ದೇಶದ 135 ಕೋಟಿ ಜನರಿಗೆ ಸಮ ಸಮಾಜದ ವ್ಯವಸ್ಥೆ ಬಂದಾಗ ದೇಶ ಸದೃಢವಾಗಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

Kalabandhu Editor
2 Min Read

ಹರಿಹರ : ದೇಶದಲ್ಲಿರುವ 135 ಕೋಟಿ ಜನರಿಗೆ ಸಮ ಸಮಾಜದ ವ್ಯವಸ್ಥೆ ಬಂದಾಗ ಮಾತ್ರ ಭಾರತ ದೇಶ ಸದೃಢ ದೇಶವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರಪೀಠ ಆಯೋಜಿತ ಮಹರ್ಷಿ ವಾಲ್ಮೀಕಿ ಜಾತ್ರೆ- 2024 ಶ್ರೀಮಠದ 26 ನೇ ವಾರ್ಷಿಕೋತ್ಸವ,ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 17 ನೇ ವರ್ಷದ ಪುಣ್ಯಾರಾಧನೆ ಹಾಗೂ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರ 16 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದಲ್ಲಿ ನಡೆದ ಜನ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.


ಪ್ರಸ್ತುತ ಜಾತಿ ಜಾತಿಗಳನ್ನು ಒಡೆಯುವ ಕೆಲಸವನ್ನು ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿವೆ. ಸಮಸಮಾಜದ ಆಶಯವನ್ನೇ ಸಂವಿಧಾನ ಪ್ರತಿಪಾದಿಸುತ್ತದೆ. ಸಂವಿಧಾನದ ಆಶಯಗಳನ್ನು ಜಾರಿಗೆ ತರುವುದೇ ನಮ್ಮ ಸರ್ಕಾರದ ಗುರಿಯಾಗಿದೆ.ಸಹಿಷ್ಣುತೆ ಹಾಗೂ ಸಹಬಾಳ್ವೆಯನ್ನು ಮಾಡಬೇಕೆಂದು ಸಂವಿಧಾನ ಹೇಳುತ್ತದೆ.ಎಸ್ ಸಿ,ಎಸ್ ಟಿ,ಹಿಂದುಳಿದ ವರ್ಗ,
ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ದೊರೆತಲ್ಲಿ ಉತ್ತಮವಾಗಿ ಜೀವನ ರೂಪಿಸಿ ಕೊಳ್ಳುತ್ತಿದ್ದರು.ಇವರಿಗೆ ಸಮಾನ ಅವಕಾಶಗಳು ದೊರೆತಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ ಜಿಲ್ಲೆಗಳಲ್ಲಿರುವ ಪರಿವಾರ, ತಳವಾರ ಜನಾಂಗದವರನ್ನು ಕೂಡಲೇ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ತೀರ್ಮಾನ ಮಾಡಲಾಗಿದೆ. ಕೂಡಲೇ ಈ ಬಗ್ಗೆ ಸಭೆ ಕರೆದು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಸಭಿಕರ ಕರತಾಡಣದ ಮಧ್ಯೆ ಘೋಷಿಸಿ,ಕೇಂದ್ರ ಸರ್ಕಾರ ಈಗಾಗಲೇ ಈ ಸಮುದಾಯವನ್ನು ಎಸ್.ಟಿ ಗೆ ಸೇರ್ಪಡೆ ಮಾಡಿದೆ. ಇಲ್ಲಿ ಇನ್ನೂ ಈ ಪ್ರವರ್ಗದಲ್ಲಿರುವ ನಿಮ್ಮ ಮೇಲಿದ್ದ ಎಲ್ಲಾ ಪ್ರಕರಣಗಳನ್ನು ವಾಪಸ್ಸು ಪಡೆಯಲು ಸೂಚನೆ ನೀಡಲಾಗಿದೆ ಎಂದರು.

ಬುದ್ಧಿವಂತಿಕೆ ಎನ್ನುವುದು ಯಾರ ಸ್ವತ್ತಲ್ಲ:

ಅಕ್ಷರ ಸಂಸ್ಕೃತಿಯಿಂದ ವಂಚಿತರಾದಾಗ ಸಾಮಾಜಿಕ ಆರ್ಥಿಕ ಅಸಮಾನತೆ ನಿರ್ಮಾಣವಾಗಿರುವುದು. ವಿದ್ಯೆ, ಬುದ್ಧಿವಂತಿಕೆ ಯಾರ ಸ್ವತ್ತಲ್ಲ. ಬುದ್ಧಿ, ಜ್ಞಾನ ಪಡೆದಾಗ ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯ.ಎಲ್ಲರಿಗೂ ಸಮಾನ ಎಂಬ ಭಾವ ಬರಲು ಸ್ವಾಭಿಮಾನ ಅಗತ್ಯ ಎಂದು ಪ್ರತಿಪಾದಿಸಿದರು.

ಬೇಡ ಜನಾಂಗದಲ್ಲಿ ಜನಿಸಿದ ವಾಲ್ಮೀಕಿಯವರು ರಾಮಾಯಣ ರಚಿಸಿ ಮಹರ್ಷಿಯಾದರು.
ರಾಮಾಯಣ ಮಹಾನ್ ಗ್ರಂಥ. ಮಹಾನ್ ಗ್ರಂಥಗಳನ್ನು ಮೇಲ್ಜಾತಿಯವರು ಮಾತ್ರ ರಚಿಸಲು ಸಾಧ್ಯವೆಂಬ ಪ್ರತೀತಿಯಿತ್ತು.ಕಾವ್ಯ ಸಾಹಿತ್ಯವನ್ನು ಶೂದ್ರರು ರಚಿಸಬಹುದೆಂಬುದನ್ನು ಮಹರ್ಷಿ ವಾಲ್ಮೀಕಿ ನಿರೂಪಿಸಿದರು.
ಶ್ರೀರಾಮಚಂದ್ರನ ಕಾಲದಲ್ಲಿಯೇ ಸಮಾನ ಸಮಾಜದ ಹಾಗೂ ಪ್ರಜಾಪ್ರಭುತ್ವದ ಪರಿಕಲ್ಪನೆಯಿತ್ತು.ಪ್ರಜೆಗಳೇ ಆಡಳಿತ ನಡೆಸುವ ಪ್ರಜಾಪ್ರಭುತ್ವದ ಮೂಲವನ್ನು ರಾಮಾಯಣ ಕಾಲದಲ್ಲಿ ಕಾಣಬಹುದು, ಬಸವಾದಿ ಶರಣರು ತಿಳಿಸಿದಂತೆ ವರ್ಗರಹಿತ,ಜಾತಿರಹಿತ, ಸಮಾನ ಅವಕಾಶ ನೀಡುವ ಸಮಾಜ ನಿರ್ಮಾಣವಾದಾಗ ಮಾತ್ರ ರಾಮರಾಜ್ಯ ಎಂದು ಹೇಳಬಹುದು ಎಂದು ತಿಳಿಸಿದರು.
ಶ್ರೀವಾಲ್ಮೀಕಿ ಗುರುಪೀಠ ಪ್ರಸನ್ನಾನಂದ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಹಿಸಿದ್ದರು.ಸಚಿವರಾದ ಸತೀಶ್ ಜಾರಕಿಹೊಳಿ,ಡಾ.ಜಿ.ಪರಮೇಶ್ವರ್,ಕೆ.ಹೆಚ್.ಮುನಿಯಪ್ಪ, ಬಿ.ನಾಗೇಂದ್ರ ಮುಂತಾದವರು ವಾಲ್ಮೀಕಿ ಸಮಾಜದ ಬಗ್ಗೆ ಮಾತನಾಡಿದರು.
ಈ ಸಮಯದಲ್ಲಿ ವಿಧಾನಸಭಾ ಉಪ-ಸಭಾಪತಿ ರುದ್ರಪ್ಪ ಲಮಾಣಿ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕರುಗಳಾದ ಗಣೇಶ್, ಕೆ.ಎಸ್.ಬಸವಂತಪ್ಪ, ಲತಾ ಮಲ್ಲಿಕಾರ್ಜುನ್,ಎನ್.ವೈ. ಗೋಪಾಲಕೃಷ್ಣ, ಬಸವನಗೌಡ ತರವಿಹಾಳ್, ಎನ್.ರಘುಮೂರ್ತಿ, ಆರ್.ರಾಜೇಂದ್ರ, ಬಸವನಗೌಡ ದದ್ದಲ್, ಮಾಜಿ ಶಾಸಕರುಗಳಾದ ತುಕಾರಾಂ, ಎಸ್. ರಾಮಪ್ಪ, ಅಜ್ಜಂಪೀರ್ ಖಾದ್ರಿ, ಕಾಂಗ್ರೆಸ್ ಯುವ ನಾಯಕ ವಿನಯ್ ಕುಮಾರ್, ಎನ್ಎಚ್ ಶ್ರೀನಿವಾಸ್ ನಂದಿಗಾವಿ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

Share this Article