ನಗೋದು ಕಷ್ಟವಲ್ಲ, ನಗಿಸೋದು ಸಹ ಸುಲಭವಲ್ಲ….

Kalabandhu Editor
4 Min Read

(ಚಾರ್ಲಿ ಚಾಪ್ಲಿನ್ ಜನ್ಮದಿನದ ಪ್ರಯುಕ್ತ ಪ್ರಸ್ತುತ ಲೇಖನ)

● ಚಾರ್ಲಿ ಚಾಪ್ಲಿನ್ ಲೋಕವನ್ನು ಪ್ರಭಾವಿಸಿದ ಮಹಾನ್ ಕಲಾವಿದ. ಇಂದು ಈ ಅಮರ ಕಲಾವಿದನ ಸಂಸ್ಮರಣೆ ದಿನ. ಚಾರ್ಲಿ ಚಾಪ್ಲಿನ್ 1889ರ ಏಪ್ರಿಲ್ 16 ರಂದು ಜನಿಸಿದ. ಚಾರ್ಲಿ ಚಾಪ್ಲಿನ್ ಹುಟ್ಟಿದ್ದು ವಾಲ್ ವರ್ತ್ ಎಂಬ ಲಂಡನ್ನಿನ ಸಮೀಪದ ಊರಿನಲ್ಲಿ. ಎಂಬತ್ತೆಂಟು ವರ್ಷ ಬದುಕಿ 1977 ರ ಕ್ರಿಸ್ಮಸ್ ದಿನದಂದು ಸ್ವಿಟ್ಸರ್ಲೆಂಡಿನಲ್ಲಿ ನಿಧನನಾದ. ಚಾಪ್ಲಿನ್ ಚಿತ್ರಗಳನ್ನು ಆಸ್ವಾದಿಸಿದ ನಮಗೆ ಚಾಪ್ಲಿನ್ನನಷ್ಟ ಆತ್ಮೀಯರು ಮತ್ತೊಬ್ಬರಿದ್ದಾರೆಯೇ ಎನಿಸುತ್ತದೆ. ಇಡೀ ವಿಶ್ವಕ್ಕೆ ಸಂತೋಷ ಕೊಟ್ಟ ಅಪರೂಪದ ವ್ಯಕ್ತಿ ಆತ. ಚಾಪ್ಲಿನ್ನನಿಗೆ ಹೇಳಬೇಕೆನಿಸುತ್ತಿದೆ “ಚಾಪ್ಲಿನ್ ನೀನು ಯಾವ ಲೋಕದಲ್ಲಿದ್ದರೂ ಅಲ್ಲಿನ ಜನರನ್ನು ಸಂತೋಷವಾಗಿ ಇಟ್ಟಿರುವೆ” ಎಂದು.

● ‘ದಿ ಟ್ರಂಪ್’, ‘ಮಾಡರ್ನ್ ಟೈಮ್ಸ್’, ‘ದಿ ಗ್ರೇಟ್ ಡಿಕ್ಟೇಟರ್’, ‘ಸಿಟಿ ಲೈಟ್ಸ್’, ’ದಿ ಸರ್ಕಸ್’, ‘ಗೋಲ್ಡ್ ರಷ್’ ಮುಂತಾದ ಚಿತ್ರಗಳಲ್ಲಿ ಆತ ನಡೆದದ್ದು, ಕುಣಿದದ್ದು, ಪ್ರೇಮಿಸಿದ್ದು, ಆಟ ಆಡಿದ್ದು, ಪೆಚ್ಚನಂತೆ ನಕ್ಕದ್ದು, ಹೀಗೆ ಆತ ಚಿತ್ರದಲ್ಲಿ ಮಾಡಿದ್ದು ಮತ್ತು ಮಾಡದೆ ಸುಮ್ಮನಿದ್ದದು ಎಲ್ಲವೂ ಪ್ರಿಯವೋ ಪ್ರಿಯ.

● ಜಾರ್ಜ್ ಬರ್ನಾಡ್ ಷಾ ಹೇಳುತ್ತಿದ್ದರು, “ಚಿತ್ರರಂಗದಿಂದ ಹೊರಬಂದ ಏಕೈಕ ಜೀನಿಯಸ್ ಅಂದರೆ ಚಾರ್ಲಿ ಚಾಪ್ಲಿನ್” ಉಳಿದವರ ಮೇಲೆ ಅವರಿಗೆ ಸಿಟ್ಟೋ, ಅಥವಾ ಅವರ ಕಾಲದಲ್ಲಿ ಚಾರ್ಲಿ ಚಾಪ್ಲಿನ್ ಅಷ್ಟು ಸಕ್ರಿಯರಿರಲಿಲ್ಲವೋ ಅಥವಾ ನಮ್ಮಂತವರಿಗೆ ಚಾಪ್ಲಿನ್ ಹಿಡಿಸಿದ ಹುಚ್ಚಿನ ಪರಾಕಾಷ್ಠೆ ಷಾ ಅವರಿಗೆ ಕೂಡ ಹಿಡಿಸಿತ್ತೆ? ಅದೇನೇ ಇರಲಿ, ಆತ ವಿಶ್ವದೆಲ್ಲೆಡೆ ತನ್ನ ಚರ್ಯೆಯ ಮೂಲಕ ನಗುವನ್ನು, ಬದುಕಿನ ಅರ್ಥವನ್ನು, ಹೃದಯದ ಕದ ತಟ್ಟುವ ಸುಂದರತೆಯನ್ನು ಎಲ್ಲಾ ಸಿದ್ಧಾಂತಗಳಿಗೂ ತಿಲಾಂಜಲಿ ಇಟ್ಟಂತೆ ಬದುಕಿನ ಸಾಮಾನ್ಯತೆಯಲ್ಲಿ ಬಿಂಬಿಸಿದವ.

● ಮನುಷ್ಯನ ಸ್ವಾರ್ಥಗಳು, ಅದಕ್ಕಾಗಿ ಅವರು ಲೋಕವನ್ನು ಹೀನಾಯ ಸ್ಥಿತಿಗೆ ಕೊಂಡೊಯ್ಯುವ ಪರಿ-ಪರಿಯನ್ನು ಚಾಪ್ಲಿನ್ ಹೇಳುವ ರೀತಿ, ಹಾಸ್ಯದ ಮಧ್ಯೆಯೂ ಮನಸ್ಸನ್ನು ತಟ್ಟುತ್ತದೆ. ಒಂದು ಚಿತ್ರದಲ್ಲಿ ಆತ ಸೈನಿಕನಾಗಿ ಹಿಮಾವೃತ ಪ್ರದೇಶದಲ್ಲಿ ತನ್ನ ಸೈನಿಕರ ಒಡನೆ ಹೋಗುತ್ತಿರುತ್ತಾನೆ. ಇದ್ದಕ್ಕಿದ್ದಂತೆ ತನ್ನ ಕಪಿ ಬುದ್ಧಿಯ ಮೊದ್ದು ತನದಲ್ಲಿ ಹಿಂದುಳಿದು, ಗುಡು ಗುಡು ಓಡಿ ಶತ್ರು ಸೈನ್ಯದ ಸೈನಿಕರೊಡನೆ ಒಬ್ಬನಾಗಿ ನಡೆಯತೊಡಗುತ್ತಾನೆ. ಯಾರು ಏನಕ್ಕೆ, ಯಾತಕ್ಕಾಗಿ ಯುದ್ಧ ಮಾಡುತ್ತಾರೆ ಎಂದು ಗೊತ್ತು ಗುರಿ ಇಲ್ಲದ ಮನೋಭಾವವನ್ನು ಮೂಡಿಸುವ ಆ ಸನ್ನಿವೇಶವನ್ನು ನೆನೆದಾಗಲೆಲ್ಲ, ಇಂದೂ ಅರ್ಥ ತಾತ್ಪರ್ಯಗಳಿಲ್ಲದ ಮಾನವ ಗಡಿ ರೇಖೆಗಳನ್ನು ನಿರ್ಮಿಸಿ ಹಿಮಪರ್ವತಗಳ ಚಳಿಯಲ್ಲಿ ಮರುಭೂಮಿಯ ಬಿಸಿಲಿನಲ್ಲಿ ಮನುಷ್ಯರನ್ನು ಹಗಲು ರಾತ್ರಿ ನಿಲ್ಲಿಸಿ ನಿರ್ಮಿಸಿರುವ ಆಧುನಿಕ ಸಮಾಜ ಎಂದು ಹೇಳಿಕೊಳ್ಳುವ, ಇಂದಿನ ಮುಂದುವರಿದ ಸಮಾಜ ಮತ್ತು ದೇಶ ವ್ಯವಸ್ಥೆಗಳ ಬಗೆಗೆ ಪ್ರಶ್ನೆ ಕಾಡುತ್ತದೆ! ಚಾಪ್ಲಿನ್ ನಗಿಸುತ್ತಲೇ ಹೇಳುವ ಕಥೆಯ ಪರಿ ಅಷ್ಟೊಂದು ಪ್ರಭಾವಯುತ.

● ಮಾನವನನ್ನು ಯಂತ್ರೀಕರಿಸುವ ಆತನ ‘ಮಾಡರ್ನ್ ಟೈಮ್ಸ್’ ಮೋಜು ಅಸಾಮಾನ್ಯವಾದದ್ದು. ಸ್ಪ್ಯಾನರ್ ಹಿಡಿದು ಸ್ಕ್ರೂ ತಿರುಗಿಸುತ್ತ ಸಿಕ್ಕವರನ್ನೆಲ್ಲಾ ತಿರುಗಿಸುವ ಆತನ ಪುಟು ಪುಟುತನ ನನಗೆ ರೋಮಾಂಚನ ಮೂಡಿಸುತ್ತೆ. ಅದರಲ್ಲೂ ಆತ ಆತನ ಕೆಲಸದ ಬರದಲ್ಲಿ ಯಂತ್ರದೊಳಗೆ ಹೋಗಿ ಪುನಃ ಹಿಂದಿರುಗಿ ಬರುವ ರೀತಿಯ ಹುಚ್ಚುತನ ನಮ್ಮನ್ನು ಕುಣಿದು ಕುಪ್ಪಳಿಸುವಂತೆ ಮಾಡುತ್ತದೆ. ಊಟ ತಿನ್ನಿಸುವ ಯಂತ್ರ ಕಂಡು ಹಿಡಿದು ಚಾಪ್ಲಿನ್ ಅನ್ನು ಆ ಯಂತ್ರವನ್ನು ಪರೀಕ್ಷಿಸಲು ಉಪಯೋಗಿಸುವ ರೀತಿ ನಾವು ಕಂಪ್ಯೂಟರ್ ಪ್ರೋಗ್ರಾಮ್ ಟೆಸ್ಟ್ ಮಾಡುವ ರೀತಿಯನ್ನೂ ಮತ್ತು ಅವುಗಳ ಹುಚ್ಚುತನದ ವಿಡಂಭನೆಗಳ ಜೊತೆ ತಾದ್ಯಾತ್ಮವನ್ನು ಕಲ್ಪಿಸುವಂತೆಯೂ ಮಾಡುತ್ತವೆ. ಈ ವಿಡಂಭನೆಗಳ ಆಳದಲ್ಲಿ ಹುಡುಕಿದಾಗ ಕಾಯಕದಲ್ಲಿ ವೈಶಿಷ್ಟ್ಯತೆ ಎಂಬ specialisation ನಿರ್ಮಿಸಿ ಮನುಷ್ಯ ಹೇಗೆ ಒಟ್ಟಾರೆಯ ಒಂದು ಕಿರುಭಾಗವಾಗಿ ತನ್ನ ಸಂಪೂರ್ಣತೆಯನ್ನು ಕಳೆದುಕೊಂಡಿದ್ದಾನೆ ಎಂಬ ಆತ್ಮಶೋಧನೆಯೂ ನಮ್ಮಲ್ಲಿ ಏರ್ಪಡುತ್ತದೆ.

● ಇನ್ನೊಮ್ಮೆ ಆತ ಊರಾಚೆಯಲ್ಲಿ ನೀರಿನ ಬದಿಯಲ್ಲಿ ಸ್ವಲ್ಪ ಮೇಲೆ ನಿರ್ಮಿಸಿರುವ ಗುಡಿಸಿಲಿನಂತ ತನ್ನ ಪ್ರೇಯಸಿಯ ಮನೆಗೆ ಬರುತ್ತಾನೆ. ಮನೆಯ ಹಿಂಬಾಗಿಲು ತೆಗೆದು ನೀರನ್ನು ನೋಡಿ ಖುಷಿಯಾಗಿ ತನ್ನ ಬಟ್ಟೆ ಕಳಚಿ ನೀರಿಗೆ ಡೈವ್ ಮಾಡಿ ಮುಕ್ಕಾಲು ಅಡಿಯ ನೀರೂ ಇರದ ಹಳ್ಳದಲ್ಲಿ ಮುಖ ಮೂತಿ ಒಡೆದು ಕೊಳ್ಳುತ್ತಾನೆ! ಮತ್ತೊಮ್ಮೆ ದುಡ್ಡಿಲ್ಲದೆ ಹೋಟೆಲ್ನಲ್ಲಿ ತಿಂದು ಏನು ಮಾಡುವುದೆಂದು ತೋಚದೆ ಇರುತ್ತಾನೆ. ಆಗ ಮತ್ತೊಬ್ಬ ಇಟ್ಟ ಟಿಪ್ಸ್’ನಲ್ಲಿ ತನ್ನ ಬಿಲ್ಲು ಇಟ್ಟು ಅದರಲ್ಲೂ ಮಿಕ್ಕ ಹಣವನ್ನು ಹೋಟೆಲ್ ಮಾಣಿ ತಂದಿಟ್ಟಾಗ ‘ಇದು ನಿನಗೆ ಟಿಪ್ಸ್’ ಎಂದು ಸೊಗಸಿನ ಸೋಗು ಹಾಕುತ್ತಾನೆ!

● ಹೀಗೆ ಚಾರ್ಲಿ ಚಾಪ್ಲಿನ್ ಅಂದರೆ ಅದೊಂದು ಅನುಭವ. ನಮ್ಮನ್ನು ನಾವು ಮರೆಸಿಕೊಂಡು, ನಮ್ಮ ಸಂತೋಷವನ್ನು ಮೆರೆಸಿ ಬದುಕನ್ನು ಔನ್ನತ್ಯವಾಗಿಸಿಕೊಳ್ಳುವ ಸೊಬಗು. ಆತನನ್ನು ಬಹಳಷ್ಟು ಜನ ಅನುಕರಿಸಿದರು. ಇಂದೂ ಅನುಕರಿಸುತ್ತಿದ್ದಾರೆ. ಆದರೆ ಆತನ ಸಮೀಪ ಕೂಡ ಯಾರೂ ಬರಲಿಲ್ಲ. ಆದರೆ ಆತ ಕಲೆಗೆ ಕೊಟ್ಟ ಪರಂಪರೆ ಮಾತ್ರ ಅತೀ ದೊಡ್ಡದು. ಅದು ಉಳಿದಿದೆಯೇ ಎಂದು ಹೇಳುವುದು ಮಾತ್ರ ಕಷ್ಟ. ರಾಜ್ ಕಪೂರ್, ಕಮಲಹಾಸನ್ ಮುಂತಾದ ನಟರು ಚಾಪ್ಲಿನ್ ನಟನೆಯ ಹಲವಾರು ಅಂಶಗಳನ್ನು ತಮ್ಮ ಅಭಿನಯದಲ್ಲಿ ಬಳಸಿಕೊಂಡರು. ಕನ್ನಡದಲ್ಲಿ ಯಶಸ್ವಿಯಾದ ‘ಅನುರಾಗ ಸಂಗಮ’ ಎಂಬ ರಮೇಶ್, ಸುಧಾರಾಣಿ, ಕುಮಾರ್ ಗೋವಿಂದ್ ನಟಿಸಿದ ಚಿತ್ರ ‘ಸಿಟಿ ಲೈಟ್ಸ್’ ಕಥೆ ಆಧರಿಸಿದ್ದು ಎಂದು ಸಿಟಿ ಲೈಟ್ಸ್ ನೋಡಿದ್ದವರಿಗೆ ತಕ್ಷಣ ಅರ್ಥವಾಗುತ್ತದೆ. ಚಾರ್ಲಿ ಚಾಪ್ಲಿನ್ ಈ ಲೋಕದಿಂದ ನಿರ್ಗಮಿಸಿದ್ದು 1977 ರ ಕ್ರಿಸ್ಮಸ್ ಹಬ್ಬದ ದಿನ. ಎಲ್ಲರೂ ಹಬ್ಬದ ಸಂತಸದಲ್ಲಿ ನಗುನಗುತ್ತಿರುವಾಗ ಮೆಲ್ಲಗೆ ತೆರೆಮರೆಗೆ ಸರಿದುಬಿಟ್ಟ. ಹೀಗೇ ಆಯಸ್ಸು ಊದ್ದಕ್ಕೂ ಎಲ್ಲರನ್ನು ನಟಿಸುತ್ತಿಲ್ಲ ಸಾಗಿದ ಜೀವ ಅದು. ಆದ್ದರಿಂದ ನಮ್ಮ ಆಯಸ್ಸು ವೃದ್ಧಿಗಾಗಿ ನಗೋಣ, ಇತರರನ್ನು ನಗಿಸೋಣ. ನಗೋದು ಸುಲಭವಲ್ಲ, ನಗಿಸೋದು ಸಹ ಸುಲಭವಲ್ಲ ಅಲ್ಲವೇ ಸ್ನೇಹಿತರೇ….

ಎನ್.ಎನ್.ಕಬ್ಬೂರ
ಶಿಕ್ಷಕರು ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452

Share this Article