ಚಿಕ್ಕಬಳ್ಳಾಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿಕ್ಕಬಳ್ಳಾಪುರದ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಇಂದು 2023-24 ಶೈಕ್ಷಣಿಕ ಸಾಲಿನ ಸಂಸ್ಕೃತ ಚಟುವಟಿಕೆಗಳ ಕಾರ್ಯಕ್ರಮದ ಪ್ರಯುಕ್ತ ರಸಪ್ರಶ್ನೆ ಕಾರ್ಯಕ್ರಮ ಮತ್ತು ಜನಪದ ಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಪ್ರೊ. ಬಿ.ಎಂ. ನಾಗರಾಜ್ ರವರು ಮಾತನಾಡಿ ಆಧುನಿಕ ಯುಗ ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರತೆಗೆಯುವ ಮತ್ತು ಸ್ಪರ್ಧಾತ್ಮಕ ವಿಚಾರಗಳಲ್ಲಿ ಆಸಕ್ತಿಯನ್ನು ಮೂಡಿಸುವ ಸಲುವಾಗಿ ಈ ಸ್ಪರ್ಧೆ ಅನುಕೂಲವಾಗಿದೆ ಎಂದು ತಿಳಿಸಿದರು.
ಅದೇ ರೀತಿ ಈ ಕಾರ್ಯಕ್ರಮದಲ್ಲಿ ಡಾ.ಪ್ರಭಾ ರವರು ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹಂಚುವ ಕಾರ್ಯದಲ್ಲಿ ಜನಪದ ಗೀತೆಗಳು ತನ್ನದೇ ಆದಂತ ವಿಶಿಷ್ಟ ಸ್ಥಾನವನ್ನು ಪಡೆದಿದ್ದು, ಮುಂದಿನ ತಲೆಮಾರಿಗೂ ಈ ಜನಪದ ಗೀತೆಗಳ ಮುಖಾಂತರ ನಮ್ಮ ಸಂಸ್ಕೃತಿಯನ್ನು ತಲುಪಿಸುವಂತಹ ಜವಾಬ್ದಾರಿ ಇಂದಿನ ಯುವ ಪೀಳಿಗೆ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಮುನಿರಾಜು ಮಾತನಾಡಿ ನಮ್ಮ ಕಾಲೇಜಿನಲ್ಲಿ ಶೈಕ್ಷಣಿಕ ವಿಚಾರಗಳ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಹತ್ವವನ್ನು ನೀಡುತ್ತಿದ್ದು, ಯುವ ಪೀಳಿಗೆ ತಮ್ಮ ಆಸಕ್ತ ವಿಷಯಗಳಲ್ಲಿ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವುದರಲ್ಲಿ ಇಂತಹ ಕಾರ್ಯಕ್ರಮಗಳು ತುಂಬಾ ಮಹತ್ವವಾಗಿದ್ದು ಈ ನಿಟ್ಟಿನಲ್ಲಿ ರಾಜಶಾಸ್ತ್ರ ವಿಭಾಗವು ಮಾಡಿರುವ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಳಗವಾರ ಅಂಜಿನಪ್ಪ, ವರವಣಿ ಸತ್ಯನಾರಾಯಣ, ದಿಗೂರು ಎ ರಾಘವೇಂದ್ರ, ವಿದ್ಯಾರ್ಥಿಗಳು,ಪೋಷಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.