ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ದ ಮೊದಲ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು, ಸೈಬರ್ ಅಪರಾಧಗಳನ್ನು ತಡೆಗಟ್ಟುವ ಪ್ರಮುಖ ಉಪಕ್ರಮಗಳಿಗೆ ಚಾಲನೆ ನೀಡಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉಪಕ್ರಮದ ಮೇರೆಗೆ ಸುರಕ್ಷಿತ ಸೈಬರ್ ಸ್ಪೇಸ್ ಅಭಿಯಾನದ ಅಡಿಯಲ್ಲಿ ಪ್ರಾರಂಭಿಸಲಾದ I4C ಇಂದು ದೇಶದ ಸೈಬರ್ ಭದ್ರತೆಯ ಬಲವಾದ ಆಧಾರಸ್ತಂಭವಾಗಿದೆ
ಇಂದು ಪ್ರಾರಂಭಿಸಲಾದ ‘I4C’ ಯ ನಾಲ್ಕು ಪ್ರಮುಖ ಉಪಕ್ರಮಗಳು ಸೈಬರ್ ಅಪರಾಧ ವಿರುದ್ಧದ ಹೋರಾಟವನ್ನು ಹೆಚ್ಚು ಬಲವಾಗಿಸಲು, ಪರಿಣಾಮಕಾರಿಯಾಗಿಸಲು ಮತ್ತು ಯಶಸ್ವಿಯಾಗಿಸಲು ದೊಡ್ಡ ಕೊಡುಗೆ ನೀಡುತ್ತವೆ
ಸೈಬರ್ ಭದ್ರತೆಯು ಡಿಜಿಟಲ್ ಜಗತ್ತಿಗೆ ಮಾತ್ರ ಸೀಮಿತವಾಗಿಲ್ಲ, ರಾಷ್ಟ್ರೀಯ ಭದ್ರತೆಯ ಪ್ರಮುಖ ಅಂಶವೂ ಆಗಿದೆ
ಯಾವುದೇ ಒಂದು ಸಂಘಟನೆ ಅಥವಾ ಸಂಸ್ಥೆಯು ಸೈಬರ್ ಜಾಗವನ್ನು ಸುರಕ್ಷಿತವಾಗಿರಿಸಲು ಸಾಧ್ಯವಿಲ್ಲ, ಎಲ್ಲಾ ಪಾಲುದಾರರು ಒಂದೇ ವೇದಿಕೆಯಲ್ಲಿ ಒಗ್ಗೂಡಬೇಕು ಮತ್ತು ಉದ್ದೇಶ ಸಾಧನೆಗಾಗಿ ಒಟ್ಟಾಗಿ ಕೆಲಸ ಮಾಡಬೇಕು
ರಾಷ್ಟ್ರ ಮಟ್ಟದಲ್ಲಿ ಶಂಕಿತ ದಾಖಲಾತಿಯನ್ನು ರಚಿಸುವುದು ಮತ್ತು ಅದರೊಂದಿಗೆ ರಾಜ್ಯಗಳನ್ನು ಸಂಪರ್ಕಿಸುವುದು ಸೈಬರ್ ಅಪರಾಧವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ
5 ವರ್ಷಗಳಲ್ಲಿ ಸುಮಾರು 5 ಸಾವಿರ ಸೈಬರ್ ಕಮಾಂಡೋಗಳನ್ನು ಸಿದ್ಧಗೊಳಿಸಲಾಗುವುದು
ಮೂರು ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ದೇಶವನ್ನು ಸೈಬರ್ ಸುರಕ್ಷಿತವಾಗಿಸಲು ಎಲ್ಲಾ ಕಾನೂನು ವ್ಯವಸ್ಥೆಗಳನ್ನು ಮಾಡಲಾಗಿದೆ
ಕೇಂದ್ರ ಗೃಹ ಸಚಿವರು ಸೈಬರ್ ವಂಚನೆ ತಗ್ಗಿಸುವಿಕೆ ಕೇಂದ್ರ (ಸಿ ಎಫ್ ಎಂ ಸಿ) ವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು, ಸಮನ್ವಯ ವೇದಿಕೆ (ಜಂಟಿ ಸೈಬರ್ ಅಪರಾಧ ತನಿಖಾ ನೆರವು ವ್ಯವಸ್ಥೆ), ‘ಸೈಬರ್ ಕಮಾಂಡೋಸ್’ ಮತ್ತು ಶಂಕಿತ ದಾಖಲಾತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಮೊದಲ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು ಮತ್ತು ಸೈಬರ್ ಅಪರಾಧ ತಡೆಗಟ್ಟುವ ಪ್ರಮುಖ ಉಪಕ್ರಮಗಳಿಗೆ ಚಾಲನೆ ನೀಡಿದರು. ಗೃಹ ಸಚಿವರು ಸೈಬರ್ ವಂಚನೆ ತಗ್ಗಿಸುವಿಕೆ ಕೇಂದ್ರ (ಸಿ ಎಫ್ ಎಂ ಸಿ) ವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು , ಸಮನ್ವಯ ವೇದಿಕೆ (ಜಂಟಿ ಸೈಬರ್ ಅಪರಾಧ ತನಿಖಾ ನೆರವು ವ್ಯವಸ್ಥೆ)ಗೆ ಚಾಲನೆ ನೀಡಿದರು. ಶ್ರೀ ಅಮಿತ್ ಶಾ ಅವರು ‘ಸೈಬರ್ ಕಮಾಂಡೋಸ್’ ಮತ್ತು ಶಂಕಿತ ದಾಖಲಾತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೇಂದ್ರ ಗೃಹ ಸಚಿವರು I4C ಯ ಹೊಸ ಲೋಗೋ, ದೃಷ್ಟಿ ಮತ್ತು ಮಿಷನ್ ಅನ್ನು ಸಹ ಅನಾವರಣಗೊಳಿಸಿದರು. ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಬಂಡಿ ಸಂಜಯ್ ಕುಮಾರ್, ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್, ಗುಪ್ತದಳ ನಿರ್ದೇಶಕರು, ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ), ವಿವಿಧ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರು/ಹಿರಿಯ ಪೊಲೀಸ್ ಅಧಿಕಾರಿಗಳು, ವಿವಿಧ ಬ್ಯಾಂಕ್ ಗಳ ಹಿರಿಯ ಅಧಿಕಾರಿಗಳು/ಹಣಕಾಸು ಮಧ್ಯವರ್ತಿಗಳು, ಫಿನ್ಟೆಕ್, ಮಾಧ್ಯಮ, ಸೈಬರ್ ಕಮಾಂಡೋಸ್, ಎನ್ ಸಿ ಸಿ ಮತ್ತು ಎನ್ ಎಸ್ ಎಸ್ ಕೆಡೆಟ್ ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಉಪಕ್ರಮದ ಮೇರೆಗೆ ‘ಸುರಕ್ಷಿತ ಸೈಬರ್ ಸ್ಪೇಸ್’ ಅಭಿಯಾನದ ಅಡಿಯಲ್ಲಿ 2015 ರಲ್ಲಿ I4C ಅನ್ನು ಸ್ಥಾಪಿಸಲಾಯಿತು. ಅಂದಿನಿಂದ ಇದು ನಿರಂತರವಾಗಿ ಸೈಬರ್ ಸುರಕ್ಷತೆಯ ಭಾರತದ ಬಲವಾದ ಸ್ತಂಭವಾಗುವತ್ತ ಸಾಗುತ್ತಿದೆ ಎಂದು ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಹೇಳಿದರು, 2015 ರಿಂದ 2024 ರವರೆಗಿನ 9 ವರ್ಷಗಳ ಪ್ರಯಾಣದಲ್ಲಿ, ಈ ಕಲ್ಪನೆಯು ಒಂದು ಉಪಕ್ರಮವಾಗಿ ಮತ್ತು ನಂತರ ಸಂಸ್ಥೆಯಾಗಿ ಮಾರ್ಪಟ್ಟಿದೆ ಮತ್ತು ಈಗ ಅದು ಸೈಬರ್ ಸುರಕ್ಷಿತ ಭಾರತದ ಬೃಹತ್ ಸ್ತಂಭವಾಗುವತ್ತ ಸಾಗುತ್ತಿದೆ ಎಂದು ಅವರು ಹೇಳಿದರು.
ಸೈಬರ್ ಭದ್ರತೆ ಇಲ್ಲದೆ ಯಾವುದೇ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ತಂತ್ರಜ್ಞಾನವು ಮಾನವನ ಜೀವನಕ್ಕೆ ವರದಾನವಾಗಿದೆ ಎಂದು ಅವರು ಹೇಳಿದರು ಇಂದು ತಂತ್ರಜ್ಞಾನವನ್ನು ಎಲ್ಲಾ ಹೊಸ ಉಪಕ್ರಮಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಹೆಚ್ಚುತ್ತಿರುವ ತಂತ್ರಜ್ಞಾನದ ಬಳಕೆಯು ಅನೇಕ ಬೆದರಿಕೆಗಳನ್ನು ಸೃಷ್ಟಿಸುತ್ತಿದೆ ಮತ್ತು ಅದಕ್ಕಾಗಿಯೇ ಸೈಬರ್ ಸುರಕ್ಷತೆಯು ಇನ್ನು ಮುಂದೆ ಡಿಜಿಟಲ್ ಜಗತ್ತಿಗೆ ಸೀಮಿತವಾಗಿರುವುದಿಲ್ಲ, ರಾಷ್ಟ್ರೀಯ ಭದ್ರತೆಯ ಪ್ರಮುಖ ಅಂಶವಾಗಿರುತ್ತದೆ ಎಂದು ಅವರು ಹೇಳಿದರು. ಇಂತಹ ಬೆದರಿಕೆಗಳನ್ನು ಎದುರಿಸುವಲ್ಲಿ I4C ಯಂತಹ ವೇದಿಕೆಗಳು ದೊಡ್ಡ ಕೊಡುಗೆ ನೀಡಬಲ್ಲವು ಎಂದು ಶ್ರೀ ಶಾ ಹೇಳಿದರು. ಸಂಬಂಧಪಟ್ಟ ಮಧ್ಯಸ್ಥಗಾರರೊಂದಿಗೆ ಜಾಗೃತಿ, ಸಮನ್ವಯ ಮತ್ತು ಜಂಟಿ ಪ್ರಯತ್ನಗಳನ್ನು ಮುಂದುವರಿಸಲು ಅವರು I4C ಗೆ ಕರೆ ನೀಡಿದರು. ಯಾವುದೇ ಒಂದು ಸಂಸ್ಥೆಯು ಸೈಬರ್ ಜಾಗವನ್ನು ಏಕಾಂಗಿಯಾಗಿ ಸುರಕ್ಷಿತವಾಗಿರಿಸಲು ಸಾಧ್ಯವಿಲ್ಲ, ಅನೇಕ ಪಾಲುದಾರರು ಒಂದೇ ವೇದಿಕೆಯಲ್ಲಿ ಬಂದು ಅದೇ ವಿಧಾನ ಮತ್ತು ಮಾರ್ಗದಲ್ಲಿ ಮುನ್ನಡೆದಾಗ ಮಾತ್ರ ಇದು ಸಾಧ್ಯ ಎಂದು ಗೃಹ ಸಚಿವರು ಹೇಳಿದರು.
I4C ಯ ನಾಲ್ಕು ಪ್ರಮುಖ ಸೈಬರ್ ಪ್ಲಾಟ್ಫಾರ್ಮ್ ಗಳನ್ನು ಸಹ ಇಂದು ಇಲ್ಲಿ ಪ್ರಾರಂಭಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸೈಬರ್ ವಂಚನೆ ತಗ್ಗಿಸುವ ಕೇಂದ್ರ (ಸಿ ಎಫ್ ಎಂ ಸಿ) ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಾಗಿದ್ದು, ಇದನ್ನು ಇಂದು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಇದರೊಂದಿಗೆ ಸೈಬರ್ ಕಮಾಂಡೋ, ಸಮನ್ವಯ ವೇದಿಕೆ ಹಾಗೂ ಶಂಕಿತ ದಾಖಲಾತಿಯನ್ನೂ ಇಂದು ಉದ್ಘಾಟಿಸಲಾಗಿದೆ ಎಂದರು.
ಭಾರತದಂತಹ ಬೃಹತ್ ದೇಶದಲ್ಲಿ ಪ್ರತಿಯೊಂದು ರಾಜ್ಯಕ್ಕೂ ಪ್ರತ್ಯೇಕ ಸೈಬರ್ ಶಂಕಿತ ದಾಖಲಾತಿ ರಚಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ, ಏಕೆಂದರೆ ರಾಜ್ಯಗಳು ತಮ್ಮದೇ ಆದ ಗಡಿಗಳನ್ನು ಹೊಂದಿದ್ದರೂ ಸೈಬರ್ ಅಪರಾಧಿಗಳಿಗೆ ಯಾವುದೇ ಗಡಿಗಳಿರುವುದಿಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ರಾಷ್ಟ್ರೀಯ ಮಟ್ಟದಲ್ಲಿ ಶಂಕಿತ ದಾಖಲಾತಿಯನ್ನು ರಚಿಸುವುದು ಮತ್ತು ಅದರೊಂದಿಗೆ ರಾಜ್ಯಗಳನ್ನು ಸಂಪರ್ಕಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು, ಇದರಿಂದಾಗಿ ಸೈಬರ್ ಅಪರಾಧದ ವಿರುದ್ಧ ಹೋರಾಡಲು ಸಾಮಾನ್ಯ ವೇದಿಕೆಯನ್ನು ರಚಿಸಬಹುದು. ಮುಂದಿನ ದಿನಗಳಲ್ಲಿ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಈ ಉಪಕ್ರಮವು ನಮಗೆ ಸಾಕಷ್ಟು ಸಹಾಯ ಮಾಡುತ್ತದೆ ಎಂದು ಶ್ರೀ ಶಾ ಹೇಳಿದರು.
ಇಂದಿನಿಂದ I4C ಜನಜಾಗೃತಿ ಅಭಿಯಾನವನ್ನೂ ಆರಂಭಿಸುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದ 72 ಕ್ಕೂ ಹೆಚ್ಚು ಟಿವಿ ಚಾನೆಲ್ ಗಳು, 190 ರೇಡಿಯೋ ಎಫ್ ಎಂ ಚಾನೆಲ್ ಗಳು, ಸಿನಿಮಾ ಮಂದಿರಗಳು ಮತ್ತು ಇತರ ಹಲವು ವೇದಿಕೆಗಳ ಮೂಲಕ ಈ ಅಭಿಯಾನವನ್ನು ವೇಗಗೊಳಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು. ಸಂತ್ರಸ್ತರಿಗೆ ಸೈಬರ್ ಅಪರಾಧ ತಪ್ಪಿಸುವುದು ಹೇಗೆ ಎಂದು ತಿಳಿಯದ ಹೊರತು ಈ ಅಭಿಯಾನ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಸೈಬರ್ ಅಪರಾಧ ಸಹಾಯವಾಣಿ 1930 ಮತ್ತು I4C ಯ ಇತರ ಪ್ಲಾಟ್ ಫಾರ್ಮ್ ಗಳ ಬಗ್ಗೆ ಜಾಗೃತಿ ಮೂಡಿಸುವುದು ಅದರ ಉಪಯುಕ್ತತೆಯನ್ನು ಹೆಚ್ಚಿಸುತ್ತದೆ ಮತ್ತು ಸೈಬರ್ ಅಪರಾಧಗಳನ್ನು ತಡೆಯಲು ನಮಗೆ ಸಹಾಯ ಮಾಡುತ್ತದೆ ಎಂದು ಶ್ರೀ ಶಾ ಹೇಳಿದರು. ಈ ಅಭಿಯಾನದಲ್ಲಿ ಭಾಗವಹಿಸಲು ಮತ್ತು ಹಳ್ಳಿಗಳು ಮತ್ತು ನಗರಗಳಲ್ಲಿ ಜಾಗೃತಿ ಮೂಡಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಗೃಹ ಸಚಿವರು ವಿನಂತಿ ಮಾಡಿದರು.
ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು, ಟೆಲಿಕಾಂ ಕಂಪನಿಗಳು, ಇಂಟರ್ನೆಟ್ ಸೇವಾ ಪೂರೈಕೆದಾರರು ಮತ್ತು ಪೊಲೀಸರನ್ನು ಒಂದೇ ವೇದಿಕೆಯಲ್ಲಿ ತರುವ ಆಲೋಚನೆಯೊಂದಿಗೆ ಸಿ ಎಫ್ ಎಂ ಸಿ ಯನ್ನು ಸಹ ಪ್ರಾರಂಭಿಸಲಾಗಿದೆ ಮತ್ತು ಇದು ಮುಂಬರುವ ದಿನಗಳಲ್ಲಿ ಸೈಬರ್ ಅಪರಾಧ ತಡೆಗಟ್ಟಲು ಪ್ರಮುಖ ವೇದಿಕೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ವಿವಿಧ ದತ್ತಾಂಶಗಳನ್ನು ಬಳಸಿಕೊಂಡು ಸೈಬರ್ ಅಪರಾಧಿಗಳ ಅಪರಾಧ ವಿಧಾನ (ಎಂಒ) ಗುರುತಿಸಲು ಮತ್ತು ಅದನ್ನು ತಡೆಯಲು ಸಿ ಎಫ್ ಎಂ ಸಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಸೈಬರ್ ಕಮಾಂಡೋ ಕಾರ್ಯಕ್ರಮದಡಿಯಲ್ಲಿ 5 ವರ್ಷಗಳಲ್ಲಿ ಸುಮಾರು 5 ಸಾವಿರ ಸೈಬರ್ ಕಮಾಂಡೋಗಳನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಲಾಗಿದೆ ಎಂದು ಶ್ರೀ ಶಾ ಹೇಳಿದರು.
ಶ್ರೀ ಅಮಿತ್ ಶಾ ಅವರು ‘ತಿಳಿದುಕೊಳ್ಳಬೇಕು’ ಬದಲಿಗೆ ‘ಹಂಚಿಕೊಳ್ಳುವುದು ಕರ್ತವ್ಯ’ ಎಂಬುದು ಇಂದಿನ ಅಗತ್ಯವಾಗಿದೆ ಮತ್ತು ಇದಕ್ಕಾಗಿ ಸಮನ್ವಯ ವೇದಿಕೆಗಿಂತ ಹೆಚ್ಚು ಪರಿಣಾಮಕಾರಿಯಾದುದು ಬೇರೆ ಇರಲು ಸಾಧ್ಯವಿಲ್ಲ ಎಂದು ಹೇಳಿದರು. ಸಮನ್ವಯ ವೇದಿಕೆಯು ಡೇಟಾ-ಚಾಲಿತ ವಿಧಾನದೊಂದಿಗೆ ಪ್ರವರ್ತಕವಾಗಿದೆ ಮತ್ತು ಹಂಚಿಕೊಂಡ ಡೇಟಾ ರೆಪೊಸಿಟರಿಯನ್ನು ರಚಿಸಲು ಇದು ದೇಶದಲ್ಲಿ ಮೊದಲ ಪ್ರಯತ್ನವಾಗಿದೆ ಎಂದು ಅವರು ಹೇಳಿದರು. ದೇಶಾದ್ಯಂತ I4C ಮತ್ತು ಪೊಲೀಸರು ಇಂದು ಪ್ರಾರಂಭಿಸಿರುವ ನಾಲ್ಕು ಉಪಕ್ರಮಗಳು ಸೈಬರ್ ಅಪರಾಧದ ವಿರುದ್ಧದ ಹೋರಾಟವನ್ನು ಬಲವಾಗಿಸಲು, ಪರಿಣಾಮಕಾರಿಯಾಗಿಸಲು ಮತ್ತು ಯಶಸ್ವಿಗೊಳಿಸಲು ದೊಡ್ಡ ಕೊಡುಗೆ ನೀಡುತ್ತವೆ ಎಂದು ಗೃಹ ಸಚಿವರು ಹೇಳಿದರು.
2014ರ ಮಾರ್ಚ್ 31ರಂದು ದೇಶದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ 25 ಕೋಟಿ ಇತ್ತು, 2024ರ ಮಾರ್ಚ್ 31ಕ್ಕೆ 95 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಡೌನ್ಲೋಡ್ ವೇಗ ಹೆಚ್ಚಳ ಮತ್ತು ವೆಚ್ಚದಲ್ಲಿ ಕಡಿತದಿಂದಾಗಿ ಡೇಟಾ ಬಳಕೆ ಕೂಡ ಸಾಕಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಈ ಹಿಂದೆ ಸರಾಸರಿ ಬಳಕೆ 0.26 ಜಿಬಿ ಆಗಿದ್ದು, ಇಂದು 20.27 ಜಿಬಿಗೆ ತಲುಪಿ ಸುಮಾರು 78 ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಡಿಜಿಟಲ್ ಇಂಡಿಯಾ ಉಪಕ್ರಮದಿಂದಾಗಿ, ದೇಶದಲ್ಲಿ ಅನೇಕ ಸೌಲಭ್ಯಗಳು ಆನ್ಲೈನ್ ಆಗಿವೆ ಎಂದು ಶ್ರೀ ಶಾ ಹೇಳಿದರು. 2024ರಲ್ಲಿ 35 ಕೋಟಿ ಜನ್ ಧನ್ ಖಾತೆಗಳು, 36 ಕೋಟಿ ರುಪೇ ಡೆಬಿಟ್ ಕಾರ್ಡ್ ಗಳು, 20 ಲಕ್ಷದ 64000 ಕೋಟಿ ರೂಪಾಯಿ ವಹಿವಾಟು ಡಿಜಿಟಲ್ ಮೂಲಕ ನಡೆದಿದೆ ಎಂದು ಹೇಳಿದರು. ಇಂದು ಜಗತ್ತಿನ ಶೇ.46ರಷ್ಟು ಡಿಜಿಟಲ್ ವಹಿವಾಟು ಭಾರತದಲ್ಲಿ ನಡೆಯುತ್ತಿದೆ ಎಂದರು. ಡಿಜಿಟಲ್ ಖಾತೆಗಳು ಮತ್ತು ಡಿಜಿಟಲ್ ವಹಿವಾಟುಗಳು ಹೆಚ್ಚಾದಂತೆ ಡಿಜಿಟಲ್ ವಂಚನೆಯಿಂದ ರಕ್ಷಿಸುವ ಅಗತ್ಯವೂ ಹೆಚ್ಚಾಗುತ್ತದೆ ಎಂದು ಗೃಹ ಸಚಿವರು ಹೇಳಿದರು.
2014ರಲ್ಲಿ ದೇಶದ 600 ಪಂಚಾಯಿತಿಗಳು ಮಾತ್ರ ಅಂತರ್ಜಾಲ ಸಂಪರ್ಕ ಪಡೆದಿದ್ದವು, ಇಂದು 2,13,000 ಪಂಚಾಯಿತಿಗಳು ಅಂತರ್ಜಾಲ ಸಂಪರ್ಕ ಹೊಂದಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಡಿಜಿಟಲ್ ವಹಿವಾಟು ಮತ್ತು ಡಿಜಿಟಲ್ ಡೇಟಾ ಬಳಕೆ ಹೆಚ್ಚಿದಂತೆ ಸೈಬರ್ ವಂಚನೆಯಿಂದ ರಕ್ಷಿಸುವ ಜವಾಬ್ದಾರಿಯೂ ಹೆಚ್ಚಿದೆ ಎಂದರು. ಸೈಬರ್ ಕ್ರಿಮಿನಲ್ ಗಳಿಂದ ಪ್ರಮುಖ ವೈಯಕ್ತಿಕ ಡೇಟಾವನ್ನು ಮಾರಾಟ ಮಾಡುವುದು, ಆನ್ಲೈನ್ ಕಿರುಕುಳ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ನಕಲಿ ಸುದ್ದಿ ಮತ್ತು ಟೂಲ್ ಕಿಟ್ ಗಳು, ತಪ್ಪು ಮಾಹಿತಿ ಅಭಿಯಾನಗಳಂತಹ ಅನೇಕ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ ಮತ್ತು ಅವುಗಳನ್ನು ನಿಭಾಯಿಸಲು ನಾವು ಇನ್ನೂ ಸಾಕಷ್ಟು ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ (ಬಿ ಎನ್ ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿ ಎನ್ ಎಸ್ ಎಸ್) ಮತ್ತು ಭಾರತೀಯ ಸಾಕ್ಷಿ ಅಧಿನಿಯಮ (ಬಿ ಎಸ್ ಎ) ಗಳಲ್ಲಿ ನಮ್ಮ ದೇಶವನ್ನು ಸೈಬರ್ ಸುರಕ್ಷಿತಗೊಳಿಸಲು ಎಲ್ಲಾ ಕಾನೂನು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ತಂತ್ರಜ್ಞಾನ ಆಧಾರಿತ ಹಲವು ಉಪಕ್ರಮಗಳ ಮೂಲಕ ಅವುಗಳಿಗೆ ಕಾನೂನು ರೂಪ ನೀಡಲಾಗಿದೆ. ತನಿಖೆಯು ವೈಜ್ಞಾನಿಕ ವಿಧಾನಗಳನ್ನು ಆಧರಿಸಿದೆ ಮತ್ತು ತನಿಖೆಯ ಗುಣಮಟ್ಟವನ್ನು ಸುಧಾರಿಸಲು ಹಲವು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
I4C ತನ್ನ 9 ವರ್ಷಗಳ ಪ್ರಯಾಣದಲ್ಲಿ ಮತ್ತು ಗೃಹ ಸಚಿವಾಲಯದ ಅಧಿಕೃತ ಭಾಗವಾದ ಒಂದು ವರ್ಷದ ಅಲ್ಪಾವಧಿಯಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. I4C ಯ ದೊಡ್ಡ ಸಾಧನೆ ಎಂದರೆ ʼ1930ʼ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ ಮತ್ತು ಇದನ್ನು ಜನಪ್ರಿಯಗೊಳಿಸುವುದು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಮಧ್ಯಸ್ಥಗಾರರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. 1930 ಸಹಾಯವಾಣಿಯನ್ನು ಜನಪ್ರಿಯಗೊಳಿಸಲು ಹದಿನೈದು ದಿನಗಳ ಜಾಗೃತಿಯನ್ನು ಆಯೋಜಿಸುವಂತೆ ಗೃಹ ಸಚಿವರು ಸಲಹೆ ನೀಡಿದರು. ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಗೃಹ ಸಚಿವಾಲಯವು ಮುತುವರ್ಜಿ ವಹಿಸಿ ಆರು ತಿಂಗಳ ನಂತರ ಜಾಗೃತಿ ಪಾಕ್ಷಿಕವನ್ನು ಆಯೋಜಿಸಬೇಕು ಎಂದು ಅವರು ಹೇಳಿದರು. 1930 ಅನ್ನು ಜನಪ್ರಿಯಗೊಳಿಸುವ ಅಭಿಯಾನವನ್ನು ಎಲ್ಲಾ ವೇದಿಕೆಗಳಲ್ಲಿ ಏಕಕಾಲದಲ್ಲಿ ನಡೆಸಿದರೆ, ಖಂಡಿತವಾಗಿಯೂ ವಂಚನೆಗೆ ಒಳಗಾದವರು ಸುರಕ್ಷಿತವಾಗಿರುತ್ತಾರೆ, ವಂಚನೆಯು ತಕ್ಷಣವೇ ನಿಲ್ಲುತ್ತದೆ ಮತ್ತು ವಂಚಕರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡುತ್ತದೆ ಎಂದು ಶ್ರೀ ಶಾ ಹೇಳಿದರು.
ಇಲ್ಲಿಯವರೆಗೆ I4C 600 ಕ್ಕೂ ಹೆಚ್ಚು ಸಲಹೆಗಳನ್ನು ನೀಡಿದೆ ಮತ್ತು ಸೈಬರ್ ಅಪರಾಧಿಗಳು ನಿರ್ವಹಿಸುವ ವಿವಿಧ ವೆಬ್ಸೈಟ್ ಗಳು, ಸಾಮಾಜಿಕ ಮಾಧ್ಯಮ ಪುಟಗಳು, ಮೊಬೈಲ್ ಅಪ್ಲಿಕೇಶನ್ ಗಳು ಮತ್ತು ಖಾತೆಗಳನ್ನು ನಿರ್ಬಂಧಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. I4C ಅಡಿಯಲ್ಲಿ ದೆಹಲಿಯಲ್ಲಿ ರಾಷ್ಟ್ರೀಯ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯವನ್ನು ಸಹ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು. ಇಲ್ಲಿಯವರೆಗೆ 1100 ಕ್ಕೂ ಹೆಚ್ಚು ಅಧಿಕಾರಿಗಳು ಸೈಬರ್ ಫೋರೆನ್ಸಿಕ್ಸ್ನಲ್ಲಿ ತರಬೇತಿ ಪಡೆದಿದ್ದಾರೆ ಮತ್ತು ಈ ಅಭಿಯಾನವನ್ನು ಜಿಲ್ಲೆಗಳು ಮತ್ತು ತಾಲ್ಲೂಕುಗಳಿಗೆ ಕೊಂಡೊಯ್ಯಲು ಇದು ನಮ್ಮ ಪ್ರಮುಖ ಮತ್ತು ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ ಎಂದು ಶ್ರೀ ಶಾ ಹೇಳಿದರು.
ಸೈಬರ್ ಅಪರಾಧದ ದೂರುಗಳನ್ನು ಗಮನದಲ್ಲಿಟ್ಟುಕೊಂಡು ಮೇವಾತ್, ಜಮ್ತಾರಾ, ಅಹಮದಾಬಾದ್, ಹೈದರಾಬಾದ್, ಚಂಡೀಗಢ, ವಿಶಾಖಪಟ್ಟಣ ಮತ್ತು ಗುವಾಹಟಿಯಲ್ಲಿ 7 ಜಂಟಿ ಸೈಬರ್ ಸಮನ್ವಯ ತಂಡಗಳನ್ನು ರಚಿಸಲಾಗಿದೆ ಮತ್ತು ಅವು ಉತ್ತಮ ಫಲಿತಾಂಶಗಳನ್ನು ನೀಡಿವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸೈಬರ್ ದೋಸ್ತ್ ಅಡಿಯಲ್ಲಿ ವಿವಿಧ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳಲ್ಲಿ I4C ಪರಿಣಾಮಕಾರಿ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಈ ಎಲ್ಲಾ ಪ್ರಯತ್ನಗಳಿಂದ ನಾವು ಖಂಡಿತವಾಗಿಯೂ ಒಂದು ಹಂತವನ್ನು ತಲುಪಿದ್ದೇವೆ, ಆದರೆ ನಮ್ಮ ಗುರಿಗಳು ಇನ್ನೂ ದೂರದಲ್ಲಿವೆ. ಗುರಿ ಸಾಧಿಸಲು ನಿಖರವಾದ ಕಾರ್ಯತಂತ್ರ ರೂಪಿಸಿ ಒಂದೇ ದಿಕ್ಕಿನಲ್ಲಿ ಒಟ್ಟಾಗಿ ಮುನ್ನಡೆಯಬೇಕು ಎಂದು ಶ್ರೀ ಶಾ ಹೇಳಿದರು.
ಸೈಬರ್ ವಂಚನೆ ತಗ್ಗಿಸುವಿಕೆ ಕೇಂದ್ರ (ಸಿ ಎಫ್ ಎಂ ಸಿ): ಪ್ರಮುಖ ಬ್ಯಾಂಕ್ ಗಳು, ಹಣಕಾಸು ಮಧ್ಯವರ್ತಿಗಳು, ಪಾವತಿ ಸಂಗ್ರಾಹಕರು, ಟೆಲಿಕಾಂ ಸೇವಾ ಪೂರೈಕೆದಾರರು, ಐಟಿ ಮಧ್ಯವರ್ತಿಗಳು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕಾನೂನು ಜಾರಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನವದೆಹಲಿಯ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದಲ್ಲಿ (14C) ಸಿ ಎಫ್ ಎಂ ಸಿ ಸ್ಥಾಪಿಸಲಾಗಿದೆ. ) ಆನ್ಲೈನ್ ಹಣಕಾಸು ಅಪರಾಧಗಳನ್ನು ನಿಭಾಯಿಸಲು ತಕ್ಷಣದ ಕ್ರಮ ಮತ್ತು ತಡೆರಹಿತ ಸಹಕಾರಕ್ಕಾಗಿ ಅವರು ಒಟ್ಟಾಗಿ ಕೆಲಸ ಮಾಡುತ್ತಾರೆ. ಸಿ ಎಫ್ ಎಂ ಸಿ ಕಾನೂನು ಜಾರಿಯಲ್ಲಿ “ಸಹಕಾರಿ ಒಕ್ಕೂಟ”ದ ಉದಾಹರಣೆಯಾಗಿ ಕಾರ್ಯನಿರ್ವಹಿಸುತ್ತದೆ.
ಸಮನ್ವಯ ವೇದಿಕೆ (ಜಂಟಿ ಸೈಬರ್ ಅಪರಾಧ ತನಿಖಾ ನೆರವು ವ್ಯವಸ್ಥೆ): ಈ ವೇದಿಕೆಯು ವೆಬ್ ಆಧಾರಿತ ಮಾಡ್ಯೂಲ್ ಆಗಿದ್ದು, ಸೈಬರ್ ಅಪರಾಧ, ಡೇಟಾ ಹಂಚಿಕೆ, ಕ್ರೈಮ್ ಮ್ಯಾಪಿಂಗ್, ಡೇಟಾ ಅನಾಲಿಟಿಕ್ಸ್, ದೇಶಾದ್ಯಂತದ ಕಾನೂನು ಜಾರಿ ಸಂಸ್ಥೆಗಳಿಗೆ ಸಹಕಾರ ಮತ್ತು ಸಮನ್ವಯ ವೇದಿಕೆಯ ಡೇಟಾ ರೆಪೊಸಿಟರಿಗಾಗಿ ಒಂದು ನಿಲುಗಡೆ ಪೋರ್ಟಲ್ ಆಗಿ ಕಾರ್ಯನಿರ್ವಹಿಸುತ್ತದೆ.
‘ಸೈಬರ್ ಕಮಾಂಡೋ’ ಕಾರ್ಯಕ್ರಮ: ಈ ಕಾರ್ಯಕ್ರಮದ ಅಡಿಯಲ್ಲಿ, ದೇಶದ ಸೈಬರ್ ಭದ್ರತಾ ಸನ್ನಿವೇಶದಲ್ಲಿ ಬೆದರಿಕೆಗಳನ್ನು ಎದುರಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳಲ್ಲಿ ತರಬೇತಿ ಪಡೆದ ‘ಸೈಬರ್ ಕಮಾಂಡೋ’ಗಳ ವಿಶೇಷ ವಿಭಾಗವನ್ನು ಸ್ಥಾಪಿಸಲಾಗುವುದು. ತರಬೇತಿ ಪಡೆದ ಸೈಬರ್ ಕಮಾಂಡೋಗಳು ಡಿಜಿಟಲ್ ಜಾಗವನ್ನು ಸುರಕ್ಷಿತವಾಗಿರಿಸಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಏಜೆನ್ಸಿಗಳಿಗೆ ಸಹಾಯ ಮಾಡುತ್ತಾರೆ.
ಶಂಕಿತ ದಾಖಲಾತಿ: ಈ ಉಪಕ್ರಮದ ಭಾಗವಾಗಿ, ಹಣಕಾಸು ಪರಿಸರ ವ್ಯವಸ್ಥೆಯ ವಂಚನೆ ಅಪಾಯ ನಿರ್ವಹಣೆ ಸಾಮರ್ಥ್ಯಗಳನ್ನು ಬಲಪಡಿಸಲು ಬ್ಯಾಂಕ್ ಗಳು ಮತ್ತು ಹಣಕಾಸು ಮಧ್ಯವರ್ತಿಗಳ ಸಹಯೋಗದೊಂದಿಗೆ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್ ಸಿ ಆರ್ ಪಿ) ಆಧಾರಿತ ವಿವಿಧ ಗುರುತಿಸುವಿಕೆಗಳ ಶಂಕಿತ ದಾಖಲಾತಿಯನ್ನು ರಚಿಸಲಾಗುತ್ತದೆ.