ಪುದುಚೇರಿಗೆ ಪ್ರವಾಸಿಗರನ್ನು ಸೆಳೆಯಲು ರೋಡ್‌ಶೋಗೆ ಪುದುಚೇರಿ ಸಚಿವ ಕೆ. ಲಕ್ಷ್ಮಿನಾರಾಯಣನ್‌ ಚಾಲನೆ

Kalabandhu Editor
3 Min Read

ಅರಮನೆ ಮೈದಾನದಲ್ಲಿ ಮೂರು ದಿನಗಳ ಪ್ರವಾಸೋದ್ಯಮ ಮೇಳಕ್ಕೆ ಪುದುಚೇರಿ ಸಚಿವ ಕೆ. ಲಕ್ಷ್ಮಿನಾರಾಯಣನ್‌ ಚಾಲನೆ

ಬೆಂಗಳೂರು: ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಸಿ ಪ್ರವಾಸಿಗರ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಜನರು ಖುಷಿ ಪಡುತ್ತಿದ್ದಾರೆ. ಐತಿಹಾಸಿಕ, ಸುಂದರ ನೈಸರ್ಗಿಕ ಸ್ಥಳಗಳ ಪ್ರವಾಸ ಮಾತ್ರವಲ್ಲದೇ ಅಧ್ಯಾತ್ಮ ಪ್ರವಾಸ ಗಮನಾರ್ಹವಾಗಿ ಹೆಚ್ಚುತ್ತಿದೆ. ಇವುಗಳಿಂದ ಪ್ರವಾಸೋದ್ಯಮ ಕ್ಷೇತ್ರ ಗಮನಾರ್ಹವಾಗಿ ಪ್ರಗತಿ ಕಾಣುತ್ತಿದೆ. ಜೊತೆಗೆ ಆತಿಧ್ಯ ಮತ್ತು ಸಾರಿಗೆ ವಲಯವೂ ಇದರ ಲಾಭ ಪಡೆಯುತ್ತಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂದು ಪುದುಚೇರಿಯ ಪ್ರವಾಸೋದ್ಯಮ ಸಚಿವ ಕೆ. ಲಕ್ಷ್ಮಿನಾರಾಯಣನ್‌ ಹೇಳಿದರು.
ಅವರು ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರಂಭಗೊಂಡ ಮೂರು ದಿನಗಳ ೨೫ನೇ ವರ್ಷದ ಐಐಟಿಎಂ ಪ್ರವಾಸೋದ್ಯಮ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
“ಪುದುಚೇರಿಗೆ ಭೇಟಿ ನೀಡಲು ಪ್ರವಾಸಿಗರನ್ನು ಆಕರ್ಷಿಸಲು ಪುದುಚೇರಿ ಸರಕಾರ ದೇಶದ ಪ್ರಮುಖ ನಗರಗಳಲ್ಲಿ ರೋಡ್‌ಶೋ ನಡೆಸುತ್ತಿದೆ. ಪ್ರಸ್ತುತ ಪುದುಚೇರಿಗೆ ಪ್ರತಿವರ್ಷ ಸರಾಸರಿ ೧೯ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಎಲ್ಲ ಬಗೆಯ ಪ್ರವಾಸಿಗರೂ ಪುದುಚೇರಿಗೆ ಬರುತ್ತಿದ್ದಾರೆ. ವಿಶೇಷವಾಗಿ ಕರ್ನಾಟಕದಿಂದ ಯುವಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅಧ್ಯಾತ್ಮ, ನಿಸರ್ಗ, ಚಾರಿತ್ರಿಕ ಸ್ಥಳಗಳಲ್ಲದೇ ಶಿಕ್ಷಣ ಉದ್ದೇಶದ ಪ್ರವಾಸಿಗರು ಪುದುಚೇರಿಗೆ ಆಗಮಿಸುತ್ತಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಪುದುಚೇರಿ ಸರಕಾರ ಕ್ರಮಗಳನ್ನು ಕೈಗೊಂಡಿದ್ದು, ಅವು ಈಗ ಫಲ ನೀಡುತ್ತಿವೆ” ಎಂದು ಸಚಿವರು ಹೇಳಿದರು.
ಸ್ಪಿಯರ್ ಟ್ರಾವೆಲ್‌ ಮೀಡಿಯಾ ಮತ್ತು ಎಕ್ಸಿಬಿಷನ್ಸ್ ಆಯೋಜಿಸಿರುವ ಐಐಟಿಎಂ ಪ್ರವಾಸೋದ್ಯಮ ಮೇಳದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳು, ಖಾಸಗಿ ಪ್ರವಾಸಿ ಸಂಸ್ಥೆಗಳು ಮತ್ತು ಆತಿಥ್ಯ ಕ್ಷೇತ್ರದ ಸಂಸ್ಥೆಗಳು ಪಾಲ್ಗೊಂಡಿವೆ. ಪ್ರಯಾಣ, ಪ್ರವಾಸೋದ್ಯಮ, ಆತಿಥ್ಯ, ವಿಶ್ರಾಂತಿ ಮತ್ತು ಇತರೆ ಸಂಬಂಧಿತ ಉದ್ಯಮಗಳನ್ನು ಒಂದೇ ಸೂರಿನಡಿ ತರುವ ಉದ್ದೇಶವನ್ನು ಮೇಳ ಹೊಂದಿದ್ದು, ಕಾರ್ಪೊರೇಟ್ ಖರೀದಿದಾರರು ಮತ್ತು ಅಂತಿಮ ಗ್ರಾಹಕರೊಂದಿಗೆ ಮುಖಾಮುಖಿಯಾಗಿಸುವ ಗುರಿ ಹೊಂದಿದೆ.
ಐಐಟಿಎಂ ಈ ವರ್ಷ 25 ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. 25 ರಾಜ್ಯಗಳು ಮತ್ತು 15 ವಿವಿಧ ರಾಷ್ಟ್ರಗಳ 600ಕ್ಕೂ ಹೆಚ್ಚು ಪ್ರದರ್ಶಕರು ಮೇಳದಲ್ಲಿ ಭಾಗವಹಿಸಿದ್ದಾರೆ. ಭಾರತೀಯ ಘೇಂಡಾಮೃಗಗಳಿಂದ ಹಿಡಿದು ರಾಜಸ್ಥಾನದ ಹಬ್ಬಗಳು, ಕರ್ನಾಟಕದ ಪಾರಂಪರಿಕ ತಾಣಗಳವರೆಗೆ ವಿವಿಧ ಸಂದರ್ಭಗಳಲ್ಲಿ ರಜಾ ಸಮಯದ ಆಯ್ಕೆಗಳನ್ನು ಇದು ನೀಡಿದೆ. ಧಾರ್ಮಿಕ ಪ್ರವಾಸ, ಸಾಹಸ, ಕುಟುಂಬ ರಜಾದಿನಗಳು ಮತ್ತು ಹನಿಮೂನ್‌ ಸೇರಿದಂತೆ ವಿವಿಧ ಪ್ರಕಾರಗಳ ಪಾಲುದಾರರ ಅನ್ವೇಷಣೆಯಲ್ಲಿರುವ ಟ್ರಾವೆಲ್ ಏಜೆಂಟ್‌ಗಳಿಗೆ ಅಥವಾ ತಮ್ಮ ಕಂಪನಿಗಳ ಸಮಾವೇಶಕ್ಕೆ ವೇದಿಕೆ ಒದಗಿಸಿದೆ.
ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ದೆಹಲಿ, ತಮಿಳುನಾಡು, ಕೇರಳ ಸೇರಿದಂತೆ 25 ರಾಜ್ಯಗಳ ಪ್ರವಾಸೋದ್ಯಮ ಪಾಲುದಾದರು ಹಾಗೂ ಶ್ರೀಲಂಕಾ, ಮಲೇಷ್ಯಾ, ವಿಯೆಟ್ನಾಂ, ಇಸ್ರೇಲ್, ಥೈಲ್ಯಾಂಡ್, ಯುಕೆ, ನೇಪಾಳ, ದುಬೈ, ಟರ್ಕಿ, ಸಿಂಗಾಪುರ್, ಭೂತಾನ್, ಇಂಡೋನೇಷ್ಯಾ, ಮಾಲ್ಡೀವ್ಸ್ ಮುಂತಾದ 15ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಸ್ಪಿಯರ್ ಟ್ರಾವೆಲ್ ಮೀಡಿಯಾ ನಿರ್ದೇಶಕ ರೋಹಿತ್ ಹಂಗಲ್ ಮಾತನಾಡಿ, “ಭಾರತೀಯ ಪ್ರವಾಸೋದ್ಯಮ ವಹಿವಾಟಿನ ಬಹುಪಾಲು ದೇಶೀಯ ಪ್ರವಾಸದಿಂದ ಬರುತ್ತದೆ. ಹೀಗಾಗಿ ಪ್ರವಾಸೋದ್ಯಮವು ಕೊವಿಡ್‌ಗಿಂತ ಮೊದಲಿದ್ದ ಪ್ರಮಾಣಕ್ಕಿಂತ ಹೆಚ್ಚಲು ಸಹಾಯ ಮಾಡಿದೆ. ಪ್ರಶಾಂತವಾದ ಹಿಮಾಲಯದ ಭೂದೃಶ್ಯದಿಂದ ಹಿಡಿದು ರೋಮಾಂಚಕಾರಿ ಕರಾವಳಿ ಪ್ರದೇಶಗಳವರೆಗೆ ಸಾಂಸ್ಕೃತಿಕ ಮತ್ತು ಭೌಗೋಳಿಕ ವೈವಿಧ್ಯತೆಯನ್ನು ಆಸ್ವಾದಿಸಲು ಭಾರತೀಯರು ಬಯಸಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಕೆ.ವಿ. ರಾಜೇಂದ್ರ, ಸ್ಪಿಯರ್ ಟ್ರಾವೆಲ್ ಮೀಡಿಯಾ ನಿರ್ದೇಶಕ ಸಂಜಯ್ ಹಖು ಇನ್ನಿತರರು ಉಪಸ್ಥಿತರಿದ್ದರು.

Share this Article