ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಭಾಷಾ ಇಲಾಖೆ 2024ರ ಜನವರಿ 19ರಂದು ಬೆಂಗಳೂರಿನ ಮಾರತ್ ಹಳ್ಳಿಯ ಸಂಜಯನಗರದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಮ್ಯಾನೇಜೆಮೆಂಟ್ ಅಕಾಡೆಮಿಯಲ್ಲಿ ದಕ್ಷಿಣ ಮತ್ತು ನೈಋತ್ಯ ವಲಯದ ಪ್ರಾದೇಶಿಕ ಅಧಿಕೃತ ಭಾಷಾ ಸಮ್ಮೇಳನವನ್ನು ಆಯೋಜಿಸಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕೃತ ಭಾಷಾ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀಮತಿ ಮೀನಾಕ್ಷಿ ಜೊಲ್ಲಿ ಅವರು ಇದು ದಕ್ಷಿಣ ಮತ್ತು ನೈಋತ್ಯ ವಲಯದ ಪ್ರಾದೇಶಿಕ ಅಧಿಕೃತ ಭಾಷಾ ಜಂಟಿ ಸಮ್ಮೇಳನವಾಗಿದೆ ಮತ್ತು ಇದರ ಅಧ್ಯಕ್ಷತೆಯನ್ನು ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಕುಮಾರ್ ಮಿಶ್ರಾ ವಹಿಸಲಿದ್ದಾರೆ ಎಂದರು.
“ವಿವಿಧ ವಿಭಾಗಗಳ ಅಡಿಯಲ್ಲಿ ಅಧಿಕೃತ ಭಾಷೆಯಲ್ಲಿ ಅತ್ಯುತ್ತಮ ಕಾರ್ಯಗಳನ್ನು ನಿರ್ವಹಿಸಿದ ಕೇಂದ್ರ ಸರ್ಕಾರಿ ಕಚೇರಿಗಳು, ಬ್ಯಾಂಕ್ಗಳು ಮತ್ತು ಉದ್ಯಮಗಳಿಗೆ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರಿಂದ ಒಟ್ಟು 32 ಪ್ರಶಸ್ತಿಗಳನ್ನು ಕೊಡಿಸಲಾಗುವುದು’’ ಎಂದು ಅವರು ಹೇಳಿದರು.
ದಕ್ಷಿಣ ಮತ್ತು ನೈಋತ್ಯ ವಲಯದಲ್ಲಿ ಅಧಿಕೃತ ಭಾಷಾ ಕ್ಷೇತ್ರದಲ್ಲಿನ ಅತ್ಯುತ್ತಮ ಕೆಲಸಕ್ಕಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ದಕ್ಷಿಣ ಪ್ರದೇಶವು ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳನ್ನು ಒಳಗೊಂಡಿದೆ ಮತ್ತು ನೈಋತ್ಯದಲ್ಲಿ ಕೇರಳ, ತಮಿಳುನಾಡು, ಪುದುಚೇರಿ ಮತ್ತು ಲಕ್ಷದ್ವೀಪಗಳು ಸೇರಿವೆ.
ಅಧಿಕೃತ ಕೆಲಸದಲ್ಲಿ ಹಿಂದಿಯ ಪ್ರಗತಿಪರ ಬಳಕೆಯನ್ನು ಉತ್ತೇಜಿಸುವ ಸಲುವಾಗಿ, ಪ್ರತಿ ಹಣಕಾಸು ವರ್ಷದಲ್ಲಿ ನಾಲ್ಕು ಪ್ರಾದೇಶಿಕ ಅಧಿಕೃತ ಭಾಷಾ ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ. ಇದು 2023-24ರ ಮೂರನೇ ಕಾರ್ಯಕ್ರಮವಾಗಿದೆ.
ಅಧಿಕೃತ ಭಾಷೆಗೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳ ಪಾಲನೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಕೇಂದ್ರ ಸರ್ಕಾರದ ಅಧಿಕೃತ ಕೆಲಸ ಕಾರ್ಯಗಳಲ್ಲಿ ಹಿಂದಿ ಬಳಕೆಯನ್ನು ಉತ್ತೇಜಿಸಲು ಗೃಹ ವ್ಯವಹಾರಗಳ ಸಚಿವಾಲಯದ ಸ್ವತಂತ್ರ ಇಲಾಖೆಯಾಗಿ ಅಧಿಕೃತ ಭಾಷಾ ಇಲಾಖೆಯನ್ನು ಜೂನ್ 1975 ರಲ್ಲಿ ಸ್ಥಾಪಿಸಲಾಗಿದೆ.