2022ರ ಮೀಸಲಾತಿ ಕಾಯ್ದೆ ಶೆಡ್ಯೂಲ್ 9ಕ್ಕೆ ಸೇರಿಸಬೇಕು: ವಿ.ಎಸ್. ಉಗ್ರಪ್ಪ ಆಗ್ರಹ
ಬೆಂಗಳೂರು, ಜ.25:
ಮೀಸಲಾತಿ ಭಿಕ್ಷೆ ಅಲ್ಲ. ಇದು ನಮ್ಮ ಸಂವಿಧಾನಾತ್ಮಕ ಹಕ್ಕು. 2022ರ ಮೀಸಲಾತಿ ಕಾಯ್ದೆಯನ್ನು ತಕ್ಷಣ ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸದಿದ್ದರೆ, ವಾಲ್ಮೀಕಿ ಸಮಾಜ ಹಾಗೂ ಇಡೀ ತಳ ಸಮುದಾಯಗಳು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ.
ಇವು ಶತಮಾನಗಳ ನೋವು, ನಿರಂತರ ಅನ್ಯಾಯ ಮತ್ತು ರಾಜಕೀಯ ಮೋಸಗಳಿಂದ ಬೇಸತ್ತ ಸಮುದಾಯದ ಕಿಡಿಕಾರುವ ಕೂಗು ಎಂದು
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಾವು ಮೌನವಾಗಿರುವವರಲ್ಲ
ನಾವು ಮೊದಲಿನಿಂದಲೂ ಹೋರಾಟ ಮಾಡಿಕೊಂಡೇ ಬದುಕಿದವರು.
ನಾಯಕರು ಕೇವಲ ಸುದ್ದಿಗೋಷ್ಠಿ ನಡೆಸಿ ಸುಮ್ಮನಾಗುತ್ತಾರೆ ಎಂದು ಭಾವಿಸಬೇಡಿ,” ಎಂದು ಗುಡುಗಿದ ಉಗ್ರಪ್ಪ ಅವರು,
ಸರ್ಕಾರಗಳ ಮೌನವನ್ನು ದುರ್ಬಲತೆ ಎಂದು ಅರ್ಥೈಸಿಕೊಳ್ಳಬೇಡಿ ಎಂದು ಎಚ್ಚರಿಸಿದರು.
2022ರಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಿಸುವ ಕಾಯ್ದೆ ಜಾರಿಗೊಂಡರೂ, ಅದನ್ನು ಶೆಡ್ಯೂಲ್ 9ಕ್ಕೆ ಸೇರಿಸದೆ ಇಡುವ ಮೂಲಕ ತಳ ಸಮುದಾಯಗಳ ಭವಿಷ್ಯವನ್ನು ಅಸ್ಥಿರಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿಯ ಭರವಸೆಗಳು – ಇಂದು ಎಲ್ಲಿವೆ?
ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕಕ್ಕೆ ಬಂದಾಗಲೆಲ್ಲಾ ಕೆಲ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಭರವಸೆ ನೀಡಿ ಜನರನ್ನು ದಿಕ್ಕು ತಪ್ಪಿಸಿದರು.
ಇದರ ಪರಿಣಾಮವಾಗಿ ಇಂದು ಸುಳ್ಳು ಜಾತಿ ಪ್ರಮಾಣ ಪತ್ರಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಇದಕ್ಕೆ ಸಂಪೂರ್ಣ ಹೊಣೆ ಬಿಜೆಪಿ ಸರ್ಕಾರ ಮತ್ತು ಅದರ ನಾಯಕರು ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದರು.
ಈ ಸುಳ್ಳು ಜಾತಿ ಪ್ರಮಾಣಪತ್ರಗಳಿಂದ ನಿಜವಾದ ಎಸ್‌ಸಿ ಮತ್ತು ಎಸ್‌ಟಿ ಮಕ್ಕಳ ಹಕ್ಕುಗಳು ಕಬಳಿಸಲ್ಪಡುತ್ತಿವೆ. ಇದು ಆಡಳಿತದ ವೈಫಲ್ಯ ಮಾತ್ರವಲ್ಲ, ಸಾಮಾಜಿಕ ನ್ಯಾಯದ ಮೇಲಿನ ನೇರ ದಾಳಿ ಎಂದು ಹೇಳಿದರು.
ಎಸ್‌ಸಿ ಮತ್ತು ಎಸ್‌ಟಿ ಹಣ ಬೇರೆ ಕೆಲಸಕ್ಕೆ ಯಾಕೆ?
ಮುಂದಿನ ಬಜೆಟ್ ಗಾತ್ರ ಸುಮಾರು ನಾಲ್ಕು ಲಕ್ಷ ಕೋಟಿ ರೂ. ಇರಬಹುದು.
ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟಿರುವ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂಬುದು ಅತ್ಯಂತ ನೋವಿನ ಸಂಗತಿ ಎಂದು ಉಗ್ರಪ್ಪ ಬೇಸರ ವ್ಯಕ್ತಪಡಿಸಿದರು.ಕಾನೂನು ಇದ್ದರೂ ಅನುಷ್ಠಾನ ಇಲ್ಲ. ಇದಕ್ಕಿಂತ ದೊಡ್ಡ ದ್ರೋಹ ತಳ ಸಮುದಾಯಗಳಿಗೆ ಮತ್ತೇನು? ಎಂದು ಪ್ರಶ್ನಿಸಿದರು.
ಆರ್ಥಿಕ ಮೀಸಲಾತಿ-ಸಂವಿಧಾನದ ಆಶಯಕ್ಕೆ ವಿರೋಧ
ಡಾ.ಬಿ.ಆರ್.ಅಂಬೇಡ್ಕರ್ ಎಲ್ಲೂ ಆರ್ಥಿಕ ಮೀಸಲಾತಿಯ ಪರವಾಗಿ ಮಾತನಾಡಿಲ್ಲ.
ಆದರೆ ಇಂದು ಮೇಲ್ವರ್ಗದವರಿಗೆ ಆರ್ಥಿಕ ಹಿಂದುಳಿತದ ಹೆಸರಿನಲ್ಲಿ ಮೀಸಲಾತಿ ನೀಡಲಾಗುತ್ತಿದೆ.ಮೇಲ್ವರ್ಗದ ಮಕ್ಕಳಿಗೆ 8.5 ಲಕ್ಷ ರೂ. ಆದಾಯ ಮಿತಿ.ಆದರೆ ತಲೆತಲಾಂತರದಿಂದ ಶೋಷಣೆ ಅನುಭವಿಸಿದ ಎಸ್‌ಸಿ ಮತ್ತು ಎಸ್‌ಟಿ ಮಕ್ಕಳಿಗೆ 2.5 ಲಕ್ಷ ರೂ. ಮಿತಿಗೊಳಿಸಿರುವುದು ಇದು ಯಾವ ನ್ಯಾಯ? ಎಂದು ಉಗ್ರಪ್ಪ ಪ್ರಶ್ನಿಸಿದರು.
ನ್ಯಾಯಾಲಯದ ತಡೆ – ಶೆಡ್ಯೂಲ್ 9 ಮಾತ್ರ ಪರಿಹಾರ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೋರಾಟದ ಫಲವಾಗಿ ಮೀಸಲಾತಿ ಹೆಚ್ಚಳ ಜಾರಿಗೊಂಡಿತ್ತು.ಆದರೆ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ತಡೆ ತಂದವು.ಈ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಶೆಡ್ಯೂಲ್ 9 ಕ್ಕೆ ಸೇರಿಸಬೇಕು. ತಮಿಳುನಾಡು ರಾಜ್ಯದಲ್ಲಿ ಮೀಸಲಾತಿ ಶೇ.69ಕ್ಕೆ ಏರಿಕೆ ಮಾಡಿ ಶೆಡ್ಯೂಲ್ 9ಕ್ಕೆ ಸೇರಿಸಲಾಗಿದೆ.ಇದು ಕರ್ನಾಟಕದಲ್ಲಿ ಯಾಕೆ ಆಗಬಾರದು? ಎಂದು ಉಗ್ರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಶೆಡ್ಯೂಲ್ 9ಕ್ಕೆ ಸೇರಿಸುವ ನಿರ್ಣಯ ಕೈಗೊಂಡಿದ್ದರೂ, ಒಂದು ತಿಂಗಳಾದರೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ವಪಕ್ಷ ನಿಯೋಗಕ್ಕೆ ಆಗ್ರಹ
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಉಗ್ರಪ್ಪ ಅವರು,ತಕ್ಷಣ ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಬಳಿ ಕರೆದೊಯ್ದು,
2022ರ ಮೀಸಲಾತಿ ಕಾಯ್ದೆಯನ್ನು ಶೆಡ್ಯೂಲ್ 9ಕ್ಕೆ ಸೇರಿಸುವಂತೆ ಶೇ.50 ಮಿತಿ ಕುರಿತ ಸುಪ್ರೀಂಕೋರ್ಟ್ ಆದೇಶವನ್ನು ತಟಸ್ಥಗೊಳಿಸಲು ಅನುಚ್ಛೇದ 15 ಮತ್ತು 16ಕ್ಕೆ ತಿದ್ದುಪಡಿ ಮಾಡುವಂತೆ
ಒತ್ತಡ ತರಬೇಕೆಂದು ಆಗ್ರಹಿಸಿದರು.
ಸುಳ್ಳು ಜಾತಿ ಪ್ರಮಾಣ ಪತ್ರ–ಕಠಿಣ ಕ್ರಮ ಬೇಕು
ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ಮೇಲೂ, ಅದನ್ನು ನೀಡಿದ ಅಧಿಕಾರಿಗಳ ಮೇಲೂ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಉಗ್ರಪ್ಪ ಅವರು ಒತ್ತಾಯಿಸಿದರು.ಇಲ್ಲದಿದ್ದರೆ, ಮೀಸಲಾತಿ ಎಂಬ ವ್ಯವಸ್ಥೆಯೇ ಅರ್ಥಹೀನವಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳಾದ ಎಂ.ನರಸಿಂಹಯ್ಯ,ವಿಜಯನಾಯಕ, ನಿವೃತ್ತ.ಪ್ರೊ.ಶ್ರೀರಾಮುಲು,ಕೆಂಪರಾಮಯ್ಯ, ಈ.ರಾಜಪ್ಪ, ಜಯಶ್ರೀ ಗುಡ್ಡಕಾಯು, ರೇವತಿ ಭೀಮಪುತ್ರಿ, ಡಿ.ಕೆ.ಸಣ್ಣ ನಾಯಕ್, ರಮೇಶ್ ಹಿರೇಜಂಬೂರು, ಜಿ.ನಾಗರಾಜು ಗಾಣದಹುಣಸೆ, ಬಸವರಾಜ್ ನಾಯಕ್, ಟಿ.ಆರ್.ತುಳಸಿರಾಮ್ ,ಟಿ.ರಾಜಣ್ಣ ಲಕ್ಷ್ಮಿಸಾಗರ, ಕೆ.ವಿ. ನಾಗೇಂದ್ರ, ರವಿಚಂದ್ರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
