ಬೆಂಗಳೂರು: ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಾಜ್ಯಾದ್ಯಂತ ಜಲಾನಯನ ಪ್ರದೇಶದಲ್ಲಿ (ಅಚ್ಚುಕಟ್ಟು ಹೊರತುಪಡಿಸಿ) ಸಮಸ್ಯಾತ್ಮಕ ಮಣ್ಣುಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬಸಿ ಕಾಲುವೆಗಳ ನಿರ್ಮಾಣದ ಮೂಲಕ ಸವಳು-ಜವಳು ಮಣ್ಣಿನ ಸುಧಾರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರು ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭೆಯಲ್ಲಿ ಕಾಗವಾಡ ಕ್ಷೇತ್ರದ ಶಾಸಕರಾದ ಬರಮಗೌಡ ಆಲಗೌಡ ಕಾಗೆ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರು ಉತ್ತರಿಸಿದರು.
ಈ ಕಾರ್ಯಕ್ರಮದಡಿ ಕಪ್ಪು ಮಣ್ಣಿನ ಪ್ರತಿ ಹೆಕ್ಟೇರ್‌ಗೆ ರೂ.1.25ಲಕ್ಷಗಳು ಹಾಗೂ ಕೆಂಪು ಮಣ್ಣಿನಲ್ಲಿ ರೂ.65000/-ಗಳ ವೆಚ್ಚದಲ್ಲಿ ಅಂತರ ಬಸಿ ಕಾಲುವೆಯನ್ನು ನಿರ್ಮಾಣ ಮಾಡುವುದರ ಮೂಲಕ ಉಪಚರಿಸಲು ಅವಕಾಶವಿದೆ ಎಂದು ಕೃಷಿ ಸಚಿವರು ಮಾಹಿತಿ ನೀಡಿದರು.
ಒಣ ಭೂಮಿ/ಶುಷ್ಕ ಪ್ರದೇಶಗಳಲ್ಲಿ, ನೀರು ಆವಿಯಾಗುವಿಕೆಯು ಬೀಳುವ ಮಳೆಯ ಪ್ರಮಾಣವನ್ನು ಮೀರಿದ ಸಂದರ್ಭದಲ್ಲಿ ಮಣ್ಣಿನಲ್ಲಿರುವ ಲವಣಗಳು ಮಣ್ಣಿನ ಮೇಲ್ಮೆ/ಬೇರಿನ ಬಳಿ ಸಂಗ್ರಹವಾಗುವುದು, ನೀರಾವರಿಯ ಅತಿಯಾದ ಬಳಕೆ, ನೀರಿನ ಗುಣಮಟ್ಟ ಲವಣಯುಕ್ತವಾಗಿದ್ದರೆ, ಅಸಮರ್ಪಕ ಮತ್ತು ನೀರಿನ ದುರ್ಬಲ ಬಸಿಯುವಿಕೆಯಿಂದ ನಿರಂತರವಾಗಿ ಮಣ್ಣಿನ ಮೇಲ್ಭಾಗ ಮತ್ತು ಕೆಳಭಾಗದ ಮಣ್ಣಿನಲ್ಲಿ (sub surface) ಲವಣ ಶೇಖರಣೆ ಪ್ರಮಾಣವು ಹೆಚ್ಚು ವೇಗವಾಗಿರುತ್ತದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರು ಹೇಳಿದರು.
ಸವಳು-ಜವಳು ಮಣ್ಣಿನಲ್ಲಿ ಸೋಡಿಯಂ ಪ್ರಮಾಣ ಅಧಿಕವಾಗಿರುವುದರಿಂದ ಮಣ್ಣಿನ ಭೌತಿಕ ಗುಣಧರ್ಮಗಳು ಹಾಳಾಗಿರುವುದರಿಂದ ಮಣ್ಣಿನ ಭೌತಿಕ ಗುಣಧರ್ಮಗಳು ಹಾಳಾಗುವುದರ ಜೊತೆಗೆ ನಿಧಾನವಾಗಿ ನೀರಿನ ಬಸಿಯುವಿಕೆ, ಸಾವಯವ ಅಂಶದ ಕೊರತೆಯಿಂದ ಸೂಕ್ಷ್ಮ ಜೀವಿಗಳ ಕುಂಠಿತ ಚಟುವಟಿಕೆ, ಬೆಳೆಗೆ ದೊರೆಯುವ ಸಾರಜನಕದ/ಲಘು ಪೋಷಕಾಂಶಗಳ ಕೊರತೆಯಂತಹ ಸಮಸ್ಯೆಗಳಿಂದಾಗಿ ಸಸ್ಯಗಳ ಬೆಳವಣಿಗೆ ಕುಂಠಿತವಾಗುವುದು. ಇದರಿಂದಾಗಿ ಕಾಲಕ್ರಮೇಣ ಭೂಮಿಯು ವ್ಯವಸಾಯ/ಬೇಸಾಯ ಕೈಗೊಳ್ಳಲು ನಿರುಪಯುಕ್ತವಾಗುವುದು ಎಂದು ಅವರು ವಿವರಿಸಿದರು.
ಬೆಳಗಾವಿ ಜಿಲ್ಲೆ ಅವಿಭಾಜ್ಯ ಅಥಣಿ (ಕಾಗವಾಡ) ತಾಲ್ಲೂಕಿನಲ್ಲಿ 1151.54 ಹೆಕ್ಟೇರ್ ಸವಳು-ಜವಳು ಕೃಷಿ ಭೂಮಿ ಇದ್ದು, ಹಂತ ಹಂತವಾಗಿ ಮಣ್ಣು ಸುಧಾರಣೆ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರು ತಿಳಿಸಿದರು.
ಕಾಗವಾಡ ತಾಲ್ಲೂಕಿನಲ್ಲಿ ಸವಳು-ಜವಳಾಗಿರುವ ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಲು ಜಲಾನಯನ ಅಭಿವೃದ್ಧಿ ಇಲಾಖೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಸಕಾರಾತ್ಮಕ ಮಣ್ಣಿನ ಸುಧಾರಣೆ ಕಾರ್ಯಕ್ರಮದಡಿ 2016-17ನೇ ಸಾಲಿನಲ್ಲಿ ಕುಸನಾಳ ಗ್ರಾಮದಲ್ಲಿ 100 ಹೆಕ್ಟೇರ್ ಪ್ರದೇಶವನ್ನು ಹಾಗೂ 2020-21ನೇ ಸಾಲಿನಲ್ಲಿ ಜುಗಳ ಗ್ರಾಮದಲ್ಲಿ 154.08 ಹೆಕ್ಟೇರ್, 2022-23ನೇ ಸಾಲಿನಲ್ಲಿ ಕಾಗವಾಡ ಗ್ರಾಮದಲ್ಲಿ 46.94 ಹೆಕ್ಟೇರ್ ಪ್ರದೇಶ ಭೂಮಿಯನ್ನು ಅಭಿವೃಧ್ಧಿಪಡಿಸಲು ಆಯ್ಕೆ ಮಾಡಲಾಗಿದೆ ಎಂದು ಅವರು ಅಂಕಿ ಅಂಶ ಒದಗಿಸಿದರು.