ಲೇಖನ
-ಗೊರೂರು ಅನಂತರಾಜು, ಹಾಸನ.
ಕಲೆಗೆ ಬೆಲೆ ಕಟ್ಟಲು ಅಸಾಧ್ಯ. ಕಲಾ ಕುಂಚದಿಂದ ವಿವಿಧ ರೀತಿಯ ಚಿತ್ರಗಳನ್ನು ಬಿಡಿಸಿ ತನ್ನದೇ ಅದ ಛಾಪು ಮೂಡಿಸುತ್ತಿರುವ ಕಲಾವಿದ ಸೋಮಶೇಖರ್
ಅರಕಲಗೋಡಿನಲ್ಲಿ ೨೦೦೨ರಲ್ಲಿ ನಡೆದ ೮ನೇ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಪೈಂಟಿಂಗ್ಸ್ ಪ್ರದರ್ಶಿಸಿದ್ದರು. ಈ ವರ್ಷ ಅರಕಲಗೋಡಿನಲ್ಲಿ ನಡೆದ ೨೧ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲೂ ಇವರ ಕಲಾಕೃತಿಗಳ ಪ್ರದರ್ಶನವಿತ್ತು. ಈ ಎರಡೂ ಸಂದರ್ಭ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ನಾನು ಈ ವರ್ಷ ಸೋಮಶೇಖರ್ ಅವರ ಕಲಾಮಳಿಗೆಗೆ ಭೇಟಿ ನೀಡಿ ಚಿತ್ರಗಳ ವೀಕ್ಷಣೆ ಮಾಡಿ ಪೇಂಟಿಂಗ್
ಗಳ ವಿವರಣೆ ಪಡೆದಿದ್ದನು. ಸೋಮಶೇಖರ್‌ಗೆ ನನ್ನ ಪೋನ್ ನಂಬರ್ ನೀಡಿ ಅವರ ಕಲಾ ಪರಿಚಯ ಬರೆಯಲು ಬಯೋಡೆಟಾ ಕಳಿಸಲು ಕೋರಿ ಬಸ್ ಹತ್ತಿ ಹಾಸನಕ್ಕೆ ವಾಪಸ್ಸಾಗಿ ಆರು ತಿಂಗಳಾಗಿದೆ. ಸದ್ಯ ಲೋಕ ದೃಷ್ಟಿ ಕಲಾ ಸೃಷ್ಟಿ ಎಂಬ ಕಲಾವಿದರ ಕಲಾಸಾಧನೆಯ ಪುಸ್ತಕ ಪ್ರಕಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿರಲು ದಿಡೀರನೇ ಸೋಮಶೇಖರ್ ತಮ್ಮ ಭಯಾನಕ ಪೈಂಟಿಂಗ್ ಗಳೊಂದಿಗೆ ಬಯೋಡೇಟಾ ಕಳಿಸಿದ್ದರು.
ಶ್ರೀಮತಿ ಜವರಮ್ಮ ರಾಮೇಗೌಡ ದಂಪತಿಗಳ ಹಿರಿಯ ಮಗನಾಗಿ ಅರಕಲಗೋಡಿನಲ್ಲಿ
ದಿ. ೧೬-೫-೧೯೯೧ ರಂದು ಜನಿಸಿದ ಸೋಮಶೇಖರ್ ಚಿಕ್ಕವನಿರುವಾಗಲೇ ಕಲೆಯಲ್ಲಿ ಬಹಳ ಆಸಕ್ತಿ ಉಳ್ಳವರಾಗಿ ಅನಕೃ ಆರ್ಟ್ಸ್ ಎಂದೇ ಅರಕಲಗೋಡಿನಲ್ಲಿ ಪ್ರಖ್ಯಾತಿ ಪಡೆದಿದ್ದರಂತೆ..! ಹಾಸನದ ನಿರ್ಮಲಾ ಚಿತ್ರಕಲಾ ಮಹಾ ವಿದ್ಯಾಲಯದಲ್ಲಿ ಆರ್ಟ್ ಮಾಸ್ಟರ್ ಡಿಪ್ಲೋಮಾ ಮಾಡುವಾಗಲೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಮಾಡಿದ್ದವರು. ಹಂಪಿ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ. ಸುಮಾರು ೨೫ ವರ್ಷಗಳಿಂದ ಚಿತ್ರಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನ ಪ್ರತಿಷ್ಟಿತ ಶಾಲೆಗಳಲ್ಲಿ ಶಿಕ್ಷಕರಾಗಿ ಮತ್ತು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸಾವಿರಾರು ಮಕ್ಕಳಿಗೆ ಚಿತ್ರಕಲೆ ಕಲಿಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಸ್ವಂತ ಕಲಾ ಹವ್ಯಾಸಿ ಶಾಲೆಯನ್ನು ತೆರೆದು ಇವರ ವಿದ್ಯಾರ್ಥಿಗಳು ಅಮೇರಿಕಾ ಮತ್ತು ದುಬೈಗಳಲ್ಲಿ ಇಂಜಿನಿಯರ್‌ಗಳಾಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ವಾಸ್ತವಿಕ ಮತ್ತು ಸಮಕಾಲೀನ ಕಲೆ ಬಾವಚಿತ್ರ ರಿಯಲಿಸ್ಟಿಕ್ ಚಿತ್ರಕಲೆ ಮೈಗೂಡಿಸಿಕೊಂಡಿದ್ದಾರೆ. ಇವರ ಕಲಾಕೃತಿಗಳು ದೇಶ ವಿದೇಶಗಳಲ್ಲಿ ಸೇಲ್ ಆಗಿವೆ. ಇವರು ರಚಿಸುವ ಕಲಾಕೃತಿಗಳು ಪಾರದರ್ಶಕ ಜಲವರ್ಣದಲ್ಲಿ ಲ್ಯಾಂಡ್ ಸ್ಕೇಪ್‌ಗಳು, ಬಾವಚಿತ್ರಗಳು ಅದ್ಭುತವಾಗಿ ಮೂಡಿ ಬರುತ್ತವೆ. ಇವರು ಸಮಕಾಲೀನ ಕಲಾ ಶೈಲಿ ಸೃಜನಾತ್ಮಕ ತಂತ್ರಗಾರಿಕೆ ಕ್ಯಾನ್ವಾಸ್‌ನಲ್ಲಿ ಸಹಜ ವಿಭಿನ್ನವಾಗಿ ರಚಿಸುವಲ್ಲಿ ಹೊಸತನ ಹುಡುಕಾಟದಲ್ಲಿ ತಲ್ಲೀನರು. ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಇವರ ಅತಿ ಹೆಚ್ಚು ಪೇಂಟಿಂಗ್ ಮಾರಾಟವಾಗಿದೆ. ಎಎಂಸಿ ಅಕಾಡೆಮಿ ಕಲಾಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಚಿತ್ರಕಲಾ ಪರಿಷತ್‌ನಲ್ಲಿ ಆರ್ಟ್ ಎಕ್ಸ್ ಪ್ಲೋರ್‌ನಲ್ಲಿ ಸಮೂಹ ಚಿತ್ರ ಕಲಾಪ್ರದರ್ಶನ ಮಾಡಿದವರು. ಕರ್ನಾಟಕ ಲಲಿತಾ ಕಲಾ ಅಕಾಡೆಮಿಯಿಂದ ಧನ ಸಹಾಯದೊಂದಿಗೆ ಮುಂಬೈನ ಮಲಬಾರ್ ಹಿಲ್‌ನ ಆಟ್೯ ದೇಶ್ ಗ್ಯಾಲರಿಯಲ್ಲಿ ಸಮೂಹ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ದೇವರನಾಡು ಎಂದೆ ಹೆಸರಾದ ತಿರುವನಂತಪುರದಲ್ಲಿ ಕರ್ನಾಟಕದ ಐದು ಕಲಾವಿದರ ಆರ್ಟ್ ಎಕ್ಸ್ ಪ್ಲೋರ್ ತಂಡ
ಚಿತ್ರಕಲಾ ಪ್ರದರ್ಶನ ಮಾಡಿದೆ. ಜಿಲ್ಲಾ ತಾಲ್ಲೂಕು ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳ ಬಾವಚಿತ್ರಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಾವಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಗ್ರಾಮೀಣ ಜನಜೀವನ ಶೈಲಿಯ ಚಿತ್ರಗಳು ಗಮನೆ ಸೆಳೆದಿವೆ. ಮುಂಬೈನಲ್ಲಿ ಇಶಾ ಪೌಂಡೇಶನ್ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಿದ ರ‍್ಯಾಲಿ ಫಾರ್ ರಿವರ್ ಚಿತ್ರ ೩ನೇ ಸ್ಥಾನ ಗಳಿಸಿದೆ. ಬೆಂಗಳೂರಿನಲ್ಲಿ ಹಲವಾರೂ ಗ್ರೂಪ್ ಶೋ ಕ್ಯಾಂಪ್‌ಗಳಲ್ಲಿ ಭಾಗವಹಿಸಿದ ಅನುಭವ ಇವರದು. ಕರ್ನಾಟಕದ ಅನೇಕ ಕಡೆ ಅಲ್ಲದೇ ಆಂದ್ರ, ಗೋವ, ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದವರು. ಇವರ ರಚನೆಯ ಬಾವಚಿತ್ರಗಳು, ತೈಲವರ್ಣ ಪೆನ್ಸಿಲ್ ವಕ್೯ಗಳು, ಪರ್ಮನೆಂಟ್ ವಾಲ್ ಗ್ಯಾಲರಿಗಳಲ್ಲಿ ಸ್ಥಿರವಾಗಿವೆ.
—
ವಿಳಾಸ: ಹುಣಸಿನಕೆರೆ ಬಡಾವಣೆ,
೨೯ನೇ ವಾರ್ಡ್, ೩ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧.