Wednesday, November 29, 2023
Homeಇದೀಗ ಬಂದ ತಾಜಾ ಸುದ್ದಿಕಾಲ ಕಾಲವನ್ನೇ ನುಂಗಿ ಹಾಕುತ್ತದೆ. ಹೊಟ್ಟೆ ಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ.

ಕಾಲ ಕಾಲವನ್ನೇ ನುಂಗಿ ಹಾಕುತ್ತದೆ. ಹೊಟ್ಟೆ ಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ.

ಕೃತಿ ವಿಮರ್ಶೆ
-ಪ್ರೊ. ನೀಲಕಂಠ ಏನ್ ಮನ್ವಾಚಾರ್
ನಾಟಕ ಸಾಹಿತ್ಯದ ಪ್ರಾಕಾರವಾಗಿ ದೃಶ್ಯ, ಶ್ರವಣ, ಕಲಾ ಮಾಧ್ಯಮವಾಗಿ ಮನುಜ ಮತ  ವಿಶ್ವ ಪಥ ಮಾರ್ಗದರ್ಶನಕ್ಕಾಗಿಯೇ ಜನತ್ತಿನಾಧ್ಯಂತ ದೇವಮಂದಿರಗಳಲ್ಲಿಯೇ ಉದಯವಾದದ್ದು. ಹಾಗಾಗಿ ಕಲೆಯ ಮೂಲ ಆಧ್ಯತೆಯ ಉದ್ದೇಶ ಸಮಾಜದ ಸ್ವಾಸ್ಥ್ಯ ಕಾಪಾಡುವುದೇ ಆಗಿತ್ತು. ಕಾಲ ಗರ್ಭದಲ್ಲಿ ವಿಶಿಷ್ಟ ವಾದಗಳು (ಇಜಂಸ್ಸು) ಅತಿರೇಕದ ಎಲ್ಲೆ ಮೀರುವುದು ಸಹಜ ಪ್ರಕ್ರಿಯೆ. ಹಾಗಾಗಿ ಕಾಲ ಕಾಲವನ್ನೇ ನುಂಗಿ ಹಾಕುತ್ತದೆ ಎನ್ನುವ ಮಾತು ಉಂಟು. ಇಂತಹ ಅತಿರೇಕದ ವಾದಗಳನ್ನು ನಿಯಂತ್ರಿಸಲು ಮತ್ತೊಂದು ವಾದ ಹುಟ್ಟಿಕೊಳ್ಳುತ್ತದೆ. ಅದನ್ನು ಕರೆಕ್ವಿವ್ ಪ್ರಿನ್ಸಿಪಲ್‌ ಎಂದು ಹೇಳಲಾಗುತ್ತದೆ. ಕಲೆಗಾಗಿಯೇ ಕಲೆ ಎನ್ನುವ ವಾದ ಕರೆಕ್ಟಿವ್ ಪ್ರಿನ್ಸಿಪಲ್ಲಾಗಿ ಬಂದದ್ದು. ಬದುಕಿನ ನೆಲೆ ಬಲೆ, ರೀತಿ ರಿವಾಜುಗಳು, ಸೋಲು ಗೆಲುವಿನ ಸಂಭವನೀಯ ಕಾರಣಗಳನ್ನು ಭವ್ಯ ಬದುಕನ್ನು ನಡೆಸಿದ ಮಹಾತ್ಮರ ಜೀವನ ಆಧಾರವಾಗಿಟ್ಟುಕೊಂಡು ಅಭಿನಯ ಸಂಭಾಷಣೆಯ ಮೂಲಕ ಜೀವನ ಅರ್ಥ ವ್ಯಾಖ್ಯಾನವನ್ನು ಧರ್ಮ ಗುರುಗಳು ನಡೆಸಿದರು.
ಹೀಗೆ ನಾಟಕ ಬದುಕನ್ನುಅರ್ಥೈಸುವ ವಿಶ್ಲೇಷಿಸುವ ಮಾಧ್ಯಮವಾಗಿ ಸಾಹಿತ್ಯದ ಎಲ್ಲಾ ಪ್ರಾಕಾರಗಳನ್ನು ಹಿಮ್ಮೆಟ್ಟಿಸಿ ಮುಂಚೂಣಿಗೆ ಬಂದಿತು. ನಾಟಕ ತನ್ನ ಅಂಗ ಅವಯವಗಳಾದ ವೇಷ ಭೂಷಣ, ಅಂಗಾಭಿನಯ ಸಂಗೀತ ಸಂಭಾಷಣೆಗಳೊಂದಿಗೆ ದೃಶ್ಯ ಸಂದರ್ಭಗಳ ಸಮ್ಮೇಳನದಿಂದ ಎಲ್ಲ ಸ್ತರದ ಜನ ಸಮುದಾಯವನ್ನು ತಲುಪಿತು. ಇಲ್ಲಿ ನಿರೂಪಕ ಮುಂದಲೆಗೆ ಬಾರದೆ ಅದೃಶ್ಯವಾಗಿ ಕಥೆಯ ಓಟವನ್ನು ಸಹಜಗೊಳಿಸುವುದು ನಾಟಕದ ಮತ್ತೊಂದು ಹಿರಿಮೆ. ಈ ಎಲ್ಲಾ ಅಂಗ ಅವಯವಗಳ ಹಿಮ್ಮೇಳ ಪ್ರಕ್ರಿಯೆಯಿಂದ ಪ್ರೇಕ್ಷಕರ ಮೈ ಮನ ಸೂರೆಗೊಂಡು ತನ್ನಲ್ಲಿ ಆವಿರ್ಭವಿಸಿಕೊಂಡು ತನ್ನೊಳಗಿನ ಒಂದು ಪಾತ್ರವಾಗಿ ಮಾರ್ಪಡಿಸಿ ಅವನ ಮನದ ಕಲ್ಮಶ ಕಳೆದು ಭಾವಪರಗೊಳಿಸಿ ಉನ್ನತ ಭಾವ ಉದ್ಧೀಪನಗೊಳಿಸುತ್ತದೆ. ಕಾಲಾನುಸಂಧಾನದಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಆವಿಷ್ಕಾರಗಳಿಂದಾಗಿ ನಾಟಕ ಹಲವಾರು ಮಾರ್ಪಾಡುಗಳನ್ನು ಪಡೆಯಿತು. ಮೂಲದ ಗಾರ‍್ಬಡಕ ಸಂಪ್ರದಾಯದಲ್ಲಿಯೇ ರುದ್ರ ದು:ಖಾಂತ ಸುಖಾಂತ (ಹಾಸ್ಯ) ಗಳಲ್ಲಿಯೇ ಒಳ ಪ್ರಬೇಧಗಳಾಗಿ ಟಿಸಿಲೊಡೆದು ಮೂಲ ರೂಪಗಳನ್ನು ಕಳೆದುಕೊಳ್ಳುವಷ್ಟರ ಮಟ್ಟಿಗೆ ಬೆಳೆಯಿತು. ನಾಟಕದ ವಸ್ತು ವಿನ್ಯಾಸ ಮಾತ್ರವಲ್ಲ ತಳಹದಿ ಹಂದರಗಳಲ್ಲೂ ಬದಲಾವಣೆ ಕಂಡಿತು. ತೆರೆದ ಬಯಲು ಸಹಜ ರಂಗಮಂಚದಿಂದ ತಿರುಗುವ ಚಲಿಸುವ ಕತ್ತಲೆ ಬೆಳಕಿನಾಟಗಳವರೆಗೆ ರಂಗಮಂಚ ಆವಿಷ್ಕಾರಗೊಂಡಿದೆ.
ಈ ಹಿನ್ನೆಲೆಯಲ್ಲಿ ನಾಟಕಗಳ ಅಧ್ಯಯನ ಹಿಂದಿಗಿಂತ ಇಂದು ಹೆಚ್ಚು ಪ್ರಸ್ತುತ. ಇಂತಹ ಅಧ್ಯಯನಗಳನ್ನು ಹಲವಾರು ಆಯಾಮಗಳಲ್ಲಿ ಮಾಡಬಹುದಾಗಿದೆ. ಶ್ರೀಯುತ ಗೊರೂರು ಅನಂತರಾಜು ಅವರು ಆಯ್ದುಕೊಃಡ ಆಯಾಮ ಚಾರಿತ್ರಿಕ (ಬಯಾಗ್ರಫಿಕಲ್) ಅಧ್ಯಯನ, ಉಳಿದ ಅಧ್ಯಯನಗಳಂತೆ ನ್ಯೂನತೆಗಳಿಂದ ಮುಕ್ತವಾಗಿಲ್ಲವಾದರೂ ಭಾಗಶ: ಪೂರಕವೆ. ಸಾಹಿತ್ಯ ವಿದ್ವಾಂಸರ ಅಭಿಪ್ರಾಯದಂತೆ ಓದುಗ ಚಾರಿತ್ರ ಪ್ರಭಾವಕ್ಕೊಳಗಾಗಿ ವಸ್ತು ನಿಷ್ಟತೆಯಿಂದ ದೂರ ಉಳಿಯಬಹುದು. ಆದರೂ ಈ ಅಧ್ಯಯನ ಆಯಾಯ ಕೃತಿ ಅರ್ಥೈಸಿಕೊಳ್ಳಲು ಸಹಾಯಕ.
ಶ್ರೀಯುತ ಗೊರೂರು ಅನಂತರಾಜು ಅವರ ಅಧ್ಯಯನ ವ್ಯಾಪ್ತಿ (ಪಾಶ್ಚಾತ್ಯ ಮತ್ತು ಪೌರ‍್ವತ್ಯ) ವಿಶ್ವದಗಲಕ್ಕೆ ವಿಸ್ತರಿಸಿದೆ. ಶ್ರೀಯುತರು ನಾಟಕಕಾರನ ಜೀವನ ಚರಿತ್ರೆಯ ಮಾಹಿತಿಗಳು ನಿಖರವಾಗಿವೆ. ಈ ಆದ್ಯಯನ ನಾಟಕಕಾರನ ಮನೋಧರ್ಮ ಪ್ರಭಾವಿ ಘಟನೆಗಳು ನಾಟಕಗಳಲ್ಲಿ ಪ್ರಜ್ಞಾಪೂರ್ವಕವೂ ಅಪ್ರಜ್ಞಾಪೂರ್ವಕವೂ ಪ್ರತಿಬಿಂಬವಾಗುವ ಸಾಧ್ಯತೆ ಇದೆ. ಹಾಗಾಗಿ ನಾಟಕಕಾರ ತನ್ನ ಬದುಕಿನ ಧೋರಣ ಗ್ರಹಿಕೆಗಳು ಅವನ ಬದುಕಿನ ಅವಿಭಾಜ್ಯ ಅಂಗಗಳಾದ ಆಯಾಮ ಹೆಚ್ಚು ಪ್ರಸ್ತುತ ಎನಿಸುತ್ತದೆ.
ಶ್ರೀ ಗೊರೂರು ಅನಂತರಾಜು ಅವರು ಈ ಲೇಖನಗಳನ್ನು ಒಂದೇ ಆಯಾಯ ಪ್ರಕ್ರಿಯೆಯಲ್ಲಿ ಬರೆದಿರಬಹುದೆಂದು ತೋರುವುದಿಲ್ಲ. ಪ್ರಾಸಂಗಿಕವಾಗಿ ದಿನಪತ್ರಿಕೆಗಳಿಗೆ ಅಂಕಣ ಬರಹಗಳಾಗಿ ಬರೆದಿರಬಹುದು. ಹಾಗಾಗಿ ಈ ಲೇಖನಗಳಲ್ಲಿ ಪರಸ್ಪರ ಸಂಬಂಧ ಸೂತ್ರಬದ್ಧತೆಯನ್ನು ಅರೆಸು ಅಪ್ರಸ್ತುತ. ಬರಹದ ಶೈಲಿ ಸುಲಭ ಸರಳವಾಗಿದ್ದು ಅಲ್ಪಸಂಖ್ಯಾತ ವಿದ್ವಾಂಸರಿಗಿಂತ ಬಹು ಸಂಖ್ಯಾತ ಸಾಹಿತ್ಯಧ್ಯಯನದ ಆರಂಭದ ದಿಸೆಯಲ್ಲಿ ಇರುವವರಿಗೆ ಒಂದು ಆಧಾರ ಅಕರ ಗ್ರಂಥವಾಗಬಹುದಾಗಿದೆ. ಈ ದಿಸೆಯಲ್ಲಿ ಶ್ರೀಯುತರ ಲೇಖನ ಶ್ರಮ ಓದುಗ ಸಮುದಾಯಕ್ಕೆ ಪ್ರಯೋಜನಕಾರಿಯಾಗಿದೆ.
ಜಗತ್ತಿನ ರಂಗಭೂಮಿಯ ಇತಿಹಾಸದಲ್ಲಿ ಷೇಕ್ಸ್ಪಿಯರ್, ಮೋಲಿಯೇರ್ ಮುಂತಾದವರ ಜತೆ ನಿಲ್ಲುವ ಮತ್ತೊಂದು ಹೆಸರು ಬ್ರೆಕ್ಟ್. ಹೊಟ್ಟೆ ಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ ಶೀರ್ಷಿಕೆಯ ಬರಹ ಬ್ರೆಕ್ಟ್ ನ ರಂಗಸಾಹಿತ್ಯ ಬದುಕು ಕುರಿತ್ತಾದ್ದಾಗಿದ್ದು ಸ್ವಾರಸ್ಯಕರವಾಗಿ ನಿರೂಪಿತವಾಗಿದೆ. ವಿಜಯ ತೆಂಡಲ್ಕೂರ್‌ ಅವರ ಕಮಲ, ಸಂಸರ ವಿಗಡ ವಿಕ್ರಮರಾಯ, ಸುಗಣ ಗಂಭೀರ ವಿಮರ್ಶೆ ಗಮನ ಸೆಳೆಯುತ್ತವೆ. ರಷ್ಯದ ಪ್ರಸಿದ್ದ ಕತೆಗಾರ ಮತ್ತು ನಾಟಕಕಾರ ಆಂಟನ್‌ ಚಿಕೋವ್‌ ಅವರು ರಂಗ ಸಾಹಿತ್ಯ ಕುರಿತ ಲೇಖನ ಬದುಕು ತುಂಬಾ ಕಠೋರ.  ಟಿ.ಎನ್.ಬಾಲಕೃಷ್ಣರ ರಂಗದಿಂದ ಸಿನಿಮಾ ರಂಗಭೂಮಿಯ ಅಲೆಮಾರಿ ಬರಹ, ಬಿ.ಕೆ.ಈಶ್ವರಪ್ಪ ಅವರ ಬದುಕಿನ ಕುರಿತ ರಂಗ ಬದುಕಿನ ವಿಧಿಯಾಟ, ಬಿ.ಎನ್.ಚಿನ್ನಪ್ಪರ ಬಣ್ಣದ ಬೆಳಕು, ಕಂದಗಲ್ ಹನುಮಂತರಾವ್‌ ಅವರ ರಕ್ತರಾತ್ರಿ, ಮೈಸೂರಿನ ಡಾ.ಲೀಲಾ ಪ್ರಕಾಶ್‌ರವರ ಅನುವಾದಿತ ಭಾಷನ ಕನ್ನಡ ಅಭಿಷೇಕ ನಾಟಕಮ್, ಅ.ನ.ಕೃ. ಅವರ ಮೊದಲ ನಾಟಕದ ಸ್ವಾನುಭವ, ರೋಮನ್ ನಾಟಕಕಾರ ತೆರೆನ್ಸ್   ಅಂದ್ರೋಸಿನ ಕನ್ಯೆ, ಡಿ.ಎಸ್.ಚೌಗಲೆಯವರ ದಿಶಾಂತರ ಹೀಗೆ ಅನೇಕ ವೈವಿಧ್ಯ ರಂಗಭೂಮಿಗೆ ಸಂಬಂಧಿಸಿದ ಲೇಖನಗಳು, ವಿಮರ್ಶೆಗಳು ಓದುಗರ ಹೃದಯ ತಟ್ಟುತ್ತವೆ. ಹಾಸನ ಜಿಲ್ಲೆಗೆ ರಂಗಭೂಮಿಯ ಕೊಡುಗೆ ಲೇಖನ ಜಿಲ್ಲೆಯ ರಂಗಭೂಮಿಯನ್ನು ಅವಲೋಕಿಸುವ ಪ್ರಯತ್ನವಿದೆ. ಲೇಖಕರ ಎಲ್ಲಾ ಪ್ರಯತ್ನದಲ್ಲೂ ರಂಗಭೂಮಿಯ ತುಡಿತ ಎದ್ದು ಕಾಣಿಸುತ್ತದೆ.  ಲೇಖಕರು ಇದರ ಮುಂದಿನ ಭಾಗವಾಗಿ ಇದೇ ನಾಟಕಕಾರರ ಅಥವಾ ಇನ್ನಷ್ಟು ನಾಟಕಕಾರರ ನಾಟಕಗಳ ಪಟ್ಟಿ, ಅವುಗಳ ಕಾಲಾನುಕ್ರಮಗಳನ್ನೊಳಗೊಂಡ ಮತ್ತೊಂದು ಹೊತ್ತಿಗೆ ಪ್ರಕಟಿಸಿದರೆ ಓದುಗ ಸಮುದಾಯಕ್ಕೆ ಸಹಾಯವಾದೀತು. ಈ ಪ್ರಸ್ತುತ ಕೃತಿ ಮರು ಮುದ್ರಣ ಕಾಣುವುದಾದರೆ, ಕಾಣಬೇಕು, ಕಾಣುತ್ತದೆ. ನಾಟಕಕಾರ ವ್ಯಕ್ತಿಯ ಚಾರಿತ್ರಿಕ ಅಂಶಗಳೊಂದಿಗೆ ಅವರು ಬದುಕಿದ ಕಾಲದಲೆಗಳನ್ನು ಸೇರಿಸಿದರೆ ಇನ್ನಷ್ಟು ಉತ್ತಮ. ಓದುಗ ಸಮುದಾಯ ಲೇಖಕರ ಮೇಲಿನ ಪ್ರೀತಿ ಅನುಕಂಪ, ಸೌಜನ್ಯಕ್ಕಿಂತ ಹೆಚ್ಚಾಗಿ ಇಂತಹ ಪುಸ್ತಕಗಳನ್ನು ಓದಿ ತಮ್ಮಜ್ಞಾನ ಪರಿಧಿ ವಿಸ್ತರಿಸಿಕೊಳ್ಳಲಿ. ಶ್ರೀ ಗೊರೂರು ಅನಂತರಾಜು ಅವರು ಇಂತಹ ಮೌಲಿಕ ಕೃತಿಗಳನ್ನು ತರಲಿ ಎಂದು ಆಶಿಸುತ್ತೇನೆ.
 ಪ್ರೊ. ನೀಲಕಂಠ ಎನ್. ಮನ್ವಾಚಾರ್
ಆಂಗ್ಲ ಭಾಷಾ ಉಪನ್ಯಾಸಕರು.
RELATED ARTICLES
- Advertisment -
Google search engine

Most Popular

Recent Comments