ವೇವ್ಸ್ ಜನಸಂಪರ್ಕ ಕಾರ್ಯಕ್ರಮ: ಟ್ರೇಲರ್ ನಿರ್ಮಾಣ ಸ್ಪರ್ಧೆಯ ಕಾರ್ಯಾಗಾರ ಆಯೋಜನೆ

Kalabandhu Editor
2 Min Read

“ವೇವ್ಸ್” (ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ) ಸೀಸನ್ -1 ರ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಅಡಿಯಲ್ಲಿ ಟ್ರೇಲರ್ ನಿರ್ಮಾಣ ಸ್ಪರ್ಧೆಯನ್ನು ಉತ್ತೇಜಿಸಲು, ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರವನ್ನು ಬೆಂಗಳೂರಿನ ಸಿ ಬಿ ಎಫ್‌ ಸಿ ಪ್ರಾದೇಶಿಕ ಕಚೇರಿಯು ಎಫ್‌ ಐ ಸಿ ಸಿ ಐ ಮತ್ತು ನೆಟ್‌ಫ್ಲಿಕ್ಸ್ ಸಹಯೋಗದೊಂದಿಗೆ ಆಯೋಜಿಸಿತ್ತು.

ಯುವ ಚಲನಚಿತ್ರ ನಿರ್ಮಾತೃಗಳಿಗೆ “ಪ್ರಾಯೋಗಿಕ ಅನುಭವ” ಒದಗಿಸಲು ಮತ್ತು ಚಾಲೆಂಜ್‌ ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವವರನ್ನು ಆಕರ್ಷಿಸಲು ಮತ್ತು ಒಟ್ಟಾರೆಯಾಗಿ ವೇವ್ಸ್ ಕುರಿತು ಉತ್ಸಾಹವನ್ನು ಸೃಷ್ಟಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅನಿಮೇಷನ್, ಗೇಮಿಂಗ್, ಕಾಮಿಕ್ಸ್, ಚಲನಚಿತ್ರ ಕ್ಷೇತ್ರಗಳ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಪರಿಣಿತ ವಿಡಿಯೋ ಸಂಕಲನಕಾರರಾದ ಶ್ರೀ ಪವನ್ ಭಟ್ ಅವರು ಸಂವಾದಾತ್ಮಕ ಅಧಿವೇಶನದ ಮೂಲಕ ವಿದ್ಯಾರ್ಥಿಗಳಿಗೆ ಟ್ರೇಲರ್ ತಯಾರಿಕೆಯ ಮೂಲಭೂತ ಅಂಶಗಳನ್ನು ತಿಳಿಸಿದರು. ಟ್ರೇಲರ್ ಸಾಮಾನ್ಯ ಕಿರುಚಿತ್ರ ಅಥವಾ ದೀರ್ಘ ಚಿತ್ರಕ್ಕಿಂತ ಹೇಗೆ ಭಿನ್ನವಾಗಿದೆ ಮತ್ತು ಟ್ರೇಲರ್ ಪ್ರೇಕ್ಷಕರನ್ನು ಹೇಗೆ ಆಕರ್ಷಿಸಬೇಕು ಮತ್ತು ಸೆಳೆಯಬೇಕು ಎಂಬುದನ್ನು ಶ್ರೀ ಪವನ್ ವಿವರಿಸಿದರು.

ಟ್ರೇಲರ್ ನಿರ್ಮಾಣದಲ್ಲಿ ಬಳಸಲು ಧ್ವನಿ, ಸಂಗೀತ, ಫಾಂಟ್‌, ಗ್ರಾಫಿಕ್ಸ್‌ ಗಳನ್ನು ಪಡೆಯಬಹುದಾದ ಕೆಲವು ಓಪನ್‌ ಸೋರ್ಸಸ್‌ ಮತ್ತು ಕೆಲವು ಪಾವತಿಯ ಮೂಲಗಳು/ವೇದಿಕೆಗಳ ಬಗ್ಗೆ ಅವರು ಹಾಜರಿದ್ದವರಿಗೆ ತಿಳಿಸಿದರು.

ಟ್ರೇಲರ್ ನಿರ್ಮಾಣ ಸ್ಪರ್ಧೆಯ ನೋಡಲ್ ಅಧಿಕಾರಿ, ಸಿ ಬಿ ಎಫ್‌ ಸಿ ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಶ್ರೀ ಯಶವಂತ್ ಶೆಹನಾಯ್‌ ಅವರು, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇತರ ಉದ್ಯಮ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸುತ್ತಿರುವ ವೇವ್ಸ್ ಕುರಿತು ಮಾತನಾಡಿದರು. ಈ ರೀತಿಯ ಮೊದಲ ಜಾಗತಿಕ ಕಾರ್ಯಕ್ರಮವಾದ ವೇವ್ಸ್ ಅನ್ನು ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಸಭಿಕರನ್ನು ಹುರಿದುಂಬಿಸಿದರು.

ಟ್ರೇಲರ್ ನಿರ್ಮಾಣ ಸ್ಪರ್ಧೆಯು ಮಾರ್ಚ್ 21, 2025 ರವರೆಗೆ ಅಂತಿಮ ಸಲ್ಲಿಕೆಗೆ ತೆರೆದಿರುತ್ತದೆ. ಆಯ್ಕೆಯಾದ ಅಗ್ರ 20 ಸಲ್ಲಿಕೆಗಳನ್ನು ಏಪ್ರಿಲ್ 13, 2025 ರಂದು ಘೋಷಿಸಲಾಗುವುದು, ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ ನಲ್ಲಿ ಮೇ 1 ರಿಂದ 4, 2025 ರವರೆಗೆ ನಡೆಯುವ ವೇವ್ಸ್‌ ಶೃಂಗಸಭೆಯು ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ಮುಕ್ತಾಯಗೊಳ್ಳುತ್ತದೆ.

ಕಾರ್ಯಾಗಾರದಲ್ಲಿ ಬೆಂಗಳೂರಿನ ಎಫ್‌ ಐ ಸಿ ಸಿ ಐ ಸಹಾಯಕ ನಿರ್ದೇಶಕರಾದ ಶ್ರೀ ಸುನಿಲ್, ಜೈನ್ ಕಾಲೇಜಿನ ನಿರ್ದೇಶಕರಾದ ಡಾ. ಸಾಗರ್ ಗುಲಾಟಿ, ಜೈನ್ ಕಾಲೇಜಿನ ಸಂಯೋಜಕರಾದ ಶ್ರೀ ನೆಲ್ಸನ್, ವೇವ್ಸ್ ನ ಕರ್ನಾಟಕ ವಲಯದ ನೋಡಲ್ ಅಧಿಕಾರಿ ಶ್ರೀಮತಿ ಹೇಮಾವತಿ ಮತ್ತು ಸಿ ಬಿ ಎಫ್‌ ಸಿ ಯ ಕಾರ್ಯಾಗಾರ ಸಂಘಟಕರಾದ ಶ್ರೀಮತಿ ಎ.ಎಸ್. ನವಜ್ಯೋತಿ ಭಾಗವಹಿಸಿದ್ದರು.

Share this Article