ಸುದ್ದಿಮನೆಯಲ್ಲಿ ನಾಡಿಗೇರರ ಜೊತೆಗಿನ ಒಡನಾಟ, ವೃತ್ತಿಬದ್ಧತೆ ಅವಿಸ್ಮರಣೀಯ: ಸುದರ್ಶನ ಚೆನ್ನಂಗಿಹಳ್ಳಿ
ಬೆಂಗಳೂರು:ಹಿರಿಯ ಪತ್ರಕರ್ತರಾದ ವಸಂತ ನಾಡೀಗೇರ್ ಅವರು ತಮ್ಮ ಕಿರಿಯ ಸಹೋದ್ಯೋಗಿಗಳಿಗೆ ಅಚ್ಚುಮೆಚ್ಚಿನ ಮಾರ್ಗದರ್ಶಕರಾಗಿದ್ದರು, ವೃತ್ತಿ ಸಂಸ್ಥೆಗಳಲ್ಲಿ ಅವರು ತೋರುತ್ತಿದ್ದ ತಾಳ್ಮೆ ಮತ್ತು ಸಂಯಮವು ನಿಜಕ್ಕೂ ಅನುಕರಣೀಯ ಎಂದು ವಿಜಯ ಕರ್ನಾಟಕ ದಿನಪತ್ರಿಕೆ ಸಂಪಾದಕ ಸುದರ್ಶನ ಚೆನ್ನಂಗಿಹಳ್ಳಿ ಹೇಳಿದರು.
ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ (ಕೆ.ಯೂ.ಡಬ್ಲ್ಯೂ.ಜೆ) ಆಯೋಜಿಸಿದ್ದ ವಸಂತ ನಾಡಿಗೇರ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಸಂತ ನಾಡಿಗೇರರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ, ಎರಡು ನಿಮಿಷಗಳ ಮೌನಪಾರ್ಥನೆ ನೆರವೇರಿಸಲಾಯಿತು.
ವಸಂತ ನಾಡಿಗೇರರು ಪತ್ರಿಕೋದ್ಯಮದಲ್ಲಿ ಸೃಷ್ಟಿಸಿದ್ದ ಅತ್ಯಾಕರ್ಷಕ ಶೀರ್ಷಿಕೆಗಳು ಅವರ ಚಾಕಚಕ್ಯತೆಗೆ ಹಿಡಿದ ಕೈಗನ್ನಡಿ. ಅವರಲ್ಲಿದ್ದ ಭಾಷೆಯ ಮೇಲಿದ್ದ ಅಗಾಧ ಪ್ರಭುತ್ವದಿಂದಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಅವರಿಂದ ಬಹುಮುಖ್ಯ ಕೊಡುಗೆ ಲಭಿಸಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ‘ಕಸ್ತೂರಿ’ ಮಾಸಪತ್ರಿಕೆಯ ಸಂಪಾದಕಿ ಶಾಂತಲಾ ಧರ್ಮರಾಜ್ ಮಾತನಾಡಿ ಸರಳ ಮತ್ತು
ಸಜ್ಜನ ವ್ಯಕ್ತಿತ್ವವನ್ನು ವಸಂತ ನಾಡಿಗೇರರು ಮೈಗೂಡಿಸಿಕೊಂಡಿದ್ದರು, ಅವರು ಪತ್ರಿಕಾ ಸಂಸ್ಥೆಗಳಲ್ಲಿರುವ ಪತ್ರಕರ್ತರ ನಡುವೆ ಒಗ್ಗಟ್ಟನ್ನು ಕಾಯ್ದುಕೊಂಡಿದ್ದರಲ್ಲದೇ, ಅವರು ದುಡಿದ ಪತ್ರಿಕಾ ಸಂಸ್ಥೆಗಳಲ್ಲಿ
ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸಿದ್ದರು ಎಂದು ಗುಣಗಾನ ಮಾಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೀಷಾ ಖಾನಂ ಮಾತನಾಡಿ, ವಸಂತ ನಾಡಿಗೇರರ ಅಗಲಿಕೆಯು ಕನ್ನಡ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆ.ಯೂ.ಡಬ್ಲ್ಯೂ.ಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ,
ವಸಂತ ನಾಡಿಗೇರರು ಕನ್ನಡ ಪತ್ರಿಕೋದ್ಯಮದಲ್ಲಿ ವಿಭಿನ್ನ ವ್ಯಕ್ತಿತ್ವವನ್ನು ಮೈಗೂಡಿಸಿ ಸದಾ ವೃತ್ತಿ ಬದ್ಧತೆಯನ್ನು ಮೆರೆದವರು ಎಂದರು.
ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಹಿರಿಯ ಪತ್ರಕರ್ತ ಶ್ರೀಧರ ನಾಯಕ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಸಂಯುಕ್ತ ಕರ್ನಾಟಕ ಪತ್ರಿಕೆಯ
ಕೆ.ವಿ. ಪರಮೇಶ್, ಕವಿ-ಪವಿ ಸಂಘಟನೆಯ ಹಾಲಸ್ವಾಮಿ, ರಾಣಿಬೆನ್ನೂರಿನ ಶಿವಯೋಗಿ ಮಹಾನುಭಾವಿಮಠ್, ಮುಂತಾದವರು ವಸಂತ ನಾಡಿಗೇರರ ಕುರಿತು ಮಾತನಾಡಿ, ಅವರ ವ್ಯಕ್ತಿತ್ವ ಗುಣಗಾನ ಮಾಡಿದರು.
ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮ, ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಪದಾಧಿಕಾರಿಗಳಾದ ಎಚ್.ಕೆ.ಬಸವರಾಜ್, ಎ.ಬಿ. ಶಿವರಾಜ್, ಶಶಿಕಲಾ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಂಭುಲಿಂಗ, ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕೀಯ ವಿಭಾಗದ ರಾಜೀವ್ ಸೇರಿದಂತೆ ಹಲವಾರು ಹಿರಿಯ-ಕಿರಿಯ ಪತ್ರಕರ್ತರು ವಸಂತ ನಾಡಿಗೇರ್ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.