ಪ್ರಗತಿ (PRAGATI) ಮತ್ತು ಭಾರತದ ಮೂಲಸೌಕರ್ಯ ಆಡಳಿತದ ಪುನರ್ ವಿನ್ಯಾಸ

Kalabandhu Editor
7 Min Read

ಗಿರಿಧರ್ ಅರಮನೆ

ಭಾರತದ ಮೂಲಸೌಕರ್ಯ ಅಭಿವೃದ್ಧಿಯ ಇತ್ತೀಚಿನ ಪ್ರಗತಿಯನ್ನು ಹೆಚ್ಚಾಗಿ ಅಂಕಿಅಂಶಗಳ ಮೂಲಕ ವಿವರಿಸಲಾಗುತ್ತದೆ—ನಿರ್ಮಿಸಲಾದ ಹೆದ್ದಾರಿಗಳ ಕಿಲೋಮೀಟರ್‌ಗಳು, ಕಾರ್ಯಾಚರಣೆಗೊಂಡ ವಿಮಾನ ನಿಲ್ದಾಣಗಳು ಅಥವಾ ವಿಸ್ತರಿಸಲಾದ ಬಂಡವಾಳ ವೆಚ್ಚ. ಈ ಸೂಚಕಗಳು ಮುಖ್ಯ ಮತ್ತು ಪ್ರಭಾವಶಾಲಿಯಾಗಿದ್ದರೂ, ಇವು ಪ್ರಸ್ತುತ ನಡೆಯುತ್ತಿರುವ ರೂಪಾಂತರವನ್ನು ಭಾಗಶಃ ಮಾತ್ರ ವಿವರಿಸುತ್ತವೆ. ಅಷ್ಟೇ ಮಹತ್ವದ ಸಂಗತಿಯೆಂದರೆ, ಬೃಹತ್ ಸಾರ್ವಜನಿಕ ಯೋಜನೆಗಳನ್ನು ನಿರ್ವಹಿಸುವ, ಸಮನ್ವಯಗೊಳಿಸುವ ಮತ್ತು ಅನುಷ್ಠಾನಗೊಳಿಸುವ ವಿಧಾನದಲ್ಲಿ ಉಂಟಾಗಿರುವ ಬದಲಾವಣೆ. ಕಳೆದ ದಶಕದಲ್ಲಿ, ಈ ಬದಲಾವಣೆಯು ವಿವಿಧ ವಲಯಗಳ ಫಲಿತಾಂಶಗಳನ್ನು ಮಾರ್ಪಡಿಸಿದೆ, ಅದರಲ್ಲೂ ವಿಶೇಷವಾಗಿ ಆಡಳಿತಾತ್ಮಕ ವಿಘಟನೆ ಮತ್ತು ವಿಳಂಬಿತ ನಿರ್ಧಾರದಿಂದ ದೀರ್ಘಕಾಲದವರೆಗೆ ಅಡೆತಡೆಗಳನ್ನು ಎದುರಿಸುತ್ತಿದ್ದ ಯೋಜನೆಗಳಿಗೆ ಇದು ಹೊಸ ಚೈತನ್ಯ ನೀಡಿದೆ.
2014ರಲ್ಲಿ ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದಾಗ, ಮೂಲಸೌಕರ್ಯ ವಲಯವು ಸಂಕಷ್ಟದಲ್ಲಿತ್ತು. ಸುಮಾರು ₹8.8 ಲಕ್ಷ ಕೋಟಿ ಮೌಲ್ಯದ ಯೋಜನೆಗಳು—ಅಂದರೆ ಜಿಡಿಪಿಯ (GDP) ಸುಮಾರು ಎಂಟು ಪ್ರತಿಶತದಷ್ಟು—ಸ್ಥಗಿತಗೊಂಡಿದ್ದವು. ಮೂಲಸೌಕರ್ಯಕ್ಕೆ ಸಂಬಂಧಿಸಿದ ವಸೂಲಾಗದ ಸಾಲಗಳು 11% ಗಡಿ ದಾಟಿದ್ದವು. ಇದರೊಂದಿಗೆ ಭೂಸ್ವಾಧೀನ, ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿಗಳು ಹಾಗೂ ವಿವಿಧ ಏಜೆನ್ಸಿಗಳ ನಡುವಿನ ಸಮನ್ವಯದ ವಿಳಂಬವು ಒಂದು ವ್ಯವಸ್ಥಿತ ಸಮಸ್ಯೆಯಾಗಿ ಮಾರ್ಪಟ್ಟಿತ್ತು. ಆದ್ದರಿಂದ, ನೀತಿ ನಿರೂಪಣೆಯ ಸವಾಲು ಕೇವಲ ಹೂಡಿಕೆ ಹೆಚ್ಚಿಸುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ; ಬದಲಿಗೆ ಯೋಜನಾ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿದ್ದ ಸಾಂಸ್ಥಿಕ ದೌರ್ಬಲ್ಯಗಳನ್ನು ಸರಿಪಡಿಸುವ ಅಗತ್ಯವೂ ಇತ್ತು.
ಇದೇ ಹಿನ್ನೆಲೆಯಲ್ಲಿ ಮಾರ್ಚ್ 2015 ರಲ್ಲಿ PRAGATI (Pro-Active Governance and Timely Implementation) ಯೋಜನೆಯನ್ನು ಪರಿಚಯಿಸಲಾಯಿತು. ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಒಂದು ವ್ಯವಸ್ಥಿತ ಮತ್ತು ಸಂಪೂರ್ಣ ಸರ್ಕಾರಿ ಪರಿಶೀಲನಾ ಕಾರ್ಯವಿಧಾನವಾಗಿ ಇದನ್ನು ರೂಪಿಸಲಾಯಿತು. ನಿಯಮಿತ ಮೇಲ್ವಿಚಾರಣೆ ಮತ್ತು ಸಮನ್ವಯದ ಪರಿಹಾರದ ಮೂಲಕ ನಿರಂತರವಾಗಿ ಎದುರಾಗುತ್ತಿದ್ದ ಅಡೆತಡೆಗಳನ್ನು ನಿವಾರಿಸುವುದು ಇದರ ಉದ್ದೇಶವಾಗಿತ್ತು. ಇದರ ಗುರಿ ಅತ್ಯಂತ ಸರಳವಾಗಿತ್ತು: ತಪ್ಪಿಸಬಹುದಾದ ಆಡಳಿತಾತ್ಮಕ ವಿಳಂಬಗಳಿಂದಾಗಿ ದೊಡ್ಡ ಸಾರ್ವಜನಿಕ ಯೋಜನೆಗಳು ಸ್ಥಗಿತಗೊಳ್ಳದಂತೆ ನೋಡಿಕೊಳ್ಳುವುದು.
ಈ ಪರಿಶೀಲನಾ ಸಭೆಗಳ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿಯವರೇ ವಹಿಸಿಕೊಳ್ಳುತ್ತಿದ್ದುದು ಈ ಪ್ರಕ್ರಿಯೆಗೆ ಒಂದು ಅಧಿಕೃತತೆ ಮತ್ತು ತುರ್ತುಸ್ಥಿತಿಯನ್ನು ನೀಡಿತು. ಇದಕ್ಕಿಂತ ಮುಖ್ಯವಾಗಿ, ಯೋಜನೆಗಳ ಅನುಷ್ಠಾನ ಮತ್ತು ಕಾಲಮಿತಿಗಳು ಅತ್ಯಂತ ಮಹತ್ವದವು ಎಂಬ ಸಂದೇಶ ನೀಡಿತು; ಅಲ್ಲದೆ, ಪರಿಹರಿಸಲಾಗದ ಸಮನ್ವಯದ ಸಮಸ್ಯೆಗಳು ಅನಿರ್ದಿಷ್ಟಾವಧಿಯವರೆಗೆ ನೆನೆಗುದಿಗೆ ಬೀಳಲು ಅವಕಾಶ ನೀಡುವುದಿಲ್ಲ ಎಂಬುದನ್ನು ಇದು ಸ್ಪಷ್ಟಪಡಿಸಿತು. ಅದೇ ಸಮಯದಲ್ಲಿ, ‘ಪ್ರಗತಿ’ ವೇದಿಕೆಯನ್ನು ಅಸ್ತಿತ್ವದಲ್ಲಿರುವ ಸಾಂಸ್ಥಿಕ ಮಾರ್ಗಗಳ ಮೂಲಕವೇ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿತ್ತು. ಇದು ವಿವಿಧ ಸಚಿವಾಲಯಗಳು, ರಾಜ್ಯಗಳು ಮತ್ತು ಜಿಲ್ಲಾಡಳಿತಗಳನ್ನು ಕಡೆಗಣಿಸುವ ಬದಲಾಗಿ, ಅವುಗಳ ಹೊಣೆಗಾರಿಕೆಯನ್ನು ಇನ್ನಷ್ಟು ಬಲಪಡಿಸಿತು.
ಇತರ ಆಡಳಿತಾತ್ಮಕ ವ್ಯವಸ್ಥೆಗಳಿಗಿಂತ ‘ಪ್ರಗತಿ’ಯನ್ನು ಭಿನ್ನವಾಗಿಸಿದ ಪ್ರಮುಖ ವೈಶಿಷ್ಟ್ಯವೆಂದರೆ, ಪ್ರಧಾನಮಂತ್ರಿಯವರ ಗಮನ, ವಿವಿಧ ಕ್ಷೇತ್ರಗಳ ಸೂಕ್ಷ್ಮ ವಿವರಗಳ ಮೇಲಿನ ಅವರ ಹಿಡಿತ ಮತ್ತು ಈ ಪರಿಶೀಲನಾ ಸಭೆಗಳ ಕ್ರಮಬದ್ಧತೆ. ಪ್ರತಿ ತಿಂಗಳು ಪ್ರಧಾನಮಂತ್ರಿಯವರ ನೇರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಮೂರು ಗಂಟೆಗಳ ಸುದೀರ್ಘ ಸಭೆಗಳು ಇಡೀ ಆಡಳಿತ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿದವು. ಅತ್ಯುನ್ನತ ಅಧಿಕಾರಿಯೇ ಸ್ವತಃ ಪೂರ್ಣ ಸಿದ್ಧತೆಗಳೊಂದಿಗೆ ಕೆಲಸ ಮಾಡದ ನಿಷ್ಕ್ರಿಯತೆ ಮತ್ತು ಒಬ್ಬರ ಮೇಲೆ ಒಬ್ಬರು ತಪ್ಪು ಹೊರಿಸುವ ಪ್ರವೃತ್ತಿಯನ್ನು ನೇರವಾಗಿ ಪ್ರಶ್ನಿಸಿದಾಗ, ಆಡಳಿತಾತ್ಮಕ ಜಡತ್ವ ಮತ್ತು ಕೆಂಪುಪಟ್ಟಿ ಪದ್ಧತಿಗೆ (ವಿಳಂಬ ನೀತಿ) ಅಡಗಿಕೊಳ್ಳಲು ಜಾಗವೇ ಇಲ್ಲದಂತಾಯಿತು. ಈ ಸಭೆಗಳು ಕಟ್ಟುನಿಟ್ಟಾದ ಎಚ್ಚರಿಕೆ, ಲೋಪದೋಷಗಳನ್ನು ನೇರವಾಗಿ ತೋರಿಸುವುದು ಮತ್ತು ಹಠಮಾರಿ ಅಧಿಕಾರಿಗಳಿಗೆ ಅಂಕಿಅಂಶಗಳ ಮೂಲಕ ಸವಾಲು ನೀಡುವುದರ ಜೊತೆಗೆ, ರಾಷ್ಟ್ರದ ಬಗ್ಗೆ ಅವರಿಗಿರುವ ಕರ್ತವ್ಯ ನೆನಪಿಸುವ ಮನವಿಗಳನ್ನೂ ಒಳಗೊಂಡಿದ್ದವು. ಇದರ ಫಲವಾಗಿ ಕಳೆದ ದಶಕದಲ್ಲಿ ಮೂಲಸೌಕರ್ಯ ನಿರ್ಮಾಣದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಮತ್ತು ಈ ವೇಗವು ಇಂದಿಗೂ ಮುಂದುವರಿಯುತ್ತಿದೆ.
ಡಿಜಿಟಲ್ ಯೋಜನಾ ಮೇಲ್ವಿಚಾರಣಾ ವೇದಿಕೆಯ ಬೆಂಬಲದೊಂದಿಗೆ, ‘ಪ್ರಗತಿ’ಯು ಸಮಸ್ಯೆಗಳ ಕ್ರಮಬದ್ಧ ಟ್ರ್ಯಾಕಿಂಗ್ ಮತ್ತು ಸಮಯಕ್ಕೆ ಸರಿಯಾದ ಅನುಸರಣೆಗೆ ಅನುವು ಮಾಡಿಕೊಟ್ಟಿತು. ಕೇಂದ್ರ ಸಚಿವಾಲಯದ ಕಾರ್ಯದರ್ಶಿಗಳು ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಂದ ಹಿಡಿದು ಜಿಲ್ಲಾಧಿಕಾರಿಗಳು ಹಾಗೂ ಕ್ಷೇತ್ರ ಮಟ್ಟದ ಅಧಿಕಾರಿಗಳವರೆಗೆ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ಹಂಚಿಕೆ ಮಾಡಲಾಗಿತ್ತು. ಇದರಿಂದ ಕೆಲಸದ ಹೊಣೆಗಾರಿಕೆಯಲ್ಲಿನ ಗೊಂದಲ ಕಡಿಮೆಯಾದವು, ವಿಶೇಷವಾಗಿ ವಿವಿಧ ಇಲಾಖೆಗಳು ಅಥವಾ ಪ್ರದೇಶಗಳ ನಡುವೆ ಹಂಚಿಹೋಗಿದ್ದ ಸಮಸ್ಯೆಗಳನ್ನು ಬಗೆಹರಿಸಲು ಇದು ಹೆಚ್ಚು ಸಹಕಾರಿಯಾಯಿತು.

ಈ ಬದಲಾವಣೆಯ ಪ್ರಭಾವವನ್ನು ಕೇವಲ ಒಟ್ಟು ಅಂಕಿಅಂಶಗಳ ಮೂಲಕ ಮಾತ್ರವಲ್ಲದೆ, ಪ್ರತ್ಯೇಕ ಯೋಜನೆಗಳ ಬೆಳವಣಿಗೆಯ ಹಾದಿಯನ್ನು ಗಮನಿಸುವುದರ ಮೂಲಕವೂ ಉತ್ತಮವಾಗಿ ಅರ್ಥಮಾಡಿಕೊಳ್ಳಬಹುದು. ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಎಂದರೆ ಭದ್ರಾಚಲಂ-ಕೋವೂರು ರೈಲ್ವೆ ಮಾರ್ಗ. ನಾನು ಅಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ, ಅಂದರೆ 1999ರಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಪ್ರಾದೇಶಿಕವಾಗಿ ಈ ಯೋಜನೆ ಬಹಳ ಮುಖ್ಯವಾಗಿದ್ದರೂ, ಮುಂದಿನ ಸುಮಾರು ಹದಿನೆಂಟು ವರ್ಷಗಳ ಕಾಲ ಯಾವುದೇ ಗಣನೀಯ ಅನುದಾನ ಅಥವಾ ಅನುಮತಿ ಸಿಗದೆ ಇದು ಕುಂಟಿತಗೊಂಡಿತ್ತು. ಆದರೆ, ‘ಪ್ರಗತಿ’ ಪರಿಶೀಲನಾ ಸಭೆಗಳು ಇಂತಹ ದೀರ್ಘಕಾಲದವರೆಗೆ ಬಾಕಿ ಇರುವ ಯೋಜನೆಗಳನ್ನು ಗುರುತಿಸಲು ಪ್ರಾರಂಭಿಸಿದ ನಂತರವೇ ಇದಕ್ಕೆ ಮರುಜೀವ ಬಂದಿತು. ಪರಿಣಾಮವಾಗಿ, 2022ರಲ್ಲಿ ಈ ಮಾರ್ಗದ ಬಹುದೊಡ್ಡ ಭಾಗವನ್ನು ಉದ್ಘಾಟಿಸಲಾಯಿತು. ಈ ಯಶಸ್ಸು ಕೇವಲ ತಾಂತ್ರಿಕ ಸಾಧ್ಯತೆಗಳಿಂದ ಸಿಕ್ಕಿದ್ದಲ್ಲ, ಬದಲಿಗೆ ಸಾಂಸ್ಥಿಕ ಗಮನ ಮತ್ತು ಯೋಜನೆಯನ್ನು ಅಂತ್ಯದವರೆಗೆ ಕೊಂಡೊಯ್ಯುವ ಬದ್ಧತೆಯಿಂದ ಸಾಧ್ಯವಾಯಿತು.
‘ಪ್ರಗತಿ’ ಯೋಜನೆಯ ಆರಂಭದ ತಿಂಗಳಲ್ಲೇ ಇಂತಹ ಬದಲಾವಣೆ ಗೋಚರಿಸತೊಡಗಿತ್ತು. 2015ರಲ್ಲಿ, ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ನಗರ ಯೋಜನಾ ಯೋಜನೆಗಳನ್ನು ಅಧ್ಯಯನ ಮಾಡಲು ನಾನು ಎಂ ಎಂ ಆರ್‌ ಡಿ ಎ ಮತ್ತು ಸಿಡ್ಕೊ ಕಚೇರಿಗಳಿಗೆ ಭೇಟಿ ನೀಡಿದ್ದಾಗ, ಅಲ್ಲಿನ ಕಾರಿಡಾರ್‌ ಗಳಲ್ಲಿ ಕಂಡುಬಂದ ಅಸಾಮಾನ್ಯ ಧಾವಂತವನ್ನು ನೋಡಿ ನನಗೆ ಆಶ್ಚರ್ಯವಾಯಿತು. ಅಂದು ಮಧ್ಯಾಹ್ನ ನಿಗದಿಯಾಗಿದ್ದ ‘ಪ್ರಗತಿ’ ಸಭೆಯ ಮುನ್ನ ಅಧಿಕಾರಿಗಳು ಬಹಳ ಒತ್ತಡದಿಂದ ವಿಚಾರಣೆಗಳಿಗೆ ಉತ್ತರಿಸುತ್ತಿದ್ದರು. ಹಲವು ವರ್ಷಗಳಿಂದ ಪರಿಹಾರವಿಲ್ಲದೆ ಬಾಕಿ ಉಳಿದಿದ್ದ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಪರಿಸರ ಸಚಿವಾಲಯದ ಅನುಮತಿಯೇ ಅಲ್ಲಿನ ಪ್ರಮುಖ ವಿಷಯವಾಗಿತ್ತು. ಸಭೆ ಆರಂಭವಾಗುವ ಕೆಲವೇ ಕ್ಷಣಗಳ ಮೊದಲು ಫ್ಯಾಕ್ಸ್ ಮೂಲಕ ಅನುಮತಿ ಪತ್ರ ಬಂದಿತು. ಆ ಅನುಮತಿ ಸಿಕ್ಕಿದ್ದು ದೊಡ್ಡ ಸಾಧನೆಯಲ್ಲ; ಬದಲಾಗಿ ದೀರ್ಘಕಾಲದವರೆಗೆ ಬಾಕಿ ಉಳಿದಿರುವ ನಿರ್ಧಾರಗಳನ್ನು ಈಗ ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತದೆ ಮತ್ತು ಅದಕ್ಕೆ ಸರಿಯಾದ ವಿವರಣೆ ನೀಡಬೇಕಾಗುತ್ತದೆ ಎಂಬ ಬದಲಾದ ನಿರೀಕ್ಷೆಯೇ ಅಲ್ಲಿನ ದೊಡ್ಡ ಬದಲಾವಣೆಯಾಗಿತ್ತು.
ಕಳೆದ ದಶಕದಲ್ಲಿ, ‘ಪ್ರಗತಿ’ ವೇದಿಕೆಯು ಸಾರಿಗೆ, ಇಂಧನ ಮತ್ತು ಸಾಮಾಜಿಕ ವಲಯಗಳಲ್ಲಿನ ₹85 ಲಕ್ಷ ಕೋಟಿಗೂ ಹೆಚ್ಚಿನ ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿದೆ ಮತ್ತು ಅವುಗಳ ಪ್ರಗತಿಗೆ ವೇಗ ನೀಡಿದೆ. ಈ ಮೂಲಕ 382 ಯೋಜನೆಗಳಿಗೆ ಸಂಬಂಧಿಸಿದ 3,000ಕ್ಕೂ ಹೆಚ್ಚು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಈ ಅಂಕಿಅಂಶಗಳು ಕೇವಲ ಕೆಲಸದ ಬೃಹತ್ ವ್ಯಾಪ್ತಿಯನ್ನು ಮಾತ್ರವಲ್ಲದೆ, ಯೋಜನೆಗಳನ್ನು ಸರಿಯಾದ ಸಮನ್ವಯದೊಂದಿಗೆ ಮತ್ತು ಅಂದಾಜಿನಂತೆ ಪೂರ್ಣಗೊಳಿಸುವ ಕಡೆಗೆ ನಾವು ಸಾಗಿರುವುದನ್ನು ತೋರಿಸುತ್ತವೆ.
ಸಾರಿಗೆ ವಲಯ, ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿಗಳು ಇದನ್ನು ಸ್ಪಷ್ಟವಾಗಿ ವಿವರಿಸುತ್ತವೆ. ‘ಪ್ರಗತಿ’ ಮೂಲಕ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸುಮಾರು ₹4.5 ಲಕ್ಷ ಕೋಟಿ ಮೌಲ್ಯದ 325 ಯೋಜನೆಗಳನ್ನು ವಿಶೇಷ ಗಮನಹರಿಸಲು ಕೈಗೆತ್ತಿಕೊಳ್ಳಲಾಯಿತು. ಭೂಸ್ವಾಧೀನ, ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಅನುಮತಿಗಳು ಹಾಗೂ ಸಾರ್ವಜನಿಕ ಸೌಲಭ್ಯಗಳ ಸ್ಥಳಾಂತರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಶೇಕಡಾ 95ಕ್ಕೂ ಹೆಚ್ಚು ಯಶಸ್ಸಿನ ಪ್ರಮಾಣದೊಂದಿಗೆ ಬಗೆಹರಿಸಲಾಯಿತು. ಇಂತಹ ಅಡೆತಡೆಗಳನ್ನು ಬಗೆಹರಿಸಲು ಮೊದಲು ಸರಾಸರಿ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಗುತ್ತಿತ್ತು, ಈಗ ಅದು ಮೂರು ತಿಂಗಳಿಗಿಂತಲೂ ಕಡಿಮೆ ಅವಧಿಗೆ ಇಳಿದಿದೆ.
ಈ ಆಡಳಿತಾತ್ಮಕ ಸುಧಾರಣೆಗಳು ಗೋಚರಿಸುವಂತಹ ಫಲಿತಾಂಶಗಳನ್ನು ನೀಡಿದವು. ದೆಹಲಿ-ಮುಂಬೈ ಎಕ್ಸ್‌ ಪ್ರೆಸ್‌ ವೇ, ದೆಹಲಿಯ ಅರ್ಬನ್ ಎಕ್ಸ್‌ ಟೆನ್ಶನ್ ರಸ್ತೆ-II ಮತ್ತು ಅಂಬಾಲಾ-ಕೋಟ್‌ ಪುಟ್ಲಿ ಹೈ-ಸ್ಪೀಡ್ ಕಾರಿಡಾರ್‌ ಗಳಂತಹ ಯೋಜನೆಗಳು ದೀರ್ಘಕಾಲದ ವಿಳಂಬದ ನಂತರ ನಿರಂತರ ಪ್ರಗತಿಯನ್ನು ಕಂಡವು. ಈ ಅವಧಿಯಲ್ಲಿ, ಹೆದ್ದಾರಿ ನಿರ್ಮಾಣದ ವೇಗವು 2014 ರಲ್ಲಿ ದಿನಕ್ಕೆ ಸುಮಾರು 12 ಕಿ.ಮೀ. ಇದ್ದದ್ದು ಈಗ ದಿನಕ್ಕೆ ಸುಮಾರು 35 ಕಿ.ಮೀ.ಗೆ ಏರಿಕೆಯಾಗಿದೆ. ಇದು ಕೆಲಸದ ಸಾಮರ್ಥ್ಯದ ಹೆಚ್ಚಳ ಮತ್ತು ಸುಧಾರಿತ ಸಮನ್ವಯ ಎರಡನ್ನೂ ಪ್ರತಿಬಿಂಬಿಸುತ್ತದೆ.
‘ಪ್ರಗತಿ’ಯು ಮೂಲಸೌಕರ್ಯದ ಜೀವನಚಕ್ರವನ್ನು ಬಲಪಡಿಸುವ ವಿಶಾಲವಾದ ಸುಧಾರಣೆಗಳ ಜೊತೆಜೊತೆಯಾಗಿಯೇ ಕಾರ್ಯನಿರ್ವಹಿಸಿತು. ‘ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್’ ಅಡಿಯಲ್ಲಿನ ಸಮಗ್ರ ಯೋಜನೆಯು ಪ್ರತ್ಯೇಕ ನಿರ್ಧಾರ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿತು. ಭೂಸ್ವಾಧೀನ ಮತ್ತು ಪರಿಸರ ಇಲಾಖೆಯ ಅನುಮತಿಗಳಿಗಾಗಿ ಬಳಸಲಾದ ಡಿಜಿಟಲ್ ಪ್ಲಾಟ್‌ ಫಾರ್ಮ್‌ ಗಳು ಅನುಮೋದನೆಯ ಕಾಲಮಿತಿಯನ್ನು ಕಡಿಮೆಗೊಳಿಸಿದವು; ಹಾಗೆಯೇ ಕಾಂಟ್ರಾಕ್ಟ್ ಪಡೆಯುವುದು, ವಿವಾದಗಳ ಪರಿಹಾರ ಮತ್ತು ಯೋಜನೆಯ ಸಿದ್ಧತೆಯ ಮಾನದಂಡಗಳಲ್ಲಿ ತಂದ ಸುಧಾರಣೆಗಳು ಅಪಾಯದ ಹಂಚಿಕೆಯನ್ನು ಉತ್ತಮಗೊಳಿಸಿ ಖಾಸಗಿ ವಲಯದ ವಿಶ್ವಾಸವನ್ನು ಹೆಚ್ಚಿಸಿದವು.
ಇದು ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ಹೊಸ ಹಂತಕ್ಕೆ ನಾಂದಿ ಹಾಡಿತು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಹಲವು ರಾಜ್ಯ ಸರ್ಕಾರಗಳು ಮೂಲಸೌಕರ್ಯ ಅಭಿವೃದ್ಧಿಯನ್ನು ವೇಗಗೊಳಿಸಲು ಈ ವೇದಿಕೆಯನ್ನು ಬಳಸಿಕೊಂಡವು. ಇದು ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ತತ್ವವನ್ನು ಆಡಳಿತಾತ್ಮಕವಾಗಿ ಕಾರ್ಯರೂಪಕ್ಕೆ ತಂದಿತು.
ಒಟ್ಟಾರೆಯಾಗಿ ಹೇಳುವುದಾದರೆ, ಈ ಕ್ರಮಗಳು ಸಾರ್ವಜನಿಕ ಬಂಡವಾಳ ವೆಚ್ಚದ ನಿರಂತರ ಹೆಚ್ಚಳಕ್ಕೆ ಮತ್ತು ಯೋಜನೆಗಳ ಕ್ರಮಬದ್ಧ ಅನುಷ್ಠಾನಕ್ಕೆ ಬೆಂಬಲ ನೀಡಿವೆ. ಇದರ ಫಲಿತಾಂಶಗಳು ಹೆದ್ದಾರಿಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು ಮತ್ತು ನಗರ ಸಾರಿಗೆ ವ್ಯವಸ್ಥೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ. ಇದರಿಂದ ಕಲಿಯಬೇಕಾದ ಮುಖ್ಯ ಪಾಠವೇನೆಂದರೆ: ಮೂಲಸೌಕರ್ಯಗಳ ಯಶಸ್ವಿ ಅನುಷ್ಠಾನವು ಆರ್ಥಿಕ ಬದ್ಧತೆಯಷ್ಟೇ ಆಡಳಿತಾತ್ಮಕ ವಿನ್ಯಾಸದ ಮೇಲೆಯೂ ಅವಲಂಬಿತವಾಗಿರುತ್ತದೆ.
ಭಾರತವು ‘2047 ಧ್ಯೇಯದ’ ಕಡೆಗೆ ಸಾಗುತ್ತಿರುವಂತೆ, ಯೋಜಿತ ಮೂಲಸೌಕರ್ಯ ವಿಸ್ತರಣೆಯ ಪ್ರಮಾಣವು ಸಾಂಸ್ಥಿಕ ಸಾಮರ್ಥ್ಯದ ಮೇಲೆ ಹೆಚ್ಚಿನ ಬೇಡಿಕೆಗಳನ್ನು ಇರಿಸುತ್ತದೆ. ಈ ಪ್ರಗತಿಯನ್ನು ಕಾಯ್ದುಕೊಳ್ಳಲು, ಈ ಆಡಳಿತಾತ್ಮಕ ಪದ್ಧತಿಗಳನ್ನು ವಿವಿಧ ವಲಯಗಳಲ್ಲಿ ಮತ್ತು ರಾಜ್ಯಗಳಲ್ಲಿ ಇನ್ನಷ್ಟು ಅಳವಡಿಸಿಕೊಳ್ಳುವ ಅಗತ್ಯವಿದೆ. ಈ ಅರ್ಥದಲ್ಲಿ, ‘ಪ್ರಗತಿ’ಯನ್ನು ಕೇವಲ ಒಂದು ಬಾರಿಯ ಮಧ್ಯಸ್ಥಿಕೆ ಎಂದು ತಿಳಿಯುವ ಬದಲು, ಭಾರತದ ಮೂಲಸೌಕರ್ಯ ಕಾರ್ಯಕ್ರಮದಲ್ಲಿ ಮಹತ್ವಾಕಾಂಕ್ಷೆಯನ್ನು ಕಾರ್ಯಗತಗೊಳಿಸುವಿಕೆಯೊಂದಿಗೆ ಹೊಂದಾಣಿಕೆ ಮಾಡುವ ನಿರಂತರ ಪ್ರಯತ್ನದ ಒಂದು ಭಾಗವಾಗಿ ಅರ್ಥೈಸುವುದು ಉತ್ತಮ.
(ಲೇಖಕರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಾಜಿ ಕಾರ್ಯದರ್ಶಿ)

Share this Article