ರಾಜ್ಯದಲ್ಲೇ ಮೊದಲ ಸವಿತಾ ಸಮಾಜದ ಕುಲದವೈವ ಭಗವಾನ್ “ಸವಿತಾ ಮಹರ್ಷಿ” ದೇವಾಲಯಕ್ಕೆ ಶಿಲಾನ್ಯಾಸ : ಮನುಷ್ಯನ ಬಾಹ್ಯ ಸೌಂದರ್ಯ ವೃದ್ಧಿಗೆ ಸವಿತಾ ಸಮಾಜದ ಕೊಡುಗೆ ಮಹತ್ವದ್ದು – ಎಂ.ಎಸ್. ರಕ್ಷಾ ರಾಮಯ್ಯ

Kalabandhu Editor
1 Min Read

ಗೌರಿ ಬಿದನೂರು, ಫೆ, 13; ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸವಿತಾ ಸಮಾಜದ ಶಕ್ತಿ ಮತ್ತು ಕುಲದೈವವಾದ ಭಗವಾನ್ “ಸವಿತಾ ಮಹರ್ಷಿ’ಯ ದೇವಸ್ಥಾನಕ್ಕೆ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಶಿಲಾನ್ಯಾಸ ನೆರವೇರಿಸಿದರು.

ಗೌರಿಬಿದನೂರು ತಾಲ್ಲೂಕಿನ ರಾಂಪುರ ಗ್ರಾಮದ “ಸವಿತಾ ಬಂಧು ಯುವಶಕ್ತಿ ಸಂಘ”ದಿಂದ ಆಯೋಜಿಸಿದ್ದ” ಸವಿತಾ ಮಹರ್ಷಿ ಜಯಂತಿ”ಯಲ್ಲಿ ಪಾಲ್ಗೊಂಡು, ರಾಜ್ಯದ ಇತಿಹಾಸದಲ್ಲೇ ಮೊದಲ ಸವಿತಾ ಮಹರ್ಷಿಯ ದೇವಸ್ಥಾನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅವರು “ಸವಿತಾ ಮಹರ್ಷಿ ಚರಿತ್ರೆ” ಪುಸ್ತಕವನ್ನು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಎಂ.ಎಸ್. ರಕ್ಷಾ ರಾಮಯ್ಯ, ನಮ್ಮ ಶ್ರೇಣೀಕೃತ ಸಮಾಜದಲ್ಲಿ ಸವಿತಾ ಸಮಾಜದ ಪಾತ್ರ ಅನನ್ಯವಾದದ್ದು. ಮಾನವನ ಆಧುನಿಕ ನಾಗರಿಕತೆಗೆ ಸವಿತಾ ಸಮಾಜ ಬಹುದೊಡ್ಡ ಕೊಡುಗೆ ನೀಡಿದೆ. ಮನುಷ್ಯನ ಕೇಶಾಲಂಕಾರ, ಅಂದ – ಚಂದ. ಬಾಹ್ಯ ಸೌಂದರ್ಯ ಹೆಚ್ಚಿಸಲು ಸವಿತಾ ಸಮಾಜ ನಿರಂತರ ಕೊಡುಗೆ ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸವಿತಾ ಸಮಾಜ ಸೇರಿದಂತೆ ಎಲ್ಲಾ ವರ್ಗದ ಜನರಿಗೂ ತಾರತಮ್ಯವಿಲ್ಲದೆ ಸೇವೆ ನೀಡುತ್ತಿದೆ ಎಂದರು.

“ಸವಿತಾ ಮಹರ್ಷಿ’ ಸವಿತಾ ಸಮಾಜದ ಆರಾಧ್ಯ ದೈವವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ. ಸವಿತಾ ಸಮಾಜ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಮತ್ತಷ್ಟು ಸದೃಢವಾಗಬೇಕು ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರು, ಗ್ರಾಮದ ಹಿರಿಯ ಮತ್ತು ಯುವ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Share this Article