ಸಂವಿಧಾನದ ಆಶಯ, ಮೌಲ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ: ಕಾಂತರಾಜು

Kalabandhu Editor
1 Min Read

ಬೆಂಗಳೂರು ನಗರ ಜಿಲ್ಲೆ: ಸಂವಿಧಾನದ ಪೀಠಿಕೆ ಮತ್ತು ಪ್ರಸ್ತಾವನೆಯನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ “ಸಂವಿಧಾನ ಜಾಗೃತಿ ಜಾಥಾ”ವನ್ನು ಹಮ್ಮಿಕೊಳ್ಳಲಾಗಿದ್ದು, ಸಂವಿಧಾನದ ಆಶಯ,ಮೌಲ್ಯ ಮತ್ತು ತತ್ವಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಕಾಂತರಾಜು ಪಿ.ಎಸ್ ಅವರು ತಿಳಿಸಿದರು.
ಇಂದು ಬನಶಂಕರಿಯಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭಾರತ ಸಂವಿಧಾನ ಅಂಗೀಕರಿಸಿಕೊಂಡು 75 ವರ್ಷದ ಅಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಕುರಿತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ 84 ಗ್ರಾಮ ಪಂಚಾಯತಿ, 11 ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳಲ್ಲಿ ಜನವರಿ 26 ರಿಂದ ಸಂವಿಧಾನ ಜಾಗೃತಿ ಜಾಥವನ್ನು ಪ್ರಾರಂಭಿಸಲಾಗಿದ್ದು, ಈವರೆಗೆ ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕು ವ್ಯಾಪ್ತಿಗಳಲ್ಲಿ ಜಾಥಾ ಸಂಚರಿಸಿ, ಪ್ರಸ್ತುತ ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿ ಚಿಕ್ಕ ಬಾಣಾವಾರ, ಆಲೂರು ಗ್ರಾಮಗಳಲ್ಲಿ ಸಂಚರಿಸಲಿದೆ. ನಂತರ ಯಲಹಂಕ, ಬೆಂಗಳೂರು ಪೂರ್ವ ವ್ಯಾಪ್ತಿಯಲ್ಲಿ ಸಂಚರಿಸಿ, ಫೆಬ್ರವರಿ 23 ರ ಸಂಜೆ ಬೆಂಗಳೂರು ಅರಮನೆ ಮೈದಾನವನ್ನು ತಲುಪಲಿದೆ ಎಂದು ಮಾಹಿತಿ ನೀಡಿದರು.
ಸಂವಿಧಾನ ಜಾಗೃತಿ ಜಾಥಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಪ್ರತಿ ಗ್ರಾಮಗಳಿಗೆ ತಲುಪುವ ಸ್ತಬ್ಧಚಿತ್ರವನ್ನು ಸಾರ್ವಜನಿಕರು ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದ್ದಾರೆ. ಇದೊಂದು ಪ್ರಶಂಸೆಯ ವಿಚಾರವಾಗಿದೆ. ಸ್ತಬ್ಧಚಿತ್ರದ ಜತೆಗೆ ನಿಗದಿ ಪಡಿಸಿರುವ ಕ್ರೀಡಾಪಟುವು ಸಂವಿಧಾನ ವಿಚಾರ ಹಾಗೂ ಮಹತ್ವದ ಬಗ್ಗೆ ಬೋಧಿಸುತ್ತಿದ್ದಾರೆ ಎಂದರು.
ಫೆಬ್ರವರಿ 24 ಮತ್ತು 25 ರಂದು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಜಿಲ್ಲಾ ಮಟ್ಟದಿಂದ ಬಂದಿರುವಂತಹ ಸ್ಥಬ್ದಚಿತ್ರಗಳ ಪ್ರದರ್ಶನ ಹಾಗೂ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಲಕ್ಷ್ಮಣ್ ರೆಡ್ಡಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
(ಚಿತ್ರ ಇದೆ)
****

Share this Article