ಮುಂದಿನ 3 ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು: ಕೇಂದ್ರ ಬಜೆಟ್- 2022
ವಂದೇ ಭಾರತ್ 2.0: ನವ ಭಾರತಕ್ಕೆ ಹೊಸ ಪ್ರಯಾಣದ ಅನುಭವವನ್ನು ನೀಡುತ್ತದೆ
68 ವಂದೇ ಭಾರತ್ ರೈಲು ಸೇವೆಗಳು ಕಾರ್ಯನಿರತವಾಗಿವೆ
(ರೈಲ್ವೆ ಸಚಿವಾಲಯ)
ಪರಿಚಯ
ಭಾರತ ಸರ್ಕಾರವು ‘ಮೇಕ್ ಇನ್ ಇಂಡಿಯಾ’ ಅಭಿಯಾನವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಪ್ರಯತ್ನಗಳನ್ನು ಕೈಗೊಂಡಿದೆ. ‘ಮೇಕ್ ಇನ್ ಇಂಡಿಯಾ’ ಯಶಸ್ಸಿನ ಕಥೆಗೆ ಅತ್ಯುತ್ತಮ ಉದಾಹರಣೆ ಎಂಬಂತೆ, ಭಾರತೀಯ ರೈಲ್ವೆಯು ಭಾರತದ ಮೊದಲ ಸ್ಥಳೀಯ ಸೆಮಿ ಹೈಸ್ಪೀಡ್ ರೈಲು – ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸಿದೆ. ʻಕಾನ್ಪುರ-ಅಲಹಾಬಾದ್-ವಾರಣಾಸಿʼ ಮಾರ್ಗದಲ್ಲಿ ದೇಶದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಫೆಬ್ರವರಿ 15, 2019ರಂದು ನವದೆಹಲಿಯಲ್ಲಿ ಚಾಲನೆ ನೀಡಲಾಯಿತು.
ಸೆಪ್ಟೆಂಬರ್ 2, 2023 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಒಂಬತ್ತು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಹೊಸ ವಂದೇ ಭಾರತ್ ರೈಲುಗಳು ಈ ಕೆಳಗಿನಂತಿವೆ: ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್, ತಿರುನೆಲ್ವೇಲಿ-ಮಧುರೈ-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್, ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್, ವಿಜಯವಾಡ – ಚೆನ್ನೈ (ರೇಣಿಗುಂಟ ಮೂಲಕ) ವಂದೇ ಭಾರತ್ ಎಕ್ಸ್‌ಪ್ರೆಸ್, ಪಾಟ್ನಾ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್, ಕಾಸರಗೋಡು – ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್, ರೂರ್ಕೆಲಾ-ಭುವನೇಶ್ವರ-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್, ರಾಂಚಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಜಾಮ್ನಗರ-ಅಹಮದಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್. ಈ ಒಂಬತ್ತು ಮಾರ್ಗಗಳ ಸೇರ್ಪಡೆಯೊಂದಿಗೆ, ಒಟ್ಟು 68 ವಂದೇ ಭಾರತ್ ರೈಲು ಸೇವೆಗಳು ಈಗ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಿಸಬಲ್ಲದು ಮತ್ತು ಶತಾಬ್ದಿ ರೈಲಿನಂತೆ ಪ್ರಯಾಣ ದರ್ಜೆಗಳನ್ನು ಹೊಂದಿದೆ, ಆದರೆ ಅದಕ್ಕಿಂತಲೂ ಉತ್ತಮ ಸೌಲಭ್ಯಗಳನ್ನು ಹೊಂದಿದೆ. ಪ್ರಯಾಣಿಕರಿಗೆ ಸಂಪೂರ್ಣವಾಗಿ ಹೊಸ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ. ವೇಗ, ಸುರಕ್ಷತೆ ಮತ್ತು ಸೇವೆ ಈ ರೈಲಿನ ಹೆಗ್ಗುರುತುಗಳಾಗಿವೆ. ರೈಲ್ವೆಯ ಉತ್ಪಾದನಾ ಘಟಕವಾದ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್) ಇದರ ಹಿಂದಿನ ಶಕ್ತಿಯಾಗಿದೆ. ಸಂಪೂರ್ಣ ಆಂತರಿಕ ವಿನ್ಯಾಸ ಮತ್ತು ತಯಾರಿ, ಕಂಪ್ಯೂಟರ್ ಮಾಡೆಲಿಂಗ್ ಹಾಗೂ ಸಿಸ್ಟಮ್ ಏಕೀಕರಣಕ್ಕಾಗಿ ನೂರಾರು ಪೂರೈಕೆದಾರರೊಂದಿಗೆ ವ್ಯವಹರಿಸುವ ಮೂಲಕ ಕೇವಲ 18 ತಿಂಗಳಲ್ಲಿ ರೈಲನ್ನು ಸಿದ್ಧಪಡಿಸಿದ ಹೆಗ್ಗಳಿಕೆಯನ್ನು ಸಂಸ್ಥೆಯು ಪಡೆದಿದೆ.
2023-24ರ ಹಣಕಾಸು ವರ್ಷದಲ್ಲಿ (ಜೂನ್ 2023ರವರೆಗೆ), ವಂದೇ ಭಾರತ್ ರೈಲುಗಳ ಒಟ್ಟಾರೆ ಬಳಕೆ 99.60% ರಷ್ಟಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಹಿಂದಿನ ಉದ್ದೇಶಗಳು
ನಿರ್ವಹಣಾ ತಂತ್ರಜ್ಞಾನಗಳು ಮತ್ತು ವಿಧಾನಗಳನ್ನು ನವೀಕರಿಸಲು ಹಾಗೂ ಎಲ್ಲಾ ರೈಲ್ವೆ ಸ್ವತ್ತುಗಳು ಮತ್ತು ಮಾನವಶಕ್ತಿಯ ಉತ್ಪಾದಕತೆ ಮತ್ತು ಕಾರ್ಯಕ್ಷಮತೆಯಲ್ಲಿ ಸುಧಾರಣೆಯನ್ನು ಸಾಧಿಸಲು ಈ ರೈಲನ್ನು ಪರಿಚಯಿಸಲಾಗಿದೆ. ಇದರಿಂದ ವಿಶ್ವಾಸಾರ್ಹತೆ, ಲಭ್ಯತೆ, ಬಳಕೆ ಮತ್ತು ದಕ್ಷತೆಯನ್ನು ಹೆಚ್ಚಾಗುತ್ತದೆ.
ಭಾರತೀಯ ರೈಲ್ವೆಯ ‘ಮೇಕ್ ಇನ್ ಇಂಡಿಯಾ’ ಪ್ರಯತ್ನದ ಪರಾಕಾಷ್ಠೆ
ಪ್ರಧಾನಿ ನರೇಂದ್ರ ಮೋದಿಯವರ “ಮೇಕ್ ಇನ್ ಇಂಡಿಯಾ” ಆಶಯಕ್ಕೆ ಅನುಗುಣವಾಗಿ, ರೈಲಿನ ಪ್ರಮುಖ ವ್ಯವಸ್ಥೆಗಳನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ನಿರ್ಮಿಸಲಾಗಿದೆ.
ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಪ್ರಯಾಣಿಕರ ಆರಾಮದ ಜಾಗತಿಕ ಮಾನದಂಡಗಳಿಗೆ ಹೊಂದಿಕೆಯಾಗುವ ಮತ್ತು ಜಾಗತಿಕ ದರಗಳ ಅರ್ಧಕ್ಕಿಂತ ಕಡಿಮೆ ಪ್ರಯಾಣದರ ಹೊಂದಿರುವ ಈ ರೈಲು ಜಾಗತಿಕ ರೈಲು ಕ್ಷೇತ್ರದ ಮೇಲೆ ಕ್ರಾಂತಿಕಾರಿ ಪರಿಣಾಮ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಕೇಂದ್ರ ಬಜೆಟ್ 2022: ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳು
2022-23ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಮೂರು ವರ್ಷಗಳಲ್ಲಿ ಉತ್ತಮ ಇಂಧನ ದಕ್ಷತೆ ಮತ್ತು ಪ್ರಯಾಣಿಕರ ಸವಾರಿ ಅನುಭವ ಹೊಂದಿರುವ 400 ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ತಯಾರಿಸಲಾಗುವುದು ಎಂದು ಘೋಷಿಸಿದರು.
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳು
• ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇಂಟೆಲಿಜೆಂಟ್ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಇದು ಉತ್ತಮ ವೇಗವರ್ಧನೆ ಮತ್ತು ವೇಗ ಇಳಿಕೆಗೆ ಅನುವುಮಾಡಿಕೊಡುತ್ತದೆ.
• ಎಲ್ಲಾ ಬೋಗಿಗಳಲ್ಲಿ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಲಾಗಿದೆ; ಜಿಪಿಎಸ್ ಆಧಾರಿತ ಆಡಿಯೊ-ವಿಶುವಲ್ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಗಳಿಗಾಗಿ ಆನ್-ಬೋರ್ಡ್ ಹಾಟ್ ಸ್ಪಾಟ್ ವೈ-ಫೈ ಮತ್ತು ತುಂಬಾ ಆರಾಮದಾಯಕ ಆಸನ ವ್ಯವಸ್ಥೆ ಹೊಂದಿದೆ. ಎಕ್ಸಿಕ್ಯೂಟಿವ್ ದರ್ಜೆಯು ತಿರುಗುವ ಕುರ್ಚಿಗಳನ್ನು (ರೋಲಿಂಗ್ ಸೀಟ್ಸ್) ಸಹ ಹೊಂದಿದೆ.
• ಎಲ್ಲಾ ಶೌಚಾಲಯಗಳು ಜೈವಿಕ ನಿರ್ವಾತ ಮಾದರಿಯವು. ಇದರ ಲೈಟಿಂಗ್ ಡ್ಯುಯಲ್ ಮೋಡ್ ಹೊಂದಿದೆ, ಅಂದರೆ ಸಾಮಾನ್ಯ ಪ್ರದೇಶದಲ್ಲಿ ಬೆಳಕಿಗಾಗಿ ದೀಪಗಳ ಜೊತೆಗೆ, ಮತ್ತು ಪ್ರತಿ ಸೀಟಿಗೆ ವೈಯಕ್ತಿಕವಾಗಿ ಬೆಳಕಿನ ವ್ಯವಸ್ಥೆಯಿದೆ.
• ಪ್ರತಿ ಬೋಗಿಯಲ್ಲಿ ಬಿಸಿ ಊಟ, ಬಿಸಿ ಮತ್ತು ತಂಪು ಪಾನೀಯಗಳನ್ನು ಪೂರೈಸುವ ಸೌಲಭ್ಯಗಳೊಂದಿಗೆ ಪ್ಯಾಂಟ್ರಿ ಇದೆ. ಪ್ರಯಾಣಿಕರ ಹೆಚ್ಚುವರಿ ಆರಾಮಕ್ಕಾಗಿ ಶಾಖ ಮತ್ತು ಶಬ್ದವನ್ನು ಅತ್ಯಂತ ಕಡಿಮೆ ಮಟ್ಟಕ್ಕೆ ಇರಿಸಲು ಇನ್ಸುಲೇಷನ್ ಅಳವಡಿಸಲಾಗಿದೆ.
• ವಂದೇ ಭಾರತ್ ಎಕ್ಸ್‌ಪ್ರೆಸ್ 16 ಹವಾನಿಯಂತ್ರಿತ ಬೋಗಿಗಳನ್ನು ಹೊಂದಿದ್ದು, ಅದರಲ್ಲಿ ಎರಡು ಎಕ್ಸಿಕ್ಯೂಟಿವ್ ಕ್ಲಾಸ್ ಬೋಗಿಗಳಾಗಿವೆ. ಇದರ ಒಟ್ಟು ಆಸನ ಸಾಮರ್ಥ್ಯ 1,128 ಆಗಿದ್ದು, ಇದು ಇಷ್ಟೇ ಸಂಖ್ಯೆಯ ಬೋಗಿಗಳ ಸಾಂಪ್ರದಾಯಿಕ ʻಶತಾಬ್ದಿʼ ರೇಕ್‌ಗಿಂತಲೂ ಹೆಚ್ಚು. ಎಲ್ಲಾ ವಿದ್ಯುತ್ ಉಪಕರಣಗಳನ್ನು ಬೋಗಿಗಳ ಕೆಳಗೆ ಮತ್ತು ಡ್ರೈವಿಂಗ್ ಬೋಗಿಯಲ್ಲಿನ ಆಸನಗಳ ಕೆಳಗೆ ಅಳವಡಿಸಿರುವುದರಿಂದ ಹೆಚ್ಚಿನ ಸ್ಥಳಾವಕಾಶ ದೊರೆತಿದೆ.
• ಇದು ದಿವ್ಯಾಂಗ ಸ್ನೇಹಿ ಸೌಲಭ್ಯಗಳನ್ನು ಸಹ ಹೊಂದಿದೆ.
• ವಂದೇ ಭಾರತ್ ಎಕ್ಸ್‌ಪ್ರೆಸ್ ಬೋಗಿಗಳಲ್ಲಿ ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದು 30% ವಿದ್ಯುತ್ ಶಕ್ತಿಯನ್ನು ಉಳಿಸುತ್ತದೆ. ಆ ಮೂಲಕ ಈ ರೈಲು ಹಸಿರು ಹೆಜ್ಜೆ ಗುರುತು ಹೊಂದಿದೆ.
• ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಧೂಳು ಮುಕ್ತ ವಾತಾವರಣಕ್ಕಾಗಿ ಗ್ಯಾಂಗ್ವೇಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಸೆನ್ಸಾರ್ ಒಳಗೊಂಡ ಅಂತರಸಂಪರ್ಕ ಬಾಗಿಲುಗಳನ್ನು ಹೊಂದಿದೆ.
• ರೈಲಿನಲ್ಲಿ ʻಫೈರ್ ಸರ್ವೈವಲ್ ಕೇಬಲ್ ಒಳಾಂಗಣ ಸರ್ಕ್ಯೂಟ್ ಸಹ ಲಭ್ಯವಿರುತ್ತದೆ. ಸುಧಾರಿತ ಹವಾನಿಯಂತ್ರಣ ವ್ಯವಸ್ಥೆಯೂ ಇರುತ್ತದೆ.
ವಂದೇ ಭಾರತ್ 2.0
ಭಾರತೀಯ ರೈಲ್ವೆಯು ʻವಂದೇ ಭಾರತ್ʼನ ಹೊಸ ಆವೃತ್ತಿ: ವಂದೇ ಭಾರತ್ 2.0 ಅನ್ನು ಪರಿಚಯಿಸಿದ್ದು, ಸೆಪ್ಟೆಂಬರ್ 30, 2022 ರಂದು ಗಾಂಧಿನಗರದಿಂದ ಮುಂಬೈಗೆ ಈ ಮಾದರಿಯ ಮೊದಲ ರೈಲಿಗೆ ಪ್ರಧಾನಿ ಹಸಿರು ನಿಶಾನೆ ತೋರಿದರು. ʻವಂದೇ ಭಾರತ್ 2.0ʼ ತನ್ನ ಹಿಂದಿನ ಮಾದರಿಗಿಂತ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಗಂಟೆಗೆ 180 ಕಿ.ಮೀ ಗರಿಷ್ಠ ವೇಗವನ್ನು ಸಾಧಿಸಬಲ್ಲದು ಮತ್ತು ಹಿಂದಿನ 430 ಟನ್ ಬದಲಿಗೆ 392 ಟನ್ ತೂಕವನ್ನು ಹೊಂದಿರುತ್ತದೆ. ಈ ಹೊಸ ಆವೃತ್ತಿಯಲ್ಲಿನ ಸುಧಾರಿತ ವೈಶಿಷ್ಟ್ಯಗಳಲ್ಲಿ ಇವು ಸೇರಿವೆ:
• ವರ್ಧಿತ ಸುರಕ್ಷತೆ:
ʻವಂದೇ ಭಾರತ್ 2.0ʼ ರೈಲುಗಳು ಕಾರ್ಯಾಚರಣೆಯಲ್ಲಿ ಹೆಚ್ಚಿನ ಸುರಕ್ಷತೆಗಾಗಿ ʻಕವಚ್ ʼ (ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ) ಅನ್ನು ಹೊಂದಿವೆ. ಪ್ರತಿ ಬೋಗಿಯಲ್ಲಿ ನಾಲ್ಕು ತುರ್ತು ಕಿಟಕಿಗಳನ್ನು ಅಳವಡಿಸಲಾಗಿದ್ದು, ಸುಧಾರಿತ ಭದ್ರತೆ ಇರುತ್ತದೆ. ಬೋಗಿಯ ಹೊರಗೆ ʻರಿಯರ್ ವ್ಯೂʼ ಕ್ಯಾಮೆರಾಗಳು ಸೇರಿದಂತೆ ನಾಲ್ಕು ಪ್ಲಾಟ್ ಫಾರ್ಮ್ ಸೈಡ್ ಕ್ಯಾಮೆರಾಗಳು ಇರಲಿವೆ. ಹೊಸ ಬೋಗಿಗಳು ಉತ್ತಮ ರೈಲು ನಿಯಂತ್ರಣಕ್ಕಾಗಿ ಲೆವೆಲ್ -2 ಸುರಕ್ಷತಾ ಏಕೀಕರಣ ಪ್ರಮಾಣೀಕರಣವನ್ನು ಹೊಂದಿವೆ. ʻವಂದೇ ಭಾರತ್ 2.0ʼ ಎಲ್ಲಾ ವಿದ್ಯುತ್ ಕ್ಯೂಬಿಕಲ್‌ಗಳು ಮತ್ತು ಶೌಚಾಲಯಗಳಲ್ಲಿ ʻಏರೋಸಾಲ್ʼ ಆಧಾರಿತ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆಯೊಂದಿಗೆ ಉತ್ತಮ ಅಗ್ನಿ ಸುರಕ್ಷತಾ ಕ್ರಮಗಳನ್ನು ಹೊಂದಿದೆ. ಈ ಹಿಂದೆ ಇದ್ದ 400 ಮಿ.ಮೀ. ಎತ್ತರಕ್ಕೆ ಹೋಲಿಸಿದರೆ ಹೊಸ ಆವೃತ್ತಿಯು 650 ಎಂ.ಎಂ. ಎತ್ತರದವರೆಗೆ ಪ್ರವಾಹವನ್ನು ತಡೆದುಕೊಳ್ಳಬಲ್ಲದು. ಇದರ ಅಂಡರ್-ಸ್ಲಂಗ್ ವಿದ್ಯುತ್ ಉಪಕರಣಗಳಿಗೆ ಉತ್ತಮ ಫ್ಲಡ್ ಪ್ರೂಫಿಂಗ್ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್ ವೈಫಲ್ಯದ ಸಂದರ್ಭಕ್ಕಾಗಿ ಪ್ರತಿ ಬೋಗಿಯಲ್ಲಿ ನಾಲ್ಕು ತುರ್ತು ದೀಪಗಳನ್ನು ಈ ರೈಲು ಹೊಂದಿದೆ.
• ಪ್ರಯಾಣಿಕರಿಗೆ ಸುಧಾರಿತ ಸೌಲಭ್ಯಗಳು:
ʻ3.5 ರೈಡಿಂಗ್ ಇಂಡೆಕ್ಸ್ʼಗೆ ಅನುಗುಣವಾಗಿ ಪ್ರಯಾಣಿಕರಿಗೆ ವರ್ಧಿತ ಪ್ರಯಾಣ ಆರಾಮದಾಯಕತೆ ಇರುತ್ತದೆ. ಹೊಸ ʻವಂದೇ ಭಾರತ್ʼ, ಹಿಂದಿನ 24 ಇಂಚಿನ ಟಿವಿಗಳ ಬದಲಿಗೆ 32 ಇಂಚಿನ ಎಲ್‌ಸಿಡಿ ಟಿವಿಗಳನ್ನು ಸಹ ಹೊಂದಿರುತ್ತದೆ. ವಂದೇ ಭಾರತ್ 2.0 ನಲ್ಲಿ ಪ್ರಯಾಣಿಕರ ಮಾಹಿತಿ ಮತ್ತು ಸಂವಹನ ವ್ಯವಸ್ಥೆ ಇರುತ್ತದೆ. ಶೇ.15 ರಷ್ಟು ಅಧಿಕ ಇಂಧನ ದಕ್ಷತೆಯ ಹವಾನಿಯಂತ್ರಣ ವ್ಯವಸ್ಥೆಯಿಂದ ದೊರೆಯುವ ಧೂಳು ಮುಕ್ತ ಶುದ್ಧ ಗಾಳಿ ಹಾಗೂ ಟ್ರಾಕ್ಷನ್ ಮೋಟರ್‌ನ ಕೂಲಿಂಗ್ ವ್ಯವಸ್ಥೆಯು ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸುತ್ತದೆ. ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೈಡ್ ರೆಕ್ಲೈನರ್ ಸೀಟ್ ಸೌಲಭ್ಯವನ್ನು ಈಗ ಎಲ್ಲಾ ತರಗತಿಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು. ಎಕ್ಸಿಕ್ಯೂಟಿವ್ ಕೋಚ್‌ಗಳು 180 ಡಿಗ್ರಿ ತಿರುಗುವ ಆಸನಗಳ ಹೆಚ್ಚುವರಿ ವೈಶಿಷ್ಟ್ಯವನ್ನು ಹೊಂದಿವೆ. ಈ ರೈಲು ಸ್ಪರ್ಶ-ಮುಕ್ತ ಸೌಲಭ್ಯಗಳೊಂದಿಗೆ ಜೈವಿಕ ನಿರ್ವಾತ ಶೌಚಾಲಯಗಳನ್ನು ಸಹ ಹೊಂದಿರುತ್ತದೆ. ರೈಲುಗಳು ಆನ್ ಡಿಮಾಂಡ್ ವೈ-ಫೈ ಕಂಟೆಂಟ್ ಸಹ ಹೊಂದಿರುತ್ತವೆ.
• ಇತರ ಸುಧಾರಣೆಗಳು:
ಅಧಿಕ ದಕ್ಷತೆಯ ಕಂಪ್ರೆಸರ್ ಮೂಲಕ ಉತ್ತಮ ಶಾಖ ಕವಚ ಮತ್ತು ಹವಾನಿಯಂತ್ರಣ ವ್ಯವಸ್ಥೆಯನ್ನು ʻವಂದೇ ಭಾರತ್ 2.0ʼ ಹೊಂದಿರುತ್ತದೆ, ಕೀಟಾಣು ಮುಕ್ತ ಗಾಳಿಯ ಪೂರೈಕೆಗಾಗಿ ಅಲ್ಟ್ರಾ ವೈಲೆಟ್ (ಯುವಿ) ಲ್ಯಾಂಪ್ ಅನ್ನು ಹೊಂದಿರುತ್ತದೆ. ಈ ರೈಲು 140 ಸೆಕೆಂಡುಗಳಲ್ಲಿ 160 ಕಿ.ಮೀ ವೇಗವನ್ನು ತಲುಪಬಲ್ಲದು. ಚಾಲಕ-ಗಾರ್ಡ್ ಸಂವಹನಕ್ಕಾಗಿ ಧ್ವನಿ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಉತ್ತಮ ವೇಗವರ್ಧನೆ ಮತ್ತು ವೇಗ ಇಳಿಕೆಗಾಗಿ ಮಧ್ಯದಲ್ಲಿ ಚಾಲಕಶಕ್ತಿ ರಹಿತ (ನಾನ್ ಡ್ರೈವಿಂಗ್) ಟ್ರೈಲರ್ ಕೋಚ್ ಅಳವಡಿಸುವ ಮೂಲಕ ಬೋಗಿಗಳ ಜೋಡಣೆಯಲ್ಲಿ ಬದಲಾವಣೆ ಮಾಡಲಾಗಿದೆ. ಟ್ರ್ಯಾಕ್ಷನ್ ಮೋಟರ್‌ನ ಉತ್ತಮ ವಿಶ್ವಾಸಾರ್ಹತೆ ಹೆಚ್ಚಿಸುವ ದೃಷ್ಟಿಯಿಂದ ಮೋಟರ್‌ಗೆ ಉತ್ತಮ ಗಾಳಿ ವ್ಯವಸ್ಥೆಯನ್ನು ಮಾಡಲಾಗಿದೆ. ವೇ ಸೈಡ್ ನಿಲ್ದಾಣಗಳೊಂದಿಗೆ ಸಿಗ್ನಲ್ ವಿನಿಮಯಕ್ಕಾಗಿ ಬೋಗಿಗಳಲ್ಲಿ ಎರಡು ಸಿಗ್ನಲ್ ವಿನಿಮಯ ದೀಪಗಳು ಸಹ ಇವೆ.