ರಾಷ್ಟ್ರಪತಿ ಭವನದಿಂದ ಸೆಪ್ಟೆಂಬರ್ 13, 2023 ರಂದು ಆಯುಷ್ಮಾನ್ ಭವ ಅಭಿಯಾನಕ್ಕೆ ಚಾಲನೆ ನೀಡಲಿರುವ ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ. ದ್ರೌಪದಿ ಮುರ್ಮು
ಆಯುಷ್ಮಾನ್ ಭವ ಯೋಜನೆ ರಾಷ್ಟ್ರವ್ಯಾಪಿ ಸಮಗ್ರ ಆರೋಗ್ಯ ಉಪಕ್ರಮವಾಗಿದ್ದು ಪ್ರತಿ ಹಳ್ಳಿ ಮತ್ತು ಪಟ್ಟಣವನ್ನು ತಲುಪುವುದಲ್ಲದೆ ಆರೋಗ್ಯ ಯೋಜನೆಗಳ ಸಂಪೂರ್ಣ ವ್ಯಾಪ್ತಿಯನ್ನು ಖಾತ್ರಿಗೊಳಿಸುತ್ತದೆ
ಪ್ರತಿಯೊಬ್ಬ ಪ್ರಜೆಯೂ ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2, 2023 ರವರೆಗೆ ಆಯೋಜಿಸಲಾದ ‘ಸೇವಾ ಪಖ್ವಾಡಾ’
ಆಯುಷ್ಮಾನ್ ಭವದ 3 ಅಂಶಗಳಾದ ಆಯುಷ್ಮಾನ್ – ಆಪ್ಕೆ ದ್ವಾರ 3.0, HWC ಗಳಲ್ಲಿ ಮತ್ತು CHC ಗಳಲ್ಲಿ ಆಯುಷ್ಮಾನ್ ಮೇಳಗಳು ಮತ್ತು ಪ್ರತಿ ಗ್ರಾಮ ಮತ್ತು ಪಂಚಾಯತ್ ಗಳಲ್ಲಿನ ಆಯುಷ್ಮಾನ್ ಸಭೆಗಳ ಮೂಲಕ ಆರೋಗ್ಯ ಸೇವೆಗಳ ಸಂಪೂರ್ಣ ತಲುಪಿಸುವಿಕೆ
ಆಯುಷ್ಮಾನ್ ಕಾರ್ಡ್ ಗಳನ್ನು ಒದಗಿಸುವುದು, ABHA ಐಡಿಗಳನ್ನು ಸೃಷ್ಟಿಸುವುದು ಮತ್ತು ಪ್ರಮುಖ ಆರೋಗ್ಯ ಯೋಜನೆಗಳು ಮತ್ತು ಸಾಂಕ್ರಾಮಿಕವಲ್ಲದ ರೋಗಗಳು, ಕ್ಷಯ ಹಾಗೂ ಸಿಕೆಲ್ ಸೆಲ್ ಕಾಯಿಲೆಯಂತಹ ರೋಗ ಪರಿಸ್ಥಿತಿಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಆಯುಷ್ಮಾನ್ ಭವ ಹೊಂದಿದೆ.
ನವದೆಹಲಿ, ಸೆಪ್ಟೆಂಬರ್ 12, 2023
ಸೆಪ್ಟೆಂಬರ್ 13, 2023 ರಂದು ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ. ದ್ರೌಪದಿ ಮುರ್ಮು ಅವರು, ಭಾರತದಲ್ಲಿ ಆರೋಗ್ಯದ ಲಭ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಮರುವ್ಯಾಖ್ಯಾನಿಸುವ ಒಂದು ಮಹತ್ವಪೂರ್ಣ ಕಾರ್ಯಕ್ರಮದಲ್ಲಿ, ದೂರದೃಷ್ಟಿಯುಳ್ಳ ‘ಆಯುಷ್ಮಾನ್ ಭವ’ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸಾರ್ವತ್ರಿಕ ಆರೋಗ್ಯ ರಕ್ಷಣೆ (UHC) ಸಾಧಿಸುವ ಮತ್ತು ಎಲ್ಲರಿಗೂ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿಯನ್ನು ಗುರುತಿಸುವ ಮೂಲಕ ರಾಷ್ಟ್ರಪತಿ ಭವನದಿಂದ ಆಯೋಜಿಸಲಾದ ವರ್ಚುವಲ್ ಕಾರ್ಯಕ್ರಮದಲ್ಲಿ ಈ ಐತಿಹಾಸಿಕ ಅಭಿಯಾನಕ್ಕೆ ಚಾಲನೆ ದೊರೆಯಲಿದೆ.
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪ್ರಾರಂಭಿಸಿದ ‘ಆಯುಷ್ಮಾನ್ ಭವ’ ಅಭಿಯಾನವು ರಾಷ್ಟ್ರವ್ಯಾಪಿ ಸಮಗ್ರ ಆರೋಗ್ಯ ಉಪಕ್ರಮವಾಗಿದ್ದು, ದೇಶದ ಪ್ರತಿ ಹಳ್ಳಿ ಮತ್ತು ಪಟ್ಟಣವನ್ನು ತಲುಪುವ ಮೂಲಕ ಆರೋಗ್ಯ ಸೇವೆಗಳ ಸಂಪೂರ್ಣ ವ್ಯಾಪ್ತಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಆಯುಷ್ಮಾನ್ ಭಾರತ್ ಕಾರ್ಯಕ್ರಮದ ಯಶಸ್ಸನ್ನು ಆಧರಿಸಿ ಈ ಅದ್ಭುತ ಉಪಕ್ರಮಕ್ಕೆ ಮುಂದಡಿ ಇರಿಸಲಾಗಿದ್ದು, ಇದು ಆರೋಗ್ಯ ಸೇವೆಗಳಲ್ಲಿ ಒಂದು ಮಾದರಿ ಬದಲಾವಣೆಗೆ ನಾಂದಿ ಹಾಡಲಿದೆ.
ಸೆಪ್ಟಂಬರ್ 17 ರಿಂದ ಅಕ್ಟೋಬರ್ 2, 2023 ರವರೆಗೆ ನಡೆಯಲಿರುವ ‘ಸೇವಾ ಪಖ್ವಾಡಾ’ ಸಮಯದಲ್ಲಿ ಕಾರ್ಯಗತಗೊಳ್ಳುವ ಅಭಿಯಾನವು ಇಡೀ ರಾಷ್ಟ್ರದ ಮತ್ತು ಸಂಪೂರ್ಣ-ಸಮಾಜದ ನಿಲುವನ್ನು ಒಳಗೊಂಡಿರುತ್ತದೆ. ಯಾವುದೇ ಅಸಮಾನತೆ ಇಲ್ಲದಂತೆ ಅಥವಾ ಯಾರೂ ವಂಚಿತರಾಗದಂತೆ ಪ್ರತಿಯೊಬ್ಬ ವ್ಯಕ್ತಿಯೂ ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಈ ಅಭಿಯಾನ ಎಲ್ಲ ಸರ್ಕಾರಿ ವಲಯಗಳು, ನಾಗರಿಕ ಸಮಾಜದ ಸಂಘ ಸಂಸ್ಥೆಗಳು ಮತ್ತು ಸಮುದಾಯಗಳನ್ನು ಒಂದು ಸಾಮಾನ್ಯ ಧ್ಯೇಯದಡಿ ಒಗ್ಗೂಡಿಸುತ್ತದೆ.
ಆಯುಷ್ಮಾನ್ ಭವ ಅಭಿಯಾನವು ಆರೋಗ್ಯ ಇಲಾಖೆ, ಇತರ ಸರ್ಕಾರಿ ಇಲಾಖೆಗಳು ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸ್ಥಳೀಯ ಚುನಾಯಿತ ಸಂಸ್ಥೆಗಳ ಸಮನ್ವಯದೊಂದಿಗೆ ಗ್ರಾಮ ಪಂಚಾಯತ್ ಗಳು ಕೈಗೊಂಡಿರುವ ಸಹಕಾರಿ ಪ್ರಯತ್ನವಾಗಿದೆ. ಭೌಗೋಳಿಕ ಅಡೆತಡೆಗಳನ್ನು ಮೀರಿ ಪ್ರತಿ ಗ್ರಾಮ ಮತ್ತು ಪಟ್ಟಣಕ್ಕೆ ಸಮಗ್ರ ಆರೋಗ್ಯ ರಕ್ಷಣೆಯನ್ನು ವಿಸ್ತರಿಸುವುದು ಮತ್ತು ಯಾರೂ ಈ ಆರೋಗ್ಯ ಸೇವೆಗಳಿಂದ ವಂಚಿತರಾಗಿಲ್ಲ ಎಂದು ಖಚಿತಪಡಿಸಿಕೊಳ್ಳುವುದು, ಇದರ ಮುಖ್ಯ ಉದ್ದೇಶವಾಗಿದೆ.
ಈ ಸಹಜೀವನದ ವಿಧಾನವು ತನ್ನ ಮೂರು ಘಟಕಗಳಾದ ಆಯುಷ್ಮಾನ್ – ಆಪ್ಕೆ ದ್ವಾರ 3.0, ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ (ಎಚ್ ಡಬ್ಲ್ಯೂ ಸಿ) ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (ಸಿ ಎಚ್ ಸಿ) ಆಯುಷ್ಮಾನ್ ಮೇಳಗಳು, ಅಲ್ಲದೆ ಪ್ರತಿ ಗ್ರಾಮ ಮತ್ತು ಪಂಚಾಯತ್ ಗಳಲ್ಲಿನ ಆಯುಷ್ಮಾನ್ ಸಭೆಗಳ ಮೂಲಕ ಆರೋಗ್ಯ ಸೇವೆಗಳ ವ್ಯಾಪ್ತಿಯನ್ನು ಸಂಪೂರ್ಣ ಒಳಗೊಳ್ಳುವ ಗುರಿಯನ್ನು ಹೊಂದಿದೆ:
ಆಯುಷ್ಮಾನ್ ಆಪ್ಕೆ ದ್ವಾರ 3.0: ಈ ಉಪಕ್ರಮವು PM-JAY ಯೋಜನೆಯಡಿಯಲ್ಲಿ ನೋಂದಾಯಿಸಲಾದ ಉಳಿದ ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಹೆಚ್ಚಿನ ಜನರು ಅಗತ್ಯ ಆರೋಗ್ಯ ಸೇವೆಗಳ ಲಾಭವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.
HWC ಗಳು ಮತ್ತು CHC ಗಳಲ್ಲಿ ಆಯುಷ್ಮಾನ್ ಮೇಳಗಳು: ಆಯುಷ್ಮಾನ್ ಭಾರತ್- HWC ಗಳು ಮತ್ತು CHC ಗಳಲ್ಲಿ ಆಯೋಜಿಸಲಾಗುವ ಈ ಮೇಳಗಳು ABHA ID ಗಳನ್ನು (ಆರೋಗ್ಯ ID ಗಳು) ಸೃಷ್ಟಿಸಲು ಮತ್ತು ಆಯುಷ್ಮಾನ್ ಭಾರತ್ ಕಾರ್ಡ್ ಗಳ ವಿತರಣೆಯನ್ನು ಸುಗಮಗೊಳಿಸಲು ಸಹಾಯಕರವಾಗಿವೆ. ಇವು ಆರಂಭಿಕ ರೋಗನಿರ್ಣಯ, ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳು, ತಜ್ಞರೊಂದಿಗೆ ಟೆಲಿಕನ್ಸಲ್ಟೇಶನ್ ಒದಗಿಸುವುದರ ಜೊತೆಗೆ ಸೂಕ್ತ ಉಲ್ಲೇಖಗಳನ್ನು ಸಹ ನೀಡುತ್ತವೆ.
ಆಯುಷ್ಮಾನ್ ಸಭೆಗಳು: ಪ್ರತಿ ಗ್ರಾಮ ಮತ್ತು ಪಂಚಾಯತ್ ಗಳಲ್ಲಿ ನಡೆಯುವ ಈ ಸಭೆಗಳು ಆಯುಷ್ಮಾನ್ ಕಾರ್ಡ್ ಗಳನ್ನು ವಿತರಿಸುವಲ್ಲಿ, ABHA ID ಗಳನ್ನು ಸೃಷ್ಟಿಸುವಲ್ಲಿ ಮತ್ತು ಪ್ರಮುಖ ಆರೋಗ್ಯ ಯೋಜನೆಗಳು ಮತ್ತು ಸಾಂಕ್ರಾಮಿಕವಲ್ಲದ ರೋಗಗಳು, ಕ್ಷಯ ಮತ್ತು ಸಿಕೆಲ್ ಸೆಲ್ ಕಾಯಿಲೆಯಂತಹ ರೋಗ ಪರಿಸ್ಥಿತಿಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸಲು ಅಡಿಪಾಯ ಹಾಕುವ ಮೂಲಕ ‘ಆರೋಗ್ಯಕರ ಗ್ರಾಮಗಳು’ ಮತ್ತು ‘ಆರೋಗ್ಯಕರ ಗ್ರಾಮ ಪಂಚಾಯತ್ ಗಳನ್ನು’ ರಚಿಸುವ ದೃಷ್ಟಿಯೊಂದಿಗೆ ಆಯುಷ್ಮಾನ್ ಭವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಆರೋಗ್ಯ ಯೋಜನೆಗಳನ್ನು ಯಶಸ್ವಿಯಾಗಿ ಒಡಗಿಸುವಂತೆ ಕಾರ್ಯನಿರ್ವಹಿಸುವ ಪಂಚಾಯತ್ ಗಳು ಸಮಾನ ಆರೋಗ್ಯ ರಕ್ಷಣೆಗೆ ಅವರ ಸಮರ್ಪಣೆಯನ್ನು ಸಂಕೇತಿಸುವ ‘ಆಯುಷ್ಮಾನ್ ಗ್ರಾಮ ಪಂಚಾಯತ್’ ಅಥವಾ ‘ಆಯುಷ್ಮಾನ್ ನಗರ ವಾರ್ಡ್’ ಎಂಬ ಪ್ರತಿಷ್ಠಿತ ಉಪಾಧಿಯನ್ನು ಗಳಿಸುತ್ತವೆ.
ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ, ಡಾ. ಭಾರತಿ ಪ್ರವೀಣ್ ಪವಾರ್, ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಪ್ರೊ. ಎಸ್ಪಿ ಸಿಂಗ್ ಬಘೆಲ್, ನೀತಿ ಆಯೋಗ ಸದಸ್ಯ ( ಆರೋಗ್ಯ) ಡಾ. ವಿ ಕೆ ಪಾಲ್, ಹಲವಾರು ಸಂಸತ್ ಸದಸ್ಯರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗಳು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗೌರವಾನ್ವಿತ ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಗಳು, ರಾಜ್ಯ ಸಚಿವರು ಮತ್ತು ಅವರ ವಿವಿಧ ವಲಯಗಳ ಅಧಿಕಾರಿಗಳನ್ನು ವರ್ಚುವಲ್ ರೂಪದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ತಮ್ಮ ತಮ್ಮ ಗ್ರಾಮಗಳ ಜಿಲ್ಲಾ ಕೇಂದ್ರಗಳು, ಬ್ಲಾಕ್ ಕೇಂದ್ರಗಳು ಮತ್ತು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಿಂದ ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ಪ್ರತಿನಿಧಿಗಳು, ಫಲಾನುಭವಿಗಳು ಮತ್ತು ಇತರರು ಪಾಲ್ಗೊಳ್ಳುತ್ತಾರೆ.