಿ.ರವೀಂದ್ರ ಅವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದ ಮಾಧ್ಯಮದವರಿಗೆ ಅರಿವು ಮೂಡಿಸಲು ಸಂಪನ್ಮೂಲ ವ್ಯಕ್ತಿಗಳಾಗಿದ್ದ ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಡಿ.ಆರ್. ವೆಂಕಟ ಸುದರ್ಶನ್ ಮತ್ತು ಕರ್ನಾಟಕ ಸರ್ಕಾರದ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಅಭಿಯೋಜಕರಾದ ಶ್ರೀಮತಿ ಶೈಲಜಾ ಕೃಷ್ಣ ನಾಯಕ್ ಅವರನ್ನು ಸ್ವಾಗತಿಸಿದರು.

ಪಿಐಬಿಯ ರಾಜ್ಯದ ಪ್ರಧಾನ ಕಛೇರಿಯಲ್ಲಿ ಈ ಪ್ರಮುಖವಾದ ವಿಷಯದ ಕುರಿತು ವಾರ್ತಾಲಾಪ ನ ಹಿಂದಿನ ಪ್ರೇರಕ ಶಕ್ತಿಯಾಗಿದ್ದಕ್ಕಾಗಿ ಗೃಹ ಸಚಿವಾಲಯ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಾ, ಬೆಂಗಳೂರಿನ ಹೆಚ್ಚುವರಿ ಮಹಾನಿರ್ದೇಶಕರು ಮೂರು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ವಾರ್ತಾಲಾಪ ಕಾರ್ಯಕ್ರಮದ ಮಹತ್ವ ಮತ್ತು ಮುಖ್ಯ ಉದ್ದೇಶಗಳನ್ನು ತಿಳಿಸಿದರು.

“ಇದು ಕ್ರಿಮಿನಲ್ ಕಾನೂನುಗಳಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯಾಗಿದೆ. ಸಾರ್ವಜನಿಕರಿಗೆ ಮತ್ತು ಮಾಧ್ಯಮಗಳಿಗೆ ಅರಿವು ಮೂಡಿಸುವಲ್ಲಿ ಕಾನೂನು ತಜ್ಞರ ವರ್ಗವು ಮುಂಚೂಣಿಯಲ್ಲಿರುವುದು ಬಹಳ ಮುಖ್ಯ, ಇದರಿಂದ ಈ ಕಾನೂನುಗಳ ಸರಿಯಾದ ವಿವರಗಳು ಮತ್ತು ಪರಿಣಾಮಗಳ ಬಗ್ಗೆ ಸಾಮಾನ್ಯ ಜನರಿಗೆ ತಿಳಿಯುತ್ತದೆ.” ಎಂದು ಶ್ರೀ ಎಸ್.ಜಿ.ರವೀಂದ್ರ ಅವರು ತಿಳಿಸಿದರು.

ನಿವೃತ್ತ ನ್ಯಾಯಾಧೀಶರಾದ ಶ್ರೀ ಡಿ.ಆರ್. ವೆಂಕಟ ಸುದರ್ಶನ್ ಅವರು ಭಾರತೀಯ ನ್ಯಾಯ ಸಂಹಿತಾ-2023, ಭಾರತೀಯ ಸಾಕ್ಷಿ ಅಧಿನಿಯಮ್-2023 ಕುರಿತು ತಮ್ಮ ಉತ್ಕೃಷ್ಟವಾದ ಮಾಹಿತಿ ಭರಿತ ಅಧಿವೇಶನದಿಂದ ಭಾಗವಹಿಸಿದವರಿಗೆ ಅರಿವು ಮೂಡಿಸಿದರು. ಪ್ರಮುಖ ಬದಲಾವಣೆಗಳು ಮತ್ತು ನ್ಯಾಯಾಂಗ ಕಾರ್ಯವಿಧಾನಗಳ ಮೇಲೆ ಅವುಗಳ ಪ್ರಭಾವವನ್ನು ತಿಳಿಸಿದರು.

“ಹೊಸ ಕಾನೂನುಗಳಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ-2023, ಭಾರತೀಯ ನ್ಯಾಯ ಸಂಹಿತಾ-2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ-2023 ನಿಜವಾಗಿಯೂ ಉತ್ತಮ ಕಾನೂನುಗಳಾಗಿವೆ. ಅವು ಶ್ರೀಸಾಮಾನ್ಯರ ಜೀವನವನ್ನು ಸುಲಭಗೊಳಿಸಲು ಮತ್ತು ತ್ವರಿತ ನ್ಯಾಯವನ್ನು ಖಾತ್ರಿಪಡಿಸಲು ಉದ್ದೇಶಿಸಲಾಗಿದೆ ಎಂದು ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಡಿ.ಆರ್. ವೆಂಕಟ ಸುದರ್ಶನ್ ಹೇಳಿದರು.

ಶ್ರೀಮತಿ. ಶೈಲಜಾ ಕೃಷ್ಣ ನಾಯಕ್, ಕರ್ನಾಟಕ ಸರ್ಕಾರದ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಅಭಿಯೋಜಕರು ಮಾತನಾಡಿ, ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ (BNSS) ಕುರಿತು ಮಾಹಿತಿ ನೀಡಿದರು. ಕಾಲಮಿತಿಯೊಳಗೆ ತನಿಖೆ ಮತ್ತು ತ್ವರಿತ ನ್ಯಾಯವನ್ನು ಖಾತ್ರಿಪಡಿಸುವ ಪ್ರಮುಖ ಬದಲಾವಣೆಗಳ ಬಗ್ಗೆ ಅವರು ಒತ್ತಿ ಹೇಳಿದರು. ಶಾಸನಗಳ ಮೂಲಕ ಡಿಜಿಟಲ್ ದಾಖಲೆಗಳನ್ನು ಪ್ರಾಥಮಿಕ ಪುರಾವೆಗಳಾಗಿ ಗುರುತಿಸುವ ಪ್ರಾಮುಖ್ಯತೆಯನ್ನು ಅವರು ವಿವರಿಸಿದರು.

“ಮೂರು ಕಾನೂನುಗಳು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯನ್ನು ತರುತ್ತವೆ ಮತ್ತು ನಾಗರಿಕರನ್ನು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಗೊಳಿಸುತ್ತವೆ. ಅಲ್ಲದೆ, ಇದು ಪೊಲೀಸರ ಕಾರ್ಯನಿರ್ವಹಣೆಗೆ ಕೂಡ ಸಹಾಯ ಮಾಡುತ್ತದೆ ಮತ್ತು ಸುಧಾರಿಸುತ್ತದೆ. ಇದು ತ್ವರಿತ ನ್ಯಾಯವನ್ನು ಖಚಿತಪಡಿಸುತ್ತದೆ. ಡಿಜಿಟಲ್ ದಾಖಲೆಗಳನ್ನು ಈ ಕಾನೂನುಗಳೊಂದಿಗೆ ಪ್ರಾಥಮಿಕ ಪುರಾವೆಗಳಾಗಿ ಗುರುತಿಸಿರುವುದು ಒಂದು ಪ್ರಮುಖ ಬದಲಾವಣೆಯಾಗಿದೆ” ಎಂದರು.

ವಾರ್ತಾಲಾಪ ಕಾರ್ಯಕ್ರಮವು ಸಂಜೆಯವರೆಗೂ ನಡೆಯಿತು ಮತ್ತು ಸಂವಾದಾತ್ಮಕ ಚರ್ಚೆಗಳು ಮತ್ತು ಪ್ರಶ್ನೋತ್ತರ ಸುತ್ತುಗಳೊಂದಿಗೆ ಮುಕ್ತಾಯಗೊಂಡಿತು. ಅಧಿವೇಶನಗಳು ಮಾಹಿತಿ ಪೂರ್ಣವಾಗಿದ್ದು ಮತ್ತು ಉತ್ತಮ ವರದಿಗಾಗಿ ಸಹಾಯಕವಾಗಿವೆ ಎಂದು ಮಾಧ್ಯಮದವರು ಶ್ಲಾಘಿಸಿದರು.

Share this Article