ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನದಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಕುರಿತು ಮಂಡಳಿಯ ನಿರ್ದೇಶಕರಿಂದ ಸವಿಸ್ತಾರವಾದ ಮಾರ್ಗಸೂಚಿವುಳ್ಳ ಸುತ್ತೋಲೆ

Kalabandhu Editor
7 Min Read

ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನದಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಕುರಿತು ಮಂಡಳಿಯ ನಿರ್ದೇಶಕರಿಂದ
ಸವಿಸ್ತಾರವಾದ ಮಾರ್ಗಸೂಚಿವುಳ್ಳ ಸುತ್ತೋಲೆ

ಕಾಯ್ದೆ ಉಲ್ಲಂಘಿಸಿ ಕಾಮಗಾರಿ ಕೈಗೊಳ್ಳುವ ಅಧಿಕಾರಿಗಳ ಮೇಲೆ ಶಿಸ್ತಿನ‌ ಕ್ರಮ / ಕ್ರಿಮಿನಲ್ ಕೇಸ್ ದಾಖಲು

ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನದಲ್ಲಿ ಸಾಮಾನ್ಯ ಕಾಮಗಾರಿಗಳನ್ನು ಕೈಗೊಂಡಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ನಿರ್ಣಯ

ವಿಶೇಷ ವರದಿ : ಎ.ಸಿ.ತಿಪ್ಪೇಸ್ವಾಮಿ

ದಾವಣಗೆರೆ : ರಾಜ್ಯ ಸರ್ಕಾರದ ಯೋಜನಾ ಇಲಾಖೆಯ ವ್ಯಾಪ್ತಿಗೆ ಒಳಪಡುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನದಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಕುರಿತು
ಸವಿಸ್ತಾರವಾದ ಮಾರ್ಗಸೂಚಿಯುಳ್ಳ ಸುತ್ತೋಲೆಯನ್ನು ಯೋಜನೆ ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕ ಡಿ.ಚಂದ್ರಶೇಖರಯ್ಯ
ಅವರು ಜುಲೈ 17, 2024 ರಂದು ಹೊರಡಿಸಿದ್ದಾರೆ.

ಕಾಯ್ದೆ ಕುರಿತ ಒಂದಿಷ್ಟು ಮಾಹಿತಿ ಮನವರಿಕೆ

ಈ ಸುತ್ತೋಲೆಯಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯ್ದೆ ಕುರಿತು ಒಂದಿಷ್ಟು ಮಾಹಿತಿಯನ್ನು ಅನುಷ್ಟಾನಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ.

ಸರ್ಕಾರದ ಅಧಿಸೂಚನೆ ಸಂಖ್ಯೆ: ಸಕಇ 75, ಎಸ್‌ಎಲ್‌ಪಿ 2014, ದಿನಾಂಕ: 20-03-2014ರಲ್ಲಿ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಅಧಿನಿಯಮ 2013ಅನ್ನು ಜಾರಿಗೆ ತರಲಾಗಿದೆ. ಅದೇ ರೀತಿ ಅಧಿಸೂಚನೆ ದಿನಾಂಕ:08-11-2017 ರಲ್ಲಿ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ನಿಯಮಗಳು 2017ರ ಅಧಿಸೂಚನೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯ ಕಲಂ 7(ಎ) ರಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವ್ಯಕ್ತಿಗಳಿಗೆ ಅಥವಾ ಕುಟುಂಬಗಳಿಗೆ ಪ್ರಯೋಜನವಾಗುವ ಸ್ಕಿಂಗಳಿಗೆ ಶೇ.100 ರಷ್ಟು ವೆಚ್ಚವನ್ನು ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಡಿಯಲ್ಲಿ ಭರಿಸಬಹುದೆಂದು ಇರುತ್ತದೆ. ಕಲಂ 7(ಬಿ) ರಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ವಾಸಸ್ಥಳಗಳಿಗೆ ಪ್ರಯೋಜನ ಕಲ್ಪಿಸುವ ಸ್ಕಿಂಗಳಿಗಾಗಿ ಶೇ.100 ರಷ್ಟು ವೆಚ್ಚವನ್ನು ಹಂಚಿಕೆ ಮಾಡಿ ವೆಚ್ಚ ಮಾಡಲು ಅವಕಾಶವಿದೆ.
ಈ ಅಧಿಸೂಚನೆಯ ಕಲಂ (15) ಮತ್ತು (17) ರಲ್ಲಿ ಈ ಕೆಳಕಂಡಂತೆ ಸ್ಪಷ್ಟಪಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಈ ಕಾಯ್ದೆಯ ಕಲಂ(15)ರಲ್ಲಿ ಈ ಕೆಳಗಿನಂತಿದೆ:-

“ಅನುಸೂಚಿತ ಜಾತಿ ಉಪ-ಯೋಜನೆಗಳು ಹಾಗೂ ಬುಡಕಟ್ಟು ಉಪ- ಯೋಜನೆಗಳ ಅಡಿಯಲ್ಲಿ ಸೇರಿಸಬೇಕಾದ ಸ್ಕೀಮುಗಳು ಇಲಾಖೆಗಳ ಉಪ- ಯೋಜನೆಗಳ ಈ ಅಧಿನಿಯಮ ಹಾಗೂ ಇದರ ಅಡಿಯಲ್ಲಿ ರಚಿಸಲಾದ ನಿಯಮಗಳಲ್ಲಿ ಹೇಳಲಾದ ನಿಬಂಧನೆಗಳಲ್ಲಿ ಅನುಸೂಚಿತ ಜಾತಿಗಳು / ಅನುಸೂಚಿತ ಪಂಗಡಗಳ ವ್ಯಕ್ತಿಗಳಿಗೆ ಅಥವಾ ಅನುಸೂಚಿತ ಜಾತಿಗಳು / ಅನುಸೂಚಿತ ಪಂಗಡಗಳ ಕುಟುಂಬಗಳಿಗೆ ಅಥವಾ ಅನುಸೂಚಿತ ಜಾತಿಗಳು ಅನುಸೂಚಿತ ಪಂಗಡಗಳ ಜನರ ವಾಸಸ್ಥಳಗಳಿಗೆ ಅಥವಾ ಬುಡಕಟ್ಟು ಪ್ರದೇಶಗಳಿಗೆ ನೇರ ಮತ್ತು ಪ್ರಮಾಣ ನಿರ್ಧರಿಸಬಹುದಾದ ಪ್ರಯೋಜನ ಒದಗಿಸುವಂತ ಮತ್ತು ಅಭಿವೃದ್ಧಿಯಲ್ಲಿನ ಅಂತರಗಳನ್ನು ತುಂಬಲು ಸಾಧ್ಯಗೊಳಿಸುವಂತ ಸ್ಟ್ರೀಮುಗಳನ್ನು ಮಾತ್ರ ಒಳಗೊಂಡಿರತಕ್ಕದ್ದು;

ಪರಂತು, ಸ್ಕೀಮುಗಳು, ವಾರ್ಷಿಕ ಹಾಗೂ ಪಂಚವಾರ್ಷಿಕ ಯೋಜನೆಗಳಿಗೆ ಹಾಗೂ ಯೋಜನಾ ಇಲಾಖೆಯು ಸೂಚಿಸಬಹುದಾದಂಥ ಕರ್ನಾಟಕ ಸರ್ಕಾರದ ಆಧ್ಯತೆಗಳಿಗೆ ಅನುಗುಣವಾಗಿರತಕ್ಕದ್ದು.”
ಎಂದು ತಿಳಿಸಲಾಗಿದೆ.

ಈ ಕಾಯ್ದೆಯ ಕಲಂ(17)ರಲ್ಲಿ ಈ ಕೆಳಗಿನಂತಿದೆ:-

“ಅನುಸೂಚಿತ ಜಾತಿಗಳ ಉಪ-ಯೋಜನೆ / ಬುಡಕಟ್ಟು ಉಪ-ಯೋಜನೆ ಮುಗಳನ್ನು ರೂಪಿಸುವುದು ಮತ್ತು ಇಲಾಖೆಯು ಉಪ-ಯೋಜನೆಗಳನ್ನು ಸಿದ್ಧಪಡಿಸುವುದು :- 14ನೇ ಪ್ರಕರಣದ ಮೇರೆಗೆ ಸೂಚನೆಯನ್ನು ಸ್ವೀಕರಿಸಿದ ಮೇಲೆ, ಪ್ರತಿಯೊಂದು ಇಲಾಖೆಯು, ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಅಭಿವೃದ್ಧಿಯಲ್ಲಿನ ಅಂತರಗಳನ್ನು ಅಂದಾಜು ಮಾಡಿದ ನಂತರ, ನಿಯಮಿಸಬಹುದಾದಂತೆ ಸಮಾಲೋಚನಾ ಪ್ರಕ್ರಿಯೆಯ ಮುಖಾಂತರ, ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಅಭಿವೃದ್ಧಿ ಅಗತ್ಯತೆಗಳಿಗೆ ಆಧ್ಯತೆ ನೀಡತಕ್ಕದ್ದು ಮತ್ತು 14ನೇ ಪ್ರಕರಣದ ಮೇರೆಗೆ ಸೂಚಿಸಿದಂತೆ ರಾಜ್ಯ ಯೋಜನಾ ಆಧ್ಯತೆಗಳ ವ್ಯಾಪ್ತಿಯಲ್ಲಿ ಅನುಸೂಚಿತ ಜಾತಿಗಳ ಉಪ-ಯೋಜನೆ / ಬುಡಕಟ್ಟು ಉಪ-ಯೋಜನೆ ಮುಗಳನ್ನು ರೂಪಿಸತಕ್ಕದ್ದು ಹಾಗೂ ಅನುಸೂಚಿತ ಜಾತಿಗಳ ಉಪ-ಯೋಜನೆ / ಬುಡಕಟ್ಟು ಉಪ-ಯೋಜನೆ ಸ್ಕೀಮುಗಳನ್ನು ಒಳಗೊಂಡ ಉಪ-ಯೋಜನೆಗಳನ್ನು ತಯಾರಿಸತಕ್ಕದ್ದು.

ಯೋಜನಾ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಮಂಡಳಿ/ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ಯೋಜನೆಗಳಡಿ ಬಂಡವಾಳ ಲೆಕ್ಕಶೀರ್ಷಿಕೆಗಳಡಿ ಅನುದಾನ ಒದಗಿಸಲಾಗುತ್ತಿದೆ. ಆದ್ದರಿಂದ, ಕಟ್ಟಡ ನಿರ್ಮಾಣ, ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯ ಇತ್ಯಾದಿ ಆಸ್ತಿ ಸೃಜನೆ ( ಅಸೆಟ್ ಕ್ರಿಯೇಷನ್ ) ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಅವಕಾಶವಿರುತ್ತದೆ.

ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ನೀಡಿದ ಅನುದಾನವನ್ನು ವೆಚ್ಚ ಮಾಡಿ ಅನುಷ್ಠಾನ ಮಾಡುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳು

ಈ ಕಾಯ್ದೆಯ ಕಲಂ (15) ಮತ್ತು (17)ರಂತೆ ಅನುಷ್ಠಾನ ಸಂಸ್ಥೆಗಳಾದ ಮಂಡಳಿ ಮತ್ತು ಇತರೆ ಪ್ರಾಧಿಕಾರಗಳು, ಸಾಮಾನ್ಯ ವರ್ಗದವರ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನರ ನಡುವೆ ಇರುವ ಅಭಿವೃದ್ಧಿ ಅಂತರಗಳನ್ನು ಗಮನಿಸಿ ಸದರಿ ಅಂತರವನ್ನು ಕಡಿಮೆ ಮಾಡುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.ಆದರೆ, ವಿವಿಧ ಮಂಡಳಿ ಮತ್ತು ಪ್ರಾಧಿಕಾರಗಳು ಅಭಿವೃದ್ಧಿ ಅಂತರಗಳ ಬಗ್ಗೆ ಗಮನಿಸಿ ಕಾಮಗಾರಿ/ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ರಡಿ ನೀಡಿದ ಅನುದಾನವನ್ನು ವೆಚ್ಚ ಮಾಡಿ ಅನುಷ್ಠಾನ ಮಾಡುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ: 23-06-2023, 31-07-2023,22-09-2023,
11-10-2023 ಮತ್ತು 20-11-2023 ರಂದು ನಡೆದ
ನೋಡಲ್ ಏಜೆನ್ಸಿ ಸಭೆಗಳಲ್ಲಿ ಚರ್ಚಿಸಲಾಗಿರುತ್ತದೆ.

ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ರಡಿಯ ಅನುದಾನವನ್ನು ಸಾಮಾನ್ಯ
ಕಾಮಗಾರಿಗಳಿಗೆ ಬಳಕೆ ಮಾಡಲಾಗುತ್ತಿರುವ ಬಗ್ಗೆ ಬಂದ ದೂರುಗಳ ತನಿಖೆ, ತನಿಖೆಯಲ್ಲಿ ಆರೋಪಗಳ ಸಾಬೀತು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ನಿರ್ಣಯ

ಕೆಲವು ಜಿಲ್ಲೆ/ತಾಲ್ಲೂಕುಗಳಲ್ಲಿ ಮಂಡಳಿಗಳಿಗೆ ಮತ್ತು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗೆ ನೀಡಲಾಗುತ್ತಿರುವ ಅನುದಾನವನ್ನು ಸಾಮಾನ್ಯ
ಕಾಮಗಾರಿಗಳಿಗೆ ಬಳಕೆ ಮಾಡಲಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ದೂರುಗಳ ಬಗ್ಗೆ ನೋಡಲ್ ಏಜೆನ್ಸಿ ಸಭೆಗಳಲ್ಲಿ ಚರ್ಚಿಸಲಾಗಿ ನಿರ್ದೇಶಕರು, ಪ್ರದೇಶಾಭಿವೃದ್ಧಿ ಮಂಡಳಿ ಇವರಿಗೆ ತನಿಖೆ ಮಾಡಿ ವರದಿ ಸಲ್ಲಿಸಲು ತಿಳಿಸಲಾಗಿತ್ತು. ಅದರಂತೆ, ನಿರ್ದೇಶಕರು,
ಪ್ರದೇಶಾಭಿವೃದ್ಧಿ ಮಂಡಳಿ ಇವರು ಮಂಡ್ಯ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತನಿಖೆ ಮಾಡಿ
ಪರಿಶೀಲಿಸಿದ್ದು, ದುರುಪಯೋಗ
ಆಗಿರುವ ಬಗ್ಗೆ ದೃಢಪಟ್ಟಿರುತ್ತದೆ ಎಂದು ನೋಡಲ್
ಏಜೆನ್ಸಿ ಸಭೆಗೆ ವರದಿ ಸಲ್ಲಿಸಲಾಗಿರುತ್ತದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ನೋಡಲ್ ಏಜೆನ್ಸಿ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಡಿಯ ಅನುದಾನವನ್ನು
11 ಕಾಮಗಾರಿಗಳಿಗೆ ಬಳಕೆ ಮಾಡುವಂತೆ ಸೂಚನೆ

ಈ ಹಿನ್ನೆಲೆಯಲ್ಲಿ ಮಂಡಳಿ/ ಪ್ರಾಧಿಕಾರಿಗಳು ಈ ಕೆಳಗಿನಂತೆ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅನುಷ್ಟಾನಗೊಳಿಸುವಂತೆ ಸೂಚಿಸಲಾಗಿದೆ.

1. ಯೋಜನಾ ಇಲಾಖೆ/ಮಂಡಳಿ/ಪ್ರಾಧಿಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೇರವಾಗಿ ಪ್ರಯೋಜನ ಆಗುವಂತಹ ಯೋಜನೆಗಳನ್ನು ಗುರುತಿಸಿ ಅನುಷ್ಠಾನಗೊಳಿಸತಕ್ಕದ್ದು.

2. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಾದ ರಸ್ತೆ, ಸಂಪರ್ಕ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್, ಸಮುದಾಯ ಭವನ ಇತ್ಯಾದಿಗಳನ್ನು ನಿರ್ಮಿಸುವುದು.

3. ಪ.ಜಾತಿ/ ಪ.ಪಂಗಡದವರ ಜಮೀನಿಗೆ ಸಾಮೂಹಿಕ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು

4. ಶಿಕ್ಷಣಕ್ಕೆ ಅನುಕೂಲವಾಗುವಂತೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳ ಮತ್ತು ಕ್ರೈಸ್ ವಸತಿ ಶಾಲೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು.

5. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯ/ ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು.

6. ಪ್ರಸ್ತಾಪಿಸಿರುವ ಶಾಲೆ/ಕಾಲೇಜುಗಳ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು 50% ಕ್ಕಿಂತ ಹೆಚ್ಚಿಗೆ ಇದ್ದಲ್ಲಿ ಆ ಶಾಲೆ/ಕಾಲೇಜುಗಳ ಉನ್ನತೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು.

7. ಪ್ರಾಥಮಿಕ ಆರೋಗ್ಯ ಕೇಂದ್ರ/ಘಟಕಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನಸಂಖ್ಯೆ 50% ಕ್ಕಿಂತ ಹೆಚ್ಚಿಗೆ ಇದ್ದಲ್ಲಿ ಸದರಿ ಕೇಂದ್ರ/ಘಟಕಗಳ ಉನ್ನತೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು.

8. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಲ್ಲಿ ಅಲೆಮಾರಿ/ಅರೆ ಅಲೆಮಾರಿ ಮತ್ತು ಸೂಕ್ಷ್ಮ/ಅತೀ ಸೂಕ್ಷ್ಮ ಸಮುದಾಯಗಳ ವಾಸಸ್ಥಳಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು.

9. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಚಟುವಟಿಕೆಗಳಿಗೆ ಕೈಗೆತ್ತಿಕೊಳ್ಳುವುದು. ಅನುಕೂಲವಾಗುವ ಕಾರ್ಯಕ್ರಮಗಳನ್ನು

10.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅನುಕೂಲವಾಗುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬಹುದು.

11.ನಿವೇಶನ ರಹಿತ ಎಸ್.ಸಿ/ ಎಸ್.ಟಿ ಜನರಿಗೆ ನಿವೇಶನಗಳನ್ನು ಒದಗಿಸಲು ಬಡಾವಣೆ ನಿರ್ಮಾಣ ಕಾಮಗಾರಿಗಳನ್ನು ಸಹ ಕೈಗೆತ್ತಿಕೊಳ್ಳಬಹುದು.

ಕಾಯ್ದೆಯ ಕಲಂ 7(ಡಿ) (ಡೀಮ್ಸ್ ವೆಚ್ಚ) ಈಗಾಗಲೇ ರದ್ದುಪಡಿಸಿರುವುದರಿಂದ
ಕಾಮಗಾರಿ ಕೈಗೊಳ್ಳುವಂತಿಲ್ಲ

ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಅಧಿನಿಯಮ 2013 ರ ಕಲಂ 7(ಡಿ) (ಡೀಮ್ಸ್ ವೆಚ್ಚ) ಅನ್ನು ಈಗಾಗಲೇ ರದ್ದುಪಡಿಸಲಾಗಿರುವುದರಿಂದ ಈ ಕಲಂ ಅಡಿಯಲ್ಲಿ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಅನುದಾನವನ್ನು ವೆಚ್ಚ ಮಾಡಿ ಕಾಮಗಾರಿಗಳನ್ನು ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ.

ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೇರವಾಗಿ ಉಪಯೋಗವಾಗುವಂತೆ ಯೋಜನೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸತಕ್ಕದ್ದು.

ಕಾಯ್ದೆಯ ಕಲಂಗಳನ್ನು ಉಲ್ಲಂಘಿಸುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ/ ಕ್ರಿಮಿನಲ್ ಮೊಕದ್ದಮೆ ದಾಖಲು

ಎಸ್‌ಸಿಎಸ್‌ಪಿ/ ಟಿಎಸ್‌ಪಿ ಅನುದಾನ ದುರುಪಯೋಗವಾದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು/ ಉಪ ವಿಭಾಗಾಧಿಕಾರಿಗಳು, ಮಂಡಳಿ/ ಪ್ರಾಧಿಕಾರಗಳ
ಕಾರ್ಯದರ್ಶಿಗಳನ್ನು ಜವಾಬ್ದಾರನ್ನಾಗಿ ಮಾಡಿ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಅಧಿನಿಯಮ 2013 ನಿಯಮಗಳು 2017ರ ಕಂಡಿಕೆ (24) ಮತ್ತು (25)ರ ಪ್ರಕಾರ ಶಿಸ್ತು ಕ್ರಮ/ ಕ್ರಿಮಿನಲ್ ಮೊಕದ್ದಮೆ ಕೈಗೊಳ್ಳಲು ಕ್ರಮವಹಿಸಲಾಗುವುದು ಎಂದು ಈ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ.

 

ಎಸ್ ಸಿ ಎಸ್ ಪಿ / ಟಿಎಸ್ ಪಿ ಅನುದಾನದಲ್ಲಿ ಈ ವರ್ಗದ ಜನರ ಕಲ್ಯಾಣ ಕಾರ್ಯಕ್ರಮಗಳನ್ನ ಕೈಗೊಳ್ಳದೇ ಸಾಮಾನ್ಯ ವರ್ಗದ ಹಿತಾಸಕ್ತಿವುಳ್ಳ ಕಾರ್ಯಗಳನ್ನ ಮಾಡಿರುವುದು ಮಂಡ್ಯ ಮತ್ತು ರಾಯಚೂರಿನಲ್ಲಿ ವಿವಿಧ ಮಂಡಳಿಗಳಿಂದ ಕೈಗೊಂಡಿರುವ ಕಾಮಗಾರಿಗಳಿಂದ ರುಜುವಾತು ಆಗಿದೆ. ಕಾಯ್ದೆ ಉಲ್ಲಂಘಿಸಿ‌
ಕಾಮಗಾರಿಗಳನ್ನು ಕೈಗೊಂಡಿರುವ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಮತ್ತು ಅಮಾನತ್ತು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ

ಡಿ.ಚಂದ್ರಶೇಖರಯ್ಯ
ನಿರ್ದೇಶಕರು,
ಯೋಜನೆ ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಪ್ರದೇಶಾಭಿವೃದ್ಧಿ ಮಂಡಳಿ
ಬೆಂಗಳೂರು.

Share this Article