ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ
ಕೇಂದ್ರ ಸರ್ಕಾರದ ಮಹತ್ವದ ಜನೋಪಯೋಗಿ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವಲ್ಲಿ ನೆರವಾಗಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಕರ್ನಾಟಕದ ಚಾಮರಾಜನಗರ, ಮೈಸೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.
ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಪ್ರಚಾರ ವಾಹನವು ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಾದ ಯರಿಯೂರು ಹಾಗೂ ಅರಕಲವಾಡಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಸಂಚರಿಸಿ ಯೋಜನೆಯ ಪ್ರಯೋಜನ ಪಡೆಯುವ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಒದಗಿಸಿತು. ಹೊನ್ನಹಳ್ಳಿ ಮತ್ತು ಅರಕಲವಾಡಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳ ಬಗ್ಗೆ ಅರಕಲವಾಡಿ ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಪಿ.ಭರತ್ ಅವರು ಬ್ಯಾಂಕ್ ಮೂಲಕ ದೊರೆಯುವ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಅಡುಗೆ ಅನಿಲ ಸಂಪರ್ಕದ ಸೌಲಭ್ಯ ಮತ್ತು ಪ್ರಯೋಜನದ ಬಗ್ಗೆ ತಿಳಿಸಿಕೊಡಲಾಯಿತು. ನೆರೆದಿದ್ದ ಸಾರ್ವಜನಿಕರಿಗೆ ಉಚಿತವಾಗಿ ಕ್ಯಾಲೆಂಡರ್ ಹಾಗೂ ಕಿರುಪುಸ್ತಕಗಳನ್ನು ವಿತರಿಸಲಾಯಿತು.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬೋಳನಹಳ್ಳಿಗೆ ತೆರಳಿದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಪ್ರಚಾರ ವಾಹನವು ಜನರಲ್ಲಿ ಉಜ್ವಲ ಯೋಜನೆ, ಕಿಸಾನ್ ಸಮ್ಮಾನ್ ಫಸಲ್ ಬಿಮಾ ಯೋಜನಗಳ ಬಗ್ಗೆ ಮಾಹಿತಿ ನೀಡಿತು. ರಾಷ್ಟ್ರೀಯ ರಾಸಾಯನಿಕ ಹಾಗೂ ರಸಗೊಬ್ಬರ ಸಂಸ್ಥೆಯು ಮಣ್ಣು ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆ ನೀಡಿತು.
ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂದು ಚಿಕ್ಕಮಗಳೂರಿನ ಯಗಟಿಪುರದಲ್ಲಿ ಲೀಡ್ ಬ್ಯಾಂಕ್ ವತಿಯಿಂದ ಮಾಹಿತಿ ಶಿಬಿರ ಆಯೋಜಿಸಲಾಯಿತು. ಗ್ರಾಮೀಣ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಪರಿಚಯಿಸಲಾಗಿರುವ ಜಲ ಜೀವನ ಮಿಷನ್ ಸೇರಿದಂತೆ ಅನೇಕ ಯೋಜನೆಗಳ ಮಾಹಿತಿಯನ್ನು ಅಧಿಕಾರಿಗಳು ಸಾರ್ವಜನಿಕರಿಗೆ ನೀಡಿದರು.
ಅಂತರಗಟ್ಟ ಗ್ರಾಮದಲ್ಲೂ ಇಂದು ವಿಕಸಿತ ಭಾರತ ಸಂಕಲ್ಪ ಯಾತ್ರೆ ನಡೆಯಿತು. ಗ್ರಾಮದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ಸುರೇಶ್ ಮಾತನಾಡಿ, ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ಜನೌಷಧಿ ಕೇಂದ್ರ ಹಾಗು ಯಂತ್ರೋಪಕರಣಗಳ ಖರೀದಿಗೆ ಸರ್ಕಾರ ನೀಡುವ ಸಹಾಯಧನದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಅಂತರಗಟ್ಟ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರಿಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಪ್ರತಿಜ್ಞೆ ಬೋಧಿಸಲಾಯಿತು. ಕಡೂರಿನಲ್ಲಿ ಆರ್ ಸಿ ಎಫ್ ವತಿಯಿಂದ ಡ್ರೋನ್ ಪ್ರಾತ್ಯಕ್ಷಿಕೆ ನಡೆಯಿತು.
ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಸಾಮಾನ್ಯರು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಹಾಗೂ ಅವುಗಳ ಪ್ರಯೋಜನ ಪಡೆಯಲು ಉತ್ಸುಕತೆ ತೋರುತ್ತಿದ್ದಾರೆ.