Wednesday, November 29, 2023
Homeಇದೀಗ ಬಂದ ತಾಜಾ ಸುದ್ದಿಜಾಗತಿಕ ಡಿಜಿಟಲ್ ಪಾವತಿ ವ್ಯವಸ್ಥೆಗಳ ನಾಯಕ ಭಾರತದ ಯುಪಿಐ

ಜಾಗತಿಕ ಡಿಜಿಟಲ್ ಪಾವತಿ ವ್ಯವಸ್ಥೆಗಳ ನಾಯಕ ಭಾರತದ ಯುಪಿಐ

ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಗಮನಸೆಳೆದ ಭಾರತೀಯ ಆವಿಷ್ಕಾರ ಯಾವುದಾದರೂ ಇದ್ದರೆ ಅದು ನಿಸ್ಸಂದೇಹವಾಗಿಯೂ ʻಯುಪಿಐʼ(ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಪಾವತಿ ವ್ಯವಸ್ಥೆಯೇ ಸರಿ. ಇಂದು, ಭಾರತದಲ್ಲಿ ಮಾಡಿದ ಎಲ್ಲಾ ಪಾವತಿಗಳಲ್ಲಿ ಶೇ. 40ಕ್ಕಿಂತಲೂ ಹೆಚ್ಚು ಡಿಜಿಟಲ್  ಸ್ವರೂಪದಲ್ಲಿದ್ದು, ʻಯುಪಿಐʼ ಇದರಲ್ಲಿ ಸಿಂಹಪಾಲನ್ನು ಹೊಂದಿದೆ. 30 ಕೋಟಿಗೂ ಹೆಚ್ಚು ವ್ಯಕ್ತಿಗಳು ಮತ್ತು 5 ಕೋಟಿಗೂ ಹೆಚ್ಚು ವ್ಯಾಪಾರಿಗಳು ಇದನ್ನು ಬಳಸುತ್ತಾರೆ.

ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್‌ಗಳವರೆಗೆ ಎಲ್ಲಾ ಹಂತಗಳಲ್ಲಿ ʻಯುಪಿಐʼ ಅನ್ನು ಬಳಸಲಾಗುತ್ತಿದೆ. ಇಂದು, ವಿಶ್ವದ ಎಲ್ಲಾ ದೇಶಗಳ ಪೈಕಿ, ಭಾರತವು ಅತಿ ಹೆಚ್ಚು ಡಿಜಿಟಲ್ ವಹಿವಾಟು ಹೊಂದಿರುವ ದೇಶವಾಗಿ ಹೊರಹೊಮ್ಮಿದೆ. 2022ರ ಅಂಕಿಅಂಶಗಳ ಪ್ರಕಾರ ಇದರಲ್ಲಿ ಭಾರತ ಸುಮಾರು ಶೇ. 46ರಷ್ಟು ಪಾಲನ್ನು ಹೊಂದಿದೆ.  ಭಾರತದ ನಂತರದ ಸ್ಥಾನಗಳಲ್ಲಿ ಬ್ರೆಜಿಲ್, ಚೀನಾ, ಥೈಲ್ಯಾಂಡ್ ಮತ್ತು ದಕ್ಷಿಣ ಕೊರಿಯಾ ಇವೆ.  2016ರಲ್ಲಿ ಕೇವಲ ಒಂದು ದಶಲಕ್ಷ ವಹಿವಾಟುಗಳನ್ನು ಹೊಂದಿದ್ದ ʻಯುಪಿಐʼ, ಈಗ 10 ಶತಕೋಟಿ (1,000 ಕೋಟಿ) ವಹಿವಾಟುಗಳ ಮೈಲುಗಲ್ಲು ದಾಟಿದೆ.

ʻಯುಪಿಐʼ ತಂದ ದೊಡ್ಡ ಬದಲಾವಣೆಯೆಂದರೆ ಅದು ಭಾರತೀಯರು ವಹಿವಾಟು ನಡೆಸುವ ವಿಧಾನ. ʻಗ್ಲೋಬಲ್ ಡಾಟಾʼ ಸಂಶೋಧನೆಯ ಪ್ರಕಾರ, 2017ರಲ್ಲಿ ನಡೆದ ಒಟ್ಟು ವಹಿವಾಟಿನಲ್ಲಿ, ನಗದು ವ್ಯವಹಾರದ ಪ್ರಮಾಣ ಶೇ. 90 ರಿಂದ ಶೇಕಡಾ 60ಕ್ಕಿಂತ ಇಳಿಕೆಯಾಗಿದೆ.   2016ರಲ್ಲಿ 500 ಮತ್ತು 1000 ರೂ.ಗಳ ನೋಟುಗಳನ್ನು ಹಂತಹಂತವಾಗಿ ರದ್ದುಪಡಿಸಿದ ಆರು ತಿಂಗಳಲ್ಲಿ, ʻಯುಪಿಐʼನಲ್ಲಿ ಒಟ್ಟು ವಹಿವಾಟಿನ ಪ್ರಮಾಣವು 2.9 ದಶಲಕ್ಷದಿಂದ 72 ದಶಲಕ್ಷಕ್ಕೆ ಏರಿತು. 2017ರ ಅಂತ್ಯದ ವೇಳೆಗೆ, ಯುಪಿಐ ವಹಿವಾಟುಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 900 ರಷ್ಟು ಹೆಚ್ಚಿದವು ಮತ್ತು ಅಂದಿನಿಂದ, ಡಿಜಿಟಲ್‌ ಪಾವತಿಯು ತನ್ನ ಬೆಳವಣಿಗೆಯ ಪಥವನ್ನು ಮುಂದುವರಿಸಿದೆ.

ಯುಪಿಐ ಅತ್ಯಂತ ಬಳಕೆದಾರ ಸ್ನೇಹಿಯಾಗಿದೆ. ಇದು ʻವರ್ಚುವಲ್ ಪಾವತಿ ವಿಳಾಸʼವನ್ನು(ವಿಪಿಎ) ಬಳಸುವ ಮೂಲಕ ಬಳಕೆದಾರರಿಗೆ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ, ಗೌಪ್ಯವಾದ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳುವ ಅಗತ್ಯವನ್ನು ತೊಡೆದುಹಾಕುತ್ತದೆ. ಈ ಪ್ರಕ್ರಿಯೆಯು ʻಸ್ಮಾರ್ಟ್ ಫೋನ್ʼನಲ್ಲಿ ಪಠ್ಯ ಸಂದೇಶವನ್ನು ಕಳುಹಿಸುವಷ್ಟೇ ಸರಳವಾಗಿದೆ.  ಇದರ ಪರಿಣಾಮವು ಕೇವಲ ಅನುಕೂಲತಗಷ್ಟೇ ಸೀಮಿತವಾಗದೆ, ಆರ್ಥಿಕ ಸೇರ್ಪಡೆ, ಪಾರದರ್ಶಕತೆಯನ್ನು ಹೆಚ್ಚಿಸಲು ಸಹ ಕೊಡುಗೆ ನೀಡಿದೆ. ಜೊತೆಗೆ, ಅನೌಪಚಾರಿಕ ಆರ್ಥಿಕತೆಯ ವ್ಯಾಪ್ತಿಯನ್ನು ಕಡಿಮೆ ಮಾಡಲೂ ನೆರವಾಗಿದೆ.

ʻಯುಪಿಐʼ ಬೆಳವಣಿಗೆಯು ಕೇವಲ ನಗದು ಪಾವತಿಯನ್ನಷ್ಟೇ ಗಮನಾರ್ಹ ಮಟ್ಟದಲ್ಲಿ ಕಡಿಮೆ ಮಾಡಿಲ್ಲ, ಜೊತೆಗೆ ಇತರೆ ಡಿಜಿಟಲ್ ಪಾವತಿ ವಿಧಾನಗಳ ಬಳಕೆಯನ್ನೂ ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಉದಾಹರಣೆಗೆ, ವ್ಯಾಪಾರಿ ಪಾವತಿಗಳಿಗಾಗಿ ಡೆಬಿಟ್ ಕಾರ್ಡ್‌ಗಳ ಬಳಕೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.  ಇಂದು ʻಪ್ರಿಪೇಯ್ಡ್ ವ್ಯಾಲೆಟ್ʼಗಳನ್ನು ಪ್ರವೇಶಿಸುವ ವಿಧಾನವನ್ನು ಸಹ ಯುಪಿಐ ಬದಲಾಯಿಸಿದೆ.  ʻಯುಪಿಐʼ ವಿಕಸನಗೊಳ್ಳುತ್ತಲೇ ಇರುವುದರಿಂದ, ಭಾರತದ ಡಿಜಿಟಲ್ ಭವಿಷ್ಯವನ್ನು ರೂಪಿಸುವಲ್ಲಿ ಇದು ಇನ್ನೂ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ.

ಡಿಜಿಟಲ್ ಪಾವತಿ ವ್ಯವಸ್ಥೆಯ ಯಶಸ್ಸು ಕೇವಲ ಡಿಜಿಟಲ್ ಪಾವತಿ ಮೂಲಸೌಕರ್ಯದ ಸದೃಢತೆಯಿಂದ ಮಾತ್ರ ಸಾಧ್ಯವಾಗಿಲ್ಲ. ಜನರು ನಗದು ವ್ಯವಹಾರಗಳಿಂದ ಡಿಜಿಟಲ್‌ ವಹಿವಾಟಿನತ್ತ ಬದಲಾಗಲು ಅವರನ್ನು ಪ್ರೋತ್ಸಾಹಿಸಿದ ಜನರ ನಡವಳಿಕೆಯಲ್ಲಿನ ಬದಲಾವಣೆಯೂ ಡಿಜಿಟಲ್‌ ಪಾವತಿ ವ್ಯವಸ್ಥೆಯ ಯಶಸ್ಸಿಗೆ ಕಾರಣವಾಗಿದೆ. ಡಿಜಿಟಲ್‌ ಪಾವತಿ ವಿಚಾರದಲ್ಲಿ ಉಂಟಾದ ಜನರ ನಡವಳಿಕೆಯ ಬದಲಾವಣೆಯು ಇತರೆ ಯಾವುದೇ ನಡವಳಿಕೆ ಬದಲಾವಣೆಯಂತೆಯೇ ವ್ಯವಸ್ಥೆಯ ಮೇಲಿನ ವಿಶ್ವಾಸ ಮತ್ತು ಜನರಿಗೆ ವ್ಯವಸ್ಥೆಯ ಲಭ್ಯತೆಯನ್ನು ಆಧರಿಸಿದೆ. ಜೊತೆಗೆ, ಪ್ರಮುಖ ಜನಸಮುದಾಯಕ್ಕೆ ಅಂತಹ ವ್ಯವಸ್ಥೆಯ ಪ್ರಸ್ತುತತೆಯನ್ನು ಖಚಿತಪಡಿಸುವ ಒಳನೋಟದ ಆವಿಷ್ಕಾರಗಳನ್ನು ಆಧರಿಸಿದೆ. ಇವುಗಳಲ್ಲಿ ಪಾವತಿ ಅಪ್ಲಿಕೇಶನ್‌ಗಳು ಒದಗಿಸುವ ಪುಟ್ಟ ಧ್ವನಿ ಪೆಟ್ಟಿಗೆಗಳಂತಹ ಸಣ್ಣ ಮತ್ತು ಆಸಕ್ತಿದಾಯಕ ಆವಿಷ್ಕಾರಗಳು ಸೇರಿವೆ. ಅಲ್ಲಿ ʻಕ್ಯೂ.ಆರ್.ಕೋಡ್ʼ ಮೂಲಕ ಪ್ರತಿ ಬಾರಿ ಹಣ ಪಾವತಿಸಿದಾಗಲೂ  ಆ ಕ್ಷಣವೇ ಎಷ್ಟು ಹಣವನ್ನು ಸ್ವೀಕರಿಸಲಾಗಿದೆ ಎಂಬುದನ್ನು ʻಸಿರಿʼ ತರಹದ ಧ್ವನಿಯು ಘೋಷಿಸುತ್ತದೆ. ಈ ವ್ಯವಸ್ಥೆಯು ದೀರ್ಘಕಾಲದಿಂದ ನಗದು ವಹಿವಾಟುಗಳಿಗೆ ಒಗ್ಗಿಕೊಂಡಿರುವ ಸಣ್ಣ ವ್ಯಾಪಾರಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳಲ್ಲಿ ಅಪನಂಬಿಕೆಯನ್ನು ನಿವಾರಿಸಲು ಸಹಾಯ ಮಾಡಿದೆ.

ಗ್ರಾಹಕರು ಯಾವ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದಾರೆ ಎಂಬುದನ್ನು ಲೆಕ್ಕಿಸದೆ ಗ್ರಾಹಕರಿಗೆ ʻಯುಪಿಐʼಗಾಗಿ ಸೇವಾ ಪೂರೈಕೆದಾರರ ಆಯ್ಕೆಯನ್ನು ನೀಡುವುದು ಇದರ ಮತ್ತೊಂದು ಪ್ರಮುಖ ವಿನ್ಯಾಸ ವಿಶಿಷ್ಟತೆಯಾಗಿದೆ.  ಇದರಲ್ಲಿ ಆಯ್ಕೆಯ ಶಕ್ತಿ ಹೇಗಿದೆಯೆಂದರೆ, ಗ್ರಾಹಕರು ಪಾವತಿಗಳಿಗಾಗಿ ಯುಪಿಐ ಪ್ರವೇಶಿಸಲು ತಮ್ಮ ಆದ್ಯತೆಯ ಪಾವತಿ ಅಪ್ಲಿಕೇಶನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ʻಯುಪಿಐʼನೊಂದಿಗೆ ʻರುಪೇ ಕ್ರೆಡಿಟ್ ಕಾರ್ಡ್ʼಗಳ ಸಂಯೋಜನೆಯು ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನು ಸೂಚಿಸುತ್ತದೆ. ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ಗಳು ಮತ್ತು ʻಯುಪಿಐʼ ಎರಡರ ಅನುಕೂಲಗಳನ್ನು ಇದು ಸಂಯೋಜಿಸುತ್ತದೆ.  ʻಯುಪಿಐʼ ವಹಿವಾಟುಗಳಿಗಾಗಿ ಕ್ರೆಡಿಟ್ ಕಾರ್ಡ್‌ಗಳು ನೀಡುವ ಅಲ್ಪಾವಧಿಯ ಸಾಲ ಸೌಲಭ್ಯದ ಲಾಭವನ್ನು ಪಡೆಯುವ ಮೂಲಕ, ಕಾರ್ಡ್‌ದಾರರು ಈಗ ತಮ್ಮ ಉಳಿತಾಯ ಖಾತೆಗಳಿಂದ ಡ್ರಾ ಮಾಡುವ ಬದಲು ತಮ್ಮ ಕ್ರೆಡಿಟ್ ಲೈನ್‌ಗಳನ್ನು ಬಳಸಿಕೊಂಡು ಪಾವತಿಗಳನ್ನು ಪ್ರಾರಂಭಿಸಬಹುದು.

ಭಾರತದ ದೃಢವಾದ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯು ವಿಶ್ವದ ಗಮನವನ್ನು ಸೆಳೆಯುತ್ತಿದೆ.   ʻಯುಪಿಐʼನ ಸ್ಥಳೀಯ ಯಶಸ್ಸಿನ ನಂತರ, ʻನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾʼ(ಎನ್‌ಪಿಸಿಐ) 2020 ರಲ್ಲಿ ಪಾವತಿ ವ್ಯವಸ್ಥೆಯನ್ನು ದೇಶದ ಹೊರಗೆ ವಿಸ್ತರಿಸಲು ʻಎನ್ಐಪಿಎಲ್ʼ (ಎನ್‌ಪಿಸಿಐ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್) ಎಂಬ ವಿಭಾಗವನ್ನು ಸ್ಥಾಪಿಸಿತು. ಅಂದಿನಿಂದ, ʻಎನ್ಐಪಿಎಲ್ʼ ಮತ್ತು ʻರಿಸರ್ವ್ ಬ್ಯಾಂಕ್ ಆಫ್ ಇಂಡಿಯಾʼ(ಆರ್‌ಬಿಐ) ಭಾರತದ ಗಡಿಗಳನ್ನು ಮೀರಿ ʻಯುಪಿಐʼ ಆಧಾರಿತ ವಹಿವಾಟುಗಳನ್ನು ವಿಸ್ತರಿಸಲು 30ಕ್ಕೂ ಹೆಚ್ಚು ದೇಶಗಳ ಹಣಕಾಸು ಘಟಕಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ, ಫ್ರಾನ್ಸ್, ಯುಎಇ ಮತ್ತು ಶ್ರೀಲಂಕಾ ʻಯುಪಿಐʼ ಗುಂಪಿಗೆ ಸೇರ್ಪಡೆಗೊಂಡಿವೆ. ಅದರಲ್ಲೂ ಫ್ರಾನ್ಸ್‌ಗೆ ಯುಪಿಐ ಪ್ರವೇಶವು ಗಮನಾರ್ಹವಾಗಿದೆ, ಏಕೆಂದರೆ, ಈ ವ್ಯವಸ್ಥೆಯನ್ನು ಪಡೆದ ಮೊದಲ ಯೂರೋಪ್‌ ದೇಶ ಇದಾಗಿದೆ. ಈಗ ಆರು ಹೊಸ ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ʻಬ್ರಿಕ್ಸ್ʼ ಗುಂಪಿಗೆ ಯುಪಿಐ ವಿಸ್ತರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಒತ್ತು ನೀಡಿದ್ದಾರೆ.

2016ರಲ್ಲಿ ಸಾಧಾರಣ ರೀತಿಯಲ್ಲಿ ಆರಂಭದಿಂದ ಹಿಡಿದು, ʻಯುಪಿಐʼನ ಅಸಾಧಾರಣ ಅಳವಡಿಕೆ ಮತ್ತು ಸ್ವೀಕಾರವು ಇಂದು ಒಂದು ರೀತಿಯ ಯಶೋಗಾಥೆಯಾಗಿದ್ದು ಅದರ ಪ್ರಮಾಣ ಮತ್ತು ಪರಿಣಾಮದ ವಿಷಯಕ್ಕೆ ಬಂದಾಗ ʻಯುಪಿಐʼ ಸರಿಸಾಟಿ ಇಲ್ಲದ್ದೆನಿಸಿದೆ.

RELATED ARTICLES
- Advertisment -
Google search engine

Most Popular

Recent Comments