ಮಹಿಳೆಯರಿಗೆ ಹೆಚ್ಚಿನ ಅಧಿಕಾರ ನೀಡುವ ಅಗತ್ಯ ಕುರಿತು ಒಮ್ಮತಕ್ಕೆ ಬಂದ ಜಿ-20 ಶೃಂಗಸಭೆ

0
88

ಹೊಸದಿಲ್ಲಿ ಘೋಷಣೆಯು ನಿರ್ಣಯಗಳನ್ನು ಅನುಸರಿಸುವಂತೆ ದೇಶಗಳಿಗೆ ಸವಾಲು ಒಡ್ಡಿದೆ

ಲೇಖನ – ಶ್ರೀ ಇಂದೇವರ್ ಪಾಂಡೆ,
ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ

ಜಾಗತಿಕ ರಾಜಕೀಯ ಮತ್ತು ರಾಜತಾಂತ್ರಿಕತೆ ವಲಯದಲ್ಲಿ, ಭರವಸೆ ಮತ್ತು ಪ್ರಗತಿಯ ದಾರಿದೀಪಗಳಾಗಿ ನಿಲ್ಲುವ ಕ್ಷಣಗಳಿವೆ. ವಿಶ್ವಾದ್ಯಂತ ಲಿಂಗ ಸಮಾನತೆ ಮತ್ತು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸಬಲೀಕರಣದ ಐತಿಹಾಸಿಕ ಬದ್ಧತೆಯೊಂದಿಗೆ, 2023ರ ಜಿ-20 ಹೊಸದಿಲ್ಲಿ ಘೋಷಣೆಯು ಅಂತಹ ಒಂದು ಹೆಗ್ಗುರುತಾಗಿದೆ. ಭಾರತದ ಅಧ್ಯಕ್ಷತೆ ಅಡಿ, ಜರುಗಿದ ಜಿ-20  ನಾಯಕರು ಮಹಿಳೆಯರ ಸಬಲೀಕರಣಕ್ಕಾಗಿ ಕಾರ್ಯಕಾರಿ ಗುಂಪು ರಚಿಸಲು ಜಿ-20 ಮಹಿಳಾ ಸಚಿವರನ್ನು ಬೆಂಬಲಿಸಲು ಒಪ್ಪಿಕೊಂಡರು. ಈ ಸಾಧನೆಯು ಲಿಂಗ ಸಮಾನತೆಯ ಪ್ರಾಮುಖ್ಯತೆಯನ್ನು ಗುರುತಿಸುವುದರೊಂದಿಗೆ ಆಳವಾಗಿ ಅನುರಣಿಸುತ್ತದೆ ಮತ್ತು ಜಾಗತಿಕವಾಗಿ ಲಿಂಗ ಅಸಮಾನತೆಗಳನ್ನು ತೊಡೆದುಹಾಕುವ ತುರ್ತು ಅಗತ್ಯವಾಗಿದೆ.
ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ಅಮೃತಕಾಲ’ ದೃಷ್ಟಿಕೋನದಿಂದ ಸ್ಫೂರ್ತಿ ಪಡೆದಿದೆ. ಅಲ್ಲಿ ‘ನಾರಿ ಶಕ್ತಿ'(ಸ್ತ್ರೀ-ಶಕ್ತಿ)ಯನ್ನು ಆರ್ಥಿಕತೆ ಮತ್ತು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಆಚರಿಸಲಾಗುತ್ತದೆ. ಈ ದೃಷ್ಟಿಕೋನವನ್ನು ನಿರ್ಮಿಸುವ ಮೂಲಕ, ಭಾರತದ ಜಿ-20 ಅಧ್ಯಕ್ಷತೆಯು ಮಹಿಳಾ ಅಭಿವೃದ್ಧಿಯಿಂದ ‘ಮಹಿಳಾ ನೇತೃತ್ವದ ಅಭಿವೃದ್ಧಿ’ಗೆ ಮೊದಲ ಬಾರಿಗೆ ಗಮನ ಬದಲಿಸಿದೆ.
ಹಲವು ದಶಕಗಳಿಂದಲೂ ಲಿಂಗ ಸಮಾನತೆಯ ಪ್ರತಿಪಾದಕರು ಈ ನಿರ್ಣಾಯಕ ಸಮಸ್ಯೆಯನ್ನು ಜಾಗತಿಕ ಕಾರ್ಯಸೂಚಿಯ ಮುಂಚೂಣಿಗೆ ತರಲು ಶ್ರಮಿಸಿದ್ದಾರೆ. ಈ ಪ್ರಯಾಣವು ದೀರ್ಘವೂ ಮತ್ತು ಸವಾಲಿನದ್ದು ಆಗಿದೆ. ದಾರಿಯುದ್ದಕ್ಕೂ ಹಲವಾರು ಹಿನ್ನಡೆಗಳು ಉಂಟಾಗಿವೆ. 2023ರ ಘೋಷಣೆಯಲ್ಲಿ ಲಿಂಗ ಸಮಾನತೆಯನ್ನು ಕೇಂದ್ರ ವಿಷಯವಾಗಿ ಸೇರಿಸಲು ಜಿ-20ರ ಸರ್ವಾನುಮತದ ನಿರ್ಧಾರವು ವಿಶ್ವಾದ್ಯಂತ ನಾಯಕರು, ಸರ್ಕಾರಗಳು, ನಾಗರಿಕ ಸಮಾಜ ಮತ್ತು ಪಾಲುದಾರರ ದಣಿವರಿಯದ ಪ್ರಯತ್ನಗಳಿಗೆ ಮತ್ತು ಅಚಲ ಬದ್ಧತೆಗೆ ಸಾಕ್ಷಿಯಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಹಿಳಾ ಹೋರಾಟಗಾರರು (ಅನ್ವೇಷಕರು-ಟ್ರೇಲ್‌ಬ್ಲೇಜರ್‌ಗಳು), ಉದ್ಯಮಿಗಳು, ನಾವೀನ್ಯಕಾರರು, ವಿಜ್ಞಾನಿಗಳು, ತಳಮಟ್ಟದ ಮಹಿಳಾ ನಾಯಕರು ಮತ್ತು ಮುಂಚೂಣಿಯ ಕಾರ್ಯಕರ್ತರು, ಖಾಸಗಿ ವಲಯ, ನಾಗರಿಕ ಸಮಾಜ, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ರಕ್ಷಣಾ ಸಂಸ್ಥೆಗಳು ಮತ್ತು ಜಿ-20 ಪ್ರತಿನಿಧಿಗಳು ಮತ್ತು ಭಾಷಣಕಾರರನ್ನು ಹೊರತುಪಡಿಸಿ ರಾಜ್ಯ ಸರ್ಕಾರಗಳನ್ನು ಸಹ ಒಟ್ಟುಗೂಡಿಸಿತು. ವಿಶ್ವಾದ್ಯಂತ ಮಹಿಳೆಯರು ಎದುರಿಸುತ್ತಿರುವ ಅತ್ಯಂತ ಸೂಕ್ಷ್ಮ ಸಮಸ್ಯೆಗಳ ಕುರಿತು ಚರ್ಚಿಸಲು ಅತಿಥಿ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಸಹ ಒಟ್ಟುಗೂಡಿಸಿತು.
ಸಚಿವಾಲಯವು ನಿರ್ಧರಿಸಿದ 4 ಆದ್ಯತೆಯ ಕ್ಷೇತ್ರಗಳ ಮೇಲೆ ಗಮನ ಹರಿಸಲಾಗಿದೆ, ಅವುಗಳೆಂದರೆ ಶಿಕ್ಷಣ: ಮಹಿಳಾ ಸಬಲೀಕರಣಕ್ಕೆ ಮಹತ್ವದ ಪರಿಣಾಮ ಬೀರುವ ಮಾರ್ಗವಾಗಿದೆ. ಮಹಿಳಾ ಉದ್ಯಮಶೀಲತೆ: ಈಕ್ವಿಟಿ ಮತ್ತು ಆರ್ಥಿಕತೆಗೆ ಗೆಲುವು ತಂದುಕೊಡುವ ಕ್ಷೇತ್ರ ಇದಾಗಿದೆ. ತಳಮಟ್ಟ ಸೇರಿದಂತೆ ಎಲ್ಲಾ ಹಂತಗಳಲ್ಲಿ ಮಹಿಳಾ ನಾಯಕತ್ವ ಉತ್ತೇಜಿಸಲು ಪಾಲುದಾರಿಕೆಗಳನ್ನು ರಚಿಸುವುದು. ಮತ್ತು ಹವಾಮಾನ ಬದಲಾವಣೆ ಕ್ರಿಯೆಗಳಲ್ಲಿ ಬದಲಾವಣೆ ತರುವವರನ್ನಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಉತ್ತೇಜಿಸುವುದು. ಮಹಿಳಾ ಸಬಲೀಕರಣಕ್ಕಾಗಿ ಡಿಜಿಟಲ್ ಕೌಶಲ್ಯವು ಈ ಎಲ್ಲಾ ಆದ್ಯತೆಯ ಕ್ಷೇತ್ರಗಳಲ್ಲಿ ಸಕಾರಾತ್ಮಕ ಪರಿಣಾಮ ಉಂಟುಮಾಡುವ ಸಾಮಾನ್ಯ ವಿಷಯವಾಗಿದೆ. ಈ ಎಲ್ಲಾ ವಿಷಯಗಳನ್ನು ಜಿ-20 ಸಬಲೀಕರಣ ಉಪಕ್ರಮ ಮತ್ತು ಡಬ್ಲ್ಯು-20 ಎಂಗೇಜ್‌ಮೆಂಟ್ ಗುಂಪುಗಳು ಚರ್ಚಿಸಿವೆ. ಮಹಿಳಾ ಸಬಲೀಕರಣದ ಸಚಿವರ ಸಮ್ಮೇಳನದ ಅಧ್ಯಕ್ಷರ ಹೇಳಿಕೆಯ ಅಂಗೀಕಾರವು ಲಿಂಗ ಸಮಾನತೆಯ ಕಡೆಗೆ ದೃಢವಾದ ಬದ್ಧತೆಗಳನ್ನು ಪ್ರತಿಧ್ವನಿಸಿತು. ಅಂತಿಮವಾಗಿ ಜಿ-20 ನಾಯಕರ ಘೋಷಣೆಯಲ್ಲಿ ದೃಢವಾದ ಸ್ಥಾನ ಕಂಡುಕೊಂಡಿತು.
ಇದು ಸಣ್ಣ ಸಾಧನೆಯಾಗಿರಲಿಲ್ಲ, ಅಂತಾರಾಷ್ಟ್ರೀಯ ಪ್ರತಿನಿಧಿಗಳು ಮತ್ತು ಇತರ ಪಾಲುದಾರರೊಂದಿಗೆ ಒಮ್ಮತ ನಿರ್ಮಿಸುವುದು ಮತ್ತು ಮಾತುಕತೆ ನಡೆಸುವುದು ಸವಾಲಿನ ಕಾರ್ಯವಾಗಿತ್ತು. ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಾಮುಖ್ಯತೆಯ ವಿಷಯಗಳು ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಸಮಾನವಾಗಿ ಪ್ರತಿಧ್ವನಿಸುವುದಿಲ್ಲ.
ಜಿ-20 ಚರ್ಚೆ ಮತ್ತು ಸಂವಾದಗಳಲ್ಲಿ ತಳ ಸಮುದಾಯದ ಮಹಿಳೆಯರು ಮತ್ತು ನಾಯಕಿಯರನ್ನು ಸೇರಿಸದೆ ಆರೋಗ್ಯ, ಪೌಷ್ಟಿಕತೆ, ಶಿಕ್ಷಣ ಮತ್ತು ಉದ್ಯಮಶೀಲತೆ ಕುರಿತು ಫಲಿತಾಂಶಗಳನ್ನು ಪಡೆಯುವುದು ಸಾಧ್ಯವೇ ಇಲ್ಲ ಎಂಬ ಗಮನಾರ್ಹ ಸಂಗತಿಯನ್ನು ಎಲ್ಲಾ ಪ್ರತಿನಿಧಿಗಳು ಒಪ್ಪಿಕೊಂಡರು. ‘ಅತ್ಯುತ್ತಮ ಅಭ್ಯಾಸಗಳ ಪ್ಲೇಬುಕ್’ ಪರಂಪರೆಗೆ ‘ಸ್ಥಳೀಯ ಮಟ್ಟದಲ್ಲಿ ಮಹಿಳಾ ಉದ್ಯಮಿಗಳು ಮತ್ತು ನಾಯಕರನ್ನು ಬೆಂಬಲಿಸುವುದು’ ಎಂಬ ಹೊಸ ಗಮನ ಕೇಂದ್ರೀಕೃತ ವಿಷಯ ಸೇರಿಸುವ ಮೂಲಕ ಇದನ್ನು ಮತ್ತಷ್ಟು ಅನುಮೋದಿಸಲಾಗಿದೆ.
ಮಹಿಳಾ ಸಬಲೀಕರಣಕ್ಕಾಗಿ ಡಿಜಿಟಲ್ ಕೌಶಲ್ಯವು ಈ ಎಲ್ಲಾ ಆದ್ಯತೆಯ ಕ್ಷೇತ್ರಗಳಲ್ಲಿ ಮಹತ್ವದ ಪರಿಣಾಮ ಬೀರುವ ವಿಷಯವಾಗಿದೆ. ಡಿಜಿಟಲ್ ಲಿಂಗ ವಿಭಜನೆ (ಕಂದಕ) ಕಡಿಮೆ ಮಾಡುವ ಪ್ರಧಾನಿ ಮೋದಿ ಅವರ ಬದ್ಧತೆಯು 2023ರ ಆಗಸ್ಟ್ 2ರಿಂದ 4ರ ವರೆಗೆ ನಡೆದ ಮಹಿಳಾ ಸಬಲೀಕರಣದ ಜಿ-20 ಸಚಿವರ ಸಮಾವೇಶ(MCWE)ದಲ್ಲಿ ಪ್ರತಿಫಲಿಸಿದ್ದು, ಮಹಿಳೆಯರಿಗೆ ಡಿಜಿಟಲ್ ಕೌಶಲ್ಯವನ್ನು ಕೇಂದ್ರೀಕರಿಸುವ ಮೂಲಕ ಬಹುದೊಡ್ಡ ಬದಲಾವಣೆಗೆ ಕಾರಣವಾಗುವ ‘ತಂತ್ರಜ್ಞಾನ ಈಕ್ವಿಟಿ’ ವೇದಿಕೆ  ಪ್ರಾರಂಭಿಸಲು ಕೊಡುಗೆ ನೀಡಿದೆ. ಡಿಜಿಟಲ್ ಕೌಶಲ್ಯ ವೇದಿಕೆಯ ಸುಸ್ಥಿರತೆ ಖಚಿತಪಡಿಸಿಕೊಳ್ಳಲು, ಅದರ ವ್ಯಾಪ್ತಿ ವಿಸ್ತರಿಸಲು ಜಿ-20 ಪಾಲುದಾರಿಕೆಯು ಮಹಿಳಾ ಸಬಲೀಕರಣದ ಜಿ-20 ಸಚಿವರ ಸಮಾವೇಶ(MCWE)ದಲ್ಲಿ ಒಗ್ಗೂಡಿತು. 120ಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿರುವ ಈ ವೇದಿಕೆಯು ಈಗ ಜಿ-20 ರಾಷ್ಟ್ರಗಳ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ತಮ್ಮ ವೃತ್ತಿ ಬೆಳವಣಿಗೆಯನ್ನು ವೇಗಗೊಳಿಸಲು, ಡಿಜಿಟಲ್ ಕೌಶಲ್ಯ ಮತ್ತು ಉನ್ನತ ಕೌಶಲ್ಯ ಕೋರ್ಸ್‌ಗಳನ್ನು ಕೈಗೊಳ್ಳಲು ನೋಂದಣಿಗಾಗಿ ಮುಕ್ತವಾಗಿದೆ.
ಮತ್ತೊಂದು ಸ್ಪಷ್ಟವಾದ ಫಲಿತಾಂಶವೆಂದರೆ ಮಾರ್ಗದರ್ಶನ(ಮೆಂಟರ್‌ಶಿಪ್) ವೇದಿಕೆ.  ಇದನ್ನು ಜಾಗತಿಕ ಓಯಸಿಸ್ ಎಂದು ಪರಿಗಣಿಸಬಹುದು. ಎಲ್ಲಾ ಮಹಿಳೆಯರ ಸಬಲೀಕರಣದ ಸಾಮೂಹಿಕ ದೃಷ್ಟಿಕೋನ ಕಾರ್ಯಗತಗೊಳಿಸಲು, ಇಲ್ಲಿ ಜಿ-20 ರಾಷ್ಟ್ರಗಳ ಮಹಿಳಾ ಮಾರ್ಗದರ್ಶಕರು ತಮ್ಮ ಅನುಭವ ಮತ್ತು ಪರಿಣತಿಯನ್ನು ಮಾರ್ಗದರ್ಶಕರೊಂದಿಗೆ ಹಂಚಿಕೊಳ್ಳುತ್ತಾರೆ.
ಸ್ಫೂರ್ತಿದಾಯಕ ಕಥೆಗಳು ನಿಜ ಜೀವನದ ಉದಾಹರಣೆಗಳ ಮೂಲಕ ಯಶಸ್ಸಿನ ಹಾದಿ ಬೆಳಗಿಸುವ ಮೂಲಕ ಶಕ್ತಿಯುತ ಮಾದರಿಗಳಾಗಿ ಕಾರ್ಯ ನಿರ್ವಹಿಸುತ್ತವೆ. ಮೊದಲ ಬಾರಿಗೆ, ಭಾರತದ ಅಧ್ಯಕ್ಷತೆಯ ಅಡಿ, ಜಿ-20 ಎಂಪವರ್ ವೆಬ್‌ಸೈಟ್ 9 ದೇಶಗಳ 73 ಸ್ಫೂರ್ತಿದಾಯಕ ಕಥೆಗಳಿಗೆ ವೇದಿಕೆಯಾಗಿದೆ, ಇದು ಜಿ-20 ರಾಷ್ಟ್ರಗಳಾದ್ಯಂತ ವಿಜಯಶಾಲಿ ಮಹಿಳೆಯರ ಗಮನಾರ್ಹ ಪ್ರಯಾಣಗಳನ್ನು ದಾಖಲಿಸುತ್ತದೆ.

ಭಾರತದ ಜಿ-20 ಅಧ್ಯಕ್ಷತೆಯ ನೀತಿಗಳು ಮತ್ತು ಕಾರ್ಯತಂತ್ರಗಳ ಮೇಲೆ ನಿಜವಾದ ಪ್ರಭಾವ ಬೀರಬೇಕಾದರೆ, ಚರ್ಚೆಗಳಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ ಮುಖ್ಯ ಎಂಬುದನ್ನು ಗುರುತಿಸಿದೆ, ಇದು ಜಿ-20 ಚರ್ಚೆಗಳಿಗೆ ‘ಜನ ಭಾಗಿದಾರಿ’ಯ ಮನೋಭಾವ ತುಂಬಲು ಕಾರಣವಾಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ತನ್ನ ನಾನಾ ಉಪಕ್ರಮಗಳು ಮತ್ತು ಕಾರ್ಯಕ್ರಮ ಗುಂಪುಗಳ ಮೂಲಕ ಯಶಸ್ವಿಯಾಗಿ 300,000 ನಾಗರಿಕರನ್ನು ವಾಕಾಥಾನ್‌ನಿಂದ ಹಿಡಿದು ನಾನಾ ಕಾರ್ಯಕ್ರಮಗಳಿಗೆ ಸೇರಿಸಿದ್ದು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಎತ್ತಿ ತೋರಿಸಿದೆ. ಸ್ಥಳೀಯ ಮಹಿಳಾ ಕುಶಲಕರ್ಮಿಗಳು, ಕರಕುಶಲ ವ್ಯಕ್ತಿಗಳು ಮತ್ತು ಮಹಿಳಾ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳು ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಒದಗಿಸಲು ವಿವಿಧ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಚಿವಾಲಯವು ಪ್ರದರ್ಶನಗಳನ್ನು ಆಯೋಜಿಸಿದೆ, ಇದು ಭಾರತದ ಜಿ-20 ಅಧ್ಯಕ್ಷತೆಯಲ್ಲಿ ನಡೆದ ನಿಜವಾದ ಜನರ ಕಾರ್ಯಕ್ರಮವಾಗಿದೆ.
2023ರ ಜಿ-20 ನವದೆಹಲಿ ನಾಯಕರ ಘೋಷಣೆಯು ಭರವಸೆಯ ದಾರಿದೀಪ ಮಾತ್ರವಲ್ಲ, ಕ್ರಿಯೆಗೆ ನೀಡಿದ ಒಕ್ಕೊರಲಿನ ಕರೆಯಾಗಿದೆ. ವಾಕ್ಚಾತುರ್ಯ ಮೀರಿ ಮುನ್ನಡೆಯಲು ಮತ್ತು ಲಿಂಗ ಸಮಾನತೆಯ ಕಡೆಗೆ ಅರ್ಥಪೂರ್ಣ ಹೆಜ್ಜೆಗಳನ್ನು ಇಡಲು ಇದು ದೇಶಗಳಿಗೆ ಸವಾಲು ಒಡ್ಡಿದೆ.

****

ಶ್ರೀ ಇಂದೇವರ್ ಪಾಂಡೆ, ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ