ಕ್ಷಯ-ಮುಕ್ತ ಭಾರತ ಮಾಡಲು ಭಾರತದ ಬದ್ಧತೆ: ಡಾ. ಮನೀಶಾ ವರ್ಮಾ

Kalabandhu Editor
17 Min Read

ದೊಡ್ಡ ಮಾರಣಾಂತಿಕ ಕಾಯಿಲೆಗಳಲ್ಲೊಂದಾದ ಕ್ಷಯ (ಟಿಬಿ) ಸಾಂಕ್ರಾಮಿಕ ರೋಗವಾಗಿದೆ ಮತ್ತು ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಕಂಡುಬರುತ್ತದೆ. ಇದು ಜಾಗತಿಕ ಕಳವಳದ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಭಾರತವು ರೋಗದ ಅತಿದೊಡ್ಡ ಜಾಗತಿಕ ಹೊರೆಯನ್ನು ಹೊಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಸ್ಥಿರ ಅಭಿವೃದ್ಧಿ ಗುರಿಗಳು (ಎಸ್‌ ಡಿ ಜಿ) 2030 ರ ಅಡಿಯಲ್ಲಿ ಜಾಗತಿಕ ಗುರಿಗಿಂತ ಐದು ವರ್ಷಗಳು ಮುಂಚೆಯೇ 2025 ರ ವೇಳೆಗೆ ಅದನ್ನು ಕೊನೆಗೊಳಿಸಲು ಬದ್ಧವಾಗಿವೆ. ನಾವು ರೋಗದ ವಿವಿಧ ಆಯಾಮಗಳನ್ನು ನೋಡೋಣ ಮತ್ತು ಈ ದಿಕ್ಕಿನಲ್ಲಿ ಭಾರತದ ಉಪಕ್ರಮಗಳನ್ನು ಅರ್ಥಮಾಡಿಕೊಳ್ಳೋಣ.
ಕ್ಷಯ ರೋಗದ ಜಾಗತಿಕ ಹೊರೆ
ಕ್ಷಯರೋಗವು ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್ (M.tb) ನಿಂದ ಉಂಟಾಗುವ ಹಾಗೂ ಗಾಳಿಯಿಂದ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಜಾಗತಿಕ ಜನಸಂಖ್ಯೆಯ 1/4 ರಷ್ಟಿರುವ ಸುಮಾರು 1.8 ಶತಕೋಟಿ ಜನರು ಕ್ಷಯದ ಸೋಂಕಿಗೆ ಒಳಗಾಗಿದ್ದಾರೆ ಎಂದು ಡಬ್ಲ್ಯು ಹೆಚ್‌ ಒ ಅಂದಾಜಿಸಿದೆ. ಅಂದಾಜು ಪ್ರತಿ ವರ್ಷ 13 ಲಕ್ಷ ಮಕ್ಕಳು ಟಿಬಿಯಿಂದ ಬಳಲುತ್ತಿದ್ದಾರೆ. ಇದು ವಿಶ್ವದಾದ್ಯಂತ ಸಾವಿಗೆ ಕಾರಣವಾಗುವ ಪ್ರಮುಖ ಸಾಂಕ್ರಾಮಿಕ ಕಾರಣಗಳಲ್ಲಿ ಒಂದಾಗಿದೆ. ಕಳೆದ ವರ್ಷ, ಕೋವಿಡ್-19 ನಂತರ ಒಂದೇ ಸಾಂಕ್ರಾಮಿಕದಿಂದ ವಿಶ್ವದಲ್ಲಿ ಅತಿ ಹೆಚ್ಚು ಸಾವಿಗೆ ಕಾರಣವಾಗಿದ್ದು ಕ್ಷಯ ಎಂದು ಗುರುತಿಸಲಾಗಿದೆ. ಇದು ಹೆಚ್‌ ಐ ವಿ/ಏಡ್ಸ್ ಗಿಂತ ಎರಡು ಪಟ್ಟು ಹೆಚ್ಚು ಸಾವುಗಳಿಗೆ ಕಾರಣವಾಯಿತು. 2022 ರಲ್ಲಿ, 1.06 ಕೋಟಿ ಜನರು ಕ್ಷಯದ ಸೋಂಕಿಗೆ ಒಳಗಾಗಿದ್ದರು ಮತ್ತು 14 ಲಕ್ಷ ಜನರು ಅದರಿಂದ ಸಾವನ್ನಪ್ಪಿದರು. ಕ್ಷಯರೋಗವು ಪ್ರತಿದಿನ 3,500 ಸಾವುಗಳಿಗೆ ಕಾರಣವಾಗುತ್ತಿದೆ.
ಕ್ಷಯರೋಗವು ವಿಭಿನ್ನ ಸಾಮಾಜಿಕ ಮತ್ತು ಆರ್ಥಿಕ ಮತ್ತು ಆರೋಗ್ಯ-ಸಂಬಂಧಿತ ಅಪಾಯಕಾರಿ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಅವುಗಳೆಂದರೆ ಅಪೌಷ್ಟಿಕತೆ, ಮಧುಮೇಹ, ಎಚ್ ಐ ವಿ ಸೋಂಕು, ಮದ್ಯಪಾನ ಸೇವನೆ ಮತ್ತು ಧೂಮಪಾನದಿಂದಾಗಿ ಉಂಟಾಗುವ ಅನಾರೋಗ್ಯಗಳು. ಡಬ್ಲ್ಯು ಹೆಚ್‌ ಒ ಪ್ರಕಾರ, 2020 ರಲ್ಲಿ ಜಾಗತಿಕ ಮಟ್ಟದಲ್ಲಿ, ಅಂದಾಜು 19 ಲಕ್ಷ ಕ್ಷಯರೋಗ ಪ್ರಕರಣಗಳು ಅಪೌಷ್ಟಿಕತೆಯಿಂದ, 7.4 ಲಕ್ಷ ಎಚ್‌ ಐ ವಿ ಸೋಂಕಿನಿಂದ, 7.4 ಲಕ್ಷ ಮದ್ಯಪಾನ ಸೇವನೆಯಿಂದ, 7.3 ಲಕ್ಷ ಧೂಮಪಾನದಿಂದ ಮತ್ತು 3.7 ಲಕ್ಷ ಮಧುಮೇಹದಿಂದ ವರದಿಯಾಗಿವೆ. ಆದಾಗ್ಯೂ, ಪ್ರಾದೇಶಿಕ ಮತ್ತು ರಾಷ್ಟ್ರೀಯ ವ್ಯತ್ಯಾಸಗಳಿವೆ. ಉದಾಹರಣೆಗೆ, ಕೊಳೆಗೇರಿಗಳಲ್ಲಿ ವಾಸಿಸುವ ನಗರ ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತವೆ.
ವಿಶ್ವದ ಒಟ್ಟು ಕ್ಷಯ ಪ್ರಕರಣಗಳಲ್ಲಿ ಶೇ.87 ಕ್ಕೂ ಹೆಚ್ಚಿನ ಹೊರೆಯನ್ನು ಮೂವತ್ತು ದೇಶಗಳು ಹೊಂದಿವೆ. ಇವುಗಳಲ್ಲಿ, ಜಾಗತಿಕ ಒಟ್ಟು ಹೊರೆಯ ಮೂರನೇ ಎರಡರಷ್ಟು ಎಂಟು ದೇಶಗಳಲ್ಲಿ ಕಂಡುಬಂದಿದೆ.
ಒಟ್ಟು ಜಾಗತಿಕ ಪ್ರಕರಣಗಳಲ್ಲಿ ಭಾರತವು ಶೇ.27 ರಷ್ಟು ದೊಡ್ಡ ಪಾಲನ್ನು ಹೊಂದಿದೆ. ಇಂಡೋನೇಷ್ಯಾ (10%), ಚೀನಾ (7.1%), ಫಿಲಿಪೈನ್ಸ್ (7.0%), ಪಾಕಿಸ್ತಾನ (5.7%), ನೈಜೀರಿಯಾ (4.5%), ಬಾಂಗ್ಲಾದೇಶ (3.6%) ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (3.0%) ನಂತರದ ಸ್ಥಾನದಲ್ಲಿವೆ.
ಡಬ್ಲ್ಯು ಎಚ್‌ ಒ ಭಾರತದ ಕ್ರಮಗಳನ್ನು ಶ್ಲಾಘಿಸಿದೆ
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌ ಒ)ಯ ಜಾಗತಿಕ ಟಿಬಿ ವರದಿ 2023, ಭಾರತವು ಕ್ಷಯರೋಗ ಮುಕ್ತ ದೇಶಕ್ಕಾಗಿ ಕೈಗೊಂಡಿರುವ ಗಮನಾರ್ಹ ಚಟುವಟಿಕೆಗಳು ಮತ್ತು ಕ್ರಮಗಳಿಗೆ ಪ್ರಶಂಸೆ ವ್ಯಕ್ತಪಡಿಸಿದೆ. 2015 ರಿಂದ (2022 ರವರೆಗೆ) ಕ್ಷಯರೋಗದ ಸಂಭವವನ್ನು ಶೇಕಡಾ 16 ರಷ್ಟು ಮತ್ತು ಅದರಿಂದ ಉಂಟಾಗುವ ಮರಣವನ್ನು ಶೇಕಡಾ 18 ರಷ್ಟು ಕಡಿಮೆ ಮಾಡುವಲ್ಲಿ ಭಾರತವು ಮಾಡಿರುವ ಅತ್ಯಂತ ಮಹತ್ವದ ಪ್ರಗತಿಗಾಗಿ ಡಬ್ಲ್ಯು ಎಚ್‌ ಒ ಶ್ಲಾಘಿಸಿದೆ.
2022 ರಲ್ಲಿ ಅತ್ಯಧಿಕ ಪ್ರಕರಣಗಳನ್ನು ಪತ್ತೆ ಮಾಡಲು ಕಾರಣವಾದ ತೀವ್ರತರ ಪ್ರಕರಣ ಪತ್ತೆ ಕಾರ್ಯತಂತ್ರಗಳಿಗಾಗಿ ಭಾರತವನ್ನು ಪ್ರಶಂಸಿಸಲಾಗಿದೆ; 24.22 ಲಕ್ಷಕ್ಕೂ ಹೆಚ್ಚು ಟಿಬಿ ಪ್ರಕರಣಗಳ ಪತ್ತೆಯು ಕೋವಿಡ್ ಪೂರ್ವದ ಮಟ್ಟವನ್ನು ಮೀರಿಸಿದೆ. 2023 ರಲ್ಲಿ ದಾಖಲೆಯ ಪತ್ತೆಯನ್ನು ಕೈಗೊಳ್ಳಲಾಯಿತು, 25.5 ಲಕ್ಷ ಟಿಬಿ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳಲ್ಲಿ 17.1 ಲಕ್ಷ ಟಿಬಿ ಪ್ರಕರಣಗಳು ಸಾರ್ವಜನಿಕ ವಲಯದಲ್ಲಿ ಪತ್ತೆಯಾಗಿದ್ದರೆ, 8.4 ಲಕ್ಷ ಖಾಸಗಿ ವಲಯದಿಂದ ಪತ್ತೆಯಾಗಿವೆ. ಒಟ್ಟು ಪತ್ತೆಗಳಲ್ಲಿ ಶೇ.33 ರಷ್ಟಿರುವ ಇದು ಇದುವರೆಗಿನ ಅತ್ಯಧಿಕವಾಗಿದೆ. ಖಾಸಗಿ ವಲಯದ ಪತ್ತೆಯಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ಎಂಟು ಪಟ್ಟು ಹೆಚ್ಚು ಹೆಚ್ಚಳವು ವಿವಿಧ ಮಧ್ಯಸ್ಥಿಕೆಗಳ ಮೂಲಕ ಖಾಸಗಿ ವಲಯದೊಂದಿಗೆ ಕೇಂದ್ರೀಕೃತ ಮತ್ತು ಉದ್ದೇಶಿತ ಕ್ರಮದ ಪರಿಣಾಮವಾಗಿ ಬಂದಿದೆ. ಹೆಚ್ಚುವರಿಯಾಗಿ, ಚಿಕಿತ್ಸೆಯ ವ್ಯಾಪ್ತಿಯು ಅಂದಾಜು 80 ಪ್ರತಿಶತದಷ್ಟು ಟಿಬಿ ಪ್ರಕರಣಗಳಿಗೆ ವಿಸ್ತರಿಸಿದೆ, ಇದು ಹಿಂದಿನ ವರ್ಷಕ್ಕಿಂತ 19 ಪ್ರತಿಶತದಷ್ಟು ಹೆಚ್ಚಳವಾಗಿದೆ.
ಡಬ್ಲ್ಯು ಎಚ್‌ ಒ ವರದಿಯು, ಭಾರತದಲ್ಲಿ ಕ್ಷಯರೋಗವು ಕ್ಷೀಣಿಸುತ್ತಿರುವ ವೇಗವು ಜಾಗತಿಕ ಕ್ಷಯರೋಗ ಕ್ಷೀಣಿಸುತ್ತಿರುವ ವೇಗವಾದ ಶೇಕಡಾ 8.7 ಕ್ಕಿಂತ ದುಪ್ಪಟ್ಟಾಗಿದೆ ಎಂದು ಹೇಳಿರುವುದು ಪ್ರೋತ್ಸಾಹದಾಯಕವಾಗಿದೆ. ಇದರ ಜೊತೆಗೆ, ಡಬ್ಲ್ಯು ಎಚ್‌ ಒ ಸಹ ಕ್ಷಯರೋಗದಿಂದ ಮರಣ ದರಗಳನ್ನು ಸಹ ಪರಿಷ್ಕರಣೆ ಮಾಡಿದೆ (2021 ರಲ್ಲಿದ್ದ 4.94 ಲಕ್ಷದಿಂದ 2022 ರಲ್ಲಿ 3.31 ಲಕ್ಷಕ್ಕೆ). ಮಾದರಿ ನೋಂದಣಿ ವ್ಯವಸ್ಥೆಯಿಂದ (ಎಸ್‌ ಆರ್‌ ಎಸ್) ಸಂಗ್ರಹಿಸಿದ 2014-2019 ರ ಸಾವಿನ ಕಾರಣದ ಡೇಟಾವನ್ನು ಆಧರಿಸಿ ಕ್ಷಯರೋಗದಿಂದ ಮರಣ ದರವು ಶೇಕಡಾ 34 ರಷ್ಟು ಕಡಿಮೆಯಾಗಿದೆ.
ಭಾರತವನ್ನು ಕ್ಷಯರೋಗ ಮುಕ್ತಗೊಳಿಸಲು ಪ್ರಮುಖ ಉಪಕ್ರಮಗಳು
ಕ್ಷಯರೋಗವು ತುಂಬಾ ಸಾಂಕ್ರಾಮಿಕವಾಗಿದ್ದರೂ ಸಹ, ಇದು ಸಂಪೂರ್ಣವಾಗಿ ತಡೆಗಟ್ಟಬಹುದಾದ ಮತ್ತು ಸಕಾಲಿಕವಾಗಿ ಪತ್ತೆಯಾದಾಗ ಮತ್ತು ಚಿಕಿತ್ಸೆಯು ಸಂಪೂರ್ಣವಾಗಿ ಪೂರ್ಣಗೊಂಡಾಗ ಗುಣಪಡಿಸಬಹುದಾದ ರೋಗವಾಗಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.
ಜಾಗತಿಕ ಕ್ಷಯರೋಗ ಸಂಭವದ ಹೆಚ್ಚಿನ ಹೊರೆಯಿಂದ ಬಳಲುತ್ತಿರುವ ಭಾರತವು, ಕ್ಷಯರೋಗದ ಅಪಾಯವನ್ನು ಮಿಷನ್ ಮೋಡ್‌ ನಲ್ಲಿ ನಿಭಾಯಿಸಲು ನಿರ್ಧರಿಸಿದೆ. ವಿಶ್ವಸಂಸ್ಥೆ ಮತ್ತು ಡಬ್ಲ್ಯು ಎಚ್‌ ಒ ಕ್ಷಯರೋಗವನ್ನು ಕೊನೆಗೊಳಿಸಲು ಬದ್ಧವಾಗಿವೆ. ಕ್ಷಯರೋಗವು ಎಸ್‌ ಡಿ ಜಿ ಗುರಿ 3.3 ರ ಭಾಗವಾಗಿದೆ: ‘2030 ರ ವೇಳೆಗೆ ಏಡ್ಸ್, ಕ್ಷಯ, ಮಲೇರಿಯಾ ಮತ್ತು ನಿರ್ಲಕ್ಷ್ಯದ ಉಷ್ಣವಲಯದ ಕಾಯಿಲೆಗಳು ಮತ್ತು ಹೆಪಟೈಟಿಸ್, ನೀರಿನಿಂದ ಹರಡುವ ರೋಗಗಳು ಮತ್ತು ಇತರ ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿʼ ಎಂದು ಅದು ಹೇಳುತ್ತದೆ. ಆದರೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತವು ಜಾಗತಿಕ ಗುರಿಗಿಂತ ಐದು ವರ್ಷಗಳ ಮುಂಚಿತವಾಗಿ, 2025 ರ ವೇಳೆಗೆ ಟಿಬಿಯನ್ನು ದೇಶದಿಂದ ನಿರ್ಮೂಲನೆ ಮಾಡುತ್ತದೆ ಎಂದು 2018 ರಲ್ಲಿ ಘೋಷಿಸಿದ್ದರು. ಇದು ಕ್ಷಯ ಮುಕ್ತ ಭಾರತಕ್ಕಾಗಿ ಕೆಲಸ ಮಾಡುವ ನೀತಿ ನಿರೂಪಕರು ಮತ್ತು ಏಜೆನ್ಸಿಗಳು ಕೇಂದ್ರೀಕೃತ ಶಕ್ತಿಯೊಂದಿಗೆ ಕೆಲಸ ಮಾಡಲು ಉತ್ತೇಜಿಸಿದೆ. ಮಾರ್ಚ್ 2023 ರಲ್ಲಿ ವಾರಾಣಸಿಯಲ್ಲಿ ನಡೆದ ಸ್ಟಾಪ್ ಟಿಬಿ ಪಾಲುದಾರಿಕೆ ಸಭೆಯಲ್ಲಿ, ಕ್ಷಯ ಮುಕ್ತ ಸಮಾಜವನ್ನು ಖಾತರಿಪಡಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸುತ್ತಾ, “2014 ರ ನಂತರ ಕ್ಷಯವನ್ನು ಎದುರಿಸಲು ಭಾರತವು ತನ್ನನ್ನು ತಾನು ಅರ್ಪಿಸಿಕೊಂಡ ಬದ್ಧತೆ ಮತ್ತು ದೃಢತೆಯು ಅಭೂತಪೂರ್ವವಾಗಿದೆ” ಎಂದು ಪ್ರಧಾನಿ ಹೇಳಿದರು.

“ಕ್ಷಯರೋಗದ ಮೇಲಿನ ಜಾಗತಿಕ ಯುದ್ಧಕ್ಕೆ ಹೊಸ ಮಾದರಿ” ಯಾಗಿರುವುದರಿಂದ ಭಾರತದ ಪ್ರಯತ್ನಗಳು ಮುಖ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಪ್ರಯತ್ನಗಳು ಜಾಗತಿಕ ಪುರಸ್ಕಾರಗಳನ್ನು ಗಳಿಸಿವೆ. ಸ್ಟಾಪ್ ಟಿಬಿ ಪಾಲುದಾರಿಕೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಲುಸಿಕಾ ಡಿಟಿಯು ಅವರು ಕ್ಷಯ ಮತ್ತು ಕ್ಷಯ-ಮುಕ್ತ ಭಾರತ ಉಪಕ್ರಮವನ್ನು ನಿಭಾಯಿಸುವಲ್ಲಿನ ಭಾರತದ ಪ್ರಮಾಣವನ್ನು ಶ್ಲಾಘಿಸಿದರು. ಭಾರತವು 2025ರ ವೇಳೆಗೆ ಕ್ಷಯವನ್ನು ಕೊನೆಗೊಳಿಸುತ್ತದೆ ಮತ್ತು ಇದು ಜಾಗತಿಕ ಕ್ಷಯದಲ್ಲಿನ ದೊಡ್ಡ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2025 ರ ವೇಳೆಗೆ ಭಾರತವು ಕ್ಷಯರೋಗ ಮುಕ್ತವಾಗುವ ಗುರಿಯನ್ನು ಪೂರೈಸಲು ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿ ಇರುವಾಗ, ರೋಗದ ತಡೆಗಟ್ಟುವಿಕೆಯ ಮೇಲೆ ಕೇಂದ್ರೀಕರಿಸುವುದು ಮತ್ತು ಟಿಬಿ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಸೇವೆಗಳ ವ್ಯಾಪ್ತಿಯಲ್ಲಿ ಸಂಪೂರ್ಣತೆಯನ್ನು ಸಾಧಿಸುವುದು ಮುಂದಿನ ವಿಧಾನವಾಗಿದೆ. ಸರ್ಕಾರಗಳು, ಬೆಂಬಲ ಏಜೆನ್ಸಿಗಳು ಮತ್ತು ಸಮುದಾಯಗಳ ನಿರಂತರ ಪ್ರಯತ್ನದಿಂದ ಭಾರತದಲ್ಲಿ ಪತ್ತೆಯಾಗದೆ ಉಳಿದ ಟಿಬಿ ಪ್ರಕರಣಗಳ ಸಂಖ್ಯೆಯು 2015 ರಲ್ಲಿದ್ದ 1 ಮಿಲಿಯನ್‌ ನಿಂದ 2023 ರಲ್ಲಿ 0.26 ಮಿಲಿಯನ್‌ ಗೆ ಕಡಿಮೆಯಾಗಿದೆ ಎಂಬುದು ಪ್ರೋತ್ಸಾಹದಾಯಕ ಅಂಶವಾಗಿದೆ.
2025 ರ ವೇಳೆಗೆ ಕ್ಷಯಕ್ಕೆ ಸಂಬಂಧಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಗುರಿಯೊಂದಿಗೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಕೆಳಗಿನ ಉದ್ದೇಶಗಳೊಂದಿಗೆ ರಾಷ್ಟ್ರೀಯ ಕ್ಷಯ ನಿರ್ಮೂಲನ ಕಾರ್ಯಕ್ರಮವನ್ನು (ಎನ್‌ ಟಿ ಇ ಪಿ) ಅನುಷ್ಠಾನಗೊಳಿಸುತ್ತಿದೆ:
1. ಕ್ಷಯ ರೋಗಿಗಳ ಆರಂಭಿಕ ರೋಗನಿರ್ಣಯ, ಗುಣಮಟ್ಟದ-ಖಾತ್ರಿಪಡಿಸಿದ ಔಷಧಗಳು ಮತ್ತು ಚಿಕಿತ್ಸಾ ಕ್ರಮಗಳೊಂದಿಗೆ ತ್ವರಿತ ಚಿಕಿತ್ಸೆ.
2. ಖಾಸಗಿ ವಲಯದಲ್ಲಿ ಆರೈಕೆಯನ್ನು ಬಯಸುವ ರೋಗಿಗಳೊಂದಿಗೆ ತೊಡಗಿಸಿಕೊಳ್ಳುವುದು.
3. ತಡೆಗಟ್ಟುವ ತಂತ್ರಗಳು ಹೆಚ್ಚಿನ ಅಪಾಯ/ದುರ್ಬಲ ಜನಸಂಖ್ಯೆಯಲ್ಲಿ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಒಳಗೊಂಡಿವೆ.
4. ಗಾಳಿಯಿಂದ ಹರಡುವ ಸೋಂಕು ನಿಯಂತ್ರಣ.
5. ಸಾಮಾಜಿಕ ನಿರ್ಧಾರಕಗಳನ್ನು ಪರಿಹರಿಸಲು ಬಹು-ವಲಯ ಪ್ರತಿಕ್ರಿಯೆ.
ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನ
ಕ್ಷಯರೋಗ ವಿರುದ್ಧದ ಹೋರಾಟಕ್ಕೆ ಮಿಷನ್ ಮೋಡ್ ವಿಧಾನವನ್ನು ನೀಡಲು, ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನವನ್ನು ಸೆಪ್ಟೆಂಬರ್, 2022 ರಲ್ಲಿ ಪ್ರಾರಂಭಿಸಲಾಯಿತು. 2025 ರ ವೇಳೆಗೆ ಕ್ಷಯಕ್ಕೆ ಸಂಬಂಧಿಸಿದಂತೆ ಎಸ್‌ ಡಿ ಜಿ ಗುರಿಯನ್ನು ಹೇಗೆ ತಲುಪಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಚಟುವಟಿಕೆಗಳು ಮತ್ತು ಮಧ್ಯಸ್ಥಿಕೆಗಳನ್ನು ವಿನ್ಯಾಸಗೊಳಿಸುವುದು ಇದರ ಉದ್ದೇಶವಾಗಿತ್ತು. ಇದಕ್ಕೆ ವಿವಿಧ ಏಜೆನ್ಸಿಗಳು, ಸಮುದಾಯಗಳು ಮತ್ತು ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುವ ಸಮುದಾಯ ಮಟ್ಟದ ತೊಡಗಿಸಿಕೊಳ್ಳುವಿಕೆಯ ಅಗತ್ಯವಿದೆ. ಈ ಉಪಕ್ರಮವು ಎಲ್ಲಾ ಹಿನ್ನೆಲೆಯ ಜನರನ್ನು ‘ಜನಾಂದೋಲನʼದಲ್ಲಿ ಒಂದುಗೂಡಿಸಿತು ಮತ್ತು ಕ್ಷಯ ನಿರ್ಮೂಲನೆಯ ಪ್ರಗತಿಯನ್ನು ಹೆಚ್ಚಿಸಿತು. ಇದು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿ ಎಸ್‌ ಆರ್) ಚಟುವಟಿಕೆಗಳನ್ನು ಸಹ ಹೆಚ್ಚಿಸಿತು.

ನಿ-ಕ್ಷಯ ಮಿತ್ರ ಎಂಬ ಒಂದು ಹೊಸ ಉಪಕ್ರಮವನ್ನು ಪ್ರಾರಂಭಿಸಲಾಯಿತು, ಅಲ್ಲಿ ಸಮಾಜದ ವಿವಿಧ ಹಂತಗಳ ಸ್ವಯಂಸೇವಕರು ಕ್ಷಯ ರೋಗಿಗಳಿಗೆ ಅವರ ಚೇತರಿಕೆಯ ಪ್ರಯಾಣದಲ್ಲಿ ಸಹಾಯ ಮಾಡುವಲ್ಲಿ ‘ಮಿತ್ರರು” ಆಗುತ್ತಾರೆ. ನಿ-ಕ್ಷಯ ಮಿತ್ರರು ವ್ಯಕ್ತಿಗಳು, ಎನ್‌ ಜಿ ಒ ಗಳು, ಸಹಕಾರ ಸಂಘಗಳು, ನಂಬಿಕೆ-ಆಧಾರಿತ ಸಂಸ್ಥೆಗಳು, ಖಾಸಗಿ ವಲಯ, ರಾಜಕೀಯ ಪಕ್ಷಗಳು ಮತ್ತು ಇತರರು ಆಗಿರಬಹುದು. ಇವರು ಪೌಷ್ಠಿಕಾಂಶದ ಬೆಂಬಲ, ಪೌಷ್ಟಿಕಾಂಶದ ಪೂರಕಗಳು, ಹೆಚ್ಚುವರಿ ತಪಾಸಣೆಗಳು ಮತ್ತು ಕನಿಷ್ಠ ಆರು ತಿಂಗಳ ಅವಧಿಗೆ ಅಥವಾ ಗರಿಷ್ಠ ಮೂರು ವರ್ಷಗಳವರೆಗೆ ವೃತ್ತಿಪರ ಬೆಂಬಲದ ರೂಪದಲ್ಲಿ ಕ್ಷಯ ರೋಗಿಗಳನ್ನು ಬೆಂಬಲಿಸಲು ಅವರು ಒಪ್ಪಿಗೆ ನೀಡುತ್ತಾರೆ. ಕ್ಷಯರೋಗಿಗಳು ಸಾಮಾನ್ಯವಾಗಿ ಸಮುದಾಯಗಳಲ್ಲಿ ಕಳಂಕವನ್ನು ಎದುರಿಸುತ್ತಾರೆ. ಕ್ಷಯ ನಿರ್ಮೂಲನೆ ಅಭಿಯಾನದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ರೋಗಕ್ಕೆ ಸಂಬಂಧಿಸಿದ ಕಳಂಕವನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಸಮುದಾಯದ ಸಹಭಾಗಿತ್ವವು ರೋಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಅದನ್ನು ತಡೆಗಟ್ಟುವ ಮತ್ತು ಅದನ್ನು ಉತ್ತಮವಾಗಿ ನಿರ್ವಹಿಸುವ ವಿಧಾನಗಳಿಗೆ ಕಾರಣವಾಗುತ್ತದೆ. ರೋಗ ಮತ್ತು ದೀರ್ಘಾವಧಿಯ ಚಿಕಿತ್ಸೆಯಿಂದಾಗಿ ಅನೇಕರು ಉದ್ಯೋಗಗಳನ್ನು ಕಳೆದುಕೊಳ್ಳುತ್ತಾರೆ ಮತ್ತು ಇದು ಆರ್ಥಿಕ ಸಂಕಷ್ಟಗಳಿಗೆ ಕಾರಣವಾಗುತ್ತದೆ. ನಿ-ಕ್ಷಯ ಮಿತ್ರರು ಕ್ಷಯರೋಗಿಗಳಿಗೆ ವೃತ್ತಿಪರ ಬೆಂಬಲವನ್ನು ನೀಡಲು ಪಣ ತೊಡುತ್ತಾರೆ.

ಏಪ್ರಿಲ್ 2024 ರವರೆಗೆ, 1.55 ಲಕ್ಷಕ್ಕೂ ಹೆಚ್ಚು ನಿ-ಕ್ಷಯ ಮಿತ್ರರು ನೋಂದಾಯಿಸಿಕೊಂಡಿದ್ದಾರೆ. ದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ 13.45 ಲಕ್ಷ ಕ್ಷಯರೋಗಿಗಳಲ್ಲಿ, 8.66 ಲಕ್ಷಕ್ಕೂ ಹೆಚ್ಚು ಜನರು ಸಮುದಾಯದ ಬೆಂಬಲವನ್ನು ಸ್ವೀಕರಿಸಲು ಒಪ್ಪಿಗೆ ನೀಡಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲರೂ ಮುಂದೆ ಬರಲು ಮತ್ತು ನಿ-ಕ್ಷಯ ಮಿತ್ರರಾಗಿ ನೋಂದಾಯಿಸಿಕೊಳ್ಳಲು ಮತ್ತು ಸ್ಥಳೀಯ ಸಮುದಾಯಗಳನ್ನು ಮತ್ತು ರೋಗಿಗಳನ್ನು ಬೆಂಬಲಿಸಲು ದೇಶಾದ್ಯಂತ ಅಭಿಯಾನವನ್ನು ಪ್ರಾರಂಭಿಸಿದೆ. ಹೆಸರಾಂತ ನಿ-ಕ್ಷಯ ಮಿತ್ರರಲ್ಲಿ, 27 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಗೌರವಾನ್ವಿತ ರಾಜ್ಯಪಾಲರು/ಲೆಫ್ಟಿನೆಂಟ್ ಗವರ್ನರ್‌ಗಳು, ಕೇಂದ್ರ ಸಚಿವರು, ರಾಜ್ಯ ಸಚಿವರು, ಮುಖ್ಯಮಂತ್ರಿಗಳು, ಅನೇಕ ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ರಾಜ್ಯ ಆರೋಗ್ಯ ಸಚಿವರು ಕ್ಷಯರೋಗಿಗಳನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ. ಅನೇಕ ಶಾಸಕರು ಮತ್ತು ಸ್ಥಳೀಯ ಪರಿಷತ್ತುಗಳು ನಿ-ಕ್ಷಯ ಮಿತ್ರರಾಗಿದ್ದಾರೆ. ಸಂಪುಟ ಸಚಿವಾಲಯ ಮತ್ತು ಕೇಂದ್ರ ಸಚಿವಾಲಯಗಳ ಹಲವಾರು ಅಧಿಕಾರಿಗಳು ವಿವಿಧ ವಿಧಾನಗಳ ಮೂಲಕ ಬೆಂಬಲಿಸಲು ಕ್ಷಯರೋಗಿಗಳನ್ನು ದತ್ತು ಪಡೆದಿದ್ದಾರೆ.
ಸಕ್ರಿಯ ಪ್ರಕರಣ ಪತ್ತೆ ಅಭಿಯಾನ
ಹಲವಾರು ಇತರ ಕ್ರಮಗಳು ಭಾರತದಲ್ಲಿ ಕ್ಷಯ ವಿರೋಧಿ ಅಭಿಯಾನವನ್ನು ಬಲವಾಗಿ ಹೆಚ್ಚಿಸಿವೆ. ಪ್ಯಾಸಿವ್ ಕೇಸ್ ಫೈಂಡಿಂಗ್ (ಪಿಸಿಎಫ್) ಮೂಲಕ ಕ್ಷಯ ಪ್ರಕರಣ ಪತ್ತೆ ಮಾಡುವುದರಿಂದ ಕ್ಷಯರೋಗಿಗಳ ಪತ್ತೆಗೆ ಕಾರಣವಾಗಬಹುದು ಎಂದು ಅಧ್ಯಯನಗಳು (Ho J. et al., 2016) ತೋರಿಸಿವೆ. ಹೆಚ್ಚಿನ ಟಿಬಿ ಹೊರೆ ಹೊಂದಿರುವ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಈ ಪ್ರವೃತ್ತಿ ಹೆಚ್ಚು. ಇದು ಮುಖ್ಯವಾಗಿ ಆರೋಗ್ಯ ಸೌಲಭ್ಯಗಳನ್ನು ಪ್ರವೇಶಿಸುವಲ್ಲಿ ಭೌಗೋಳಿಕ ಮತ್ತು/ಅಥವಾ ಸಾಮಾಜಿಕ ಆರ್ಥಿಕ ಅಡೆತಡೆಗಳಿಂದಾಗಿ ರೋಗನಿರ್ಣಯದ ವಿಳಂಬಗಳಿಗೆ ಕಾರಣವಾಗುತ್ತದೆ.
ಕ್ಷಯ ಪ್ರಕರಣ ಪತ್ತೆಹಚ್ಚುವಿಕೆಯನ್ನು ಹೆಚ್ಚಿಸಲು ಮತ್ತು ಸಮಯೋಚಿತ ಚಿಕಿತ್ಸೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ‘ಎಂಡ್‌ ಟಿಬಿ ಸ್ಟ್ರಾಟಜಿ’ ಯ ಭಾಗವಾಗಿ ಹೆಚ್ಚಿನ ಅಪಾಯದ ಜನಸಂಖ್ಯೆಯ ಉಪಗುಂಪುಗಳ ‘ವ್ಯವಸ್ಥಿತ ತಪಾಸಣೆ’ ಯನ್ನು ಬೆಂಬಲಿಸಲಾಗಿದೆ.
ಪತ್ತೆಯಾಗದೆ ಉಳಿದ ಕ್ಷಯರೋಗಿಗಳನ್ನು ತಲುಪಲು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದ ಕಾರ್ಯತಂತ್ರದ ಯೋಜನೆಯ ಭಾಗವಾಗಿ ಹೆಚ್ಚಿನ ಅಪಾಯದ ಗುಂಪುಗಳಲ್ಲಿ ರಾಷ್ಟ್ರೀಯ ಸಮುದಾಯ ಆಧಾರಿತ ಸಕ್ರಿಯ ಪ್ರಕರಣ ಪತ್ತೆ ಅಭಿಯಾನವನ್ನು ಭಾರತ ಪ್ರಾರಂಭಿಸಿತು. ಈ ಕಾರ್ಯಕ್ರಮದ ಅಡಿಯಲ್ಲಿ, ಈ ದುರ್ಬಲ ಜನಸಂಖ್ಯೆಯಲ್ಲಿ ಕ್ಷಯ ಪ್ರಕರಣಗಳ ಸಕ್ರಿಯ ಮನೆ-ಮನೆ ಹುಡುಕಾಟಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಎಚ್‌ ಐ ವಿ ಸೋಂಕಿತರು, ಮಧುಮೇಹಿಗಳು, ಅಪೌಷ್ಟಿಕತೆಯಿಂದ ಬಳಲುತ್ತಿರುವವರು, ಜೈಲುಗಳು, ವೃದ್ಧಾಶ್ರಮಗಳು, ಅನಾಥಾಶ್ರಮಗಳು, ಬುಡಕಟ್ಟು ಪ್ರದೇಶಗಳು ಮತ್ತು ಅಂಚಿನಲ್ಲಿರುವ ಜನಸಂಖ್ಯೆಯಂತಹ ವಸತಿ ಸಂಸ್ಥೆಗಳು ಸೇರಿವೆ. ಈ ಚಟುವಟಿಕೆಯು ಪ್ರಾರಂಭವಾದಾಗಿನಿಂದ ಹೆಚ್ಚುವರಿಯಾಗಿ ಸುಮಾರು 3 ಲಕ್ಷ ಕ್ಷಯ ಪ್ರಕರಣಗಳ ರೋಗನಿರ್ಣಯಕ್ಕೆ ಕಾರಣವಾಗಿದೆ.
ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಮಯದಲ್ಲಿ ಕ್ಷಯರೋಗ ತಪಾಸಣೆಗಳು
ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ನವೆಂಬರ್ 2023 ರಲ್ಲಿ ಪ್ರಾರಂಭಿಸಲಾಯಿತು. ಈ ರಾಷ್ಟ್ರವ್ಯಾಪಿ ಕಾರ್ಯಕ್ರಮದ ಭಾಗವಾಗಿ, ರಾಜ್ಯಗಳು/ಕೇಂದಗ್ರಾಡಳಿತ ಪ್ರದೇಶಗಳಲ್ಲಿ ಜಾಗೃತಿ ಹೆಚ್ಚಿಸುವ ಐಇಸಿ ವಾಹನದ ಮಾರ್ಗಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿತ್ತು, ಅಲ್ಲಿ ಕ್ಷಯರೋಗ ತಪಾಸಣೆ ಸೇರಿದಂತೆ ಹಲವಾರು ಆರೋಗ್ಯ ಸೇವೆಗಳನ್ನು ಗ್ರಾಮ ಮಟ್ಟದಲ್ಲಿ ಅವರ ಮನೆಯ ಸಮೀಪದಲ್ಲಿಯೇ ಸಮುದಾಯಗಳಿಗೆ ಒದಗಿಸಲಾಯಿತು.
ಈ ಆರೋಗ್ಯ ಶಿಬಿರಗಳಲ್ಲಿ 38 ಮಿಲಿಯನ್‌ ಗಿಂತಲೂ ಹೆಚ್ಚು ವ್ಯಕ್ತಿಗಳಿಗೆ ಕ್ಷಯ ಪರೀಕ್ಷೆ ನಡೆಸಲಾಯಿತು. ಹೆಚ್ಚುವರಿಯಾಗಿ, ಗ್ರಾಮ ಮಟ್ಟದಲ್ಲಿ 1,00,000 ವ್ಯಕ್ತಿಗಳು ನಿ-ಕ್ಷಯ ಮಿತ್ರರಾಗಲು ಆಸಕ್ತಿ ತೋರಿಸಿದರು.
ಕ್ಷಯ ಪ್ರಕರಣಗಳ ವರದಿಯಲ್ಲಿ ಗಮನಾರ್ಹ ಏರಿಕೆ
ವಿಶೇಷವಾದ ಸಕ್ರಿಯ ಪ್ರಕರಣ ಪತ್ತೆ ಅಭಿಯಾನಗಳು, ಬ್ಲಾಕ್ ಮಟ್ಟಗಳವರೆಗೆ ಆಣ್ವಿಕ ರೋಗನಿರ್ಣಯವನ್ನು ಹೆಚ್ಚಿಸಿವೆ. ಆಯುಷ್ಮಾನ್ ಭಾರತ್ ಆರೋಗ್ಯ ಮಂದಿರಗಳ ಮೂಲಕ ವಿಕೇಂದ್ರೀಕೃತ ತಪಾಸಣಾ ಸೇವೆಗಳು (ಹಿಂದೆ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಎಂದು ಕರೆಯಲಾಗುತ್ತಿತ್ತು, ಇವು ದೇಶಾದ್ಯಂತ 1.64 ಲಕ್ಷಕ್ಕಿಂತ ಹೆಚ್ಚಿವೆ) ಮತ್ತು ಖಾಸಗಿ ವಲಯ ತೊಡಗಿಸಿಕೊಳ್ಳುವಿಕೆಯು ಪತ್ತೆಯಾಗದ ಪ್ರಕರಣಗಳಲ್ಲಿನ ಅಂತರವನ್ನು ಕಡಿಮೆ ಮಾಡುವ ಪ್ರಕ್ರಿಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಈ ಕೇಂದ್ರಗಳು ಕ್ಷಯ ತಪಾಸಣೆಗೆ ಸಂಪರ್ಕದ ಮೊದಲ ಬಿಂದುವಾಗಿ ಕಾರ್ಯನಿರ್ವಹಿಸುತ್ತವೆ.
ಭಾರತವು 2022 ರಲ್ಲಿ 24.2 ಲಕ್ಷ ಕ್ಷಯ ಪ್ರಕರಣಗಳನ್ನು ವರದಿ ಮಾಡಿದೆ, ಇದು 2019 ರ ಕೋವಿಡ್ ಪೂರ್ವ ಮಟ್ಟಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. 2023 ರಲ್ಲಿ ಒಟ್ಟು 25.5 ಲಕ್ಷ ಕ್ಷಯ ರೋಗಿಗಳನ್ನು ವರದಿ ಮಾಡಲಾಗಿತ್ತು.
ಕ್ಷಯ ಮುಕ್ತ ಪಂಚಾಯತ್ ಅಭಿಯಾನ
ಕ್ಷಯರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಗಾಧತೆ ಮತ್ತು ಪ್ರಮಾಣವನ್ನು ಅರಿತುಕೊಳ್ಳಲು, ಅವುಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಪಂಚಾಯಿತಿಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಸೃಷ್ಟಿಸಲು ಮತ್ತು ಅವರ ಕೊಡುಗೆಯನ್ನು ಶ್ಲಾಘಿಸಲು ಪಂಚಾಯಿತಿಗಳನ್ನು ಸಬಲೀಕರಣಗೊಳಿಸುವುದು ಕ್ಷಯ ಮುಕ್ತ ಪಂಚಾಯತ್‌ ಗಳ ಉದ್ದೇಶವಾಗಿದೆ.
ಸಾಮರ್ಥ್ಯ ವೃದ್ಧಿಯ ಭಾಗವಾಗಿ, ಈ ಉಪಕ್ರಮದ ಕುರಿತು ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು ಹಲವಾರು ಪ್ರಾದೇಶಿಕ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಎಲ್ಲ ಪದಾಧಿಕಾರಿಗಳಿಗೆ ಜಾಗೃತಿ ಮೂಡಿಸಲಾಗಿದೆ. ಪ್ರಸ್ತುತ, ಪರಿಶೀಲನೆಯನ್ನು ಕೈಗೊಳ್ಳಲಾಗುತ್ತಿದೆ ಮತ್ತು ಫಲಿತಾಂಶಗಳನ್ನು ಪ್ರಕಟಿಸಲಾಗುತ್ತಿದೆ. ಇಲ್ಲಿಯವರೆಗೆ, ಇದು ಟಿಬಿ ತಡೆಗಟ್ಟುವ ಚಿಕಿತ್ಸಾ ಔಷಧದ 5 ದಶಲಕ್ಷಕ್ಕೂ ಹೆಚ್ಚು ಕೋರ್ಸ್‌ ಗಳನ್ನು ಪಡೆಯಲು ಸಹಾಯ ಮಾಡಿದೆ. ಇದು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಕ್ಷಯ ತಪಾಸಣೆ ಮಾಡಿಸಿಕೊಳ್ಳಲು ಗ್ರಾಮಸ್ಥರನ್ನು ಉತ್ತೇಜಿಸಿದೆ.
ಖಾಸಗಿ ವಲಯದ ಪ್ರಕರಣ ವರದಿಯಲ್ಲಿ ಗಮನಾರ್ಹ ಜಿಗಿತ ಕಂಡುಬಂದಿದೆ
ರೋಗಿಯ ಪೂರೈಕೆದಾರರ ಬೆಂಬಲ ಸಂಸ್ಥೆ (PPSA), ಕ್ಷಯ ಪ್ರಕರಣಗಳ ಕಡ್ಡಾಯ ವರದಿಗಾಗಿ ಗೆಜೆಟ್ ಅಧಿಸೂಚನೆ, ಪ್ರಕರಣಗಳ ವರದಿಗೆ ಪ್ರೋತ್ಸಾಹ ಮತ್ತು ವೃತ್ತಿಪರ ಸಂಸ್ಥೆಗಳಾದ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ), ಭಾರತೀಯ ಮಕ್ಕಳ ಚಿಕಿತ್ಸಾ ಸಂಘಟನೆ (ಐಎಪಿ), ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಂಘಗಳ ಒಕ್ಕೂಟ (ಎಫ್‌ ಒ ಜಿ ಎಸ್‌ ಐ) ಇತ್ಯಾದಿಗಳ ಮೂಲಕ ಖಾಸಗಿ ವಲಯದೊಂದಿಗೆ ಕೇಂದ್ರೀಕೃತ ಮತ್ತು ಉದ್ದೇಶಿತ ತೊಡಗಿಸಿಕೊಳ್ಳುವಿಕೆಯೊಂದಿಗೆ ಖಾಸಗಿ ವಲಯದ ಕ್ಷಯ ಪ್ರಕರಣಗಳ ವರದಿಯಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ 8 ಪಟ್ಟು ಹೆಚ್ಚಳವಾಗಿದೆ. 2022 ರಲ್ಲಿ, 7.33 ಲಕ್ಷ ಕ್ಷಯ ಪ್ರಕರಣಗಳನ್ನು ವರದಿ ಮಾಡಲಾಗಿತ್ತು, ಆದರೆ 2023 ರಲ್ಲಿ, 8.42 ಲಕ್ಷ ರೋಗಿಗಳನ್ನು ಖಾಸಗಿ ವಲಯವು ವರದಿ ಮಾಡಿದೆ. ಇದು ಒಟ್ಟು ವರದಿಗಳಲ್ಲಿ (ಫೆಬ್ರವರಿ 2024 ರಂತೆ) ಶೇ.33 (ಇದುವರೆಗಿನ ಅತಿ ಹೆಚ್ಚು) ಕೊಡುಗೆ ನೀಡಿದೆ. ಕಾರ್ಯಕ್ರಮದ ಸಹಯೋಗದ ಪ್ರಯತ್ನಗಳು ಖಾಸಗಿ ವಲಯದಿಂದ ವರದಿಯಾದ ಪ್ರಕರಣಗಳಲ್ಲಿ 8 ಪಟ್ಟು ಹೆಚ್ಚಳಕ್ಕೆ ಕಾರಣವಾಯಿತು. ಈ ವಿನೂತನ ಖಾಸಗಿ ವಲಯದ ಮಾದರಿಗಳು ಜಾಗತಿಕ ಉತ್ತಮ ಅಭ್ಯಾಸಗಳಾಗಿವೆ.
ಕ್ಷಯ ಚಿಕಿತ್ಸೆಯ ಯಶಸ್ಸಿನ ದರದಲ್ಲಿ ಹೆಚ್ಚಳ
ಕಳೆದ ಒಂಬತ್ತು ವರ್ಷಗಳಲ್ಲಿ, ಖಾಸಗಿ ವಲಯದಿಂದ ಬರುವ ಮೂರನೇ ಒಂದು ಭಾಗದಷ್ಟು ವರದಿಗಳ ಹೊರತಾಗಿಯೂ, ಕಾರ್ಯಕ್ರಮವು ಶೇ.80 ಕ್ಕಿಂತ ಹೆಚ್ಚಿನ ಚಿಕಿತ್ಸೆಯ ಯಶಸ್ಸಿನ ದರವನ್ನು ಉಳಿಸಿಕೊಂಡಿದೆ. 2021 ರಲ್ಲಿ, ಯಶಸ್ಸಿನ ದರವು ಶೇ.84ಕ್ಕೆ ತಲುಪಿತ್ತು ಮತ್ತು 2022 ರಲ್ಲಿ, ಸ್ವಲ್ಪ ಹೆಚ್ಚಳದೊಂದಿಗೆ ಶೇ.85.5 ಕ್ಕೆ ಏರಿತು. 2023 ರಲ್ಲಿ, ಯಶಸ್ಸಿನ ದರವು ಶೇ86.9 ಕ್ಕೆ ಹೆಚ್ಚಳವಾಯಿತು.
ಹೊಸ ಕ್ಷಯ ವಿರೋಧಿ ಔಷಧಿಗಳ ಪರಿಚಯವು ಗಮನಾರ್ಹ ಪರಿಣಾಮ ಬೀರಿದೆ
ಚಿಕ್ಕದಾದ, ಸುರಕ್ಷಿತವಾದ ಬಾಯಿ ಮೂಲಕ ತೆಗೆದುಕೊಳ್ಳುವ ಬೆಡಾಕ್ವಿಲಿನ್-ಒಳಗೊಂಡಿರುವ DR-TB ಚಿಕಿತ್ಸಾ ವಿಧಾನಗಳನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊರತರಲಾಗಿದೆ. ಈ ಔಷಧಿಗಳನ್ನು ಕಡಿಮೆ ಮೌಖಿಕ MDR/RR (ಮಲ್ಟಿಡ್ರಗ್-ರೆಸಿಸ್ಟೆಂಟ್/(ರಿಫಾಂಪಿಸಿನ್-ರೆಸಿಸ್ಟೆಂಟ್) -ಟಿಬಿ ಚಿಕಿತ್ಸೆ ಅಥವಾ ದೀರ್ಘ ಮೌಖಿಕ M (ಮಲ್ಟಿಡ್ರಗ್-ನಿರೋಧಕ)/ ಭಾಗವಾಗಿ ಫ್ಲೋರೋಕ್ವಿನೋಲೋನ್‌ ಗಳಿಗೆ ಪ್ರತಿರೋಧವನ್ನು ಹೊಂದಿರುವ ಅಥವಾ ಇಲ್ಲದೆಯೇ ಬಹು-ಔಷಧ-ನಿರೋಧಕ XDR (ವಿಸ್ತೃತವಾಗಿ ಔಷಧ-ನಿರೋಧಕ)-ಟಿಬಿ ಚಿಕಿತ್ಸಾ ವಿಧಾನಗಳ ಪ್ರಕಾರ ಕ್ಷಯ ರೋಗಿಗಳಿಗೆ ನೀಡಲಾಗುತ್ತದೆ. 2022 ರಲ್ಲಿ, ಸುಮಾರು 31,000 ರೋಗಿಗಳಿಗೆ ದೀರ್ಘಾವಧಿಯ ಎಲ್ಲಾ ಮೌಖಿಕ M/XDR-TB ಚಿಕಿತ್ಸಾ ವಿಧಾನಗಳನ್ನು ಪ್ರಾರಂಭಿಸಲಾಯಿತು ಮತ್ತು 27,431 ರೋಗಿಗಳಿಗೆ ಕಡಿಮೆ MDR/RR-TB ಚಿಕಿತ್ಸಾ ವಿಧಾನಗಳನ್ನು (ಬಾಯಿ ಮೂಲಕ /ಇಂಜೆಕ್ಷನ್ ಆಧಾರಿತ) ಪ್ರಾರಂಭಿಸಲಾಯಿತು.
2023 ರಲ್ಲಿ, 63,939 ರೋಗಿಗಳಿಗೆ MDR/RR ರೋಗನಿರ್ಣಯ ಮಾಡಲಾಯಿತು ಮತ್ತು ಅವರಲ್ಲಿ 58,527 ಕ್ಕಿಂತ ಸ್ವಲ್ಪ ಹೆಚ್ಚು ರೋಗಿಗಳಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ಇವುಗಳಲ್ಲಿ, ಸುಮಾರು 20,567 ರೋಗಿಗಳಿಗೆ ಕಡಿಮೆ ಮೌಖಿಕ MDR/RR-TB ಚಿಕಿತ್ಸಾ ವಿಧಾನಗಳನ್ನು (9-11 ತಿಂಗಳುಗಳು) ಪ್ರಾರಂಭಿಸಲಾಯಿತು ಮತ್ತು 29,990 ರೋಗಿಗಳಿಗೆ ದೀರ್ಘಾವಧಿಯ M/XDR-TB ಚಿಕಿತ್ಸಾ ವಿಧಾನಗಳನ್ನು (18-20 ತಿಂಗಳುಗಳು) ಪ್ರಾರಂಭಿಸಲಾಯಿತು.
ನಿಕ್ಷಯ ಪೋಷಣಾ ಯೋಜನೆಯ ಮೂಲಕ ಪೌಷ್ಟಿಕಾಂಶದ ಬೆಂಬಲ
ಅಪೌಷ್ಟಿಕತೆಯು ಕ್ಷಯರೋಗಕ್ಕೆ ಅಪಾಯಕಾರಿ ಅಂಶವಾಗಿದೆ ಮತ್ತು ಕ್ಷಯರೋಗಿಗಳ ಚೇತರಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಆರೋಗ್ಯವಂತರಿಗೆ ಹೋಲಿಸಿದರೆ ಅಪೌಷ್ಟಿಕತೆಯು ಸಕ್ರಿಯ ಟಿಬಿಯನ್ನು ಅಭಿವೃದ್ಧಿಪಡಿಸುತ್ತದೆ. ಡಬ್ಲ್ಯು ಎಚ್‌ ಒ ವರದಿ (2017) ಪ್ರಕಾರ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಸಕ್ರಿಯ ಟಿಬಿ ಹೊಂದಿರುವ ಜನರು ಸಾಮಾನ್ಯವಾಗಿ ಮರಣ ಪ್ರಮಾಣದಲ್ಲಿ ಎರಡರಿಂದ ನಾಲ್ಕು ಪಟ್ಟು ಹೆಚ್ಚಿರುತ್ತಾರೆ. ಔಷಧ-ಪ್ರೇರಿತ ಹೆಪಟೊಟಾಕ್ಸಿಸಿಟಿಯ ಐದು ಪಟ್ಟು ಅಪಾಯವೂ ಇದೆ.
ಈ ಪ್ರಬಲ ಸಹ-ಸಂಬಂಧದ ದೃಷ್ಟಿಯಿಂದ, ಕ್ಷಯರೋಗಿಗಳ ಸಂಪೂರ್ಣ ಚಿಕಿತ್ಸೆಯ ಅವಧಿಗೆ ಪೋಷಣೆಯನ್ನು ಬೆಂಬಲಿಸಲು ಸರ್ಕಾರವು ತಿಂಗಳಿಗೆ 500 ರೂ. ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಒದಗಿಸುವುದಕ್ಕಾಗಿ ಏಪ್ರಿಲ್ 2018 ರಲ್ಲಿ ನಿಕ್ಷಯ್ ಪೋಷಣಾ ಯೋಜನೆ (ಎನ್‌ ಪಿ ವೈ) ಯನ್ನು ಪರಿಚಯಿಸಿತು. ಇಲ್ಲಿಯವರೆಗೆ, 1 ಕೋಟಿಗೂ ಹೆಚ್ಚು ಕ್ಷಯರೋಗಿಗಳು ಪ್ರಯೋಜನ ಪಡೆದಿದ್ದಾರೆ. ಒಟ್ಟು ಮಾರ್ಚ್-2024 ರವರೆಗೆ, 2859.96 ಕೋಟಿ ರೂ. ಗೂ ಹೆಚ್ಚು ಹಣವನ್ನು ವಿತರಿಸಲಾಗಿದೆ.

ಮೂಲಸೌಕರ್ಯ ಹೆಚ್ಚಳ
ಸಕ್ರಿಯ ಕ್ಷಯ ಪ್ರಕರಣ ಪತ್ತೆಯಲ್ಲಿ ರೋಗನಿರ್ಣಯದ ಮೂಲಸೌಕರ್ಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಂಘಟಿತ ಪ್ರಯತ್ನಗಳ ಮೂಲಕ, ಕ್ಷಯ ಪ್ರಯೋಗಾಲಯ ಸೇವೆಗಳ ಮೂಲಸೌಕರ್ಯ ಗಮನಾರ್ಹವಾಗಿ ಹೆಚ್ಚಳವಾಗಿದೆ. ನಿರ್ದಿಷ್ಟ ಸೂಕ್ಷ್ಮದರ್ಶಕ ಕೇಂದ್ರಗಳು (DMC ಗಳು) ಕಳೆದ 9 ವರ್ಷಗಳಲ್ಲಿ ಶೇ.80 ರಷ್ಟು (2014 ರಲ್ಲಿದ್ದ 13583 ರಿಂದ 2023 ರಲ್ಲಿ 24449) ಹೆಚ್ಚಳವಾಗಿವೆ. ಅಲ್ಲದೆ, ಇಲ್ಲಿಯವರೆಗೆ 6196 ಹೊಸ ಆಣ್ವಿಕ (molecular) ರೋಗನಿರ್ಣಯ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಔಷಧ-ನಿರೋಧಕ ಕ್ಷಯ ಚಿಕಿತ್ಸಾ ಕೇಂದ್ರಗಳ ಸಂಖ್ಯೆ 2014 ರಲ್ಲಿದ್ದ 127 ರಿಂದ 2022 ರಲ್ಲಿ 792 ಕ್ಕೆ ಏರಿಕೆಯಾಗಿದೆ.
ಉಪ ರಾಷ್ಟ್ರೀಯ ರೋಗ-ಮುಕ್ತ ಪ್ರಮಾಣೀಕರಣ
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು/ಜಿಲ್ಲಾ ಮಟ್ಟದಲ್ಲಿ ಕ್ಷಯ ಸಾಂಕ್ರಾಮಿಕವನ್ನು ಮೇಲ್ವಿಚಾರಣೆ ಮಾಡಲು, ಆರೋಗ್ಯ ಸಚಿವಾಲಯವು ಸಮುದಾಯ ಮಟ್ಟದ ಸಮೀಕ್ಷೆ (ಇನ್ವರ್ಸ್ ಸ್ಯಾಂಪ್ಲಿಂಗ್ ಮೆಥಡಾಲಜಿ) ಮತ್ತು ಖಾಸಗಿ ವಲಯದಲ್ಲಿ ಔಷಧ ಮಾರಾಟದ ದತ್ತಾಂಶವನ್ನು ಪತ್ತೆಹಚ್ಚುವ ವಿಧಾನ ಮತ್ತು ಕಾರ್ಯಕ್ರಮಕ್ಕೆ ಕಡಿಮೆ ವರದಿ ಮಾಡುವ ಮಟ್ಟವನ್ನು ಅಳೆಯುವ ಮೂಲಕ ರೋಗದ ಹೊರೆಯನ್ನು ಅಂದಾಜು ಮಾಡುವ ಹೊಸ ಉಪಕ್ರಮವನ್ನು ಪರಿಚಯಿಸಿದೆ.
ಈ ವಿಧಾನದ ಮೂಲಕ, ಕ್ಷಯರೋಗದ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು/ಜಿಲ್ಲಾ ಮಟ್ಟದ ಅಂದಾಜುಗಳನ್ನು 2015ರ ಬೇಸ್‌ಲೈನ್‌ ಗೆ ಅನುಗುಣವಾಗಿ ಪಡೆಯಲಾಗುತ್ತದೆ ಮತ್ತು ಅಳೆಯಲಾಗುತ್ತದೆ.
• 2020 ರಲ್ಲಿ, ಕೇರಳ, ಲಕ್ಷದ್ವೀಪ, ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳು ಮತ್ತು 35 ಜಿಲ್ಲೆಗಳು ಕ್ಷಯ ಪ್ರಕರಣಗಳ ಹೊರೆಯಲ್ಲಿ ವಿವಿಧ ಹಂತದ ಕಡಿತವನ್ನು ಯಶಸ್ವಿಯಾಗಿ ಸಾಧಿಸಿವೆ. ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಮತ್ತು ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯನ್ನು ಕ್ಷಯ ಪ್ರಕರಣಗಳ ಹೊರೆಯಲ್ಲಿ ಶೇ. 80 ಕ್ಕಿಂತ ಹೆಚ್ಚು ಕಡಿತವನ್ನು ಸಾಧಿಸಿದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶ ಮತ್ತು ಮೊದಲ ಜಿಲ್ಲೆ ಎಂದು ಘೋಷಿಸಲಾಗಿದೆ. (ಎಸ್‌ ಡಿ ಜಿ ಗುರಿಗಳು).
• 2021 ರಲ್ಲಿ, 3 ರಾಜ್ಯಗಳು (ಕೇರಳ, ದಾದ್ರಾ ನಗರಹವೇಲಿ ದಿಯುದಮನ್‌ ಮತ್ತು ಪುದುಚೇರಿ) ಬೆಳ್ಳಿ (>40% ಕಡಿತ) ಮತ್ತು 5 ರಾಜ್ಯಗಳು (ಗುಜರಾತ್, ಹಿಮಾಚಲ ಪ್ರದೇಶ, ಸಿಕ್ಕಿಂ, ತ್ರಿಪುರಾ, ಲಡಾಖ್) ಕಂಚು (>20% ಕಡಿತ) ಪಡೆದವು. 8 ಜಿಲ್ಲೆಗಳು ಚಿನ್ನವನ್ನು ಪಡೆದರೆ (>60% ಕಡಿತ), 27 ಜಿಲ್ಲೆಗಳು ಬೆಳ್ಳಿ ಮತ್ತು 56 ಜಿಲ್ಲೆಗಳು ಕಂಚು ಪಡೆದಿವೆ.
• 2022 ರಲ್ಲಿ, ಕರ್ನಾಟಕವು ಬೆಳ್ಳಿ (>40% ಕಡಿತ) ಮತ್ತು ಜಮ್ಮು ಮತ್ತು ಕಾಶ್ಮೀರವು ಕಂಚು (>20% ಕಡಿತ) ಪಡೆಯಿತು. ಮೂರು ಜಿಲ್ಲೆಗಳು ಕ್ಷಯ ಮುಕ್ತ (>80% ಕಡಿತ), 17 ಜಿಲ್ಲೆಗಳು ಚಿನ್ನ (>60% ಕಡಿತ), 35 ಜಿಲ್ಲೆಗಳು ಬೆಳ್ಳಿ ಮತ್ತು 48 ಜಿಲ್ಲೆಗಳು ಕಂಚು ಪಡೆದಿವೆ.
ಭಾರತದ ಜಿ20 ಅಧ್ಯಕ್ಷತೆಯ ಸಮಯದಲ್ಲಿ ಉನ್ನತ ಮಟ್ಟದ ಗಮನ
ಈ ಕ್ರಮಗಳ ಹೊರತಾಗಿ, 2023 ರಲ್ಲಿ ಭಾರತದ ಜಿ20 ಅಧ್ಯಕ್ಷತೆಯ ಸಮಯದಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯವು ಜಾಗತಿಕ ಪ್ರಾಮುಖ್ಯತೆಯ ಆಯ್ದ ಕಾಳಜಿಗಳನ್ನು ಶ್ರದ್ಧೆಯಿಂದ ಪ್ರತಿಪಾದಿಸಿದೆ ಮತ್ತು ಪರಿಹರಿಸಿದೆ, ಇದರಲ್ಲಿ ಡಿಜಿಟಲ್ ಪರಿಹಾರಗಳನ್ನು ಬಳಸಿಕೊಂಡು ಆರೋಗ್ಯ ಸೇವೆಗಳ ಪರಿಣಾಮಕಾರಿತ್ವ ಮತ್ತು ವ್ಯಾಪ್ತಿಯನ್ನು ಸುಧಾರಿಸುವುದು; ಔಷಧೀಯ ಅಭಿವೃದ್ಧಿ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಕಾರವನ್ನು ಬಲಪಡಿಸುವುದು ಸೇರಿವೆ. ನವೆಂಬರ್ 2023 ರಲ್ಲಿ ಗುಜರಾತಿನ ಗಾಂಧಿನಗರದಲ್ಲಿ ನಡೆದ ಆರೋಗ್ಯ ಕಾರ್ಯಕಾರಿ ಗುಂಪುಗಳು ಮತ್ತು ಸಚಿವರ ಸಭೆಯ ಚರ್ಚೆಯಲ್ಲಿ “ಒಂದು ಆರೋಗ್ಯ” ವಿಧಾನ ಮತ್ತು ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (AMR) ಮೇಲೆ ತೀವ್ರವಾದ ಗಮನವನ್ನು ನೀಡಲಾಯಿತು. ಇವೆಲ್ಲವೂ ಕ್ಷಯ ರೋಗದ ವಿರುದ್ಧ ಭಾರತ ಮತ್ತು ಜಗತ್ತಿನ ಹೋರಾಟವನ್ನು ಪ್ರತಿಧ್ವನಿಸುತ್ತವೆ.
ಕೊನೆಯ ಮಾತು
ಕ್ಷಯವನ್ನು ಎದುರಿಸಲು ಸಮುದಾಯಗಳು ಮತ್ತು ವಿವಿಧ ಭಾಗೀದಾರರು ಮತ್ತು ಪಾಲುದಾರರನ್ನು ಒಳಗೊಂಡಂತೆ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುವ ಟೈಮ್‌ ಲೈನ್‌ ಗಳು ಮತ್ತು ಹೊಣೆಗಾರಿಕೆಯ ರಚನೆಗಳೊಂದಿಗೆ ವಿಶಾಲ ಆಧಾರಿತ ಕ್ರಿಯಾ ಯೋಜನೆ ಅಗತ್ಯವಿದೆ. ವಿಶ್ವ ಆರೋಗ್ಯ ಸಂಸ್ಥೆಯು TB (MAF-TB) ಗಾಗಿ ಬಹುವಲಯ ಹೊಣೆಗಾರಿಕೆಯ ಚೌಕಟ್ಟನ್ನು ರೂಪಿಸಿದೆ, ಇದನ್ನು 2019 ರಲ್ಲಿ ದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ. ಇದು ರಾಷ್ಟ್ರೀಯ ಕ್ರಿಯಾ ಯೋಜನೆಗಳಿಗೆ ಪೂರಕವಾಗಿದೆ. ಕ್ಷಯರೋಗ ಎಂಬ ಪಿಡುಗನ್ನು ಜಗತ್ತಿನಿಂದ ತೊಡೆದುಹಾಕಲು ಜಾಗತಿಕ ಗುರಿಗಳು ಮತ್ತು ಸಮಯಾವಧಿಗೆ ಅನುಗುಣವಾಗಿ ಈ ಕ್ರಿಯಾ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಈಗ ರಾಷ್ಟ್ರಗಳ ಜವಾಬ್ದಾರಿಯಾಗಿದೆ.

ಲೇಖಕರು
ಡಾ. ಮನೀಶಾ ವರ್ಮಾ ಅವರು ಹೆಚ್ಚುವರಿ ಮಹಾನಿರ್ದೇಶಕರು (ಮಾಧ್ಯಮ ಮತ್ತು ಸಂವಹನ), ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ.

Share this Article