ತುಮಕೂರು: ಪತ್ರಿಕಾ ಸಂಪಾದಕರುಗಳು ಮಾನವೀಯ ಹೃದಯವಂತಿಕೆಯ ಭಾಗವಾಗಿ ಪತ್ರಿಕಾ ವಿತರಕರ ಸಮಸ್ಯೆಗಳಿಗೆ ಸ್ಪಂದಿಸ ಬೇಕೆಂದು ಪಾವಗಡದ ಶ್ರೀ ರಾಮಕೃಷ್ಣ, ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಜಪಾನಂದ ಜಿ ಮಹಾರಾಜ್ ಹೇಳಿದರು.
ಇಲ್ಲಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ (ರಿ), ತುಮಕೂರು ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘ (ರಿ) ದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ 3ನೇ ರಾಜ್ಯ ಮಟ್ಟದ ಪತ್ರಿಕ
ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬರಿ ದಿನಾಚರಣೆ ಆಚರಿಸಿ ಹೋದರೆ ಸಾಲದು, ತಾವು ಸಂಘಟಿತರಾಗಿ ಸಮ್ಮೇಳನ ಆಚರಿಸಿ ತಮ್ಮ ಸಮಸ್ಯೆ ಗಳು ಸರ್ಕಾರದ ಗಮನ ಸೆಳೆಯುವಂತೆ ಮಾಡಬೇಕಾದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯವೆಂದರು.
ಪತ್ರಿಕಾ ವಿತರಕರ ಸಂಘಟನೆ ಬಲವಾಗಬೇಕು, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ದೃಢಪಡಿಸಬೇಕು, ರಾಜ್ಯದಲ್ಲಿ 75,000 ಮಂದಿ ಪತ್ರಿಕ ವಿತರಕರು ಇದ್ದು ಪ್ರತಿನಿತ್ಯ ತಮ್ಮ ಮನೆಯ ಏನೇ ಸಮಸ್ಯೆಗಳಿದ್ದರೂ, ಮಳೆ ಗಾಳಿ ಚಳಿ ಲೆಕ್ಕಿಸದೆ ಪ್ರತಿನಿತ್ಯ ಮನೆ ಮನೆಗೆ ಪತ್ರಿಕೆಗಳನ್ನು ವಿತರಿಸುತ್ತಿರುವುದು ನಿಜಕ್ಕೂ ಒಳ್ಳೆಯ ಕಾರ್ಯ. ಇಂತಹ ಶ್ರಮ ಜೀವಿಗಳ ಸಮಸ್ಯೆಗಳಿಗೆ ಆಯಾ ಪತ್ರಿಕೆಯ ಸಂಪಾದಕರುಗಳು ಸಹ ತಮ್ಮ ವಾರ್ಷಿಕ ಆದಾಯದಲ್ಲಿ ಸ್ವಲ್ಪ ಹಣವನ್ನು ಮೀಸಲಿಡಬೇಕು ವಿತರಕರನ್ನು ಕಡೆಗಣಿಸಬಾರದು ಅವರ ಸಮಸ್ಯೆಗಳಿಗೆ ಸಂಪಾದಕರುಗಳು ಸ್ಪಂದಿಸಿದರೆ ನಿಜಕ್ಕೂ ಪತ್ರಿಕೆಗಳ ಪ್ರಸಾರವು ಹೆಚ್ಚಲಿದೆ.
ಸರ್ಕಾರವು ಸಹ ಅವರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಬಗೆಹರಿಸಬೇಕೆಂದರು.
ಸಿದ್ದರಬೆಟ್ಟ ಬಾಳೆಹೊನ್ನೂರು ಶಾಖ ಮಠದ ಶ್ರೀಗಳಾದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡುತ್ತಾ ಮಳೆ ಗಾಳಿ ಚಳಿ ಲೆಕ್ಕಿಸದೆ ತಮ್ಮ ಸಮಸ್ಯೆಗಳನ್ನು ಬದಿಗೊತ್ತಿ ಪ್ರತಿದಿನ ಮುಂಜಾನೆ ಮನೆ ಮನೆಗಳಿಗೆ ಪತ್ರಿಕೆ ವಿತರಿಸುವ ಸೇನಾಣಿಗಳಿಗೆ ಆದರಪೂರ್ವಕ ನಮನಗಳು. ರಾಜ್ಯದ ಎಲ್ಲಾ ಪತ್ರಿಕ ವಿತರಕರಿಗೂ ಶುಭಾಶಯ ಹೇಳಿದ ಶ್ರೀಗಳು ತಮ್ಮ ಸಮಸ್ಯೆಗಳಿಗೆ ಸರ್ಕಾರ ಮತ್ತು ಪತ್ರಿಕೆಯ ಸಂಪಾದಕರುಗಳು ಸ್ಪಂದಿಸಿದರೆ ನಿಜಕ್ಕೂ ಬಹಳಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ಜೊತೆಗೆ ಕಾರ್ಮಿಕ ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಆರೋಗ್ಯವಂತರಾಗಿ ತಮ್ಮ ಕಾಯಕ ಮಾಡಿ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಜ್ಯೋತಿ ಗಣೇಶ್ ವಹಿಸಿ ಮಾತನಾಡಿದರು.
ಮುಖ್ಯಮಂತ್ರಿಗಳ ಪತ್ರಿಕಾ ಸಲಹೆಗಾರ ಕೆ ವಿ ಪ್ರಭಾಕರ್ ಮಾತನಾಡಿ ಮುಖ್ಯಮಂತ್ರಿಗಳು ಪತ್ರಕರ್ತರು ಮತ್ತು ಪತ್ರಿಕ ವಿತರಕರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಹಂತ ಹಂತವಾಗಿ ಬಗೆಹರಿಸುವಲ್ಲಿ ಆಸಕ್ತಿ ವಹಿಸುತ್ತಾರೆ ಎಂದ ಅವರು ಪತ್ರಿಕ ವಿತರಕರ ಸಹಕಾರ ಸಂಘವನ್ನು ಸ್ಥಾಪಿಸಿಕೊಂಡರೆ ಸರ್ಕಾರದಿಂದ ಸಿಗುವ
ಸೌಲಭ್ಯವನ್ನು ಕೊಡಿಸಿ ಕೊಡುವುದಾಗಿ ಭರವಸೆ ನೀಡಿದರು.
ಮುಂದಿನ ವರ್ಷದ ಆಯವ್ಯಯದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ ಎರಡು ಕೋಟಿ ರೂ ನೆಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಹೆಚ್ಎಂ ವರ್ಷಿಣಿ ಪ್ರಾರ್ಥಿಸಿದರು. ವಾಸುದೇವ ನಾದೂರು ಸ್ವಾಗತಿಸಿದರು. ಪಾವಗಡ ವೆಂಕಟೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತ ಬಿವಿ ಮಲ್ಲಿಕಾರ್ಜುನಯ್ಯ, ಚೀನಿ. ಪುರುಷೋತ್ತಮ್. ಒಕ್ಕೂಟದ ಅಧ್ಯಕ್ಷ ಶಂಭುಲಿಂಗ ಇನ್ನಿತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ನಾನೊಬ್ಬ ಪತ್ರಿಕಾ ವಿತರಕರ ಪ್ರತಿನಿಧಿ: ಕೆ.ವಿ.ಪ್ರಭಾಕರ್
*ಪತ್ರಿಕಾ ವಿತರಿಕರಿಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ*
*ಪತ್ರಿಕಾ ವಿತರಕರಿಗೆ 2 ಕೋಟಿ ಕ್ಷೇಮ ನಿಧಿ*
ತುಮಕೂರು: ನಾನು ಪತ್ರಕರ್ತ ಆಗುವುದಕ್ಕಿಂತ ಮೊದಲು ನಾನೊಬ್ಬ ಪತ್ರಿಕಾ ವಿತರಕ.
ಪತ್ರಿಕಾ ವಿತರಣೆ ತಪಸ್ಸಿನ ಕೆಲಸ. ಮಳೆ, ಗಾಳಿ, ಚಳಿಗೆ ಈ ತಪಸ್ಸು ಭಂಗ ಆಗುವುದಿಲ್ಲ
ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಮತ್ತು ತುಮಕೂರು ಜಿಲ್ಲಾ ದಿನಪತ್ರಿಕೆ
ಹಂಚಿಕೆದಾರರ ಸಂಘ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಮೂರನೇ ರಾಜ್ಯ
ಮಟ್ಟದ ಪತ್ರಿಕಾ ವಿತರಕರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪತ್ರಿಕಾ ವಿತರಕರು ಪತ್ರಿಕಾ ವೃತ್ತಿಯ ಅವಿಭಾಜ್ಯ ಅಂಗ. ಪತ್ರಿಕಾ ವೃತ್ತಿಗೆ
ಸಂಬಂಧಪಟ್ಟ ಅನುಕೂಲ, ಸವಲತ್ತುಗಳು, ಪ್ರಶಸ್ತಿಗಳ ವಿಚಾರ ಬಂದಾಗ ಪತ್ರಿಕಾ ವಿತರಕರು
ಹೊರಗೇ ಉಳಿದು ಬಿಡುತ್ತಾರೆ. ಹೀಗಾಗಿ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳನ್ನು ನೀಡುವಾಗ
ಒಂದು ಪ್ರಶಸ್ತಿ ವಿತರಿಕರಿಗೆ ಮೀಸಲಿಡುವ ದಿಕ್ಕಿನಲ್ಲಿ ಮುಖ್ಯಮಂತ್ರಿಗಳ ಜತೆ
ಚರ್ಚಿಸಿ ತೀರ್ಮಾನಿಸುವ ಭರವಸೆ ನೀಡಿದರು.
ರಾಜ್ಯ ಪತ್ರಿಕಾ ವಿತರಕರ ಸಂಘವನ್ನು ವಿತರಕರ ಸಹಕಾರ ಸಂಘವನ್ನಾಗಿ ಮಾರ್ಪಡಿಸಿದರೆ
ನಾನಾ ರೀತಿಯ ಸಹಕಾರ ಮತ್ತು ನೆರವುಗಳು ಒದಗಿ ಬರುತ್ತವೆ. ಸಂಘದ ಪದಾಧಿಕಾರಿಗಳು ಈ
ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಎಂದು ಸಲಹೆ ನೀಡಿದರು.
ಪತ್ರಿಕಾ ವಿತರಕರ ಸಂಘದ ಕ್ಷೇಮಾಭಿವೃದ್ಧಿಗೆ 2 ಕೋಟಿ ರೂಪಾಯಿಯನ್ನು ಮುಂದಿನ ಬಜೆಟ್
ನಲ್ಲಿ ಖಂಡಿತಾ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಸಭೆಗೆ
ತಿಳಿಸಿದರು.
ಸಿದ್ದರಬೆಟ್ಟ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮ
ಉದ್ಘಾಟಿಸಿದರು. ಸ್ವಾಮಿ ಜಪಾನಂದಜೀ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ
ಪ್ರಜಾ ಪ್ರಗತಿ ಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣ, ಶಾಸಕರಾದ ಜ್ಯೋತಿಗಣೇಶ್, ಹಿರಿಯ
ಪತ್ರಕರ್ತರಾದ ಮಲ್ಲಿಕಾರ್ಜುನಯ್ಯ ಮತ್ತು ಪತ್ರಕರ್ತರ ಸಂಘ ಮತ್ತು ಪತ್ರಿಕಾ ವಿತರಕರ
ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.