ಸ್ಥಳೀಯ ಪತ್ರಿಕೆಗಳ ಉಳಿವಿಗೆ ಹೋರಾಡುವುದೇ ಸಂಘದ ಧ್ಯೇಯ : ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ

Kalabandhu Editor
2 Min Read

ರಾಜ್ಯ ಮಟ್ಟದ ಕಾರ್ಯನಿರತ ದಿನಪತ್ರಿಕೆ ಸಂಪಾದಕರ ಸಮ್ಮೇಳನದ ಪೂರ್ವಭಾವಿ ಸಭೆ

ಗದಗ: ಜಿಲ್ಲಾ ಮತ್ತು ಪ್ರಾದೇಶಿಕ ದಿನ ಪತ್ರಿಕೆಗಳ ಉಳಿವಿಗೆ ಹೋರಾಡಿವುದೇ ಸಂಘದ ಪ್ರಮುಖ ಧ್ಯೇಯವಾಗಿದೆ. ಎಲ್ಲಾ ಸಂಪಾದಕರು ಒಗ್ಗೂಡುವ ಮೂಲಕ ಸಂಘಟನೆಯನ್ನು ಬಲಗೊಳಿಸಬೇಕು ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ‌.ಸಿ.ತಿಪ್ಪೇಸ್ವಾಮಿ ಹೇಳಿದರು.
ದಿನಾಂಕ :14/07/2024 ರಂದು ಗದಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರದ ರಾಜ್ಯಮಟ್ಟದ 4ನೇ ಕಾರ್ಯಕಾರಣಿ ಸಮಿತಿ ಸಭೆ ಹಾಗೂ ಸಂಘದ ಪ್ರಥಮ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು‌.

ಸ್ಥಳೀಯ ಪತ್ರಿಕೆಗಳು ಸಾಕಷ್ಟು ಸಂಕಷ್ಟ ಸ್ಥಿತಿಯಲ್ಲಿದ್ದು ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಮೂಲಕ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಂಘವು ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿದೆ. ಸಂಪಾದಕರು ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಸಂಘಟಿತರಾದಾಗ ಮಾತ್ರ ಸಂಘವನ್ನು ಬಲಿಷ್ಟಗೊಳಿಸಬಹುದಾಗಿದೆ. ಈ ಬಾರಿ ಪ್ರಥಮ ಸಮ್ಮೇಳನವನ್ನು ಯಶಸ್ವಿಗೊಳಿಸುವ ಮೂಲಕ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಬೇಕಿದೆ. ಸಮ್ಮೆಳನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸಂಪಾದಕರು ಹಾಗೂ ಅವರ ಕುಟುಂಬದ ಸದಸ್ಯರು ಭಾಗವಹಿಸುತ್ತಿದ್ದು, ಎಲ್ಲರಿಗೂ ಎರಡು ದಿನಗಳ ಕಾಲ ಊಟ ಹಾಗೂ ವಸತಿ ವ್ಯವಸ್ಥೆ ಮಾಡುವ ಅಗತ್ಯವಿದೆ. ಗದಗ ಜಿಲ್ಲಾ ಘಟಕ ಸಮ್ಮೇಳನ‌ ನಡೆಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು, ಎಲ್ಲಾ ಜಿಲ್ಲಾ ಘಟಕಗಳ ಪದಾಧಿಕಾರಿಗಳು ತನು, ಮನ, ಧನದಿಂದ ಸಹಕಾರ ನೀಡುವ ಅಗತ್ಯವಿದೆ ಎಂದರು.

ರಾಜ್ಯ ಉಪಾಧ್ಯಕ್ಷ ಭೀಮರಾಯ ಹದ್ದಿನಾಳ ಅವರು ಮಾತನಾಡಿ, ಹಿರಿಯ ಸಂಪಾದಕರಾದ ಮಂಜುನಾಥ ಅಬ್ಬಿಗೇರಿ ಅವರ ನೇತೃತ್ವದಲ್ಲಿ ಪ್ರಥಮ ಸಮ್ಮೇಳನ ಗದಗ ನಗರದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಸಮ್ಮೇಳನದ ರೂಪುರೇ಼ಷೆಗಳ ಕುರಿತು ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೂಕ್ತ ಸಲಹೆಗಳನ್ನು ನೀಡಿರುವುದು ಸಮ್ಮೇಳನ ಯಶಸ್ವಿಗೆ ಪೂರಕವಾಗಿದೆ‌. ಇದು ಮೊದಲ ಪೂರ್ವಭಾವಿ ಸಮ್ಮೇಳನ ಆಗಿದ್ದು, ಇನ್ನೂ ಮೂರ್ನಾಲ್ಕು ಸಭೆಗಳನ್ನು ನಡೆಸುವ ಮೂಲಕ ಮತ್ತಷ್ಟು ಸಿದ್ದತೆಗಳನ್ನು ಮಾಡಿಕೊಳ್ಳಲು ಅನುಕೂಲವಾಗುವುದು. ವಸತಿ, ಊಟ, ಸ್ವಾಗತ ಸಮಿತಿ, ಆರ್ಥಿಕ ಕ್ರೋಢಿಕರಣ, ವೇದಿಕೆ ನಿರ್ವಹಣೆ, ಆಹ್ವಾನ ಪತ್ರ ಸಿದ್ದತೆ, ಸ್ಮರಣ ಸಂಚಿಕೆ ಸಂಪಾದಕ ಮಂಡಳಿ ರಚನೆ ಕುರಿತು ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದರು.

ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ ಅವರು ಮಾತನಾಡಿ, ಪ್ರಥಮ ಸಮಾವೇಶ ಮಾಡುವ ಅವಕಾಶ ಗದಗ ಜಿಲ್ಲೆಗೆ ಒದಗಿ ಬಂದಿದ್ದು ಹೆಮ್ಮೆಯ ವಿಷಯವಾಗಿದೆ. ಸಮಾವೇಶವನ್ನು ಅತ್ಯಂತ ಹಚ್ಚುಕಟ್ಟಾಗಿ ಜವಾಬ್ದಾರಿಯಿಂದ ನಾವು ನಿರ್ವಹಿಸಲು ಸಿದ್ದರಿದ್ದೇವೆ. ರಾಜ್ಯಾದ್ಯಂತ ಆಗಮಿಸುವ ಎಲ್ಲಾ ಸಂಪಾದಕರಿಗೆ ಯಾವುದೇ ಕುಂದು ಕೊರತೆ ಆಗದಂತೆ ಗದಗ ಜಿಲ್ಲೆಯ ಎಲ್ಲ ಸಂಪಾದಕರು ನೋಡಿಕೊಳ್ಳುತ್ತೇವೆ ಎಂದು ರಾಜ್ಯಾಧ್ಯಕ್ಷರಿಗೆ ಭರವಸೆ ನೀಡಿದರು.

ರಾಜ್ಯಮಟ್ಟದ ಕಾರ್ಯನಿರತ ದಿನಪತ್ರಿಕೆ ಸಂಪಾದಕರ ಸಮಾವೇಶವನ್ನು ಗದಗ ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಡಾ: ಪಂಡಿತ್ ಭೀಮಸೇನ ಜೋಶಿ ರಂಗಮಂದಿರದಲ್ಲಿ ನಡೆಸಲು ಸರ್ವ ಸಂಪಾದಕರ ಒಪ್ಪಿಗೆಯ ಮೇರೆಗೆ ತೀರ್ಮಾನಿಸಲಾಯಿತು. ಇದೇ ವೇಳೆ ಸ್ಮರಣ ಸಂಚಿಕೆ ಸಮೀತಿ ಸೇರಿದಂತೆ ಹಲವು ಸಮೀತಿಗಳನ್ನು ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ರಚನೆ ಮಾಡಲಾಯಿತು.

ವೇದಿಕೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಬಸವ ಬಾಗಲವಾಡ, ರಾಜ್ಯ ಖಜಾಂಚಿ ಖಾನ್ ಸಾಬ್ ಮೋಮಿನ್, ರಾಜ್ಯ ಕಾರ್ಯದರ್ಶಿ ಸುರೇಶ ಶಿಂಧೆ, ನಾಗರೀಕ ಪತ್ರಿಕೆ ಸಂಪಾದಕ ಅಜೀತ್ ಉಂಬಾಳೆ ಉಪಸ್ಥಿತರಿದ್ದರು.

ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯರು, ಹಾಗೂ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಗದಗ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ತುಮಕೂರು, ಮಂಡ್ಯ, ಚಿತ್ರದುರ್ಗ, ದಾವಣಗೆರೆ, ಕಲ್ಬುರ್ಗಿ. ರಾಯಚೂರು,ಯಾದಗಿರಿ, ಜಿಲ್ಲಾಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

Share this Article