ನೃಪೇಂದ್ರ ಮಿಶ್ರಾ
ಭಾರತದ ಪ್ರಧಾನ ಮಂತ್ರಿಯವರ ಮಾಜಿ ಪ್ರಧಾನ ಕಾರ್ಯದರ್ಶಿ
ಜಗತ್ತು ಹವಾಮಾನ ತುರ್ತುಸ್ಥಿತಿಯ ಉತ್ತುಂಗದಲ್ಲಿದ್ದಾಗ, ಜಾಗತಿಕ ಸಾಂಕ್ರಾಮಿಕ ರೋಗದ ಪರಿಣಾಮದೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ಮತ್ತು ಹೆಚ್ಚುತ್ತಿರುವ ಧ್ರುವೀಕರಣ, ಭೌಗೋಳಿಕ ರಾಜಕೀಯ ಸಂಘರ್ಷಗಳು ಹಾಗು ಅಧಿಕಾರ ಚಲನಶೀಲತೆಗಳ ನಡುವೆ ಛಿದ್ರಗೊಂಡ ಸಮಯದಲ್ಲಿ, ಭಾರತವು 2022 ರ ಡಿಸೆಂಬರಿನಲ್ಲಿ ಜಿ 20 ಅಧ್ಯಕ್ಷತೆಯನ್ನು ವಹಿಸಿಕೊಂಡಿತು. ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್ಡಿಜಿ) ಪ್ರಗತಿಯಲ್ಲಿನ ಹಿನ್ನಡೆಯಿಂದಾಗಿ, ಸರ್ಕಾರಗಳು ಮತ್ತು ನೀತಿ ನಿರೂಪಕರು ಹೆಚ್ಚುವರಿ ಹೊರೆಯನ್ನು ಎದುರಿಸಬೇಕಾಯಿತು. ಈ ಸಂಕೀರ್ಣ ಭೂದೃಶ್ಯದಲ್ಲಿ, ಬಹುಪಕ್ಷೀಯತೆಯ ಪಾತ್ರವು ಅದರ ಪರಿಣಾಮಕಾರಿತ್ವಕ್ಕೆ ಸವಾಲುಗಳನ್ನು ಎದುರಿಸಿತು, ಅಂತರರಾಷ್ಟ್ರೀಯ ಸಂಬಂಧಗಳನ್ನು ಬೆಳೆಸಲು ಮತ್ತು ಬಲಪಡಿಸಲು ನಡೆಯುತ್ತಿರುವ ಹೋರಾಟವಾಯಿತು. ಕಾಲಾನುಕ್ರಮದಲ್ಲಿ ರಾಷ್ಟ್ರಗಳ ವಿಭಿನ್ನ ಮಾರ್ಗಗಳು ಬ್ರಿಕ್ಸ್, ಕ್ವಾಡ್, ಆಸಿಯಾನ್ ನಂತಹ ವಿವಿಧ ಬಹುಪಕ್ಷೀಯ ವೇದಿಕೆಗಳ ರಚನೆಗೆ ಪ್ರೇರೇಪಿಸಿವೆ, ಪ್ರಾದೇಶಿಕ ಸಹಕಾರವನ್ನು ಸುಗಮಗೊಳಿಸಿವೆ ಮತ್ತು ಛಿದ್ರಗೊಂಡಿರುವ ಬಹುಪಕ್ಷೀಯ ವ್ಯವಸ್ಥೆಯ ಜಟಿಲತೆಗಳನ್ನು ಹೆಚ್ಚಿಸಿವೆ.
ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಬಹುಪಕ್ಷೀಯತೆಯನ್ನು ಸುಧಾರಿಸುವ ಮತ್ತು ಬಲಪಡಿಸುವ ಕರೆ ತುರ್ತು ಅಗತ್ಯವಾಗಿದೆ. ಈ ಪ್ರಯತ್ನವು ಬಹುಪಕ್ಷೀಯ ಸಂಸ್ಥೆಗಳನ್ನು ತಮ್ಮ ಪಾತ್ರಕ್ಕೆ ಸಜ್ಜುಗೊಳಿಸುವ ಕಾರ್ಯವನ್ನು ಮಾತ್ರವಲ್ಲದೆ ಜಾಗತಿಕ ರಾಜಕೀಯ ಮತ್ತು ಅಧಿಕಾರ ಚಲನಶಾಸ್ತ್ರದ ಸೂಕ್ಷ್ಮ ಪಯಣವನ್ನು ಅಥವಾ ಯಾನವನ್ನು ಸಹ ಒಳಗೊಂಡಿದೆ. ಮುಂದುವರಿದ, ಉದಯೋನ್ಮುಖ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳ ವಿಶಾಲ ವ್ಯಾಪ್ತಿಯನ್ನು ಪ್ರತಿನಿಧಿಸುವ ಆರ್ಥಿಕ ಮತ್ತು ಬಹುಪಕ್ಷೀಯ ಸಹಯೋಗದ ಪ್ರಮುಖ ವೇದಿಕೆಯಾಗಿ ಜಿ 20, ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಪ್ರಯೋಜನವಾಗುವ ದೃಢವಾದ ಬಹುಪಕ್ಷೀಯ ಕಾರ್ಯಕ್ರಮಗಳ ಮೂಲಕ ವಿಶ್ವದ ಅತ್ಯಂತ ಒತ್ತಡದ ಸವಾಲುಗಳನ್ನು ಎದುರಿಸುವ ಮಹತ್ವಾಕಾಂಕ್ಷೆಯನ್ನು ಸಂಕೇತಿಸುವ ಜವಾಬ್ದಾರಿಯನ್ನು ಹೊಂದಿದೆ.
ತನ್ನ ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು ಈ ಕಾರ್ಯಸೂಚಿಯನ್ನು ತನ್ನ ಅಗ್ರಗಣ್ಯ ಆದ್ಯತೆಗಳಲ್ಲಿ ಒಂದಾಗಿ ಪರಿಗಣಿಸಿ ಮುನ್ನಡೆಸಿದೆ, ಬಹುಪಕ್ಷೀಯ ರಾಜತಾಂತ್ರಿಕತೆಯ ಮಾರ್ಗಕ್ಕಾಗಿ ಭರವಸೆಯ ಭವಿಷ್ಯದ ಕಡೆಗೆ ಜಾಗತಿಕ ಚರ್ಚೆಗಳನ್ನು ಮುನ್ನಡೆಸಲು ತನ್ನನ್ನು ಸಮರ್ಪಿಸಿಕೊಂಡಿದೆ.
ವರ್ಷವಿಡೀ, ಈ ಕಾರ್ಯಸೂಚಿಯ ವಿವಿಧ ರಂಗಗಳಲ್ಲಿ ಸ್ಪಷ್ಟ ಪ್ರಗತಿಯನ್ನು ಸಾಧಿಸಲಾಯಿತು. ಜರ್ಮನ್ ಅಧ್ಯಕ್ಷತೆಯ ಅಡಿಯಲ್ಲಿ ಪ್ರಾರಂಭವಾದಾಗಿನಿಂದ ವಾರ್ಷಿಕ ಜಿ 20 ವಿದೇಶಾಂಗ ಸಚಿವರ ಸಭೆ ಸಾಂಪ್ರದಾಯಿಕ ವಿದ್ಯಮಾನವಾಗಿದ್ದರೂ, ಭಾರತವು ಸಂಪೂರ್ಣವಾಗಿ ಮಾತುಕತೆಯ ಮೂಲಕ ಮತ್ತು ಸ್ವೀಕರಿಸಿದ ಜಿ 20 ವಿದೇಶಾಂಗ ಸಚಿವರ ಫಲಿತಾಂಶ ದಾಖಲೆ ಮತ್ತು ಅಧ್ಯಕ್ಷತೆಯ ಸಾರಾಂಶವನ್ನು (ಎಫ್ಎಂಎಂ ಒಡಿಸಿಎಸ್) ನೀಡುವ ಮೂಲಕ ಮುನ್ನಡೆ ಸಾಧಿಸಿದೆ. ಈ ಸಮಗ್ರ ದಾಖಲೆಯು ಬಹುಪಕ್ಷೀಯತೆಯನ್ನು ಬಲಪಡಿಸುವುದು, ಭಯೋತ್ಪಾದನೆಯನ್ನು ಎದುರಿಸುವುದು ಮತ್ತು ಜಾಗತಿಕ ಆರೋಗ್ಯ ಕಾಳಜಿಗಳನ್ನು ಪರಿಹರಿಸುವುದು ಸೇರಿದಂತೆ ಸದಸ್ಯ ರಾಷ್ಟ್ರಗಳಿಗೆ ಸಂಬಂಧಿಸಿದ ನಿರ್ಣಾಯಕ ವಿಷಯಗಳನ್ನು ಎತ್ತಿ ತೋರಿಸಿದೆ. ಈ ಸಾಧನೆಯು ಎಲ್ಲಾ ರಾಷ್ಟ್ರಗಳ ಹಿತಾಸಕ್ತಿಗಳನ್ನು ಪೂರೈಸುವ ದೃಢವಾದ ಬಹುಪಕ್ಷೀಯ ವ್ಯವಸ್ಥೆಯನ್ನು ಸಹಯೋಗದ ಮೂಲಕ ನಿರ್ಮಿಸಲು ವಿದೇಶಾಂಗ ಸಚಿವರು ಪ್ರದರ್ಶಿಸಿದ ಬದ್ಧತೆಯನ್ನು ಒತ್ತಿಹೇಳುತ್ತದೆ.
ಇದಲ್ಲದೆ, ಭಾರತವು ವಿಶ್ವಸಂಸ್ಥೆಯಲ್ಲಿ (ಯುಎನ್) ಸುಧಾರಣೆಗಳ ಕುರಿತಾದ ಚರ್ಚೆಗಳನ್ನು ಪರಿಣಾಮಕಾರಿಯಾಗಿ ಪುನರುಜ್ಜೀವನಗೊಳಿಸಿತು, ಅದರಲ್ಲ್ಲೂ ವಿಶೇಷವಾಗಿ ಯುಎನ್ ಭದ್ರತಾ ಮಂಡಳಿ ಸೇರಿದಂತೆ ಅದರ ಪ್ರಮುಖ ಅಂಗಗಳ ಪುನರ್ರಚನೆಯ ಮೇಲೆಯೂ ಗಮನ ಕೇಂದ್ರೀಕರಿಸಿತು. ಈ ಸುಧಾರಣಾ ಪ್ರಯತ್ನಗಳನ್ನು ಎಫ್ಎಂಎಂ ಒಡಿಸಿಎಸ್ ನಲ್ಲಿ ಒತ್ತಿಹೇಳಲಾಯಿತು, ಇದು ವಿಶ್ವಸಂಸ್ಥೆಯೊಳಗೆ ಹೆಚ್ಚು ಪ್ರಾತಿನಿಧಿಕ ಮತ್ತು ಸಮಕಾಲೀನ ರಚನೆಯನ್ನು ಉತ್ತೇಜಿಸುವ ಭಾರತದ ಸಮರ್ಪಣೆಯನ್ನು, ಬದ್ಧತೆಯನ್ನು ಸೂಚಿಸುತ್ತದೆ. ಈಗ ಚಾಲ್ತಿಯಲ್ಲಿರುವ ಜಾಗತಿಕ ವಾಸ್ತವತೆಗಳು ಮತ್ತು ಪ್ರಸ್ತುತ ಭೌಗೋಳಿಕ ರಾಜಕೀಯ ಭೂದೃಶ್ಯವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಇಂದಿನ ಅಗತ್ಯಗಳೊಂದಿಗೆ ಹೊಂದಿಸುವ ಮಹತ್ವವನ್ನು ಒತ್ತಿಹೇಳುತ್ತದೆ. ಇದರ ಜೊತೆಗೆ, ಪ್ರಸ್ತುತ ನಡೆಯುತ್ತಿರುವ ಸಂಘರ್ಷಗಳ ವಿಚ್ಛಿದ್ರಕಾರಿ ಪ್ರಭಾವವು ಮಂಡಳಿಯ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿದೆ, ಅದರ ಪರಿಣಾಮಕಾರಿತ್ವ ಅಥವಾ ಕಾರ್ಯದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಸುಧಾರಣೆಗಳ ತುರ್ತು ಅಗತ್ಯವನ್ನು ಹೇಳುತ್ತದೆ.
ಭಾರತದ ಅಧ್ಯಕ್ಷತೆಯು ಬಹುಪಕ್ಷೀಯತೆಯನ್ನು ಬಲಪಡಿಸುವ ಪ್ರಯತ್ನಗಳನ್ನು ಶ್ರದ್ಧೆಯಿಂದ ಅನುಸರಿಸಿತು. ಅಧ್ಯಕ್ಷತೆಯ ಮಾರ್ಗದರ್ಶನದಲ್ಲಿ ಸ್ವತಂತ್ರ ತಜ್ಞರ ಗುಂಪು (ಐಇಜಿ) ಸ್ಥಾಪನೆಯೊಂದಿಗೆ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ (ಎಂಡಿಬಿ) ಕ್ಷೇತ್ರದಲ್ಲಿ ಸುಧಾರಣೆಗಳು ವೇಗವನ್ನು ಪಡೆದುಕೊಂಡವು. ಎಂಡಿಬಿಗಳನ್ನು ಹೆಚ್ಚಿಸಲು ಶಿಫಾರಸುಗಳನ್ನು ಮಾಡುವುದು ಮತ್ತು 21 ನೇ ಶತಮಾನದ ಸವಾಲುಗಳನ್ನು ಎದುರಿಸುವಲ್ಲಿ ಅದರ ದಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು, ಎಂಡಿಬಿ ಪರಿಸರ ವ್ಯವಸ್ಥೆಯನ್ನು ನವೀಕರಿಸಲು ಮಾರ್ಗಸೂಚಿಯನ್ನು ರೂಪಿಸುವುದು ಐಇಜಿಯ ಧ್ಯೇಯವಾಗಿತ್ತು. ‘ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳನ್ನು ಬಲಪಡಿಸುವುದು: ತ್ರಿವಳಿ ಕಾರ್ಯಸೂಚಿ’ ಎಂಬ ಶೀರ್ಷಿಕೆಯ ಎರಡು ಭಾಗಗಳ ವರದಿಯ ಆರಂಭಿಕ ಸಂಪುಟವನ್ನು ಈಗಾಗಲೇ ಸದಸ್ಯರಿಗೆ ಒದಗಿಸಲಾಗಿದೆ. ಎರಡನೇ ಸಂಪುಟವನ್ನು 2023 ರ ಅಕ್ಟೋಬರ್ ನಲ್ಲಿ 4 ನೇ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ ಗಳ ಸಭೆ (ಎಫ್ಎಂಸಿಬಿಜಿ) ಸಂದರ್ಭ ಸಲ್ಲಿಸುವ ನಿರೀಕ್ಷೆಯಿದೆ. ಈ ವರದಿಗಳನ್ನು ಪರಸ್ಪರ ಸಂಯೋಜಿತವಾಗಿ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಎಂಡಿಬಿಗಳು ತಮ್ಮ ಆಡಳಿತ ಚೌಕಟ್ಟುಗಳಿಗೆ ಅನುಗುಣವಾಗಿ ಚರ್ಚೆ ಮತ್ತು ಅನುಷ್ಠಾನಕ್ಕೆ ಪ್ರೋತ್ಸಾಹಿಸುತ್ತವೆ. ಇದಲ್ಲದೆ, ಎಂಡಿಬಿಗಳ ಬಂಡವಾಳ ಪರ್ಯಾಪ್ತತೆ ಚೌಕಟ್ಟುಗಳ (ಸಿಎಎಫ್) ಬಗ್ಗೆ ಜಿ 20 ಸ್ವತಂತ್ರ ಪರಿಶೀಲನೆಯ ಶಿಫಾರಸುಗಳನ್ನು ಜಾರಿಗೆ ತರುವ ಜಿ 20 ಮಾರ್ಗಸೂಚಿಯು ಅದರ ಮಹತ್ವಾಕಾಂಕ್ಷೆಯ ಅನುಷ್ಠಾನಕ್ಕಾಗಿ ಹಣಕಾಸು ಸಚಿವರಿಂದ ಅನುಮೋದನೆ ಮತ್ತು ಬೆಂಬಲವನ್ನು ಗಳಿಸಿದೆ. 4 ನೇ ಎಫ್ಎಂಸಿಬಿಜಿ ಸಭೆಯ ನೇಪಥ್ಯದಲ್ಲಿ ಎಂಡಿಬಿಗಳ ಆರ್ಥಿಕ ಸಾಮರ್ಥ್ಯವನ್ನು ಬಲಪಡಿಸುವ ಕುರಿತು ಉನ್ನತ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲು ಹೆಚ್ಚುವರಿ ಪ್ರಯತ್ನಗಳು ನಡೆಯುತ್ತಿವೆ. ಈ ವಿಚಾರ ಸಂಕಿರಣ ಎಂಡಿಬಿಗಳನ್ನು ಬಲಪಡಿಸುವ ಮತ್ತು ಅವುಗಳ ಹಣಕಾಸು ಸ್ಥಾನಮಾನವನ್ನು ಎತ್ತಿಹಿಡಿಯುವ ಗುರಿಯನ್ನು ಹೊಂದಿರುವ ಜಾಗತಿಕ ಚರ್ಚೆಗಳಿಗೆ ಹೊಸ ವೇಗವನ್ನು ತುಂಬಲು ಸಜ್ಜಾಗಿದೆ.
ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಅಧ್ಯಕ್ಷತೆಯು ‘ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಶೃಂಗಸಭೆ’ಯ ಉದ್ಘಾಟನಾ ಆತಿಥ್ಯ ವಹಿಸಿತು. ಎರಡು ದಿನಗಳ ಕಾಲ ನಡೆದ ಹತ್ತು ಅಧಿವೇಶನಗಳಲ್ಲಿ 125 ದೇಶಗಳ ಭಾಗವಹಿಸುವಿಕೆಯೊಂದಿಗೆ, ಈ ಹೆಗ್ಗುರುತು ಕಾರ್ಯಕ್ರಮವು ಭಾಗವಹಿಸುವವರಿಗೆ ಅಭಿವೃದ್ಧಿಶೀಲ ಪ್ರಪಂಚದ ಕಾಳಜಿಗಳು, ಆಲೋಚನೆಗಳು, ಸವಾಲುಗಳು ಮತ್ತು ಆದ್ಯತೆಗಳನ್ನು ಧ್ವನಿ ಎತ್ತಲು ವೇದಿಕೆಯನ್ನು ಒದಗಿಸಿತು. ರಾಷ್ಟ್ರಗಳ ನಡುವೆ ಉದ್ದೇಶಗಳಲ್ಲಿ ಮತ್ತು ಸಹಯೋಗದಲ್ಲಿ ಏಕತೆಯನ್ನು ಬೆಳೆಸುವುದು ಈ ಸಭೆಯ ಹಿಂದಿನ ಉದ್ದೇಶವಾಗಿತ್ತು. ನಮ್ಮ ‘ವಸುದೈವ ಕುಟುಂಬಕಂ’ ತತ್ವಕ್ಕೆ ಅನುಗುಣವಾಗಿ, ಗುಂಪಿನ ವಿಸ್ತರಣೆಗೆ ಸಂಬಂಧಿಸಿದ ಚರ್ಚೆಗಳನ್ನು ಸುಗಮಗೊಳಿಸುವ ಮೂಲಕ ಅಧ್ಯಕ್ಷೀಯತೆಯು ಮಹತ್ವದ ಮೈಲಿಗಲ್ಲನ್ನು ಸಾಧಿಸಿತು. ಈ ಫಲಪ್ರದ ಚರ್ಚೆಯ ಫಲವಾಗಿ ಆಫ್ರಿಕನ್ ಯೂನಿಯನ್ (ಎಯು) ನ್ನು ಜಿ 20ರ ಖಾಯಂ ಸದಸ್ಯ ರಾಷ್ಟ್ರವಾಗಿ ಸ್ವಾಗತಿಸಲಾಯಿತು, ಇದು ಒಳಗೊಳ್ಳುವಿಕೆ ಮತ್ತು ಜಾಗತಿಕ ಸಹಕಾರದ ಹೊಸ ಅಧ್ಯಾಯವನ್ನು ಸಂಕೇತಿಸಿತು.
ಇಂದಿನ ಸಮಕಾಲೀನ ಸವಾಲುಗಳು ರಾಷ್ಟ್ರೀಯ ಗಡಿಗಳಿಂದ ನಿರ್ಬಂಧಿಸಲ್ಪಟ್ಟಿಲ್ಲ ಎಂಬುದನ್ನೂ ಸ್ಪಷ್ಟಪಡಿಸಲಾಗಿದೆ. ಮಾರ್ಚ್ ತಿಂಗಳಲ್ಲಿ ನಡೆದ ಜಿ 20 ವಿದೇಶಾಂಗ ಸಚಿವರ ಸಭೆಯಲ್ಲಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂದೇಶದಲ್ಲಿ ಪುನರುಚ್ಚರಿಸಿದಂತೆ, “ಬಹುಪಕ್ಷೀಯತೆ ಇಂದು ಬಿಕ್ಕಟ್ಟಿನಲ್ಲಿದೆ” ಮತ್ತು “ಕಳೆದ ಕೆಲವು ವರ್ಷಗಳ ಅನುಭವ – ಆರ್ಥಿಕ ಬಿಕ್ಕಟ್ಟು, ಹವಾಮಾನ ಬದಲಾವಣೆ, ಜಾಗತಿಕ ಸಾಂಕ್ರಾಮಿಕ, ಭಯೋತ್ಪಾದನೆ ಮತ್ತು ಯುದ್ಧಗಳು – ಜಾಗತಿಕ ಆಡಳಿತವು ತನ್ನ ಈ ಎರಡೂ ಅಧಿಕೃತ ಕಾರ್ಯಚಟುವಟಿಕೆಗಳ ಅನುಷ್ಠಾನದಲ್ಲಿ ವಿಫಲವಾಗಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ.”
ಹೀಗಾಗಿ, ಬಹುಪಕ್ಷೀಯತೆಗೆ ಇರುವ ಬೆದರಿಕೆಗಳನ್ನು ಎದುರಿಸಲು ಸಾಮೂಹಿಕ ಮತ್ತು ನಿರ್ಣಾಯಕ ಕ್ರಮ, ಸಹಕಾರ ಮತ್ತು ಅಂತರ್ಗತ ಮಾನವ-ಕೇಂದ್ರಿತ ವಿಧಾನವು ಹಿಂದೆಂದಿಗಿಂತಲೂ ಈಗ ಅತ್ಯಗತ್ಯವಾಗಿದೆ. ನಮ್ಮ ಪ್ರಧಾನಿಯವರ ಮಾತುಗಳಲ್ಲಿ – “ಜಗತ್ತು ಬದಲಾದಾಗ, ನಮ್ಮ ಸಂಸ್ಥೆಗಳು ಸಹ ಬದಲಾಗಬೇಕು. ಅದಾಗದಿದ್ದರೆ ಕಾನೂನು ಕಾಯ್ದೆಗಳಿಗೆ ಬದ್ಧವಾಗದ ವೈರತ್ವವು ಪ್ರಪಂಚವನ್ನು ಬದಲಾಯಿಸುವ ಅಪಾಯವಿದೆ.”
ಪ್ರಾಚೀನ ಭಾರತೀಯ ಗ್ರಂಥಗಳಿಂದ ಜನಿಸಿದ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಮತ್ತು ಪಿಎಂ ಮೋದಿಯವರ ವಿಶ್ವದ ಮಾರ್ಗದರ್ಶಿ ದೃಷ್ಟಿಕೋನದ ಸ್ಫೂರ್ತಿಯಲ್ಲಿ, ಹಂಚಿಕೊಂಡ ಸವಾಲುಗಳನ್ನು ಹಂಚಿಕೆಯ ಪರಿಹಾರಗಳೊಂದಿಗೆ ಎದುರಿಸಬೇಕು – ಆಗ ಅಲ್ಲಿ ಮಾನವೀಯತೆಯ ಸಾಮೂಹಿಕ ಯೋಗಕ್ಷೇಮವು ವಿಭಜನೆಗಳು ಮತ್ತು ಅನಿಶ್ಚಿತತೆಗಳ ಮೇಲೆ ಮೇಲುಗೈ ಸಾಧಿಸುತ್ತದೆ. 21 ನೇ ಶತಮಾನದ ಸಂಸ್ಥೆಗಳಲ್ಲಿ ನಂಬಿಕೆಯನ್ನು ಮರುಸ್ಥಾಪಿಸಲು, ನಮ್ಮ ಜಿ 20 ಅಧ್ಯಕ್ಷತೆಯು ವ್ಯಾಖ್ಯಾನಿಸಿರುವ ಸಹಕಾರ, ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಹೊಂದಾಣಿಕೆಯ ಮನೋಭಾವವನ್ನು ನಾವು ಬೆಳಸಿಕೊಳ್ಳಬೇಕು.