ಕೆಕೆಆರ್‌ಡಿಯಿಂದ ಜಾಹೀರಾತು ನೀಡುವ ಬಗ್ಗೆ ಅಧ್ಯಕ್ಷರಿಂದ ಪರಿಶೀಲನೆಯ ಭರವಸೆ

Kalabandhu Editor
2 Min Read

ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕಚೇರಿಯಿಂದ ಈ ಭಾಗದ ಪತ್ರಿಕೆಗಳಿಗೆ ಜಾಹೀರಾತುಗಳು ನೀಡಬೇಕೆಂಬ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲನೆ ಮಾಡಿ ನಿರ್ಧಾರ ಮಾಡಲಾಗುವುದೆಂದು ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಶಾಸಕರಾದ ಡಾ. ಅಜಯ್‌ಸಿಂಗ್ ಅವರು ಭರವಸೆ ನೀಡಿದ್ದಾರೆ.

ಅವರು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಬೀದರ್, ಕಲಬುರಗಿ, ಯಾದಗಿರಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ನಿಯೋಗಕ್ಕೆ ಈ ಭರವಸೆ ನೀಡಿದರು.

ಕಲ್ಯಾಣ ಕರ್ನಾಟಕ ಹಿಂದುಳಿದ ಭಾಗವೆಂಬ ಕಾರಣಕ್ಕೆ ಸರ್ಕಾರ ಅಭಿವೃದ್ಧಿ ಮಂಡಳಿ ರಚಿಸಿದ್ದು ಇದಕ್ಕಾಗಿ ಪ್ರತಿ ವರ್ಷ 5000 ಕೋಟಿ ಅನುದಾನ ಬರುತಿದ್ದು 371(ಜೆ) ಅಡಿಯಲ್ಲಿ ಈ ಭಾಗದ ಪತ್ರಿಕೆಗಳು ಸಹ ಅಭಿವೃದ್ಧಿ
ಪಡಿಸಲು ಕೆಕೆಆರ್‌ಡಿಬಿ ಮುಂದಾಗಬೇಕು. ಪತ್ರಿಕೆಗಳ ಬೆಳವಣಿಗೆಗಾಗಿ ಕೆಕೆಆರ್‌ಡಿಬಿಯ ಅಭಿವೃದ್ಧಿ ಕಾಮಗಾರಿಗಳ ಪಕ್ಷಿ ನೋಟವನ್ನು ಜಾಹೀರಾತು ರೂಪದಲ್ಲಿ ನೀಡಿ ಪ್ರೋತ್ಸಾಹಿಸಬೇಕೆಂದು ಅವರಿಗೆ ಮನವರಿಕೆ ಮಾಡಿ ಕೊಟ್ಟು ಸಂಘದಿಂದ ಮನವಿ ಪತ್ರ ನೀಡಿ ಮನವಿ ಮಾಡಿದಾಗ ಅವರು ಹಲವಾರು ವಿಚಾರಗಳ ಕುರಿತು ವಿವಿಧ ಆಯಾಮಗಳ ಬಗ್ಗೆ ಪರಾಮರ್ಶಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಂಘದ ಪದಾಧಿಕಾರಿಗಳ ನಿಯೋಗಕ್ಕೆ ಆಶ್ವಾಸನೆ ನೀಡಿದರು.

ನಮ್ಮ ಬೀದರ್, ಕಲ್ಬುರ್ಗಿ, ಯಾದಗಿರಿ ಸಂಪಾದಕರ ಸಂಘದ ಮತ್ತು ಸಂಪಾದಕರ ಜೊತೆ ಧೀರ್ಘ ಕಾಲ ಮಾತನಾಡಿ ಯಾವ ರೀತಿ ಮಾಡಿದರೆ ಜಾಹೀರಾತು ನೀಡಬಹುದು ಎಂದು ಮುಂದಿನ ದಿನಗಳಲ್ಲಿ ಚರ್ಚಿಸಿ ಒಳ್ಳೆಯ ನಿರ್ಧಾರ ಕೈಗೊಳ್ಳುವೆ ಎಂಬ ಭರವಸೆಯನ್ನು ಕೆಕೆಆರ್ ಡಿಬಿ ಅಧ್ಯಕ್ಷರು ನೀಡಿದ್ದಾರೆ.

ಕಲಬುರಗಿ ವಿಭಾಗದ ನಿಯೋಗದಲ್ಲಿ ಬೀದರ್ ಸಂಪಾದಕರ ಸಂಘದಿಂದ ಸಿದ್ಧಪಡಿಸಿದ ಮನವಿ ಪತ್ರಕ್ಕೆ ಎಲ್ಲಾ ಜಿಲ್ಲೆಯ ಅಧ್ಯಕ್ಷರು ,ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದರು.

ಬೀದರ್ ಜಿಲ್ಲೆ ಸಂಪಾದಕರ ಸಂಘದ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ಕೆಕೆಆರ್ ಡಿಬಿ ಅಧ್ಯಕ್ಷರಿಗೆ ಸೋಮವಾರ ಮನವಿ ಪತ್ರ ನೀಡಿದರು. ನಮ್ಮ ಜೊತೆ ಕಲಬುರ್ಗಿ ಜಿಲ್ಲೆ ಅಧ್ಯಕ್ಷ ಸಿದ್ದರಾಮಪ್ಪ ಮಾಲಿ ಬಿರಾದರ್, ಪ್ರಧಾನ ಕಾರ್ಯದರ್ಶಿ ಆನಂದ್ ಮಣ್ಣೂರು, ಗುರುರಾಜ್ ಕುಲಕರ್ಣಿ ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯರು, ಯಾದಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿರೇಮಠ್, ಹಿರಿಯ ಪತ್ರಕರ್ತರಾದ ಅದಿಜುಲ್ ಶರಮಸ್ತ , ರಾಮಚಂದ್ರ ಬೋಸ್ಲೆ, ವಿ.ವಿ.ದೇಸಾಯಿ, ಪ್ರದೀಪ ಬಿರಾದಾರ, ಪ್ರಕಾಶ್ ಪೂಜಾರಿ, ಶರತ್ ಘಂಟೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this Article