ನಾಗಮಂಗಲ: ಜಿಲ್ಲೆಯಲ್ಲಿ ಹಲವಾರು ಪ್ರವಾಸೋದ್ಯಮ ಸ್ಥಳಗಳಿವೆ. ಅವುಗಳ ಮಾಹಿತಿ ಸಾರ್ವಜನಿಕರಿಗೆ ಸುಲಭವಾಗಿ ದೊರಕುವಂತೆ ಮಾಡಲು ಪ್ರವಾಸೋದ್ಯಮ ಆ್ಯಪ್ ನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಬಿಡುಗಡೆಗೊಳಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ಅವರು ಇಂದು ನಾಗಮಂಗಲ ತಾಲ್ಲೂಕಿನ ಕಂಬದಳ್ಳಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಇತಿಹಾಸ ತಿಳಿದುಕೊಳ್ಳಬಹುದಾದ ಆನೇಕ ಸ್ಥಳಗಳಿವೆ. ಅವುಗಳನ್ನು ಜನರಿಗೆ ಪರಿಚಯಿಸಲು ಪ್ರವಾಸೋದ್ಯಮ ವೆಬ್‌ಸೈಟ್ ಹಾಗೂ ಆ್ಯಪ್ ಉಪಯುಕ್ತವಾಗಲಿದೆ ಎಂದರು.
ಹಳೆಯ ಸ್ಮಾರಕ ಹಾಗೂ ದೇವಸ್ಥಾನಗಳು ನಮ್ಮ ದೇಶದ ರಾಜ ಮಹರಾಜರ ಇತಿಹಾಸ, ಬೆಳೆದು ಬಂದ ದಾರಿ ತಿಳಿಸುತ್ತದೆ. ಸಾರ್ವಜನಿಕರು ಅವುಗಳನ್ನು ಸಂರಕ್ಷಿಸಿ ಜೀರ್ಣೋದ್ಧಾರಕ್ಕೆ ಕೈ ಜೋಡಿಸಬೇಕು ಎಂದರು
ಸಾಹಿತಿ ಹಾಗೂ ಇತಿಹಾಸ ತಜ್ಞ ಮಹಮ್ಮದ್ ಕಲೀಂ ಉಲ್ಲಾ ರವರು ಮಾತನಾಡಿ ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳನ್ನು ರಕ್ಷಿಸದಿದ್ದರೆ ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಲು ಯಾವುದೇ ಸ್ಮಾರಕಗಳು, ಶಿಲಾ ಶಾಸನಗಳು ದೊರೆಯುವುದಿಲ್ಲ ಅದನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ನಾಗಮಂಗಲ ಕಂಬದಳ್ಳಿಯಲ್ಲಿರುವ ಕಂಬ ಶೌರ್ಯದ ಪ್ರತೀಕ. ಕಂಬದಳ್ಳಿಯ ಬಸದಿ ಹಾಗೂ ದೇವಸ್ಥಾನದ ಇತಿಹಾಸದ ಬಗ್ಗೆ ವಿವರಿಸಿದರು.
ಪುರಾತನ ಸ್ಥಳಗಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮೋತ್ತನ ಟ್ರಸ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರೆ ಊರಿನ ಗ್ರಾಮಸ್ಥರಿಂದ ಶೇಕಡಾ 20 ರಷ್ಟು ಹಣ, ರಾಜ್ಯ ಸರ್ಕಾರದಿಂದ ಶೇಕಡಾ 40 ರಷ್ಟು ಹಣ ಹಾಗೂ ಧರ್ಮಸ್ಥಳದ ಧರ್ಮೋತ್ತನ ಟ್ರಸ್ಟ್ ಅವರ ವತಿಯಿಂದ ಇನ್ನುಳಿದ ಶೇಕಡಾ 40 ರಷ್ಟು ಹಣ ನೀಡುತ್ತಾರೆ ಇದರಿಂದ ಪುರಾತನ ಪ್ರೇಕ್ಷಣಿಯ ಸ್ಥಳಗಳನ್ನು ರಕ್ಷಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಅತಿಶಯ ಶ್ರೀಕ್ಷೇತ್ರ ಕಂಬದಹಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ರಂಗಸ್ವಾಮಿ.ಕೆ, ಸಾಮಾಜಿಕ ಇತಿಹಾಸಕಾರ. ಧರ್ಮೇಂದ್ರ ಕುಮಾರ್, ಸಾಹಿತಿ ಜಯಪ್ರಕಾಶ ಗೌಡ, ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರಾದ ಪ್ರಸನ್ನ ಹಾಗೂ ನಾಗಮಂಗಲ ತಾಲ್ಲೂಕಿನ ಕರ್ನಾಟಕ ಜಾನಪದ ಪರಿಷತ್ ನ ಅಧ್ಯಕ್ಷ ಮಂಜೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು