ಶಿಕ್ಷಣವಿಲ್ಲದಿದ್ದರೆ ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯವಿಲ್ಲ

Kalabandhu Editor
2 Min Read
ಸಮಾಜದಲ್ಲಿ ಬದಲಾವಣೆ ತರಬೇಕಾದರೆ ವಿದ್ಯಾವಂತರಾಗಲೇಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದಲ್ಲಿ ಬದಲಾವಣೆ ತರಬೇಕಾದರೆ ವಿದ್ಯಾವಂತರಾಗಲೇಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು : ಶಿಕ್ಷಣವಿಲ್ಲದಿದ್ದರೆ ಮನುಷ್ಯರಾಗಿ, ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯವಿಲ್ಲ. ಸಮಾಜದಲ್ಲಿ ಬದಲಾವಣೆ ತರಬೇಕಾದರೆ ವಿದ್ಯಾವಂತರಾಗಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಸೋಮವಾರ ಮೈಸೂರು ಜಿಲ್ಲಾ ಕುಂಬಾರ ಸಂಘ ಮೈಸೂರು ಇವರ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಕುಂಬಾರರ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಕುಂಬಾರ ಸಮುದಾಯದವರು ಅತ್ಯಂತ ಹಿಂದುಳಿದ ಮತ್ತು ಕಡಿಮೆ ಜನಸಂಖ್ಯೆಯಿರುವ ಸಮುದಾಯವಾಗಿದೆ. ಕಾಯಕ ಯೋಗಿಗಳಾಗಿರುವ ಕುಂಬಾರ ಸಮಾಜದವರು ಮಣ್ಣಿನ ಕಲಾಕೃತಿಗಳನ್ನು ನಿರ್ಮಿಸುವ ಕಲೆಯ ಪರಿಣಿತಿ ವಿಶೇಷವಾಗಿದೆ. ಜ್ಞಾನದ ಬೆಳಕು ನೀಡಿದ ಕವಿ ಸರ್ವಜ್ಞರು, ಈ ಸಮುದಾಯಕ್ಕೆ ಸೇರಿರುವುದು ಹೆಮ್ಮೆಯ ವಿಷಯ. 12 ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ಮತ್ತು ದಾಸೋಹಗಳನ್ನು ಸಮಾಜಕ್ಕೆ ನೀಡಿದರು. ಚತುರ್ವರ್ಣ ವ್ಯವಸ್ಥೆ ಹಿಂದಿನಿಂದಲೂ ಬಂದಿರುವ ವ್ಯವಸ್ಥೆ. ಆರ್ಥಿಕವಾಗಿ ಹಿಂದುಳಿದ ಶೂದ್ರ ವರ್ಗದವರು ಜನಸಂಖ್ಯೆಯ ಸುಮಾರು ಶೇ.80 ರಷ್ಟಿದ್ದುಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ ಎಂದರು.

ಶಿಕ್ಷಣವಿಲ್ಲದಿದ್ದರೆ ಮನುಷ್ಯರಾಗಲು, ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯವಿಲ್ಲ

ಶಿಕ್ಷಣದ ಮಹತ್ವವನ್ನು ಮನಗಂಡು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿದರು. ಶಿಕ್ಷಣವಿಲ್ಲದಿದ್ದರೆ ನಾವು ಮನುಷ್ಯರಾಗಲು ಸಾಧ್ಯವಿಲ್ಲ ಹಾಗೂ ಸ್ವಾಭಿಮಾನಿಗಳಾಗಿ ಬದುಕಲಾಗುವುದಿಲ್ಲ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡಿದ ಮೇಲೆ ಎಲ್ಲರಿಗೂ ಸಮಾನ ಅವಕಾಶಗಳು ದೊರಕಿತು. ಸ್ವಾತಂತ್ರ್ಯ ಬಂದ ನಂತರ ನಮ್ಮಲ್ಲಿ ಅನೇಕರು ವಿದ್ಯಾವಂತರಾಗಲು ಸಾಧ್ಯವಾಯಿತು ಎಂದರು.

ವಿದ್ಯೆ ಯಾರ ಸ್ವತ್ತೂ ಅಲ್ಲ

ಎಲ್ಲರೂ ವಿದ್ಯಾವಂತರಾಗಲೇಬೇಕು ಎಂದು ಕರೆ ನೀಡಿದ ಮುಖ್ಯಮಂತ್ರಿಗಳು, ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗಬೇಕಾದರೆ ಎಲ್ಲರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಬರಬೇಕು ಎಂದರು. ವಿದ್ಯೆ ಯಾರ ಸ್ವತ್ತೂ ಅಲ್ಲ. ಪಟ್ಟಭದ್ರ ಹಿತಾಸಕ್ತರು, ವಿದ್ಯೆ ಒಂದು ವರ್ಗಕ್ಕೆ ಮಾತ್ರ ಸೀಮಿತ ಎನ್ನುವ ಭಾವನೆಯನ್ನು ಬಿತ್ತಿದ್ದರು. ಬದಲಾವಣೆ ತರಬೇಕಾದರೆ ವಿದ್ಯಾವಂತರಾಗಲೇಬೇಕು ಎಂದರು. ನಿಮ್ಮಲ್ಲೂ ವೈದ್ಯರು, ಇಂಜಿನಿಯರ್, ಪ್ರೊಫೆಸರ್ ಗಳಾಗಬೇಕು ಎಂದರು.

ಜಾತಿವ್ಯವಸ್ಥೆಯನ್ನು ತಂದು ಜನರ ದಾರಿ ತಪ್ಪಿಸಲಾಯಿತು

ಬೇಡರ ಜಾತಿಗೆ ಸೇರಿದ ವಾಲ್ಮೀಕಿ ರಾಮಾಯಣ ಬರೆದರು. ಬೆಸ್ತರ ಜಾತಿಗೆ ಸೇರಿದ ವ್ಯಾಸ ಮಹರ್ಷಿಗಳು ಮಹಾಭಾರತವನ್ನು ಬರೆದರು. ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದ ರತ್ನಪ್ಪ ಭರಮಪ್ಪ ಕುಂಬಾರರು ಸಮುದಾಯದ ಧೀಮಂತ ನಾಯಕರಾಗಿದ್ದರು. ಜಾತಿವ್ಯವಸ್ಥೆಯನ್ನು ತಂದು ಜನರ ದಾರಿ ತಪ್ಪಿಸಲಾಯಿತು. ನಾನು ವಕೀಲ ಶಿಕ್ಷಣ ಪಡೆದಿದ್ದರಿಂದಲೇ ಇಂದು ಮುಖ್ಯಮಂತ್ರಿಯಾಗಿ ನಿಮ್ಮೆದುರಿರಲು ಸಾಧ್ಯವಾಗಿದೆ. ಮಹಾನ್ ಜ್ಞಾನಿಯಾಗಿದ್ದ ಶ್ರೀ ನಾರಾಯಣ ಗುರುಗಳು, ಒಂದೇ ಧರ್ಮ, ಒಂದೇ ಜಾತಿ ಎಂದು ಪ್ರತಿಪಾದಿಸಿದರು. ಅಸ್ಪೃಶ್ಯತೆಯಿಂದ ದೇಗುಲಗಳಿಗೆ ಪ್ರವೇಶ ನಿರ್ಬಂಧಿಸುತ್ತಿದ್ದ ಕಾಲದಲ್ಲಿ, ‘ನಿಮ್ಮದೇ ದೇವಾಲಯಗಳನ್ನು ನಿರ್ಮಿಸಿಕೊಳ್ಳಿ’ ಎಂದು ಜನರಿಗೆ ಕರೆ ನೀಡಿದ್ದರು. ಸ್ವಾತಂತ್ರ್ಯ ಯಶಸ್ವಿಯಾಗಲು ಶಿಕ್ಷಣ ಅತ್ಯಗತ್ಯ ಎಂದರು.

ಕುಂಬಾರ ಸಮಾಜದ ಅಭಿವೃದ್ಧಿ ಸರ್ಕಾರ ಬದ್ಧ

ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಲು ಕ್ರಮ ಕೈಗೊಳ್ಳಲಾಗುವುದು. ಸಮುದಾಯದವರಿಗೆ ಬಿಡಿಎ ನಿವೇಶನ ಪಡೆಯಲು ಸೂಕ್ತ ಅನುದಾನ ನೀಡುವ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು. ಕುಂಬಾರ ಅಭಿವೃದ್ಧಿ ನಿಗಮಕ್ಕೆ ಸೂಕ್ತ ಅನುದಾನ ನೀಡಲಾಗುವುದು. ಕುಂಬಾರ ಸಮಾಜದ ಅಭಿವೃದ್ಧಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

Share this Article