ಜಿಲ್ಲಾಡಳಿತ ಭವನದಲ್ಲಿ ಸ್ವಚ್ಛ ಭಾರತ ದಿನಾಚರಣೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛ ಭಾರತ ದಿನಾಚರಣೆಗೆ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಕಸವನ್ನು ಸ್ವಚ್ಚಗೊಳಿಸಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನರಲ್ಲಿ ನೈರ್ಮಲ್ಯ ಶುಚಿತ್ವ ಕುರಿತು ಅರಿವು ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷವು ‘ಸ್ವಚ್ಛತಾ ಹೀ ಸೇವಾ ಪಾಕ್ಷಿಕ’ ವನ್ನು ಆಯೋಜಿಸಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 02 ರ ವರೆಗೆ ‘ಸ್ವಚ್ಛತಾ ಹೀ ಸೇವಾ ಪಾಕ್ಷಿಕ-2024 ಆಂದೋಲನ’ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್ ಅವರು ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಸ್ವಚ್ಛತಾ ಹೀ ಸೇವಾ ಆಂದೋಲನದಲ್ಲಿ ಸಕ್ರಿಯವಾಗಿ ಭಾಗಿಯಾದ ಜಿಲ್ಲೆಯ ನಗರಸಭೆ, ಪುರಸಭೆಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಸ್ವಚ್ಛ ಭಾರತ ಅಭಿಯಾನ ಅಥವಾ ಸ್ವಚ್ಛ ಭಾರತ್ ಮಿಷನ್ ಅನ್ನು ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತದೆ.
ಗಾಂಧೀಜಿ ಅವರು ಸದಾ ಸ್ವಚ್ಛತೆಗೆ ಒತ್ತು ನೀಡುತ್ತಿದ್ದರು. ಸ್ವಚ್ಛತೆಯಲ್ಲಿ ಮಾತ್ರ ದೇವರು ನೆಲೆಸಿದ್ದಾನೆ ಎಂದು ಹೇಳುತ್ತಿದ್ದರು. ಅವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸಲು ಸ್ವಚ್ಛ ಭಾರತ ಮಿಷನ್ ಆರಂಭಿಸಿ ಆಚರಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ದೇಶಾದ್ಯಂತ ಸಾರ್ವಜನಿಕ ಆಸ್ತಿಗಳು, ರಸ್ತೆಗಳು ಮತ್ತು ಸಮಾಜವನ್ನು ಸ್ವಚ್ಛವಾಗಿಡುವುದು ಮತ್ತು ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲ ಉದ್ದೇಶದಿಂದ ಸ್ವಚ್ಛ ಭಾರತ ಅಭಿಯಾನ ಆರಂಭಿಸಿಲಾಗಿದೆ.
ಬಯ್ಯಪ್ಪಾ ಅಧ್ಯಕ್ಷರಾದ ಶಾಂತಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕಿನ ದೇವನಹಳ್ಳಿ ಅಧ್ಯಕ್ಷರಾದ ಜಗನ್ನಾಥ್, , ಕೃಷಿ ಸಮಾಜದ ಅಧ್ಯಕ್ಷರಾದ ರವಿ, ರಾಮಚಂದ್ರಪ್ಪ, ಲೋಕೇಶ್, ಮಂಜುನಾಥ್, ಅಪರ ಜಿಲ್ಲಾಧಿಕಾರಿ ಆರ್. ಸುಮಾ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಟಿ.ಕೆ ರಮೇಶ್, ನಗರಾಭಿವೃದ್ಧಿ ಯೋಜನ ನಿರ್ದೇಶಕರಾದ ರಮೇಶ್, ದೇವನಹಳ್ಳಿ ತಾಲ್ಲೂಕು ತಹಸೀಲ್ದಾರ್ ಬಾಲಕೃಷ್ಣ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಜಿಲ್ಲಾಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.