ಖ್ಯಾತ ‘ನೃತ್ಯೋಮಾ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ ಸಂಸ್ಥೆಯ ನಾಟ್ಯಗುರು ರಾಧಿಕಾ ಎಮ್.ಕೆ.ಸ್ವಾಮಿ ಅವರಲ್ಲಿ ಬಹು ಬದ್ಧತೆ ಮತ್ತು ಆಸಕ್ತಿಯಿಂದ ಭರತನಾಟ್ಯ ಕಲಿಯುತ್ತಿರುವ ಉದಯೋನ್ಮುಖ ನೃತ್ಯಾಭ್ಯಾಸಿಗಳಾದ ಶ್ರೀಲಕ್ಷ್ಮೀ ಪ್ರಣತಿ ಮತ್ತು ಆರುಷಿ ಗಿರೀಶ್ ಇತ್ತೀಚೆಗೆ ಮಲ್ಲೇಶ್ವರದ ಸೇವಾಸದನದಲ್ಲಿ ತಮ್ಮ ಮೊದಲ ಹೆಜ್ಜೆಗಳ ‘ರಂಗಾಭಿವಂದನೆ’ಯನ್ನು ಬಹು ಸುಮನೋಹರ ನೃತ್ಯಗುಚ್ಚಗಳಿಂದ ಅಲಂಕರಿಸಿದರು. ‘ಮಾರ್ಗಂ’ ಸಂಪ್ರದಾಯದ ಕೃತಿಗಳನ್ನು ಬಹು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿ, ತಮ್ಮ ಅಂಗಶುದ್ಧ ಮುದ್ರೆ-ಅಡವುಗಳಿಂದ ಪುಷ್ಪಾಂಜಲಿ, ಗಣೇಶಸ್ತುತಿಯಲ್ಲಿ ಗಮನ ಸೆಳೆದರಲ್ಲದೆ, ದೇವರನಾಮಗಳ ಸುಂದರಾಭಿನಯದಿಂದ ನೋಡುಗರ ಮನ ಮೆಚ್ಚಿಸಿ ಕರತಾಡನ ಪಡೆದರು. ಯುಗಳ ಕಲಾವಿದೆಯರ ಹಸನ್ಮುಖದ ಲವಲವಿಕೆಯ ನರ್ತನ ಮನವನ್ನು ಮುದಗೊಳಿಸಿ, ಭಾವಪೂರ್ಣವಾಗಿ ಪ್ರಸ್ತುತಪಡಿಸಿದ ದೈವೀಕ ಕೃತಿಗಳು ಕಾಂತಿಯುಕ್ತವಾಗಿ ಬೆಳಗಿ, ಶ್ರೀಲಕ್ಷ್ಮೀ ಮತ್ತು ಆರುಷಿ ಭರವಸೆಯ ಕಲಾವಿದೆಯರಾಗಿ ಹೊರಹೊಮ್ಮಿದರು.
ಇದೇ ಸಂದರ್ಭದಲ್ಲಿ ನಾಟ್ಯಗುರು ರಾಧಿಕಾ ಸ್ವಾಮಿ ದಂಪತಿಗಳನ್ನು ಗೌರವದಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಭರತನಾಟ್ಯ ಕಲಾವಿದೆ ಸ್ನೇಹಾ ಭಾಗವತ್ ಮತ್ತು ಪ್ರೀತಿ ಪ್ರಸಾದ್ ಆಗಮಿಸಿದ್ದರು. ಕಲಾವಿದೆಯರ ಪೋಷಕರಾದ ಶ್ರೀ ಪ್ರಸನ್ನ ಮತ್ತು ನೇತ್ರಾ ಹಾಗೂ ಶ್ರೀ ಗಿರೀಶ್ ಮತ್ತು ಅಶ್ವಿನಿ ಉಪಸ್ಥಿತರಿದ್ದರು.
ವೈ.ಕೆ. ಸಂಧ್ಯಾ ಶರ್ಮ