ಗದಗ: ಮಾದ್ಯಮ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಈ ಸಾಲಿನಲ್ಲಿ ಕಳೆದ ಐದು ವರ್ಷದಲ್ಲಿ ಜನರ ಧ್ವನಿಯಾಗಿ ಚಕ್ರವರ್ತಿ ಕನ್ನಡ ದಿನಪತ್ರಿಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಪ್ರಶಂಸೆ ವ್ಯಕ್ತಪಡಿಸಿದರು.
ಅವರು ನಗರದ ಚಕ್ರವರ್ತಿ ದಿನಪತ್ರಿಕಾ ಕಾರ್ಯಾಲಯದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಪತ್ರಿಕೆಯ 5ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಡಿಮೆ ಅವಧಿಯಲ್ಲಿ ಅತ್ಯಂತ ವಿಶ್ವಾಸಾರ್ಹವಾಗಿ ಚಕ್ರವರ್ತಿ ಪತ್ರಿಕೆ ಜನರ ಮನಗೆದ್ದಿದೆ. ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡಿ ಸ್ಥಳೀಯ ದಿನಪತ್ರಿಕೆಯಾಗಿ ಗಟ್ಟಿ ನೆಲೆ ಕಂಡುಕೊಂಡಿದೆ ಎಂದರು.
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಸ್ಥಳೀಯ ದಿನಪತ್ರಿಕೆಗಳನ್ನು ನಡೆಸುವುದೇ ಕಷ್ಟವಾಗಿದೆ. ಕೊರೋನಾ ನಂತರದ ದಿನದಿಂದ ಸ್ಥಳೀಯ ಪತ್ರಿಕೆಗಳು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಿತ್ತಿವೆ. ಇಂತಹ ಸಂಕಷ್ಟದ ಮದ್ಯೆಯೂ ಚಕ್ರವರ್ತಿ ದಿನಪತ್ರಿಕೆ ಜನರ ನಂಬಿಕೆ, ವಿಶ್ವಾಸ ಕಾಯ್ದುಕೊಂಡು ಜಿಲ್ಲೆಯ ಹೆಮ್ಮೆಯ ದಿನಪತ್ರಿಕೆಯಾಗಿದೆ ಎಂದರು.
ಉದ್ಯಮಿ ಈಶ್ವರಸಾ ಮೇರವಾಡೆ ಮಾತನಾಡಿ, ಇಂದು ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಡಿಜಿಟಲ್ ಮಾದ್ಯಮದ ಅಲೆ ಜೋರಾಗಿದೆ. ಈ ಪರಿಸ್ಥಿತಿಯಲ್ಲೂ ಚಕ್ರವರ್ತಿ ದಿನಪತ್ರಿಕೆ ತನ್ನದೇಯಾದ ಓದುಗರ ಬಳಗ ಹೊಂದಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಭವಿಷ್ಯದಲ್ಲಿ ಪತ್ರಿಕೆ ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳವಣಿಗೆ ಹೊಂದಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಸಂಪಾದಕ ಎನ್.ಆರ್. ಭಾಂಡಗೆ ಹಾಗೂ ಪತ್ರಿಕಾ ಬಳಗಕ್ಕೆ ವಿವಿಧ ಗಣ್ಯರು ಹಾಗೂ ಸಂಘ-ಸಂಸ್ಥೆ ಪದಾಧಿಕಾರಿಗಳು ಅಭಿನಂದಿಸಿ, ಗೌರವಿಸಿದರು. ಈ ವೇಳೆ ಬೆಟಗೇರಿ ಪಂಚ ಟ್ರಸ್ಟ್ ಕಮಿಟಿ ಅಧ್ಯಕ್ಷ ಲೋಕನಾಥ ಕಬಾಡಿ, ಉಪಾಧ್ಯಕ್ಷ ದತ್ತು ಪವಾರ, ಕಾರ್ಯದರ್ಶಿ ಜಿ.ವಿ. ಬಸವಾ, ಪ್ರಕಾಶ ಮಿಸ್ಕೀನ್, ಸಿ.ಡಿ. ಮೇತ್ರಾಣಿ, ನಾರಾಯಣಸಾ ಮೇರವಾಡೆ, ಕಬಾಡಿ, ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಪೂಜಾರ್, ದೇವಪ್ಪ ಲಿಂಗದಾಳ, ನೂರಅಹ್ಮದ್ ಮಕಾನದಾರ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಗದಗ ಎಸ್.ಎಸ್.ಕೆ ಸಮಾಜದ ಅಧ್ಯಕ್ಷ ಫಕೀರಸಾ ಭಾಂಡಗೆ, ಸಾಗರ ಪವಾರ ಮತ್ತು ವಿತರಕರ ಸಂಘದ ಅಧ್ಯಕ್ಷ ವೀರಬಸಯ್ಯ ವಿರಕ್ತಮಠ, ಮುಖಂಡರಾದ ಎಸ್.ಎನ್. ಬಳ್ಳಾರಿ, ಬಿ.ಬಿ. ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಬರ್ಚಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.