ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ; ತಂಬಾಕು ಉತ್ಪನ್ನ ಖರೀದಿ ವಯೋಮಿತಿ 21 ವರ್ಷಕ್ಕೆ ಏರಿಕೆ: ದಿನೇಶ್ ಗುಂಡೂರಾವ್

0
8

ರಾಜ್ಯಾದ್ಯಂತ ಹುಕ್ಕಾ ಬಾರ್‌ಗಳನ್ನು ನಿಷೇಧಿಸಲು ಮತ್ತು ತಂಬಾಕು ಉತ್ಪನ್ನಗಳನ್ನು ಖರೀದಿಸುವ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ತಂಬಾಕು ಸೇವನೆ ಮತ್ತು ಅದರಿಂದಾಗುವ ಹಾನಿಯ ತಡೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. “ಹುಕ್ಕಾ ಬಾರ್ ನಿಷೇಧಿಸುವ ಅಗತ್ಯವಿದೆ ಎಂದು ಚರ್ಚಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಕಾಯ್ದೆಯ ಅಗತ್ಯವಿದೆ. ಹುಕ್ಕಾಬಾರ್ ನಿಷೇಧಿಸಲು ಪ್ರತ್ಯೇಕವಾದ ಕಾಯ್ದೆ ರೂಪಿಸಿ ಜಾರಿ ಮಾಡಲಾಗುತ್ತದೆ” ಎಂದರು.

“ಹುಕ್ಕಾ ಬಾರ್‌ಗಳಿಂದ ಚಿಕ್ಕ ಮಕ್ಕಳು ಸಹ ಹಾಳಾಗುತ್ತಿದ್ದಾರೆ. ಯುವಜನರು ಹುಕ್ಕಾ ಚಟಕ್ಕೆ ಬಿದ್ದು ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ನಿಯಂತ್ರಿಸುವುದು ಅತ್ಯಗತ್ಯವಾಗಿದೆ. ಸದ್ಯ ಶಾಲಾ-ಕಾಲೇಜು ವ್ಯಾಪ್ತಿಯಿಂದ 100 ಮೀಟರ್‌ವರೆಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಈಗ ಇದನ್ನು ದೇವಸ್ಥಾನ, ಚರ್ಚ್, ಮಸೀದಿ, ಆಸ್ಪತ್ರೆಗಳ ವ್ಯಾಪ್ತಿಗೂ ಅನ್ವಯಿಸಲಾಗುತ್ತದೆ” ಎಂದರು.

“ತಂಬಾಕು ಉತ್ಪನ್ನಗಳ ಖರೀದಿ ಮತ್ತು ಸೇವನೆಗೆ 18 ವರ್ಷ ಮೇಲ್ಪಟ್ಟಿರಬೇಕೆಂಬ ನಿಯಮವಿದೆ. ಅದನ್ನು 21 ವರ್ಷಕ್ಕೆ ಏರಿಕೆ ಮಾಡಲು ಉದ್ದೇಶಿಸಲಾಗಿದೆ. ಜೊತೆಗೆ, ಕಾನೂನು ಬಾಹಿರ ಚಟುವಟಿಕೆಗಳನ್ನು ಬುಡಸಮೇತ ಕಿತ್ತೆಸೆಯುವ ಕೆಲಸವನ್ನು ಸರ್ಕಾರ ಮಾಡಲಿದೆ” ಎಂದು ಅವರು ಹೇಳಿದರು.