ಫೋಟೋ ಜರ್ನಲಿಸ್ಟ್‌ಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘದ ಅಭಿನಂದನೆ
ಬೆಂಗಳೂರು: ವಿಶ್ವಛಾಯಾಗ್ರಹಣ ದಿನದ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕೆ.ಯೂ.ಡಬ್ಲ್ಯು.ಜೆ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಫೋಟೋ ಜರ್ನಲಿಸ್ಟ್‌ಗಳನ್ನು ಅಭಿನಂದಿಸಿತು.
ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ, ಛಾಯಾಗ್ರಾಹಕರು ಪತ್ರಿಕೋದ್ಯಮದಲ್ಲಿ ಸುದ್ದಿಯ ಮೂಲ ವ್ಯಕ್ತಿಗಳಾಗಿದ್ದು, ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಸುದ್ದಿಮನೆಯಲ್ಲಿ ಛಾಯಾಗ್ರಾಹಕರ ಪಾತ್ರ ಮಹತ್ತರವಾಗಿದೆ. ಇದರಿಂದಾಗಿ ಮಾಧ್ಯಮಗಳ ಬೆಳವಣಿಗೆಯೂ ಆಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡಮಿ ಅಧ್ಯಕ್ಷರಾದ ಆಯೇಷಾ ಖಾನಂ ಅಭಿಪ್ರಾಯಪಟ್ಟರು.
ಯುವ ಪತ್ರಕರ್ತರು ಛಾಯಾಗ್ರಾಹಕರೊಂದಿಗೆ ಉತ್ತಮ ಭಾಂದವ್ಯ ಬೆಳೆಸಬೇಕಾದುದು ಇಂದಿನ ಪರಿಸ್ಥಿತಿಗೆ ಅತ್ಯಗತ್ಯ. ಮಾಧ್ಯಮದಲ್ಲಿ ಅವಿಭಾಜ್ಯ ಅಂಗದಂತಿರುವ ಛಾಯಾಗ್ರಾಹಕರ ದೃಷ್ಟಿಕೋನ ನಿಜಕ್ಕೂ ಮಹತ್ವಪೂರ್ಣ ಎಂದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಭೆ, ಸಮಾರಂಭಗಳಲ್ಲಿ ಅಷ್ಟೆ ಅಲ್ಲ, ಪ್ರಕೃತಿ ವಿಕೋಪಗಳ ಸಂಕಷ್ಟ ಮತ್ತು ಸಂಘರ್ಷ ಹಾಗೂ ಅವಘಡಗಳ ಸಂದರ್ಭದಲ್ಲಿಯೂ ಪೋಟೋ ಜರ್ನಲಿಸ್ಟ್‌ಗಳು ಅತ್ಯಮೂಲ್ಯ ಕೆಲಸ ಮಾಡಿ ತಮ್ಮ ವೃತ್ತಿ ಬದ್ದತೆಯನ್ನು ಮೆರೆದಿರುವುದು ಅಭಿನಂದಾರ್ಹವಾದದ್ದು ಎಂದರು.
ಮುದ್ರಣ ಮಾಧ್ಯಮದಲ್ಲಿ ಛಾಯಾಗ್ರಾಹರ ಪಾತ್ರ ಹಿರಿದಾಗಿದೆ, ವಿಡಿಯೋ ಜರ್ನಲಿಸ್ಟ್‌ಗಳು ದೊಡ್ಡ ಸಂಖ್ಯೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸಂಘವು ಅವರ ಸೇವೆಯನ್ನು ಗುರುತಿಸಿ ಈ ವಿಶೇಷ ದಿನದಲ್ಲಿ ಸನ್ಮಾನಿಸುವ ಮೂಲಕ ಅವರ ಬೆನ್ನು ತಟ್ಟುವ ಕೆಲಸ ಮಾಡುತ್ತಿದೆ ಎಂದರು.
ಐ.ಎ್.ಡಬ್ಲ್ಯೂ.ಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನ ಮಾತನಾಡಿ, ಛಾಯಾಗ್ರಾಹಕರು ಮುದ್ರಣ ಮಾಧ್ಯಮದ ಸುದ್ದಿಯ ಕಣಜವಾಗಿದ್ದಾರೆ. ಅವರ ಸೇವೆಯನ್ನು ಮಾಧ್ಯಮಗಳು ಮರೆಯಲು ಸಾಧ್ಯವೇ ಇಲ್ಲ ಎಂದು ಹೇಳಿ ಛಾಯಾಗ್ರಾಹರನ್ನು ಶ್ಲಾಘಿಸಿದರು.
ಹಿರಿಯ ಛಾಯಾಗ್ರಾಹಕರಾದ ಗೋಪಿನಾಥ್ ಮಾತನಾಡಿ, 185 ವರ್ಷಗಳ ಹಿಂದೆ ಪೋಟೋಗ್ರಫಿ ಪ್ರಾರಂಭವಾದ ಇತಿಹಾಸದ ಘಟನೆಗಳನ್ನು ಮೆಲುಕು ಹಾಕಿದರು. ಡಿಜಿಟಲ್ ಯುಗದಲ್ಲಿ ಮೊಬೈಲ್ ಇರುವ ಎಲ್ಲರೂ ಪೋಟೋಗ್ರಾರ್‌ಗಳೇ ಆಗಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿಶ್ವೇಶ್ವರಪ್ಪ, ಪ್ರಕಾಶ್, ದಿ ಹಿಂದೂ ಪತ್ರಿಕೆಯ ಗೋಪಿನಾಥ್, ಕನ್ನಡಪ್ರಭದ ವೀರಮಣಿ, ವಿಜಯವಾಣಿಯ ರಾಘವೇಂದ್ರ, ಇಂದು ಸಂಜೆಯ ಶರಣ ಬಸಪ್ಪ, ಚಂದ್ರು ಹಾಲಪ್ಪ ಅವರ ಸೇವೆ ಸ್ಮರಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ರಾಜ್ಯ ಕಾರ್ಯಕಾರಿ ಸದಸ್ಯ ಸೋಮಶೇಖರ ಗಾಂಧಿ ಬೆಂಗಳೂರು ನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಉಪಾಧ್ಯಕ್ಷ ಕೆ.ಎಂ.ಜಿಕ್ರಿಯಾ, ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ರಮೇಶ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಜಯರಾಂ, ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ರುದ್ದೀನ್ ಮತ್ತು ವೀರೇಶ್ ಸೇರಿದಂತೆ ಹಲವರು ಹಾಜರಿದ್ದರು.