ಹೆಚ್ಚುತ್ತಿರುವ ತಾಪಮಾನದಿಂದ ತೋಟಗಾರಿಕಾ ಬೆಳೆಗಳನ್ನು ರಕ್ಷಿಸುವ ಕ್ರಮಗಳು

Kalabandhu Editor
3 Min Read

 

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ‌ 06 (ಕರ್ನಾಟಕ ವಾರ್ತೆ); ಬೆಂಗಳೂರು ಗ್ರಾಮಾಂತರ ಜಿಲ್ಲೆಯು ನಾಲ್ಕು ತಾಲ್ಲೂಕುಗಳನ್ನು ಒಳಗೊಂಡು ಪೂರ್ವ ಒಣವಲಯಕ್ಕೆ ಸೇರಿರುತ್ತದೆ. ಪ್ರಮುಖವಾಗಿ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಹಣ್ಣಿನ ಬೆಳೆಗಳಾದ ಮಾವು, ದ್ರಾಕ್ಷಿ, ಸೀಬೆ, ಬಾಳೆ ಮತ್ತು ದಾಳಿಂಬೆ ಹಾಗೂ ತರಕಾರಿ ಬೆಳೆಗಳಾದ ಟೊಮ್ಯಾಟೋ, ಬದನೆ, ಕಡ್ಡಿ ಬೀನ್ಸ್, ಎಲೆ ಮತ್ತು ಹೂ ಕೋಸು, ಕುಂಬಳ ಜಾತಿ ತರಕಾರಿಗಳು, ಅಲ್ಲದೇ ಹೂವಿನ ಬೆಳೆಗಳಾದ ಗುಲಾಬಿ, ಸೇವಂತಿಗೆ ಮತ್ತು ಸುಗಂಧರಾಜ ಮತ್ತು ತೋಟದ ಬೆಳೆಗಳಾದ ತೆಂಗು, ಅಡಿಕೆ ಬೆಳೆಗಳನ್ನು ಸಹ ಬೆಳೆಯಲಾಗುತ್ತಿದೆ.
ಬಹುವಾರ್ಷಿಕ ಬೆಳೆಗಳಿಗೆ ತೇವಾಂಶ ಸಂರಕ್ಷಣೆಯ ಕ್ರಮಗಳಾಗಿ ಬುಡದ ಸುತ್ತ ಪಾತಿಯಲ್ಲಿ ಸಾವಯವ ತ್ಯಾಜ್ಯಗಳಾದ ತೆಂಗಿನ ಗರಿ, ತೆಂಗಿನ ಮಟ್ಟೆ, ತೆಂಗಿನ ನಾರು ಹಾಗೂ ಇತರೆ ಬೆಳೆ ತ್ಯಾಜ್ಯಗಳನ್ನು ಹೊದಿಕೆಯಾಗಿ ಹಾಸುವುದು. ನೀರಿನ ಉಳಿತಾಯ ಮತ್ತು ಸಮರ್ಪಕ ಬಳಕೆಗಾಗಿ ಕಡ್ಡಾಯವಾಗಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆಗೆ ಅನುಗುಣವಾಗಿ ನೀರು ನೀಡುವುದು.
ಗಿಡಗಳ ಎಲೆಗಳ ಮೂಲಕ ಭಾಷ್ಪೀಕರಣ (evaporation) ಕಡಿಮೆಗೊಳಿಸಲು ಎಲೆಗಳ ಮೇಲೆ Kaolin ಸಿಂಪರಣೆ (ಶೇ.5) ಮತ್ತು ಸೂರ್ಯನ ಕಿರಣಗಳಿಂದ ಸಂರಕ್ಷಿಸಲು ಸುಣ್ಣದ ಧೂಳೀಕರಣ ಅಥವಾ ಸಿಂಪರಣೆ ಮಾಡುವುದು.
ಬರ ನಿರೋಧಕತೆಯನ್ನು ಹೆಚ್ಚಿಸಿಕೊಳ್ಳಲು ಎಲೆಗಳ ಮೇಲೆ ಪೊಟ್ಯಾಶಿಯಂ ಸಲ್ಫೇಟ್ (0.2%) ಸಿಂಪಡಿಸುವುದು. ಎಲೆಗಳ ಮೂಲಕ ಭಾಷ್ಪೀಕರಣ ಕಡಿಮೆಗೊಳಿಸಲು ಶೇ. 30- 40 ರಷ್ಟು ರೆಂಬೆಗಳನ್ನು ಸವರುವುದರಿಂದರ (Pruning) ಎಲೆಗಳ ಭಾಷ್ಪೀಕರಣದ ವಿಸ್ತೀರ್ಣ ಕಡಿಮೆಗೊಳಿಸಲಾಗುವುದು.
ತರಕಾರಿ ಬೆಳೆಗಳನ್ನು ನಾಟಿ ಮಾಡುವಾಗ ಕಡ್ಡಾಯವಾಗಿ ಹನಿ ನೀರಾವರಿ ಮತ್ತು
ಪ್ಲಾಸ್ಟಿಕ್ ಹೊದಿಕೆ ಅಳವಡಿಸಿಕೊಳ್ಳುವುದರ ಜೊತೆಗೆ ಹೆಚ್ಚು ಸಾವಯವ ಅಂಶ ಭೂಮಿಗೆ ಸೇರಿಸುವುದರಿಂದ ತೇವಾಂಶದ ಸಂರಕ್ಷಣೆ ಮಾಡುವುದು.
ತರಕಾರಿ ನಾಟಿ ಮಾಡುವ ಸಮಯದಲ್ಲಿ ಪ್ಲಾಸ್ಟಿಕ್ ಹೊದಿಕೆ(mulching) ಅಳವಡಿಸಿಕೊಂಡು ಸಸಿಗಳನ್ನು ನಾಟಿ ಮಾಡುವ ಸಮಯದಲ್ಲಿ ಸಸಿಗಳ ಬುಡಗಳು ಪಾಲಿಥಿನ್ ಹೊದಿಕೆಗಳ ಸಂಪರ್ಕಕ್ಕೆ ಬಾರದಂತೆ ಮಾಡಲು ನಾಟಿ ಮಾಡುವ ರಂಧ್ರಗಳಲ್ಲಿ ಪೇಪರ್ ಕಪ್ಸ್ ಅಳವಡಿಸಿ ತರಕಾರಿ ಸಸಿಗಳನ್ನು ನಾಟಿ ಮಾಡುವುದು.
ತರಕಾರಿ ಬೆಳೆಗಳನ್ನು ಬೆಳೆಯುವಾಗ ಕಡಿಮೆ ಖರ್ಚಿನಲ್ಲಿ ನಿರುಪಯುಕ್ತ ಬಟ್ಟೆ ಮತ್ತು ಇತರೆ ನೆರಳು ಪರದೆಗಳನ್ನು ಕಟ್ಟುವುದರ ಮೂಲಕ ಬೆಳೆಗಳನ್ನು ಬಿಸಿಲಿನ ತಾಪಮಾನದಿಂದ ರಕ್ಷಿಸಿಕೊಳ್ಳಬಹುದು.
ತರಕಾರಿ ಬೆಳೆಗಳಲ್ಲಿ ಹೂ ಉದುರುವಿಕೆಯನ್ನು ಕಡಿಮೆಗೊಳಿಸಲು 40ppm NAA (Planofix) ಸಿಂಪರಣೆ ಮಾಡುವುದು. ಬೆಳೆಗಳ ತಾಕುಗಳ ಸುತ್ತ ಬಿಸಿಗಾಳಿಯನ್ನು ನಿಯಂತ್ರಿಸಲು ಮೇವಿನ ಜೋಳವನ್ನು ಬೆಳೆಯುವುದು ಹೊಸದಾಗಿ ನಾಟಿ ಮಾಡಿರುವ ಅಡಿಕೆ ಸಸಿಗಳ ಸಂರಕ್ಷಣೆಗೆ ನೈರುತ್ಯ ದಿಕ್ಕಿನ ಬಿಸಿಲಿನ ಸಂರಕ್ಷಿಸಲು ನಿರುಪಯುಕ್ತ ಬಟ್ಟೆ ಮತ್ತು ಇತರೆ ನೆರಳು ಪರದೆಗಳನ್ನು ‘ವಿ’ ಆಕಾರದಲ್ಲಿ ಕಟ್ಟುವುದು ಹಾಗು ಫಸಲು ನೀಡುವ ಅಡಿಕೆ ಮರದ ಬುಡಗಳಿಗೆ ಸುಣ್ಣದ ಲೇಪನ ಮಾಡುವುದು ಹಾಗೂ ನೈರುತ್ಯ ಭಾಗದಿಂದ ಬುಡಗಳನ್ನು ಅಡಿಕೆ ಪಟ್ಟೆಗಳನ್ನು ಕಟ್ಟಿ ಸಂರಕ್ಷಿಸುವುದು.
ಪಾಲಿ ಮನೆಗಳಲ್ಲಿ ತಾಪಮಾನ ಮತ್ತು ಬಿಸಿಲಿನಿಂದ ಸಂರಕ್ಷಿಸಲು ಶೇ. 75 ರಷ್ಟು ನೆರಳು ಪರದೆಯನ್ನು ಅಳವಡಿಸಿಕೊಳ್ಳುವುದು ಮತ್ತು ಪಾಲಿಮನೆಯ ಮೇಲ್ಛಾವಣಿಮೇಲೆ ಗೋಣಿ ಚೀಲಗಳನ್ನು ಹೊದಿಸಿ ಆಗಿಂದಾಗ್ಗೆ ನೀರು ಸಿಂಪರಣೆ ಮಾಡಿ ವಾತಾವರಣ ತಂಪು ಮಾಡುವುದು. ಪಾಲಿ ಮನೆಯಲ್ಲಿ ಉಷ್ಣತೆಯನ್ನು ಕಡಿಮೆ ಮಾಡಲು ಎಕ್ಸಾಸ್ಟ್ ಫ್ಯಾನ್‌ಗಳನ್ನು ಅಳವಡಿಸಿಕೊಂಡು ಬಿಸಿಗಾಳಿಯನ್ನು ಹೊರಹಾಕುವುದು.
ಪಾಲಿಮನೆಯ ಸುತ್ತ ಒಣಗಿದ ಹುಲ್ಲು ಮತ್ತು ಇತರೆ ದಹಿಸುವ ವಸ್ತುಗಳಿಂದ ಬೆಂಕಿಗೆ ತುತ್ತಾಗದಂತೆ ನೋಡಿ ಕೊಳ್ಳುವುದು. ತರಕಾರಿ ಮತ್ತು ಹೂವುಗಳನ್ನು ಕಡ್ಡಾಯವಾಗಿ ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಕಟಾವು ಮಾಡಿ ನೀರಿನಲ್ಲಿ ಅದ್ದುವುದು/ ಸಿಂಪಡಿಸುವುದು ಮತ್ತು ತಂಪಾದ ಜಾಗದಲ್ಲಿ ಶೇಖರಣೆ ಮಾಡುವುದು. ಅಂತರ್ಜಲ ಮಟ್ಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾವಿನ ತಾಕಿನಲ್ಲಿ ಮಳೆ ನೀರನ್ನು ಸಂಗ್ರಹಿಸಲು Trench and bunds ನಿರ್ಮಾಣ ಮಾಡುವುದು. ಕೃಷಿ ಹೊಂಡದಿಂದ ನೀರಿನ ಸಂರಕ್ಷಣೆ/ಮರುಪೂರಣ ಮಾಡುವುದರಿಂದ ಅಂತರ್ಜಲ ನಿರ್ವಹಣೆಯಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Article