ಸೂರಿಗಾಗಿ ಅಂಗಲಾಚುತ್ತಿರುವ ಮಕ್ಕಳು, ವಿಷಜಂತುಗಳ ನಡುವೆ ಜೀವನ ಸಾಗಾಟ, ಅಡುಗೆ ಮಾಡಲು,ಮಲಗಲೂ ಜಾಗವಿಲ್ಲ..!, ಗಮನಹರಿಸಬೇಕಿದೆ ಅಧಿಕಾರಿಗಳು, ಜನಪ್ರತಿನಿಧಿಗಳು
ಮೈಸೂರು: ಸಾರ್ ನಮಗೊಂದು ಸೂರು ನೀಡಿ. ದಯಮಾಡಿ ನಮ್ಮ ಮನೆ ದುರಸ್ಥಿ ಮಾಡಿಸಿಕೊಡಿ.ಅಥವಾ ಅಲ್ಲಿಯವರೆಗೆ ನಮಗೆ ತಂಗಲು ಒಂದು ಮನೆ ನೀಡಿ. ಅಡುಗೆ ಮಾಡಲು, ಸ್ನಾನ ಮಾಡಲು ಹಾಗೂ ಮಲಗಲು ಜಾಗವಿಲ್ಲ. ಇದ್ದ ಒಂದು ಮನೆಯು ಮಳೆಯಿಂದಾಗಿ ಕುಸಿದಿದ್ದು, ವಿಷಜಂತುಗಳ ಕಾಟದ ನಡುವೆ ಜೀವನ ನಡೆಸಬೇಕಿದೆ.
ಇದು ಮೂವರು ಪುಟ್ಟ ಹೆಣ್ಣು ಮಕ್ಕಳು ಹಾಗೂ ಪೋಷಕರ ಕರುಳುಹಿಂಡುವ ಅಂಗಲಾಚಿಕೆ. ಮಳೆಯಿಂದಾಗಿ ಮನೆಯ ಒಂದು ಭಾಗ ಕುಸಿದು ಒಂದೂವರೆ ವರ್ಷವಾದರೂ ದುರಸ್ಥಿ ಕಾಣದೇ,ಇರಲು ಸೂಕ್ತ ಸೂರು ಇಲ್ಲದೇ ಪರಿತಪಿಸುತ್ತಿರುವ ಹಾಗೂ ಸೂರಿಗಾಗಿ ಅಂಗಲಾಚುತ್ತಿರುವ ಬಡ ಕುಟುಂಬ ಕಥೆ-ವ್ಯಥೆ.
ವಿವರ: ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಎಂ.ಸಿ.ತೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಗುತನ ಮೂಲೆ ಗ್ರಾಮದಲ್ಲಿ ಸಫೀವುಲ್ಲಾ, ಪತ್ನಿ ಬಲ್ಕೀಸು ಮತ್ತು ಮೂವರು ಹೆಣ್ಣು ಮಕ್ಕಳು ವಾಸಿಸುತ್ತಿದ್ದಾರೆ. ಕಳೆದ ಸಾಲಿನ ಜೂನ್ ತಿಂಗಳಿನಲ್ಲಿ ಎಡೆಬಿಡದೇ ಸುರಿದ ಭಾರೀ ಮಳೆಯಿಂದಾಗಿ ಅವರು ವಾಸಿಸುವ ಮನೆಯ ಪ್ರಮುಖ ಭಾಗ ಕುಸಿದು ಬಿದ್ದಿದೆ. ಅದೃಷ್ಟವಷಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಮನೆಯ ಒಳಗೆ ಮಲಗಿದ್ದ ಕುಟುಂಬಸ್ಥರು ಶಬ್ದಕ್ಕೆ ಹೆದರಿ ಮನೆಯ ಹೊರಗೊಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಹಾಗೂ ಅಂದು ರಾತ್ರಿಪೂರ ಕತ್ತಲಿನಲ್ಲಿಯೇ ಕಾಲಕಳೆದಿದ್ದಾರೆ.
ಗ್ರಾಮದಲ್ಲಿ ಪಂಕ್ಚರ್ ಅಂಗಡಿ ಇಟ್ಟುಕೊಂಡಿರುವ ಸಫೀವುಲ್ಲಾ ಬೆಳಗ್ಗೆ ಕುಟುಂಬದವರ ಜೊತೆಗೂಡಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಿ ಅಗತ್ಯ ದಾಖಲೆ ನೀಡಿದ್ದಾರೆ.ಇತ್ತ ಗ್ರಾಮಸ್ಥರೆಲ್ಲಾ ಜೊತೆಗೂಡಿ ಗ್ರಾಪಂ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನೆ ಕಟ್ಟಿಕೊಡಲು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಆದರೆ ಒಂದೂವರೆ ವರ್ಷವಾದರೂ ಈ ಕುಟುಂಬಕ್ಕೆ ನ್ಯಾಯ ದೊರಕದೇ ದಿನಂಪ್ರತಿ ಕಣ್ಣೀರಿನಲ್ಲೇ ಜೀವನ ಸಾಗಿಸುವ ಪರಿಸ್ಥಿತಿ ಉಂಟಾಗಿದ್ದು, ಇಂದಿಗೂ ಅದೇ ಕುಸಿದ ಮನೆಯಲ್ಲೇ ವಾಸ ಮಾಡುತ್ತಿದ್ದಾರೆ.
ಹಾವುಗಳ ಕಾಟ:
ಮೊದಲಿನಿಂದಲೂ ಇವರು ವಾಸಿಸುತ್ತಿರುವ ಮನೆಯ ಸುತ್ತ-ಮುತ್ತ ಹಾವು ಸೇರಿದಂತೆ ಇನ್ನಿತರ ವಿಷಜಂತುಗಳ ಕಾಟ ಹೆಚ್ಚಾಗಿದ್ದು, ಇತ್ತೀಚೆಗಂತೂ ಮನೆಯ ಮೇಲ್ಚಾವಣಿಯಿಂದ ಹಾವುಗಳು ಮನೆಯೊಳಗೆ ಬೀಳುತ್ತಿವೆ.ಅಲ್ಲದೇ ಮಲಗಿರುವ ಮಕ್ಕಳ ಮೇಲೆಯೂ ಹಾವುಗಳು ಹರಿದಾಡಿರುವ ಉದಾಹರಣೆಯೂ ಇದೆ.ಇದರಿಂದಾಗಿ ಮಕ್ಕಳು ಮತ್ತು ಪೋಷಕರು ಮನೆಯಲ್ಲಿ ಮಲಗಲೂ ಭಯ ಬೀಳುವ ಸನ್ನಿವೇಶ ಎದುರಾಗಿದೆ.
ಮಲಗಲೂ ಜಾಗವಿಲ್ಲ:
ಮನೆ ಕುಸಿದ ಮೇಲೆ ಮಲಗಲೂ ಸೂಕ್ತ ಜಾಗವಿಲ್ಲದಂತಾಗಿದೆ. ಇರುವ ಜಾಗದಲೇ ಮಲಗುವುದು.ಅಡುಗೆ ಮಾಡುವುದು ಮತ್ತು ಸ್ನಾನ ಮಾಡುವ ಕರುಣಾಜನಕ ಸ್ಥಿತಿ ನಿರ್ಮಾಣವಾಗಿದೆ. ಬವಡತನದಲ್ಲಿ ಬೆಂದಿರುವ ಈ ಕುಟುಂಬ ಮತ್ತಷ್ಟು ಕಷ್ಟಕ್ಕೆ ಸಿಲುಕಿದ್ದು, ನೆರವಿನ ಅಗತ್ಯವಿದೆ.
ದೊರಕದ ನ್ಯಾಯ:
ಮನೆ ಕುಸಿದ ದಿನದಿಂದಲೂ ಸಫೀವುಲ್ಲಾ ಕುಟುಂಬ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿ ಮಾಡುತ್ತಿದ್ದರೂ, ಇದುವರೆವಿಗೂ ಈ ಮನವಿಗೆ ನ್ಯಾಯ ದೊರಕದಂತಾಗಿದೆ. ಈಗಲಾದರೂ ಈ ಕುಟುಂಬದ ನೆರವಿಗೆ ಧಾವಿಸಬೇಕೆಂಬ ಒತ್ತಾಯವಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆಯೇ ಕಾದು ನೋಡಬೇಕಿದೆ.
ಓದುವ ಮಕ್ಕಳು ಶಾಲೆಗೆ ತೆರಳಿದರೇ, ಪತಿ ಸಫೀವುಲ್ಲಾ ದುಡಿಯಲು ತಮ್ಮ ಅಂಗಡಿಗೆ ತೆರಳುತ್ತಾರೆ. ಈ ಸಮಯದಲ್ಲಿ ಅವರು ಮನೆಗೆ ವಾಪಾಸ್ ಬರೋವರೆಗೂ ಭಯದಲ್ಲೇ ಕಾಲ ಕಳೆಯಬೇಕಿದೆ.ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕಾಲಿಗೆ ಬಿದ್ದು ಬೇಡಿದರೂ ಇವರೆಗೂ ನಮಗೆ ನ್ಯಾಯ ದೊರೆತಿಲ್ಲ.ದಯಮಾಡಿ ನ್ಯಾಯ ಕೊಡಿಸಿ.
ಬಲ್ಕೀಸು-ಸಫೀವುಲ್ಲಾ ಪತ್ನಿ.ಕೋಟ್..
ಮನೆಯಲ್ಲಿ ಇರಲು ಭಯವಾಗುತ್ತೆ. ರಾತ್ರಿ ಹೊತ್ತು ನಿದ್ದೆ ಮಾಡಲು ಆಗುವುದಿಲ್ಲ .ಮನೆಯಲ್ಲಿ ಹಾವುಗಳು ಹರಿದಾಡುತ್ತವೆ.ಮಳೆ ಬಂದರೇ ಮನೆಯೊಳಗೆಲ್ಲ ನೀರು ತುಂಬಿಕೊಳ್ಳುತ್ತದೆ. ಕೈ ಮುಗಿದು ಬೇಡಿಕೊಳ್ಳೇವೆ ನಮ್ಮ ಮನೆಯನ್ನು ದುರಸ್ಥಿ ಮಾಡಿಸಿಕೊಡಿ.ಇಲ್ಲವಾದರೇ ನಮ್ಮ ಕುಟುಂಬ ಇರಲು ಒಂದು ಪುಟ್ಟ ಮನೆಯನ್ನಾದರೂ ಕಟ್ಟಿಸಿಕೊಡಿ.
ಫಾಜಿಯಾ-ಸಫೀವುಲ್ಲಾ ಮಗಳು.
ಶೋಚನೀಯ ಬದುಕು-ಸಿ.ಚಂದನ್ ಗೌಡ
ಮೈಸೂರು; ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಮನುಕುಲದ 21ನೆಯ ಈ ಶತಮಾನದಲ್ಲೂ ಇಂತಹ ಶೋಚನೀಯ ಬದುಕು ನಡೆಸುತ್ತಿರುವ ಕುಟುಂಬ ನಮ್ಮೊಡನೆ ಇದ್ದಾರೆ ಎಂದರೆ ನಿಜಕ್ಕೂ ವಿಪರ್ಯಾಸ ಎಂದು ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್‍ಗೌಡ ಬೇಸರ ವ್ಯಕ್ತಪಡಿಸಿದರು.
ಸಫೀವುಲ್ಲಾ ಹಾಗೂ ಕುಟುಂಬದವರು ವಾಸಿಸುತ್ತಿರುವ ಸರಗೂರಿನ ತಾಲೂಕಿನ ಎಂ.ಸಿ.ತೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಗುತನ ಮೂಲೆ ಗ್ರಾಮಕ್ಕೆ ತಮ್ಮ ತಂಡದೊಂದಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿ-ಗತಿ ಬಗ್ಗೆ ಮಾಹಿತಿ ಪಡೆದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಕಳೆದ ಸಾಲಿನ ಜೂನ್ ತಿಂಗಳಲ್ಲಿ ಅಕಾಲಿಕ ಮಳೆಯಿಂದಾಗಿ ಸಫೀವುಲ್ಲಾ ಅವರ ಮನೆ ಕುಸಿದಿದ್ದು, ಅಂದಿನಿಂದ ಇಂದಿನವರೆಗೂ ಯಾವುದೇ ಸರ್ಕಾರದ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ. ಒಮ್ಮೆಯೂ ಕೂಡ ಸ್ಥಳಕ್ಕೆ ಭೇಟಿ ನೀಡದೇ ಇರುವುದು ನಿಜಕ್ಕೂ ಶೋಚನೀಯ ಸಂಗತಿ ಎಂದರು.
ಹಾವು ಸೇರಿದಂತೆ ವಿಷಜಂತುಗಳ ಜೊತೆ ಜೀವನ ನಡೆಸುತ್ತಿರುವ ಈ ಕುಟುಂಬದ ಸ್ಥಿತಿ ನಿಜಕ್ಕೂ ಯಾರಿಗೂ ಬಾರದಿರಲಿ. ಅಡುಗೆ ಮಾಡಲು. ಸ್ನಾನ ಮಾಡಲು ಜಾಗವಿಲ್ಲದೆ ಪರದಾಡುತ್ತಾ ಕಂಡ-ಕಂಡವರಲ್ಲಿ ನೆರವಿಗಾಗಿ ಬೇಡುತ್ತಿರುವ ಈ ಕುಟುಂಬದ ಸಂಕಷ್ಟಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸಬೇಕು.ಈ ಕೂಡಲೇ ಈ ಕುಟುಂಬಕ್ಕೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಚಂದನ್ ಗೌಡ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
(ಹೆಚ್ಚಿನ ಮಾಹಿತಿಗಾಗಿ ದೂ.9845395000 ಅನ್ನು ಸಂಪರ್ಕಿಸಬಹುದಾಗಿದೆ.)