“ನನ್ನ ಭಾರತ ನನ್ನ ಮತ ” ವಿಷಯದ ಕುರಿತು ಯುವಕರಲ್ಲಿ ಜಾಗೃತಿ
ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ಮೈ ಭಾರತ್, “ನನ್ನ ಭಾರತ ನನ್ನ ಮತ” ಎಂಬ ವಿಷಯದ ಅಡಿಯಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ, ಜನವರಿ 25, 2026 ರಂದು ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ‘ರಾಷ್ಟ್ರೀಯ ಮತದಾರರ ದಿನದ ಪಾದಯಾತ್ರೆ / ಸಂಡೇಸ್ ಆನ್ ಸೈಕಲ್-2026’ ಕಾರ್ಯಕ್ರಮವನ್ನು ಆಯೋಜಿಸಿತ್ತು.
ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಬೆಂಗಳೂರಿನ ಶಾಂತಿನಗರದ ಹಾಕಿ ಕ್ರೀಡಾಂಗಣದಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಸಮನ್ವಯದೊಂದಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ, ಬೃಹತ್ ಬೆಂಗಳೂರು ಪ್ರಾಧಿಕಾರ, ಶಿಕ್ಷಣ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್, ಪಿಯು ವಿದ್ಯಾರ್ಥಿಗಳು ಹಾಗೂ ಇತರ ಪಾಲುದಾರರ ಸಹಯೋಗದೊಂದಿಗೆ ಮತ್ತು ಬೆಳಿಗ್ಗೆ 8.00 ಗಂಟೆಗೆ ಸೈಕಲ್ ರ್ಯಾಲಿಯ ಮೂಲಕ ಪ್ರಾರಂಭಿಸಲಾಯಿತು. ಪ್ರಸಿದ್ಧ ಪ್ಯಾರಾಲಿಂಪಿಯನ್ (ಹೈ ಜಂಪರ್), ಏಷ್ಯನ್ ಪ್ಯಾರಾ ಗೇಮ್ಸ್ ಮತ್ತು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಚಿನ್ನದ ಪದಕ ವಿಜೇತ ಶ್ರೀ ಶೈಲೇಶ್ ಕುಮಾರ್ ಹಾಗೂ ಮಾಜಿ ಹಾಕಿ ಆಟಗಾರ ಶ್ರೀ ವಿಕ್ರಮ್ ಕಾಂತ್ ಅವರು ಭಾಗವಹಿಸಿ, ಸೈಕಲ್ ಯಾತ್ರೆಗೆ ಚಾಲನೆ ನೀಡಿದರು. 250 ಕ್ಕೂ ಹೆಚ್ಚಿನ ಸೈಕ್ಲಿಸ್ಟ್ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರತಿಜ್ಞಾ ವಿಧಿ ಸ್ವೀಕರಿಸುವುದರೊಂದಿಗೆ ಮಧ್ಯಾಹ್ನ 12.45ಕ್ಕೆ ಪುರಭವನದಿಂದ ಪಾದಯಾತ್ರೆ ಪ್ರಾರಂಭವಾಯಿತು. ಈ ಪಾದಯಾತ್ರೆಯಲ್ಲಿ 1250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಪಡಿಸಲು ಅರ್ಥಪೂರ್ಣ ಕೊಡುಗೆ ನೀಡುವಂತೆ ‘ಮೈ ಭಾರತ್’ ಎಲ್ಲಾ ಯುವ ನಾಗರಿಕರಿಗೆ ಈ ಕಾರ್ಯಕ್ರಮದ ಮೂಲಕ ಕರೆ ನೀಡಿತು. ಈ ಸಂದರ್ಭದಲ್ಲಿ ಆಯ್ದ ಕೆಲವು ಹೊಸ ಮತದಾರರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವೀಪ್ – ರಾಜ್ಯ ನೋಡಲ್ ಅಧಿಕಾರಿ ಶ್ರೀ ವಸ್ತ್ರದ್, ಮುಖ್ಯ ಚುನಾವಣಾ ಕಚೇರಿಯ ಸಲಹೆಗಾರರಾದ ಶ್ರೀ ಬಸವರಾಜ ಹಿರೇಮಠ್, ಬೃಹತ್ ಬೆಂಗಳೂರು ಪ್ರಾಧಿಕಾರದ ಸಹಾಯಕ ಆಯುಕ್ತರಾದ ಶ್ರೀ ಮಹೇಶ್ ಮತ್ತು ಶ್ರೀ ಶ್ರೀನಿವಾಸ್ ಹಾಗೂ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದ ಭಾಗವಾಗಿ ಮೈಸೂರಿನ ‘ಮೈ ಭಾರತ್’ ವತಿಯಿಂದ ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜಿನ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ “ನನ್ನ ಭಾರತ, ನನ್ನ ಮತ” ಎಂಬ ವಿಷಯದ ಅಡಿಯಲ್ಲಿ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು. ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜು ಅವರು ಈ ಪಾದಯಾತ್ರೆಗೆ ಚಾಲನೆ ನೀಡಿದರು. ಕಾರ್ಯಕ್ರಮದ ಭಾಗವಾಗಿ, ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಹೊಸ ಮತದಾರರನ್ನು ಗೌರವಿಸಲಾಯಿತು ಮತ್ತು ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
