ಸಂಪಾದಕರ ಸಮಸ್ಯೆ ಬೇಡಿಕೆ ಈಡೇರಿಸಿಕೊಳ್ಳಲು ಒಂದಾಗೋಣ: ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ

Kalabandhu Editor
3 Min Read
ಕೋಲಾರ :  ಫೆಬ್ರವರಿ 23 ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ನ ಸಭಾಂಗಣದಲ್ಲಿ ಸಂಘದ ವಿಶೇಷ ಸಾಮಾನ್ಯ  ಸಭೆಯನ್ನು ಕರೆಯಲಾಗಿದೆ, ಈ ಸಭೆಯಲ್ಲಿ ಸಂಪಾದಕರ ಸಮಸ್ಯೆಗಳ ಸಾಧಕ ಬಾದಕಗಳನ್ನು ಚರ್ಚಿಸಿ, ಸರ್ಕಾರದ ಗಮನಕ್ಕೆ ತರುವ ಮೂಲಕ  ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಮಗ್ನರಾಗೋಣ ಎಂದು ಕರ್ನಾಟಕ  ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ  ಸಂಘದ ಸಭೆಯಲ್ಲಿ ಅವರು ಮಾತನಾಡಿ
ಕರ್ನಾಟಕ  ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರು ತಾವುಗಳ ಸಂಘಕ್ಕೆ ಸದಸ್ಯರಾಗುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೈ ಜೋಡಿಸುವಂತೆ  ಮನವಿ ಮಾಡಿದರು.
ಒಂದು ವೇಳೆ ಸಂಪಾದಕರ ನಾನಾ ಬೇಡಿಕೆಗಳು ಈಡೇರದ ಪಕ್ಷದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಧರಣಿ  ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಪ್ರತ್ಯೇಕ  ಸಚಿವರಿಲ್ಲ, ಈ ಇಲಾಖೆ ಮುಖ್ಯಮಂತ್ರಿಯವರ ಬಳಿ ಇದ್ದು ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ, ಮುಖ್ಯಮಂತ್ರಿಯವರ ಬಳಿ ಚರ್ಚಿಸಲು ವಿಶೇಷ ಕರ್ತವ್ಯಾಧಿಕಾರಿಯವರಲ್ಲಿ ದಿನಾಂಕ ಮತ್ತು ಸಮಯ ಕೊಡಿಸುವಂತೆ ಕೋರಿ ಮನವಿ ಸಲ್ಲಿಸಿದ್ದೇವೆ.  ಸಮಯ ದೊರೆತ ನಂತರ ಪ್ರಾದೇಶಿಕ ಮತ್ತು ಜಿಲ್ಲಾಮಟ್ಟದ ಪತ್ರಿಕೆಗಳ ಸಂಪಾದಕರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.
 ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಉಪಾಧ್ಯಕ್ಷ ಭೀಮರಾಯ ಹದ್ದಿನಾಳ್ ಮಾತನಾಡಿ, ಸರಕಾರದ ಪತ್ರಿಕಾ ಜಾಹೀರಾತುಗಳನ್ನು ಖಾಸಗಿ ಏಜೆನ್ಸಿಗಳ ಮೂಲಕ ನೀಡುತ್ತಿದ್ದು ತಡವಾಗಿ  ಹಣಪಾವತಿ  ಮಾಡುತ್ತಿದ್ದು, ಇದರಿಂದ ಪತ್ರಿಕಾ ಸಂಪಾದಕರಿಗೆ ಸಮಸ್ಯೆಯಾಗುತ್ತಿದೆ. ಜಾಹೀರಾತಿನ ಹಣವನ್ನು  ಖಾಸಗಿ ಏಜೆನ್ಸಿಗಳು  ಇಲಾಖೆ ಹಣ ಪಾವತಿಸಿದರೂ ಸಹ ತಡವಾಗಿ ನೀಡುತ್ತಿದ್ದಾರೆ‌. ಹಾಗಾಗಿ ರಾಜ್ಯ ಸರ್ಕಾರ  ವಾರ್ತಾ ಇಲಾಖೆಯ ಮೂಲಕ ಪತ್ರಿಕೆಗಳಿಗೆ ಜಾಹೀರಾತುಗಳನ್ನು ನೀಡುವ ಕೆಲಸ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.
ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳ ಉಳಿವಿಗಾಗಿ ಕರ್ನಾಟಕ  ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದಿಂದ  ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯಕಾರಿಣಿ ಸಭೆಯನ್ನು ಮಾರ್ಚ್ ತಿಂಗಳಿನಲ್ಲಿ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಸಂಘಗಳೊಂದಿಗೆ ಸೇರಿಕೊಂಡು ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳ ಉಳಿವಿಗೆ ಒಟ್ಟಾಗೋಣ ಎಂದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪ್ರಾದೇಶಿಕ ಮತ್ತು ಜಿಲ್ಲಾಮಟ್ಟದ ಪತ್ರಿಕೆ ಸಂಪಾದಕರಿಗೆ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಒಗ್ಗಟಿನ ಹೋರಾಟದ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ ಎಂದರು.
ಮುಂದಿನ ದಿನಗಳಲ್ಲಿ ಸಂಪಾದಕರು ಒಗ್ಗಟ್ಟಿನಿಂದ ಸಭೆಗಳನ್ನು ನಡೆಸಿ ಒಮ್ಮತದಿಂದ ನಿರ್ಣಯಗಳನ್ನು ತೆಗೆದುಕೊಂಡು ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಕೊಳ್ಳಬೇಕು ಎಂದರು.
ಟೆಂಡರ್ ಜಾಹೀರಾತುಗಳನ್ನು ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯಿಂದ  ಸುದ್ದಿಯ ರೂಪದಲ್ಲಿ ಕಳುಹಿಸುತ್ತಿದ್ದು, ಪ್ರಾದೇಶಿಕ ಮತ್ತು ಜಿಲ್ಲಾ ಪತ್ರಿಕೆಯ ಸಂಪಾದಕರು ಗಮನ  ಹರಿಸಬೇಕಿದೆ, ಸಣ್ಣ ಪತ್ರಿಕೆಗಳ ಮಹತ್ವ ಅಪಾರವಾಗಿದ್ದು, ಶಕ್ತಿ ತುಂಬಬೇಕೆಂದರು..
ಸಂಯುಕ್ತ ವಿಜಯ ಪ್ರಾದೇಶಿಕ ದಿನಪತ್ರಿಕೆಯ ಸಂಪಾದಕ ವಿ.ಮುನಿರಾಜು ಮಾತನಾಡಿ, ಕಳೆದ ಏಳು ತಿಂಗಳಿನಿಂದ ಜಾಹೀರಾತು ಹಣ ಬಾಕಿ ಇದ್ದು, ಈ ಕೂಡಲೇ  ಜಾಹೀರಾತಿನ ಹಣವನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಗಡಿಭಾಗದ ಪತ್ರಿಕೆಗಳಿಗೆ ಬಾಕಿ ಇರುವ ಜಾಹೀರಾತು ಬಿಡುಗಡೆ ಮಾಡುವಂತೆ ವಾರ್ತಾ ಇಲಾಖೆ ಆಯುಕ್ತರಿಗೆ ಆಗ್ರಹಿಸಿದರು.
ರಾಜ್ಯ ಪತ್ರಿಕೆಗಳಂತೆ ಜಾಹೀರಾತು ಸೇರಿದಂತೆ ಇತರೆ ಅಂಶಗಳನ್ನು ಸಹ ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳಿಗೂ ಆದ್ಯತೆ ನೀಡಬೇಕು ಎಂದರೆಲ್ಲದೆ, ಸರ್ಕಾರ ಜಾರಿಗೆ ತರಲು ಹೊರಟಿರುವ ಪರಿಷ್ಕೃತ ಹೊಸ ಜಾಹೀರಾತು ನೀತಿಯಲ್ಲಿ ಪತ್ರಿಕೆಗಳಿಗೆ ಮಾರಕವಾಗುವ ಅಂಶಗಳನ್ನು ಸೇರಿಸಿದರೆ ರಾಜ್ಯ ಸರ್ಕಾರದ ವಿರುದ್ಧ ಸಂಘದ ವತಿಯಿಂದ ಪ್ರತಿಭಟನಾ ಹಾದಿ ತುಳಿಯಲು ಹಿಂದೆಮುಂದೆ ಮಾಡಬಾರದು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ ಇದು ಯಾವುದೇ ಸಂಘಕ್ಕೆ ಪರ್ಯಾಯವಲ್ಲ, ಈಗಾಗಲೇ ರಾಜ್ಯದಲ್ಲಿ ಅನೇಕ ಸಂಘಗಳು ಇದ್ದರು. ಸಣ್ಣ ಪತ್ರಿಕೆಗಳ ಉಳಿವಿಗಾಗಿ ಹೋರಾಟದ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ ಎಂದರು.
ಸಭೆಯಲ್ಲಿ ಸಂಪಾದಕರ‌ ಸಂಘದ ಉಪಾಧ್ಯಕ್ಷ ಮಹಮದ್ ಯೂನುಸ್, ರಾಜ್ಯ ಕಾರ್ಯದರ್ಶಿಗಳಾದ ನರಸಿಂಹರಾಜು ಹೆಚ್ ,ಬಿ.ದಿನೇಶ್ ಗೌಡಗೆರೆ ,ಎಂ.ಬಿ.ಕೊಡಗಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್, ಹೆಚ್.ಎನ್.ಮುರಳೀಧರ, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸೇರಿದಂತೆ ಸಂಪಾದಕರುಗಳು ಇದ್ದರು.
Share this Article