ನಾನು ರಾಜಕೀಯ ನಿವೃತ್ತನಾಗುತ್ತೇನೆ: ಸಿಎಂ ಸಿದ್ದರಾಮಯ್ಯ

Kalabandhu Editor
2 Min Read

ಬೆಂಗಳೂರು : ಕೇಂದ್ರದಿಂದ 15ನೇ ಹಣಕಾಸು ಆಯೋಗದಲ್ಲಿ ಅನ್ಯಾಯವಾಗಿರುವ ಅನುದಾನ ರಾಜ್ಯಕ್ಕೆ ವಾಪಸ್‌‍ ಬಂದಿದೆ ಎಂದು ಸಾಬೀತುಪಡಿಸಿದರೆ ನಾನು ರಾಜಕೀಯದಿಂದಲೂ ನಿವೃತ್ತನಾಗುತ್ತೇನೆ. ಇಲ್ಲವಾದರೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ರಾಜೀನಾಮೆ ಕೊಟ್ಟು, ರಾಜಕೀಯದಿಂದ ನಿವೃತ್ತರಾಗುತ್ತಾರೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮಾಯಿ ಎಂದಾದರೂ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಕೇಂದ್ರದಿಂದ ಆಗುತ್ತಿರುವ ತೆರಿಗೆ ಅನ್ಯಾಯಕ್ಕೆ ನ್ಯಾಯಾಲಯಗಳಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ಹಣಕಾಸು ಆಯೋಗಗಳಿಂದಲೇ ಅನ್ಯಾಯ ಸರಿಪಡಿಸಲು ಸಾಧ್ಯ. 15ನೇ ಹಣಕಾಸು ಆಯೋಗದಿಂದ ಆಗಿರುವ ತಾರತಮ್ಯ ಸರಿಪಡಿಸಲು ಬೆಂಗಳೂರಿನ ಫೆರಿಪರಲ್‌ ರಿಂಗ್‌ರಸ್ತೆ ಹಾಗೂ ಕೆರೆ ಅಭಿವೃದ್ಧಿಗೆ ಸುಮಾರು 11,497 ಕೋಟಿ ಅನ್ಯಾಯವಾಗಿದೆ. ಇದು ಬಿಡುಗಡೆಯಾಗಿಲ್ಲ. ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ಮೊತ್ತ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಹೇಳಲಿ. ನಾನು ರಾಜಕೀಯ ಬಿಡುತ್ತೇನೆ. ಜೋಷಿ ರಾಜಕೀಯ ಬಿಡುತ್ತಾರೆಯೇ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು. ಕೇಂದ್ರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಅದರ ಬಗ್ಗೆ ಬಿಜೆಪಿಯವರು ಏಕೆ ಬಾಯಿ ಬಿಡುತ್ತಿಲ್ಲ. ಕೇವಲ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ನ್ಯಾಯೋಚಿತ ಪಾಲು ಕೇಳುವುದು ರಾಜಕೀಯವಲ್ಲ. ನಮ ಹೋರಾಟ ಎಂದರು.

ಗ್ಯಾರಂಟಿ ಯೋಜನೆಗಳ ವಿರುದ್ದವಾಗಿ ಬಿಜೆಪಿ ನಿರಂತರವಾಗಿ ಅಪಪ್ರಚಾರ ಮಾಡುತ್ತಿದೆ. ಎಲ್ಲಾ ಜಾತಿ ಧರ್ಮಗಳಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಶಕ್ತಿ ತುಂಬಲಾಗುತ್ತಿದೆ. ಸಾಮಾಜಿಕ ನ್ಯಾಯ ಹಾಗೂ ದುರ್ಬಲರನ್ನು ಮುಖ್ಯ ವಾಹಿನಿಗೆ ತರಲು ಸಾಧ್ಯವಾಗುತ್ತದೆ. ಅಸಮಾನತೆ ಇರಬೇಕು ಎಂಬುದು ಬಿಜೆಪಿಯವರ ಹುನ್ನಾರ. ಸಮಾನತೆ ಇದ್ದರೆ ಬಡವರು ಉದ್ದಾರವಾದರೆ ಬಿಜೆಪಿಯವರಿಗೆ ಬಡವರನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಅವರು ಗ್ಯಾರಂಟಿ ಯೋಜನೆಯನ್ನು ಪ್ರಧಾನಿಯಾದಿಯಾಗಿ ಎಲ್ಲರೂ ವಿರೋಧಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌‍ ಸರ್ಕಾರ 165 ಭರವಸೆಗಳಲ್ಲಿ 150 ಭರವಸೆಗಳನ್ನು ಈಡೇರಿಸಿತ್ತು. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ಬಗ್ಗೆ ಲೆಕ್ಕ ಹೇಳುತ್ತದೆಯೇ ಎಂದು ಪ್ರಶ್ನಿಸಿದರು. ವಕ್ಫ್ ವಿಚಾರದಲ್ಲಿ ಸತ್ಯಾಂಶ ಇಲ್ಲದೇ ಇದ್ದರೂ ಬಿಜೆಪಿ ಪ್ರತಿಭಟನೆ ಮಾಡುತ್ತದೆ. ಯಡಿಯೂರಪ್ಪ, ಸದಾನಂದಗೌಡ, ಜಗದೀಶ್‌ ಶೆಟ್ಟರ್‌, ಎಚ್‌.ಡಿ.ಕುಮಾರಸ್ವಾಮಿ, ಬಸವರಾಜ ಬೊಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ವಕ್‌್ಫ ಆಸ್ತಿಗಳ ಒತ್ತುವರಿಗೆ ಸಂಬಂಧಪಟ್ಟಂತೆ 216 ನೋಟಿಸ್‌‍ಗಳನ್ನು ನೀಡಲಾಗಿತ್ತು. ಅವರು ಏಕೆ ನೋಟಿಸ್‌‍ ನೀಡಿದ್ದರು ಎಂದು ಪ್ರಶ್ನಿಸಿದರು.

ಬಿಜೆಪಿ ಹೋರಾಟ ಮಾಡುತ್ತದೆ ಎಂಬ ಕಾರಣಕ್ಕಾಗಿ ನಾವು ನೋಟಿಸ್‌‍ ಹಿಂಪಡೆದಿಲ್ಲ. ನಮ ಗಮನಕ್ಕೆ ಬರುತ್ತಿದ್ದಂತೆ ನಿರ್ಧಾರ ತೆಗೆದುಕೊಂಡಿದ್ದೇವೆ. ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಸುಳ್ಳು ಆರೋಪ ಮಾಡಿ ರಾಜಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತದೆ. ಜನ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ವಕ್‌್ಫ ವಿಚಾರವಾಗಿ ಇದೇ ಬೊಮಾಯಿ ನೀಡಿದ್ದ ಹೇಳಿಕೆ ಏನು…? ರಾಜಕೀಯಕ್ಕಾಗಿ ಈಗ ಮಾತನಾಡುತ್ತಿರುವುದೇನು ಎಂದು ಜನರಿಗೆ ಅರ್ಥವಾಗಿದೆ ಎಂದರು.

ವಿಚಾರಣೆಯಿಲ್ಲದೆ ಯಾವುದೇ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರೆ ಅದನ್ನು ರದ್ದು ಮಾಡುವಂತೆಯೂ ಸೂಚನೆ ನೀಡಿದ್ದೇನೆ ಎಂದರು. ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ದಿನ ಪ್ರಚಾರ ನಡೆಸುತ್ತೇನೆ. ಈ ಬಾರಿ 100ಕ್ಕೆ ನೂರರಷ್ಟು ಕಾಂಗ್ರೆಸ್‌‍ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ಮಾಜಿ ಸಂಸದ ಪ್ರತಾಪ್‌ ಸಿಂಹ ಮಹಾನ್‌ ಕೋಮುವಾದಿ. ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಜಾತಿ ಧರ್ಮದ ಹೆಸರಿನಲ್ಲಿ ಸಮಾಜ ಒಡೆದು ಮತ ಗಳಿಸಿ ರಾಜಕೀಯವಾಗಿ ಬದುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

Share this Article